ಹಸಿ ಮೇವು ಬೆಳೆಯಲು ಟನ್ ಗೆ 1500, ತುಮಕೂರು ಡಿಸಿ ತಮಾಷೆ ಘೋಷಣೆ
ತುಮಕೂರು, ಮಾರ್ಚ್ 1: ತುಮಕೂರು ಜಿಲ್ಲಾಧಿಕಾರಿಗಳಾದ ಕೆಪಿ ಮೋಹನ್ ರಾಜ್ ಅವರು ಮಾಡಿದ ಮನವಿ ಬಗ್ಗೆ ಇಲ್ಲಿ ಪ್ರಸ್ತಾವ ಮಾಡಬೇಕಿದೆ. ತುಮಕೂರು ಜಿಲ್ಲೆಯ ಹತ್ತು ತಾಲೂಕು ಬರಪೀಡಿತವಾಗಿದೆ. ಇಂಥ ಸನ್ನಿವೇಶದಲ್ಲಿ ಯಾರಾದರೂ ರೈತರು ಹಸಿ ಮೇವು ಬೆಳೆದು ಕೊಟ್ಟರೆ ಒಂದು ಟನ್ ಹಸಿ ಮೇವಿಗೆ ಜಿಲ್ಲಾಡಳಿತದಿಂದ 1,500 ರುಪಾಯಿ ಕೊಡಲಾಗುವುದು ಎಂದು ಘೋಷಿಸಿದ್ದಾರೆ.
ಇದಕ್ಕಿಂತ ತಮಾಷೆ ಘೋಷಣೆ ಎಲ್ಲಾದರೂ ಕೇಳುವುದಕ್ಕೆ ಸಿಗುತ್ತಾ? ಒಂದು ಟನ್ ಹಸಿ ಮೇವನ್ನು ರೈತರು ಬೆಳೆಯಬೇಕಾದರೆ ಬೀಜವೊಂದನ್ನು ಕೊಟ್ಟರೆ ಸಾಕಾ? ಜಮೀನಿಂದ ಜಿಲ್ಲಾಧಿಕಾರಿಗಳು ಹೇಳಿದ ಸ್ಥಳಕ್ಕೆ ತರುವುದಕ್ಕೆ ಆಗುವ ಖರ್ಚು, ಅದಕ್ಕೂ ಮುನ್ನ ಕಟಾವು ಮಾಡಲು ತಗುಲುವ ವೆಚ್ಚ, ಹಸಿ ಮೇವನ್ನು ಬೆಳೆಯಲು ಮಾಡಿದ ಖರ್ಚು ಎಲ್ಲ ಲೆಕ್ಕ ಹಾಕಿದರೆ ಎಷ್ಟು ಹಣ ರೈತರ ಕೈ ಬಿಡುತ್ತದೆ ಅಂತಾದರೂ ಒಂದು ಅಂದಾಜು ಬೇಡವಾ?[ಬರ ತಂದ ಕರುಳು ಕತ್ತರಿಸುವಂಥ ಸನ್ನಿವೇಶ, ಅನ್ನದಾತನ ತಟ್ಟೆಯೇ ಖಾಲಿಖಾಲಿ]

ಈ ಬಗ್ಗೆ ಒನ್ಇಂಡಿಯಾ ಕನ್ನಡ ತುಮಕೂರಿನ ರೈತರೊಬ್ಬರನ್ನು ಮಾತನಾಡಿಸಿದಾಗ, ಇವತ್ತು ಬೆಳಗ್ಗೆ ನಾನೂ ಆ ಬಗ್ಗೆ ಪತ್ರಿಕೆ ಓದಿದೆ. ಬೀಜವೊಂದನ್ನು ಕೊಟ್ಟರೆ ಸಾಕಾ? ಬಿತ್ತನೆ, ನೀರು, ನಮ್ಮ ಶ್ರಮ ಇತರ ಎಲ್ಲ ಲೆಕ್ಕ ಕನಿಷ್ಠ ಆರು ಸಾವಿರ ರುಪಾಯಿ ಖರ್ಚು ಮಾಡಬೇಕು ಒಂದು ಟನ್ ಹಸಿ ಮೇವಿಗೆ. ಒಣ ಮೇವಿಗಿಂತ ಹಸಿ ಮೇವು ತೂಕ ಹೆಚ್ಚೇನೋ ಬರುತ್ತದೆ ನಿಜ. ಆದರೆ ಇಂಥ ಬರಗಾಲದ ವೇಳೆಯಲ್ಲಿ ಯಾವ ರೈತ ಸ್ವಾಮಿ ಮೇವು ಬೆಳೆಯುವುದಕ್ಕೆ ಸಾಧ್ಯ? ಎಂದು ಮರುಪ್ರಶ್ನೆ ಮಾಡಿದರು.












Click it and Unblock the Notifications