ಯಾದಗಿರಿಯಲ್ಲಿ ಕಮರಿದ ತೊಗರಿ, ರೈತ ತತ್ತರ

ಭೂಮಿಯಲ್ಲಿನ ತೇವಾಂಶದ ಕೊರತೆಯಿಂದಾಗಿ ಪ್ರಮುಖ ವಾಣಿಜ್ಯ ಬೆಳೆಯಾದ ತೊಗರಿ ಕಾಳು ಕಟ್ಟಿರುವ ಹಂತದಲ್ಲಿ ಒಣಗಿ ಉದುರುತ್ತಿದೆ. ಕಾಳು ಕಟ್ಟದೆ ತೊಗರಿ ಬಾಡಿರುವುದನ್ನು ಕಂಡು ರೈತರು ಕಣ್ಣೀರಿಡುತ್ತಿದ್ದಾರೆ. ರೈತರ ಗೋಳಿಗೆ ಕೊನೆಯೇ ಇಲ್ಲದಂತಾಗಿದೆ.
ಪ್ರಾರಂಭದಲ್ಲಿ ಅಬ್ಬರದಿಂದ ಬೆಳೆದ ಬೆಳೆ, ಕಾಳು ಕಟ್ಟುವ ಈ ಹಂತದಲ್ಲಿ ನಿರಂತರ ಒಣ ಹವೆ ಬೀಸಿ ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿ ಕಾಯಿ ಕಮರಿ ಹೋಗಿದೆ. ನಾಲ್ಕು ಎಕರೆ ರಾಶಿ ಮಾಡಿದರೂ ಒಂದು ಚೀಲ ಕಾಳು ಬರುವ ಸಾಧ್ಯತೆಯಿಲ್ಲ ಎಂದು ರೈತರು ಹತಾಶೆ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು-ಹಿಂಗಾರು ವೈಫಲ್ಯದಿಂದ ತತ್ತರಿಸಿದ ರೈತನಿಗೆ ವಾಣಿಜ್ಯ ಬೆಳೆ ತೊಗರಿ ಬಾಡುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತರ ಪಾಲಿನ ಕ್ಯಾಷ್ ಕ್ರಾಪ್ ಹೆಸರು ಮತ್ತು ವಾಣಿಜ್ಯ ಬೆಳೆ ತೊಗರಿ ಕೈಕೊಟ್ಟಿದ್ದರಿಂದ ರೈತರು ಪರಿತಪಿಸುವಂತಾಗಿದೆ. ಸಾಲಸೋಲ ಮಾಡಿ ಬೆಳೆದ ಬೆಳೆ ಕೈಕೊಟ್ಟಿದ್ದರಿಂದ ರೈತರು ತೀವ್ರ ಬಾಧೆಗೊಳಗಾಗಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 69,216 ಹೆಕ್ಟೆರ್ಸ್ ಭೂಮಿಯಲ್ಲಿ ತೊಗರಿ ಬಿತ್ತನೆಯಾಗಿತ್ತು. ತೇವಾಂಶದ ಕೊರತೆಯಿಂದಾಗಿ 45,049 ಹೆಕ್ಟೆರ್ಸ್ ತೊಗರಿ ಈಗಾಗಲೇ ಕಾಳು ಕಟ್ಟದೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ. ಇನ್ನೂ ಕೆಲವೆಡೆ ಜೊಳ್ಳು ಹಿಡಿದಿದೆ. ಕಾಳಿಲ್ಲದ ತೊಗರಿ ಬೆಳೆಯಿಂದ ಅನ್ನದಾತ ಇದ್ದ ತೊಗರಿ ಬೆಳೆ ಕಿತ್ತುಹಾಕುವಂತಾಗಿದೆ. ಪ್ರಾರಂಭದಲ್ಲಿ ಉತ್ತಮ ಫಸಲು ನಿರೀಕ್ಷೆಯಲ್ಲಿದ್ದ ಅನ್ನದಾತ ಈಗ ಕಂಗಲಾಗಿದ್ದಾನೆ.
"ಒಂದೆಡೆ ಬರ, ಇನ್ನೊಂದೆಡೆ ಕೈಕೊಟ್ಟ ತೊಗರಿ. ಸಾಲ ಮಾಡಿ ಕ್ರಿಮಿನಾಶಕ ಹೊಡೆದ್ವಿ. ಮಳೆ ಬಂದು ಭೂಮಿಯಲ್ಲಿ ತೇವಾಂಶ ಹೆಚ್ಚಸ್ತದಂತ ತಿಳಿದಿದ್ವಿ. ಆದ್ರೆ ವರುಣ ತೊಗರಿ ಮೇಲೆ ಅವಕೃಪೆ ತೋರಿದ. ಹೀಗಾಗಿ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ಆದಷ್ಟು ಬೇಗ ತೊಗರಿ ಬೆಳೆಗೆ ಪರಿಹಾರ ಘೋಷಿಸಬೇಕು" ಎಂದು ರೈತ ವಿಶ್ವನಾಥ ಒತ್ತಾಯಿಸಿದ್ದಾರೆ.












Click it and Unblock the Notifications