Farmers V/s MESCOM: ಮೆಸ್ಕಾಂ ವಿರುದ್ಧ ಹೋರಾಡಿ ಕಬ್ಬಿನ ಬೆಳೆ ನಾಶಕ್ಕೆ 5 ಲಕ್ಷ ಪರಿಹಾರ ಪಡೆದ ರೈತರು
ಶಿವಮೊಗ್ಗ, ಜೂನ್. 21: ಸೊರಬ ತಾಲ್ಲೂಕಿನ ರೈತರು ದಕ್ಷಿಣ ಕನ್ನಡ ಜಿಲ್ಲೆಯ ಮೆಸ್ಕಾಂ ವಿರುದ್ಧ ಸೇವಾ ನ್ಯೂನ್ಯತೆ ಬಗ್ಗೆ ಹೋರಾಡಿ ತಮ್ಮ ಬೆಳೆ ನಾಶಕ್ಕೆ ಸೂಕ್ತ ಪರಿಹಾರ ಪಡೆದಿರುವ ಪ್ರಕರಣ ವರದಿಯಾಗಿದೆ. ಕಬ್ಬಿನ ಬೆಳೆ ಹಾನಿಗಾಗಿ ರೈತರಿಗೆ 5ಕ್ಕೂ ಹೆಚ್ಚಿನ ಹಣವನ್ನು ಬಡ್ಡಿ ಸಮೇತ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಸೊರಬ ತಾಲ್ಲೂಕಿನ ರಾಮನಗೌಡ, ಲೋಕಗೌಡ ಹಾಗೂ ಸುಲೋಚನಾ ಇವರು ದಕ್ಷಿಣ ಕನ್ನಡ ಜಿಲ್ಲೆಯ ಮೆಸ್ಕಾಂ ವಿರುದ್ದ ಸೇವಾ ನ್ಯೂನ್ಯತೆ ಕುರಿತು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ಸಲ್ಲಿಸಿದ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಆಯೋಗವು ಅರ್ಜಿದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಮೆಸ್ಕಾಂಗೆ ಆದೇಶಿಸಿದೆ.

ಅರ್ಜಿದಾರರು ಸೊರಬ ತಾಲ್ಲೂಕಿನ ಕೊಪ್ಪದಾಲ ಗ್ರಾಮದಲ್ಲಿ ವ್ಯವಸಾಯ ಮಾಡುತ್ತಿದ್ದುಇವರು ತಮ್ಮ 4 ಎಕರೆ 3 ಗುಂಟೆ ಜಮೀನಿನಲ್ಲಿ ಕಬ್ಬು ಬೆಳೆಯನ್ನು ಬೆಳೆದಿರುತ್ತಾರೆ. ಕಬ್ಬಿಗೆ ನೀರಿನ ಸೌಲಭ್ಯ ಪಡೆಯುವುದಕ್ಕಾಗಿ ಎದುರುದಾರರಿಂದ ವಿದ್ಯುತ್ ಸಂಪರ್ಕವನ್ನು ಪಡೆದು ಕೊಳವೆ ಬಾವಿ ತೆಗೆಸಿದ್ದಾರೆ.
ದಿನಾಂಕ 26/12/2022 ರಂದು ಅರ್ಜಿದಾರರ ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದು ಅದರ ಪರಿಣಾಮವಾಗಿ ಸದರಿ ತಂತಿಗಳು ಒಂದಕ್ಕೊಂದು ಸ್ಪರ್ಶಿಸಿ ಬೆಂಕಿ ಕಿಡಿಗಳು ಉಂಟಾಗಿದೆ ಬೆಳೆದಿರುವಂತಹ ಕಬ್ಬಿನ ಮೇಲೆ ಬಿದ್ದದ್ದವು. ಇದರ ಪರಿಣಾಮ ಕಬ್ಬಿನ ಬೆಳೆ ಸಂಪೂರ್ಣ ಸುಟ್ಟು ಹೋಗಿರುತ್ತದೆ.
ಅರ್ಜಿದಾರರು ಈ ಬಗ್ಗೆ ಪೊಲೀಸ್ ದೂರು ದಾಖಲಿಸಿ ಎದುರುದಾರರ ನಿರ್ಲಕ್ಷ್ಯದಿಂದಾಗಿ ಜಮೀನಿನಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳು ಜೋತು ಬಿದ್ದಿರುವ ಬಗ್ಗೆ ಮತ್ತು ಆ ತಂತಿಗಳನ್ನು ಸರಿಪಡಿಸುವ ಬಗ್ಗೆ ಸಾಕಷ್ಟು ಬಾರಿ ತಿಳಿಸಿದ್ದರು. ಆದರೆ, ಎದುರುದಾರ ಮೆಸ್ಕಾಂ ವಿದ್ಯುತ್ ತಂತಿಗಳನ್ನು ಸರಿಪಡಿಸಿರುವುದಿಲ್ಲ. ಪರಿಣಾಮವಾಗಿ ವಿದ್ಯುತ್ ತಂತಿಗಳ ಸ್ಪರ್ಶದಿಂದ ಬೆಂಕಿ ಉಂಟಾಗಿ ಜಮೀನಿನಲ್ಲಿ ಬೆಳೆದಿದ್ದ ಅಂದಾಜು 225 ಟನ್ ಕಬ್ಬು ಸಂಪೂರ್ಣ ಸುಟ್ಟುಹೋಗಿರುತ್ತದೆ.

ಆದ್ದರಿಂದ ಪ್ರತಿವಾದಿಗಳು ತಮ್ಮ ಸೇವಾ ನ್ಯೂನ್ಯತೆಯಿಂದ ಉಂಟಾದ ಹಾನಿಗೆ ಸಂಬಂಧಿಸಿದಂತೆ ರೂ.8,25,000/- ಗಳಷ್ಟು ಪರಿಹಾರವನ್ನು ಶೇ.18 ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕ ಸಲ್ಲಿಸಿದ್ದ ಅರ್ಜಿಯಲ್ಲಿ ಕೋರಿರುತ್ತಾರೆ. ಅರ್ಜಿಯನ್ನು ವಿಚಾರಣೆ ನಡೆಸಲಾಗಿದೆ.
ಮೆಸ್ಕಾಂ ತನ್ನ ಉತ್ತರದಲ್ಲಿ ಈ ಬೆಂಕಿ ಅವಘಡವು ವಿದ್ಯುತ್ ತಂತಿಗಳ ಸ್ಪರ್ಶದಿಂದ ಉಂಟಾಗಿರದೇ, ದಾರಿಹೋಕರು ಎಸೆದಿರುವ ಬೀಡಿ, ಸಿಗರೇಟ್ ಇತ್ಯಾದಿಗಳಿಂದ ಉಂಟಾಗಿರುವ ಸಂಭವವಿದೆ ಎಂದು ತಮ್ಮ ಲಿಖಿತ ಹೇಳಿಕೆಯಲ್ಲಿ ತಿಳಿಸಿರುತ್ತಾರೆ. ಆದರೆ ಈ ಹೇಳಿಕೆಗೆ ಪೂರಕವಾದ ಯಾವುದೇ ಸಾಕ್ಷ್ಯಾಧಾರಗಳನ್ನು ಹಾಜರುಪಡಿಸಿರುವುದಿಲ್ಲ. ಮತ್ತು ಎದುರುದಾರರು ಪ್ರಸ್ತುತ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯು ಚಾಲ್ತಿಯಲ್ಲಿರುವುದರಿಂದ ಆಯೋಗವು ಪ್ರಕರಣವನ್ನು ವಿಚಾರಣೆ ಮಾಡಲು ಬರುವುದಿಲ್ಲವೆಂದು ತಿಳಿಸಿರುತ್ತಾರೆ.
ಆಯೋಗವು ಪ್ರಕರಣದಲ್ಲಿ ಹಾಜರುಪಡಿಸಿದ್ದ ದಾಖಲೆಗಳು ಮತ್ತು ಪಕ್ಷಗಾರರ ಹೇಳಿಕೆಗಳನ್ನು ಪರಿಶೀಲಿಸಿ, ಅರ್ಜಿದಾರರ ಜಮೀನಿನಲ್ಲಿ ಉಂಟಾದ ಕಬ್ಬಿನ ಬೆಳೆಯ ನಾಶಕ್ಕೆ ವಿದ್ಯುತ್ ತಂತಿಗಳ ಸಂಪರ್ಕವೇ ಕಾರಣವೆಂದು ತೀರ್ಮಾನಿಸಿ ಪ್ರಸ್ತುತ ಪ್ರಕರಣವನ್ನು ಭಾಗಶಃ ಪುರಸ್ಕರಿಸಿರುತ್ತದೆ.
ಎದುರುದಾರರು ಕಬ್ಬಿನ ಬೆಳೆಯಿಂದ ಉಂಟಾದ ಹಾನಿಗೆ ಸಂಬಂಧಿಸಿದಂತೆ ಅರ್ಜಿದಾರರಿಗೆ ರೂ.5,00,000/-ಗಳನ್ನು ವಾರ್ಷಿಕ ಶೇ.9 ಬಡ್ಡಿ ಸಮೇತ ಪಾವತಿಸಬೇಕು. ರೂ.50,000/- ಗಳನ್ನು ಅರ್ಜಿದಾರರಿಗೆ ಉಂಟಾ ಮಾನಸಿಕ ಹಾನಿಗೆ ಹಾಗೂ 10,000 ರೂಪಾಯಿಗಳನ್ನು ವ್ಯಾಜ್ಯದ ಖರ್ಚು ವೆಚ್ಚಗಳ ಬಾಬ್ತಾಗಿ ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಭಾಡ್ಯ ಇವರ ಪೀಠವು ದಿನಾಂಕ 12/06/2024 ಎಂದು ಆದೇಶಿಸಿದೆ.












Click it and Unblock the Notifications