ಸಾಲದ ಹೊರೆ ತಾಳಲಾರದೆ ಮೈಸೂರಿನಲ್ಲಿ ಇಬ್ಬರು ರೈತರು ಆತ್ಮಹತ್ಯೆ
ಮೈಸೂರು, ಡಿಸೆಂಬರ್ 06: ಸಾಲಬಾಧೆಯಿಂದ ಮನನೊಂದು ಕ್ರಿಮಿನಾಶಕ ಸೇವಿಸಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಕೆ.ಆರ್.ನಗರ ತಾಲೂಕಿನಲ್ಲಿ ನಡೆದಿದೆ.
ಸಾಲಿಗ್ರಾಮ ಹೋಬಳಿಯ ಮುಂಡೂರು ಗ್ರಾಮದ ತಮ್ಮಣ್ಣೇಗೌಡರ ಪುತ್ರ ದಿನೇಶ್(26), ಹೊಸಅಗ್ರಹಾರ ಹೋಬಳಿಯ ಮಂಡಿಗನಹಳ್ಳಿ ಗ್ರಾಮದ ಚಲುವರಾಜು ಪುತ್ರ ಚನ್ನಕೇಶವ (26) ಆತ್ಮಹತ್ಯೆ ಮಾಡಿಕೊಂಡ ರೈತರು.

ಸಾಲಿಗ್ರಾಮ ಹೋಬಳಿಯ ಮುಂಡೂರು ಗ್ರಾಮದ ತಮ್ಮಣ್ಣೇಗೌಡರ ಪುತ್ರ ದಿನೇಶ್ ತನ್ನ ಎರಡು ಎಕರೆ ಜಮೀನಿನಲ್ಲಿ ತಂಬಾಕು ಬೆಳೆಗಾಗಿ ಸಾಲಿಗ್ರಾಮದ ಕಾವೇರಿ ಗ್ರಾಮೀಣ ಬ್ಯಾಂಕ್‍ನಲ್ಲಿ ತಂಬಾಕು ಬೆಳೆ ಹದ ಮಾಡಲು ಮತ್ತು ತಂಬಾಕು ಬ್ಯಾರಲ್ ಗಾಗಿ 2ಲಕ್ಷ ಸಾಲ, ಕೈಸಾಲ 3 ಲಕ್ಷ ಮಾಡಿದ್ದನು. ಕಳೆದ ವಾರದಿಂದ ತಂಬಾಕು ಬೆಲೆ ಕುಸಿದ ಹಿನ್ನಲೆಯಲ್ಲಿ ಮನನೊಂದು ತನ್ನ ಜಮೀನಿನಲ್ಲಿ ಕ್ರೀಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿದ್ದು, ಹೆಚ್ಚಿನ ಚಿಕ್ಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಇನ್ನೊಬ್ಬ ಹೊಸಅಗ್ರಹಾರ ಹೋಬಳಿಯ ಮಂಡಿಗನಹಳ್ಳಿ ಗ್ರಾಮದ ಚಲುವರಾಜು ಎಂಬುವರ ಪುತ್ರ ಚನ್ನಕೇಶವ ತನ್ನ ಒಂದೂವರೆ ಎಕರೆ ಜಮೀನಿನಲ್ಲಿ ರೇಷ್ಮೆ ಬೆಳಗಾಗಿ ಕೊಳವೆ ಬಾವಿ ಕೊರೆಯಿಸಿದ್ದು, ನೀರು ಬರದ ಕಾರಣ ಮತ್ತೆರಡು ಕೊಳವೆ ಬಾವಿ ಕೊರೆಯಿಸಿದ್ದಾರೆ.
ಆದರೆ ಅದರಲ್ಲೂ ನೀರು ಬಂದಿರಲಿಲ್ಲ, ಕೊಳವೆ ಬಾವಿ ಕೊರೆಯಿಸಲು ಕೈಸಾಲವಾಗಿ ಮೂರು ಲಕ್ಷ ರೂ ಸಾಲ ಮಾಡಿದ್ದನು. ಅಲ್ಲದೆ, ರೇಷ್ಮೆ ನಾಟಿಗಾಗಿ ಹೊಸಅಗ್ರಹಾರ ಸಹಕಾರ ಸಂಘದಲ್ಲಿ 50 ಸಾವಿರ ಸಾಲ ಮಾಡಿದ್ದನು. ಆದರೆ ಕೊಳವೆಬಾವಿಗೆ ಮಾಡಿದ ಸಾಲದಿಂದ ಚಿಂತೆಗೀಡಾದ ಈತ ಮನನೊಂದು ಜಮೀನಿನಲ್ಲಿ ಟೊಮೇಟೋ ಬೆಳೆಗೆ ಕ್ರೀಮಿನಾಶಕ ಔಷಧಿ ಸಿಂಪಡಿಸುವಾಗ ಅದೇ ಔಷಧಿಯನ್ನು ತಾನು ಸೇವಿಸಿದ್ದಾನೆ.
ಇದರಿಂದ ಅಸ್ವಸ್ಥಗೊಂಡು ಒದ್ದಾಡುತ್ತಿದ್ದುದನ್ನು ಪಕ್ಕದ ಜಮೀನಿನವರು ನೋಡಿ ಕುಟುಂಬದವರಿಗೆ ತಿಳಿಸಿದ್ದು, ಕೂಡಲೇ ಹೆಚ್ಚಿನ ಚಿಕ್ಕಿತ್ಸೆಗಾಗಿ ಕೆ.ಆರ್.ನಗರ ತಾಲೂಕು ಆಸ್ಪತ್ರೆ ದಾಖಲಿಸಲಾಯಿತಾದರೂ ಚಿಕ್ಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ಮೃತಪಟ್ಟಿದ್ದಾನೆ. ಮೃತ ಚನ್ನಕೇಶವನ ತಾಯಿ ಶಾಂತಮ್ಮ ನೀಡಿದ ದೂರಿನ ಮೇರೆಗೆ ಸಾಲಿಗ್ರಾಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.











Click it and Unblock the Notifications