Mandya Bandh : ಕಬ್ಬಿಗೆ ಬೆಲೆ ನಿಗದಿ ಮಾಡದ ರಾಜ್ಯ ಸರ್ಕಾರ: ಡಿಸೆಂಬರ್ 19ರಂದು ಮಂಡ್ಯ ಬಂದ್‌ಗೆ ಕರೆ
ಮಂಡ್ಯ, ಡಿಸೆಂಬರ್, 10: ಕಬ್ಬಿಗೆ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ನಿರಂತರವಾಗಿ ರೈತರಿಂದ ಪ್ರತಿಭಟನೆ ನಡೆಯುತ್ತಿದೆ. ಆದರೂ ಕೂಡ ರಾಜ್ಯ ಸರ್ಕಾರ ಇತ್ತ ಗಮನಹರಿಸದೆ ನಿರ್ಲಕ್ಷ್ಯ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ರೈತ ಸಂಘದಿಂದ ಡಿಸೆಂಬರ್ 19ರಂದು ಮಂಡ್ಯ ನಗರ ಬಂದ್‌ಗೆ ಕರೆ ನೀಡಲಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಹಾಗೂ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಎಚ್ಚರಿಕೆ ನೀಡಿದ್ದಾರೆ.
ಜಂಟಿ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಲವು ಬಾರಿ ಎಚ್ಚರಿಕೆ ನೀಡಿದ್ದೇವೆ. ಆದರೂ ಸರ್ಕಾರ ರೈತರ ಮನವಿಗೆ ಸ್ಪಂದಿಸುತ್ತಿಲ್ಲ. ಸಿಹಿ ಸುದ್ದಿ ಕೊಡುತ್ತೇವೆ ಎಂದು ಹೇಳಿ ದಿನಾಂಕವನ್ನು ಮುಂದೂಡುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ ಮಂಡ್ಯ ನಗರ ಬಂದ್‌ಗೆ ಕರೆ ನೀಡಲಾಗಿದೆ. ಇದಕ್ಕೆ ವ್ಯಾಪಾರಸ್ಥರು, ವಾಹನ ಚಾಲಕರು ಮತ್ತು ಮಾಲೀಕರು, ಹೋಟೆಲ್ ಮಾಲೀಕರು ಸೇರಿದಂತೆ ಬಹುತೇಕ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ತಿಳಿಸಿದರು.
ನಂತರ ಎ.ಎಲ್.ಕೆಂಪೂಗೌಡ ಮಾತನಾಡಿ, ಅಂದು ಬೆಳಗ್ಗೆಯಿಂದ ಮಧ್ಯಾಹ್ನ 2ಗಂಟೆವರೆಗೆ ಬಂದ್ ಮಾಡಲಾಗುವುದು. ಸಾರ್ವಜನಿಕರಿಗೆ ಅನಾನೂಕೂಲ ಆಗಬಾರದೆಂದು ಸಮಯವನ್ನು ಮಧ್ಯಾಹ್ನಕ್ಕೆ ಸೀಮಿತಗೊಳಿಸಲಾಗಿದೆ ಎಂದರು.

ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ
ಇನ್ನು ಇದಕ್ಕೆ ಪೂರ್ವಭಾವಿಯಾಗಿ ಮೂರ್ನಾಲ್ಕು ದಿನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಮರಾಜನಗರ ಜಿಲ್ಲೆ ಹನೂರಿಗೆ ಬರಲಿದ್ದಾರೆ. ಅಲ್ಲಿ ಸುಮಾರು ಐದು ಸಾವಿರ ಜನರೊಂದಿಗೆ ಪ್ರತಿಭಟನೆ ಮಾಡಲಾಗುವುದು. ಅಲ್ಲಿಗೆ ಜಿಲ್ಲೆಯಿಂದಲೂ ಕಾರ್ಯಕರ್ತರು ತೆರಳಲಿದ್ದಾರೆ ಎಂದರು.

"ರೈತರನ್ನು ಭಿಕ್ಷಕರು ಎಂದುಕೊಂಡಿದ್ದೀರಾ?
ಇತ್ತ ಹಾಲಿಗೆ ಲೀಟರ್ 40 ರೂಪಾಯಿ ಬೆಲೆ ನಿಗದಿ ಮಾಡುವಂತೆ ನಾವು ಒತ್ತಾಯಿಸಿದ್ದೇವೆ. ಆದರೆ ಎರಡು ರೂಪಾಯಿ ಹೆಚ್ಚಿಸಲಾಗಿದೆ. ಎಥೆನಾಲ್ ಲಾಭದಲ್ಲಿ ಪ್ರತಿ ಟನ್‌ಗೆ 50 ರೂಪಾಯಿಗಳನ್ನು ರೈತರಿಗೆ ನೀಡಲಾಗುವುದೆಂದು ಹೇಳಲಾಗಿದೆ. "ರೈತರನ್ನು ಭಿಕ್ಷಕರು ಎಂದುಕೊಂಡಿದ್ದೀರಾ?. ಇಷ್ಟೊಂದು ಕಡೆಗಣನೆ ಮಾಡುವುದು ಒಳ್ಳೆಯದಲ್ಲ. ಇಂದಿನ ದಿನದಲ್ಲಿ ಕೃಷಿಗೆ ತಗಲುತ್ತಿರುವ ವೆಚ್ಚಕ್ಕೆ ಸರಿಯಾದ ಆದಾಯವೂ ಬರುತ್ತಿಲ್ಲ.

ಸರ್ಕಾರದ ವಿರುದ್ಧ ಕೆಂಪೂಗೌಡ ಕಿಡಿ
ರೈತರ ನ್ಯಾಯಯುತ ಬೇಡಿಕೆ ಈಡೇರಿಸಲು ಆಗದಿದ್ದರೆ ಕಹಿ ಸುದ್ದಿಯನ್ನಾದರೂ ಘೋಷಣೆ ಮಾಡಲಿ. ಶೀಘ್ರವೇ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಆ ವೇಳೆ ಸುವರ್ಣಸೌಧದ ಎದುರಿಗೆ ನಿಂತು ನಮಗೆ ನೀವು ಕೇಳಿದಷ್ಟು ದರ ಕೊಡುವ ಯೋಗ್ಯತೆ ಇಲ್ಲ". ಆದ್ದರಿಂದ ನಮಗೆ ಸಹಕರಿಸಿ ಎಂದಾದರೂ ಹೇಳಲಿ ಎಂದು ಕೆಂಪೂಗೌಡ ತೀವ್ರ ವಾಗ್ದಾಳಿ ನಡೆಸಿದರು.

ಸರ್ಕಾರಕ್ಕೆ ಬರುವ ಆದಾಯ ಎಷ್ಟು?
ಎಸ್.ಸಿ.ಮಧುಚಂದನ್ ಮಾತನಾಡಿ, ಕಬ್ಬಿನ ಉತ್ಪನ್ನಗಳಿಂದ ಮದ್ಯ ತಯಾರು ಮಾಡಲಾಗುತ್ತಿದೆ. ಪ್ರತಿ ಟನ್ ಕಬ್ಬಿನಿಂದ ಸುಮಾರು 60 ಲೀಟರ್ ಮದ್ಯವನ್ನು ಉತ್ಪಾದನೆ ಮಾಡಲಾಗುತ್ತಿದ್ದು, ವಾರ್ಷಿಕ ಅಂದಾಜು 30 ಸಾವಿರ ಕೋಟಿ ರೂಪಾಯಿ ಸರ್ಕಾರಕ್ಕೆ ಆದಾಯ ಬರುತ್ತಿದೆ. ಇದರಲ್ಲಿ ಶೇಕಡಾ 10ರಷ್ಟು ಲಾಭವನ್ನು ಕೊಟ್ಟರೂ ರೈತರಿಗೆ ಅನುಕೂಲವಾಗಲಿದೆ. ಆದರೆ ಸರ್ಕಾರಕ್ಕೆ ರೈತರಿಗೆ ಒಳ್ಳೆಯದಾಗುವುದು ಬೇಕಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಬಳ್ಳಾರಿ ರೈತ ಸಂಘದ ಅಧ್ಯಕ್ಷ ಎಂಎನ್‌ಕೆ ನಾಯ್ಡು, ಮಂಡ್ಯ ರೈತ ಸಂಘದ ಲಿಂಗಪ್ಪಾಜಿ, ಶಿವಳ್ಳಿ ಚಂದ್ರು, ರಾಮಕೃಷ್ಣ, ಪ್ರಕಾಶ್ ಹರವು, ಅಕ್ಕಿಗಿರಣಿ ಮಾಲೀಕರ ಸಂಘದ ಶಂಕರೇಗೌಡ ಇದ್ದರು.












Click it and Unblock the Notifications