ಸುವರ್ಣ ವಿಧಾನಸೌಧಕ್ಕೆ ಲಾರಿ ನುಗ್ಗಿಸಿದ ರೈತರ ಬಂಧನ, ಎಫ್‌ಐಆರ್
ಬೆಳಗಾವಿ, ನವೆಂಬರ್ 18 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸುವರ್ಣ ವಿಧಾನಸೌಧಕ್ಕೆ ಕಬ್ಬು ತುಂಬಿದ ಲಾರಿಯನ್ನು ನುಗ್ಗಿಸಿದ ರೈತರನ್ನು ಪೊಲೀಸರು ಬಂಧಿಸಿದ್ದಾರೆ.
50 ಕ್ಕೂ ಹೆಚ್ಚು ರೈತರನ್ನು ಬಂಧಿಸಿರುವ ಪೊಲೀಸರು ಹಿರೇಬಾಗೇವಾಡಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. 10 ಜನರ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ. ಕಬ್ಬುದರ ನಿಗದಿ, ಬಾಕಿ ಬಿಲ್‌ಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಬೆಳಗಾವಿ ಪೊಲೀಸ್ ಆಯುಕ್ತ ಡಿ.ಸಿ.ರಾಜಪ್ಪ ಅವರು, 'ನಮ್ಮ ಗಮನ ಬೇರೆ ಕಡೆ ಸೆಳೆದು ರೈತರು ಇಲ್ಲಿಗೆ ಬಂದಿದ್ದಾರೆ. ನಾವೆಲ್ಲರೂ ಜಿಲ್ಲಾಧಿಕಾರಿ ಕಚೇರಿ ಬಳಿ ಇದ್ದೆವು. ಯಾವುದೇ ಭದ್ರತಾ ಲೋಪ ಉಂಟಾಗಿಲ್ಲ' ಎಂದು ಸ್ಪಷ್ಪಪಡಿಸಿದರು.
ಸುವರ್ಣ ವಿಧಾನಸೌಧಕ್ಕೆ ಕಬ್ಬು ತುಂಬಿದ ಲಾರಿಯನ್ನು ನುಗ್ಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ರೈತರ ವಿರುದ್ಧ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ನ.19ರಂದು ಬೆಳಗಾವಿಗೆ ಬರುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಈಗ ಅವರು ಮಾತು ತಪ್ಪಿದ್ದಾರೆ. ನಮ್ಮನ್ನೇ ಬೆಂಗಳೂರಿಗೆ ಬರುವಂತೆ ಹೇಳಿಕೆ ನೀಡಿದ್ದಾರೆ. ಅವರು ಇಲ್ಲಿಗೆ ಬರುವ ತನಕ ಪ್ರತಿಭಟನೆ ಮುಂದುವರೆಸಲಾಗುತ್ತದೆ ಎಂದು ರೈತರು ಹೇಳಿದ್ದು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ಮುಂದುವರೆಸಿದ್ದಾರೆ.












Click it and Unblock the Notifications