ಕಡಿಮೆ ನೀರು, ಹೆಚ್ಚು ಆದಾಯ : ಮಾದರಿಯಾದ ಕೊಪ್ಪಳದ ರೈತ
ಕೊಪ್ಪಳ, ಸೆಪ್ಟೆಂಬರ್ 05 : ಬರ ಪರಿಸ್ಥಿತಿಯ ಸಂದರ್ಭದಲ್ಲಿ ಪಾರಂಪರಿಕ ಕೃಷಿ ಪದ್ಧತಿಗಿಂತ, ಕಡಿಮೆ ನೀರು ಬಳಸಿಕೊಂಡು, ಹೆಚ್ಚು ಆದಾಯ ಬರುವಂತಹ ಬೆಳೆಗಳನ್ನು ಬೆಳೆದು, ಲಾಭ ಪಡೆಯಬಹುದು. ಯಲಬುರ್ಗಾ ತಾಲೂಕಿನ ಇಟಗಿ ಗ್ರಾಮದ ರೈತ ಅಂದಪ್ಪ ಹುರಳಿ ಅವರು ಈ ರೀತಿಯ ಕೃಷಿ ಮಾಡಿ ಇತರರಿಗೆ ಮಾದರಿ ಆಗಿದ್ದಾರೆ.
ಇಟಗಿ ಗ್ರಾಮದಲ್ಲಿನ ಬಹುತೇಕ ಕುಟುಂಬಗಳು ಕೃಷಿ ಅವಲಂಬಿತವಾಗಿವೆ. ಆದರೆ, ಇಲ್ಲಿ ಯಾವುದೇ ರೀತಿಯ ನೈಸರ್ಗಿಕ ಜಲ ಸಂಪತ್ತು ಇಲ್ಲ. ಎಲ್ಲಾ ರೈತರು ಸಾಂಪ್ರದಾಯಿಕ ಕೃಷಿಯನ್ನು ಅವಲಂಬಿಸಿ ಶೇಂಗಾ, ಹೆಸರು, ಸಜ್ಜೆ, ನವಣೆ, ಕುಸುಬೆ, ಗೋಧಿ, ಜೋಳ ಮುಂತಾದ ಬೆಳೆ ಬೆಳೆಯುತ್ತಾರೆ.

ಆದರೆ, ಮಳೆಯ ಕೊರತೆ, ಅಂತರ್ಜಲ ಮಟ್ಟ ಕುಸಿತ ಮುಂತಾದ ಕಾರಣಗಳಿಂದ ರೈತರು ನಿರೀಕ್ಷೆಗೆ ತಕ್ಕಂತೆ ಬೆಳೆ ಹಾಗೂ ಹೆಚ್ಚಿನ ಲಾಭಗಳಿಸಲು ಸಾಧ್ಯವಾಗುತ್ತಿಲ್ಲ. ಆದರೆ, ಗ್ರಾಮದ ಕೃಷಿಕ ಅಂದಪ್ಪ ಬಸಪ್ಪ ಹುರಳಿ ಪರ್ಯಾಯ ಬೆಳೆ ಬೆಳೆದು ಲಾಭಗಳಿಸುತ್ತಿದ್ದಾರೆ.
ಬಸಪ್ಪ ಅವರು ತಮ್ಮ ಜಮೀನಿನಲ್ಲಿ ಪಾರಂಪರಿಕವಾಗಿ ಬೆಳೆಯುತ್ತಿದ್ದ ಬೆಳೆಗಳಿಗೆ ಪರ್ಯಾಯವಾಗಿ ರೇಷ್ಮೆ ಬೆಳೆಯಲು ಆರಂಭಿಸಿದರು. ಪ್ರಾರಂಭದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದರು. ವಿದ್ಯುತ್ ಸಮಸ್ಯೆಯಿಂದಾಗಿ ಸಕಾಲದಲ್ಲಿ ಬೆಳೆಗೆ ನೀರನ್ನು ಹರಿಸಲು ಸಾಧ್ಯವಾಗಲಿಲ್ಲ.
ಆಗ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡರು. ಕೃಷಿ ಇಲಾಖೆಯಿಂದ ಹನಿ ನೀರಾವರಿ ಪದ್ಧತಿ ಅಳವಡಿಕೆಗೆ ಮತ್ತು ರೇಷ್ಮೆ ಸಾಕಾಣಿಕೆ ಶೆಡ್ ನಿರ್ಮಾಣ ಮಾಡಲು ಸಹಾಯಧನ ಸಿಕ್ಕಿತು. ಹಿಪ್ಪುನೇರಳೆ ಬೆಳೆ ನಾಟಿ ಮತ್ತು ನಿರ್ವಹಣೆ ಮಾಡಲು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಹಣದ ಸಹಾಯ ನೀಡಲಾಗುತ್ತಿದೆ.
ಬರಗಾಲದಲ್ಲಿಯು ನೀರಿನ ಸಮಸ್ಯೆಯನ್ನು ಎದುರಿಸದೇ ತಮ್ಮ ಸ್ವಂತ 1 ಎಕರೆ 20 ಗುಂಟೆ ಜಮೀನಿನಲ್ಲಿ ಪ್ರತಿ ತಿಂಗಳಿಗೆ 30 ರಿಂದ 40 ಸಾವಿರ ರೂಪಾಯಿಗಳ ಆದಾಯ ಗಳಿಸುತ್ತಿದ್ದಾರೆ.











Click it and Unblock the Notifications