ಕೃಷಿ ಕಾಯ್ದೆ: ಸುಳ್ಳು ಪ್ರಕರಣಗಳಿಂದ ರೈತರನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದ ಟಿಕಾಯತ್
ನವದೆಹಲಿ, ಆಗಸ್ಟ್ 12: ಹರಿಯಾಣದಲ್ಲಿ ದೀರ್ಘಕಾಲದಿಂದ ವಿವಾದಿತ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ ಎಂದಿರುವ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಸುಳ್ಳು ಪ್ರಕರಣಗಳಿಂದ ರೈತರನ್ನು ಬೆದರಿಸುವುದಕ್ಕೆ ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, "ಕೇಂದ್ರ ಸರ್ಕಾರವು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ನಮ್ಮ ಶಾಂತಿಯುತ ಪ್ರತಿಭಟನೆಯನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಮಧ್ಯ ಪ್ರವೇಶಿಸಬಾರದು," ಎಂದು ಎಚ್ಚರಿಸಿದ್ದಾರೆ.
"ಹರಿಯಾಣದಲ್ಲಿ ತಮ್ಮ ರಾಜಕೀಯ ಗುರುಗಳನ್ನು ಮೆಚ್ಚಿಸುವುದಕ್ಕಾಗಿ ರಾಜ್ಯ ಸರ್ಕಾರ ಪ್ರತಿಭಟನಾನಿರತ ರೈತರ ಮೇಲೆ ಸುಳ್ಳು ಕೇಸ್ ಹಾಕುತ್ತಿದ್ದಾರೆ. ಇದರಿಂದ ಪ್ರತಿಭಟನೆಯನ್ನು ತಡೆಯುವುದಕ್ಕೆ ಆಗುವುದಿಲ್ಲ. ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವವರೆಗೂ ನಮ್ಮ ಆಂದೋಲನ ಮುಂದುವರಿಯುತ್ತದೆ ಎಂದು ಟಿಕಾಯತ್ ತಿಳಿಸಿದ್ದಾರೆ.

ರಾಷ್ಟ್ರ-ವಿರೋಧಿ ಹಣೆಪಟ್ಟಿ:
"ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ದೀರ್ಘಾವಧಿವರೆಗೂ ರೈತರು ಒಗ್ಗಟ್ಟಿನಿಂದ ಪ್ರತಿಭಟನೆ ನಡೆಸಿಕೊಂಡು ಬರುತ್ತಿದ್ದಾರೆ. ರೈತರ ಮನವಿಗಳನ್ನು ಆಲಿಸುವ ಮತ್ತು ಅವುಗಳಿಗೆ ಸ್ಪಂದಿಸುವಲ್ಲಿ ಸರ್ಕಾರಗಳು ಹಿಂದೇಟು ಹಾಕುತ್ತಿವೆ. ಕಾಯ್ದೆಗಳನ್ನು ರದ್ದುಗೊಳಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತಿರುತ್ತದೆ. ಕೇಂದ್ರ ಸರ್ಕಾರವು ರೈತರ ಆಗ್ರಹವನ್ನು ಆಲಿಸಿಕೊಳ್ಳುತ್ತಿಲ್ಲ, ಬದಲಿಗೆ ಸರ್ಕಾರದ ವಿರುದ್ಧ ಧ್ವನಿ ಎತ್ತುವವರಿಗೆ ರಾಷ್ಟ್ರ-ವಿರೋಧಿ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ," ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಕೇಸರಿ ಪಡೆಗೆ ರೈತರ ಸವಾಲು:
ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಬಿಸಿ ಮುಟ್ಟಿಸಲು ರೈತರು ಸನ್ನದ್ಧರಾಗಿದ್ದಾರೆ. ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ವೇಳೆ ಪಕ್ಷವನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ತಮ್ಮ ಹೋರಾಟದ ಹೆಜ್ಜೆಯನ್ನು ಇರಿಸುವುದಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. "ಬಿಜೆಪಿ ಹೃದಯ" ಎನಿಸಿಕೊಂಡಿರುವ ಉತ್ತರ ಪ್ರದೇಶದ ಕಡೆಗೆ ನಾವು ಮುಂದಿನ ಹೆಚ್ಚೆ ಇಡುತ್ತೇವೆ. ನಾವು ಶಾಂತಿ ಸಂಧಾನಕ್ಕೆ ಸಿದ್ಧರಿದ್ದೇವೆ. ಆದರೆ ಮೂರು ವಿವಾದಿತ ಕಾಯ್ದೆಗಳನ್ನು ರದ್ದುಗೊಳಿಸುವುದರ ಹೊರತಾಗಿ ಯಾವುದೇ ಮಾತುಕತೆಗಳು ಬೇಕಿಲ್ಲ," ಎಂದು ದೆಹಲಿ-ಹರಿಯಾಣದ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡ ಪ್ರೇಮ್ ಸಿಂಗ್ ಭಂಗು ಎಚ್ಚರಿಸಿದ್ದಾರೆ.
ರೈತರು ಸರ್ಕಾರದ ನಡುವಿನ ಸಂಧಾನ ವಿಫಲ:
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತಿವೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಆಹಾರ ಸಚಿವ ಪಿಯೂಶ್ ಗೋಯೆಲ್ ಸೇರಿದಂತೆ ಮೂವರು ಕೇಂದ್ರ ಸಚಿವರು ಪ್ರತಿಭಟನಾನಿರತ ಸಂಘಟನೆಗಳ ಜೊತೆಗೆ ಸಂಧಾನ ಸಭೆ ನಡೆಸಿದ್ದರು. ಈವರೆಗೂ ನಡೆಸಿದ 11 ಸುತ್ತಿನ ಸಂಧಾನ ಮಾತುಕತೆ ವಿಫಲಗೊಂಡಿತ್ತು. ಕಳೆದ ಜನವರಿ 22ರಂದು ಕೊನೆಯದಾಗಿ 41 ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳ ನಡುವಿನ ಸಂಧಾನ ಮಾತುಕತೆ ಮುರಿದು ಬಿದ್ದಿತ್ತು. ಇದಾಗಿ ನಾಲ್ಕು ದಿನಗಳಲ್ಲೇ ನಡೆದ ಜನವರಿ 26ರ ಗಣರಾಜ್ಯೋತ್ಸವದ ದಿನ ಟ್ರ್ಯಾಕ್ಟರ್ ರ್ಯಾಲಿ ನಡೆಸಲಾಗಿದ್ದು, ಅಂದು ನವದೆಹಲಿಯಲ್ಲಿ ರೈತರು ನಡೆಸಿದ ರ್ಯಾಲಿ ಹಿಂಸಾಚಾರಕ್ಕೆ ತಿರುಗಿತ್ತು.
ರಾಷ್ಟ್ರ ರಾಜಧಾನಿಯಲ್ಲಿ ಕಿಸಾನ್ ಸಂಸತ್
ಸಂಸತ್ ಅಧಿವೇಶನದಲ್ಲಿ ತಮ್ಮ ಬೇಡಿಕೆ ಬಗ್ಗೆ ಪ್ರಸ್ತಾಪವಾಗುವುದೇ ಅನುಮಾನ ಎಂದು ರೈತರು ಮೊದಲೇ ಅರಿತುಕೊಂಡಿದ್ದರು. ಈ ಹಿನ್ನೆಲೆ ನವದೆಹಲಿಯಲ್ಲಿ ಕೃಷಿ ಕಾಯ್ದೆಗಳ ಕುರಿತು ಚರ್ಚಿಸುವುದಕ್ಕಾಗಿ ಕಿಸಾನ್ ಸಂಸತ್ ಅನ್ನು ನಡೆಸಲಾಯಿತು. ರೈತರು ನಡೆಸುತ್ತಿರುವ ಕೃಷಿ ಸಂಸತ್ತಿನಲ್ಲಿ ಮೂರು ವಿವಾದಿತ ಕಾಯ್ದೆಗಳ ಪೈಕಿ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ)ಯ ಬಗ್ಗೆ ಚರ್ಚಿಸಲಾಯಿತು. ಕೇಂದ್ರ ಸರ್ಕಾರದ ಕಾಯ್ದೆಯು ಅಸಂವಿಧಾನಿಕವಾಗಿದ್ದು, ಖಾಸಗಿಯವರಿಗೆ ಲಾಭದಾಯಕವಾಗಿದೆ. ಇಂಥ ಕಾಯ್ದೆಯನ್ನು ರದ್ದುಗೊಳಿಸಬೇಕು ಎಂದು ಕಿಸಾನ್ ಸಂಸತ್ತಿನಲ್ಲಿ ಸಂಕಲ್ಪ ಮಾಡಲಾಯಿತು. ಈ ಕಾಯ್ದೆ ಮೂಲಕ ರೈತರಿಂದ ಕಾರ್ಪೊರೇಟ್‌ಗಳು ಸಂಪತ್ತನ್ನು ಕಸಿದುಕೊಳ್ಳುವ ಹುನ್ನಾರ ಅಡಗಿದೆ.ವಾಸ್ತವದಲ್ಲಿ ಕಾರ್ಪೊರೇಟ್ ಕೃಷಿಯನ್ನು ಉತ್ತೇಜಿಸಲು ತರಲಾಗುತ್ತಿದೆ ಎಂದು ಪ್ರತಿಭಟನಾನಿರತ ರೈತರು ಆರೋಪಿಸಿದ್ದರು.
ದೆಹಲಿಯ ಗಡಿಯಲ್ಲಿ ರೈತರ ಹೋರಾಟ
ಕಳೆದ ನವೆಂಬರ್.26ರಿಂದ ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪಂಜಾಬ್, ಹರಿಯಾಣ, ಮತ್ತು ಉತ್ತರ ಪ್ರದೇಶದ ಸಾವಿರಾರು ರೈತರು ಕೃಷಿ ಕಾಯ್ದೆಗಳ ವಿರುದ್ಧ ಕೂಗು ಎತ್ತಿದ್ದಾರೆ. ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ರೈತರು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.












Click it and Unblock the Notifications