ರೈತರ ಜೊತೆ ಮುಕ್ತವಾಗಿ ಚರ್ಚಿಸದೆ ಬೇರೆ ದಾರಿಯೇ ಇಲ್ಲ; ಸುಪ್ರೀಂ ಕೋರ್ಟ್
ನವದೆಹಲಿ, ಡಿಸೆಂಬರ್ 16: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ದೆಹಲಿಯ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆಗೆ ಜಮಾಯಿಸಿರುವ ರೈತರನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿ ಸುಪ್ರೀಂ ಕೋರ್ಟ್ ಗೆ ಹಲವು ಅರ್ಜಿಗಳೂ ಬಂದಿವೆ.
ಬುಧವಾರ ಈ ಅರ್ಜಿಗಳ ವಿಚಾರಣೆ ನಡೆಸಿರುವ ಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟೀಸ್ ನೀಡಿದೆ. ರೈತರೊಂದಿಗಿನ ಈ ಬಿಕ್ಕಟ್ಟನ್ನು ಕೊನೆ ಮಾಡಲು ರೈತ ಮುಖಂಡರು, ಸರ್ಕಾರಿ ಅಧಿಕಾರಿಗಳು ಹಾಗೂ ಇನ್ನಿತರ ಪ್ರಮುಖರನ್ನು ಒಳಗೊಂಡ ಸಮಿತಿಯನ್ನು ರಚಿಸಲು ಸಲಹೆ ನೀಡಿದೆ. ಮುಂದೆ ಓದಿ...

"ಮುಕ್ತವಾಗಿ ಮಾತನಾಡದೇ ಬೇರೆ ದಾರಿಯಿಲ್ಲ"
ಪ್ರತಿಭಟನೆ ಸಂಬಂಧ ವಿಚಾರಣೆ ನಡೆಸಿದ ಸಿಜೆಐ ಬೊಬ್ಡೆ, "ಸರ್ಕಾರವು ರೈತರೊಂದಿಗೆ ಮುಕ್ತವಾಗಿ ಚರ್ಚೆ ನಡೆಸದೇ ಇದ್ದರೆ, ರೈತರ ಜೊತೆಗಿನ ಸಂಧಾನ ಮತ್ತೆ ಮತ್ತೆ ಸೋಲುವುದರಲ್ಲಿ ಸಂಶಯವೇ ಇಲ್ಲ" ಎಂದಿದ್ದಾರೆ. "ಸರ್ಕಾರದ ಕೃಷಿ ಕಾಯ್ದೆಗಳು ತಮ್ಮ ವಿರುದ್ಧವಾಗಿವೆ ಎಂದು ರೈತರು ಗ್ರಹಿಸಿದ್ದಾರೆ. ಈ ಕುರಿತು ಸರ್ಕಾರ ಅವರೊಂದಿಗೆ ಮುಕ್ತವಾಗಿ ಚರ್ಚಿಸಬೇಕು. ಇಲ್ಲದಿದ್ದರೆ ನಿಮ್ಮ ಉದ್ದೇಶ ಮತ್ತೆ ವಿಫಲಗೊಳ್ಳುತ್ತದೆ" ಎಂದಿದ್ದಾರೆ.

ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಕೋರ್ಟ್
"ರೈತರ ಈ ಪ್ರತಿಭಟನೆ ಶೀಘ್ರದಲ್ಲೇ ರಾಷ್ಟ್ರೀಯ ವಿಚಾರವಾಗಲಿದೆ. ಸರ್ಕಾರದಿಂದ ಈ ಸಮಸ್ಯೆ ಬಗೆಹರಿಯುವಂತೆ ಕಾಣುತ್ತಿಲ್ಲ" ಎಂದಿರುವ ನ್ಯಾಯಾಲಯ, ಇದಕ್ಕೆ ತಜ್ಞರ ತಂಡ ರಚಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿದೆ.

ಬಿಕ್ಕಟ್ಟು ಶಮನಕ್ಕೆ ಸಮಿತಿ ರಚನೆ ಸಲಹೆ
ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ, ಎ.ಎಸ್. ಬೋಪಣ್ಣ ಹಾಗೂ ವಿ.ರಾಮ ಸುಬ್ರಹ್ಮಣಿಯಂ ಅವರನ್ನೊಳಗೊಂಡ ಪೀಠವು, ಸರ್ಕಾರ, ರೈತ ಸಂಘಟನೆಯ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಿ ಈ ಬಿಕ್ಕಟ್ಟನ್ನು ಕೊನೆಗಣಿಸಲು ನ್ಯಾಯಾಲಯವು ಸಮಿತಿ ರಚಿಸಬಹುದು ಎಂದು ತಿಳಿಸಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆದಿದೆ.

"ನಿಮ್ಮ ಈವರೆಗಿನ ಪ್ರಯತ್ನಗಳು ವಿಫಲವಾಗಿವೆ"
ಈವರೆಗೂ ರೈತರೊಂದಿಗಿನ ನಿಮ್ಮ ಸಂಧಾನ ಪ್ರಯತ್ನಗಳು ವಿಫಲವಾಗಿವೆ ಎಂಬ ಅಂಶವನ್ನು ಕೇಂದ್ರಕ್ಕೆ ನ್ಯಾಯಾಲಯ ಎತ್ತಿತೋರಿಸಿದೆ. ಈ ಸಂದರ್ಭ, ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಸರ್ಕಾರ ನಡೆದುಕೊಳ್ಳುವುದಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ದೆಹಲಿ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವುದರಿಂದ ರಸ್ತೆಗಳಿಗೆ ತಡೆಯಾಗಿ ಜನರಿಗೆ ತೊಂದರೆಯಾಗುತ್ತಿದೆ. ಕೊರೊನಾ ಆತಂಕವೂ ಎದುರಾಗಿದೆ. ಹೀಗಾಗಿ ರೈತರನ್ನು ಅಲ್ಲಿಂದ ತೆರವುಗೊಳಸಬೇಕು ಎಂದು ಸಂಬಂಧಪಟ್ಟ ಆಡಳಿತಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್ ಗೆ ಹಲವು ಮನವಿಗಳು ಬಂದಿವೆ.












Click it and Unblock the Notifications