ಗೋಧಿ ದಾಸ್ತಾನಿನ ಮೇಲೆ ಮಿತಿಯನ್ನು ಹೇರಿದ ಕೇಂದ್ರ ಸರ್ಕಾರ
ನವದೆಹಲಿ, ಸೆಪ್ಟೆಂಬರ್ 15; ದೇಶದಲ್ಲಿ ಗೋಧಿ ಬೆಲೆಗಳು ಏರುಗತಿಯಲ್ಲಿ ಸಾಗಿವೆ. ಆದ್ದರಿಂದ ಕೇಂದ್ರ ಸರ್ಕಾರ ಗೋಧಿ ದಾಸ್ತಾನಿನ ಮೇಲೆ ಮಿತಿಯನ್ನು ಹೇರಿದೆ. ತಕ್ಷಣದಿಂದಲೇ ಈ ನಿಯಮ ಜಾರಿಗೆ ಬಂದಿದ್ದು, ಗೋಧಿ ಬೆಲೆ ಅತಿ ಹೆಚ್ಚು ಏರಿಕೆ ಆಗುವುದಿಲ್ಲ ಎಂದು ಜನರಿಗೆ ಭರವಸೆಯನ್ನು ನೀಡಿದೆ.
ಗುರುವಾರ ಕೇಂದ್ರ ಸರ್ಕಾರ ಈ ಕುರಿತು ಘೋಷಣೆ ಮಾಡಿದೆ. ದೊಡ್ಡ ಪ್ರಮಾಣದ ಚಿಲ್ಲರೆ ಮಾರಾಟಗಾರರು ಮತ್ತು ಸಗಟು ಮಾರಾಟಗಾರರು 3 ಸಾವಿರ ಟನ್ ತನಕ ಗೋಧಿ ದಾಸ್ತಾನು ಮಾಡಲು ಅವಕಾಶವಿತ್ತು. ಇದನ್ನು ಸರ್ಕಾರ 2 ಸಾವಿರ ಟನ್‌ಗೆ ಇಳಿಕೆ ಮಾಡಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯದ ಕಾರ್ಯದರ್ಶಿ ಸಂಜಯ್ ಚೋಪ್ರಾ ಈ ಕುರಿತು ಆದೇಶ ಹೊರಡಿಸಿದ್ದಾರೆ. ಗೋಧಿಯ ಬೆಲೆ ನಿಧಾನವಾಗಿ ಏರಿಕೆಯಾಗುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರ ಗೋಧಿ ದಾಸ್ತಾನಿನ ಮೇಲಿನ ಮಿತಿಯನ್ನು ಕಡಿತಗೊಳಿಸಿದೆ ಎಂದು ಹೇಳಿದ್ದಾರೆ.
ಗೋಧಿ ಸಂಗ್ರಹಕ್ಕೆ ಮಿತಿ; ಮಾರಾಟಗಾರರು/ ಹೋಲ್ ಸೆಲ್ ಮಾರಾಟಗಾರರು 2 ಸಾವಿರ ಟನ್ ತನಕ ಗೋಧಿ ದಾಸ್ತಾನು ಮಾಡಬಹುದು. ದೊಡ್ಡ ಪ್ರಮಾಣದ ಮಾರಾಟಗಾರರು ಪ್ರತಿ ಡಿಪೋದಲ್ಲಿ 2 ಸಾವಿರ ಟನ್ ಸಂಗ್ರಹ ಮಾಡಬಹುದು ಎಂದು ತಿಳಿಸಿದ್ದಾರೆ.
ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಲಾಗಿದೆ. ಬೆಲೆ ಏರಿಕೆಯನ್ನು ತಡೆಗಟ್ಟಲು ನಾವು ದಾಸ್ತಾನು ಮಿತಿಯನ್ನು ಕಡಿಮೆ ಮಾಡಿದ್ದೇವೆ. ದಾಸ್ತಾನಿನ ಮೇಲೆ ನಾವು ನಿಗಾವಹಿಸುತ್ತೇವೆ. 2024ರ ಮಾರ್ಚ್ ತನಕ ಈ ಆದೇಶ ಜಾರಿಯಲ್ಲಿರುತ್ತದೆ ಎಂದರು.
ದೇಶದಲ್ಲಿ ಕೆಲವು ದಿನಗಳಿಂದ ಗೋಧಿ ಬೆಲೆ ಏರಿಕೆ ಕಂಡಿದೆ. ರಾಷ್ಟ್ರೀಯ ಸರಕು ಮತ್ತು ಉತ್ಪನ್ನಗಳ ವಿನಿಮಯದಲ್ಲಿ ಗೋಧಿ ಬೆಲೆ ಶೇ 4ರಷ್ಟು ಏರಿಕೆಯಾಗಿ ಕ್ವಿಂಟಾಲ್‌ಗೆ 2,550 ರೂ. ಆಗಿದೆ. ಹೆಚ್ಚಿನ ದಾಸ್ತಾನು ಮಾಡಿ ಕೃತಕವಾಗಿ ಬೆಲೆ ಏರಿಕೆ ಮಾಡುವುದು ತಡೆಯಲು ಕೇಂದ್ರ ಗೋಧಿ ದಾಸ್ತಾನು ಮೇಲೆ ಮಿತಿ ಹೇರಿದೆ.
ಈ ವರ್ಷದ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ಗೋಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ನಿರ್ಧಾರ ತೆಗೆದುಕೊಂಡ ಬಳಿಕ ಒಂದು ವಾರದಲ್ಲಿಯೇ ಶೇ 10ರಷ್ಟು ಬೆಲೆ ಇಳಿಕೆಯಾಗಿತ್ತು.
ಆಗ ಗೋಧಿ ಮತ್ತು ಗೋಧಿ ಹಿಟ್ಟಿನ ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರ ತನ್ನ ಸಂಗ್ರಹದ 30 ಲಕ್ಷ ಟನ್ ಗೋಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ತೀರ್ಮಾನಿಸಿತ್ತು. ಪ್ರತಿ ಟನ್‌ಗೆ 2,474 ರೂ.ಗೆ 9.2 ಲಕ್ಷ ಟನ್ ಗೋಧಿಯನ್ನು ಮಾರಾಟ ಮಾಡಲಾಗಿತ್ತು.
ಆದರೆ ಆಗಸ್ಟ್‌ನಲ್ಲಿ ದೇಶದಲ್ಲಿ ಗೋಧಿ ಬೆಲೆಯಲ್ಲಿ ಮತ್ತೆ ಏರಿಕೆಯಾಗಿತ್ತು. ಸರ್ಕಾರ ಗೋಧಿ ಬೆಲೆ ಏರಿಕೆ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿತ್ತು. ಇದರ ಭಾಗವಾಗಿ ರಷ್ಯಾದಿಂದ ರಿಯಾಯಿತಿ ದರದಲ್ಲಿ ಗೋಧಿ ಆಮದು ಮಾಡಿಕೊಳ್ಳುವ ಬಗ್ಗೆ ಸಹ ಚಿಂತನೆ ನಡೆಸಿತ್ತು.
ಹಲವು ವರ್ಷಗಳಿಂದ ರಾಜತಾಂತ್ರಿಕ ಒಪ್ಪಂದಗಳ ಮೂಲಕ ಭಾರತ ಗೋಧಿಯನ್ನು ಆಮದು ಮಾಡಿಕೊಂಡಿಲ್ಲ. 2017ರಲ್ಲಿ ದೇಶ ಅಂತಿಮವಾಗಿ ಗೋಧಿಯನ್ನು ಆಮದು ಮಾಡಿಕೊಂಡಿತ್ತು. ಈಗ ಬೆಲೆಗಳು ಏರಿಕೆಯಾಗುತ್ತಿರುವಾಗ ಮತ್ತೆ ಆಮದಿಗೆ ಚಿಂತನೆ ಮಾಡಲಾಗಿದೆ.
ಉಕ್ರೇನ್ ಮತ್ತು ರಷ್ಯಾ ಯುದ್ಧ ಆರಂಭವಾದ ಬಳಿಕ ಭಾರತ ರಷ್ಯಾದ 2ನೇ ಅತಿ ದೊಡ್ಡ ಸರಕು ಮಾರಾಟಗಾರನಾಗಿದೆ. ರಿಯಾಯಿತಿ ದರದಲ್ಲಿ ತೈಲವನ್ನು ದೇಶ ರಷ್ಯಾದಿಂದಲೇ ಖರೀದಿ ಮಾಡುತ್ತಿದೆ. ದೇಶ ರಷ್ಯಾದಿಂದ ಸೂರ್ಯಕಾಂತಿ ಎಣ್ಣೆಯನ್ನು ಸಹ ಆಮದು ಮಾಡಿಕೊಳ್ಳುತ್ತದೆ.












Click it and Unblock the Notifications