ಕದಾಳು ಗ್ರಾಮದಲ್ಲಿ ಎರಡು ಹೆಕ್ಟೇರ್ ಶುಂಠಿ ಬೆಳೆ ನಾಶ ಮಾಡಿದ ಕಿಡಿಗೇಡಿಗಳು, ಕಣ್ಣೀರಿಟ್ಟ ರೈತ ಸಹೋದರರು
ಹಾಸನ, ಆಗಸ್ಟ್, 12: ಟೊಮೆಟೋದಂತೆಯೇ ಶುಂಠಿಗೂ ಕೂಡ ಬಂಗಾರದ ಬೆಲೆಯಿದೆ. ಶುಂಠಿ ಬೆಳೆದವರಿಗೆ ಬಂಪರ್ ಬೆಲೆ ಸಿಗುತ್ತಿದ್ದು, ಇದರಿಂದ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಆದರೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಕದಾಳು ಗ್ರಾಮದಲ್ಲಿ ಸಹೋದರಿಬ್ಬರು ಬೆಳೆದಿದ್ದ ಎರಡು ಹೆಕ್ಟೇರ್ ಶುಂಠಿಯನ್ನು ಯಾರೋ ಕಿಡಿಗೇಡಿಗಳು ಕಳೆನಾಶಕ ಸಿಂಪಡಿಸಿ ನಾಶ ಮಾಡಿರುವ ಘಟನೆ ನಡೆದಿದೆ.
ಲಕ್ಷಾಂತರ ಖರ್ಚು ಮಾಡಿ ಅಧಿಕ ಇಳುವರಿ ಶುಂಠಿ ಬೆಳೆದು ಹೆಚ್ಚು ಆದಾಯದ ನಿರೀಕ್ಷೆಯಲ್ಲಿದ್ದ ಬೆಳೆಗಾರರೊಬ್ಬರಿಗೆ ಕಿಡಿಗೇಡಿಗಳು ಆಘಾತ ನೀಡಿದ್ದಾರೆ. ಹಸನಾಗಿ ಬೆಳೆದಿದ್ದ ಶುಂಠಿಗೆ ರಾಸಾಯನಿಕವನ್ನು ಸಿಂಪಡಿಸಿ ಸುಟ್ಟುಹೋಗುವಂತೆ ಮಾಡಿದ್ದಾರೆ. ನಾಶವಾಗುತ್ತಿರುವ ಶುಂಠಿಯನ್ನು ನೋಡಿದ ಬೆಳೆಗಾರರ ಕಣ್ಣೀರಿಡುತ್ತಿದ್ದಾರೆ.

ಹಾಸನ ಜಿಲ್ಲೆ ಆಲೂರು ತಾಲೂಕಿನ ಕದಾಳು ಗ್ರಾಮದ ನಿಂಗರಾಜು ಹಾಗೂ ಕೆಂಚೇಗೌಡ ಎಂಬ ಸಹೋದರರು ತಮ್ಮ ಎರಡು ಹೆಕ್ಟೇರ್ ಜಮೀನಿನಲ್ಲಿ ಶುಂಠಿ ಬೆಳೆದಿದ್ದರು. ಎರಡೂವರೆ ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ಶುಂಠಿಯನ್ನು ಬೆಳೆದಿದ್ದರು. ಕಳೆದ 6 ತಿಂಗಳಿನಿಂದ ಹಗಲು ರಾತ್ರಿಯೆನ್ನದೇ ಮನೆಮಂದಿಯೆಲ್ಲಾ ಕಷ್ಟಪಟ್ಟು ಶುಂಠಿಯನ್ನು ಕಣ್ಣಿನಲ್ಲಿ ಕಣ್ಣಿಟ್ಟು ನೋಡಿಕೊಂಡಿದ್ದರು.
ಸದ್ಯ ಶುಂಠಿಗೆ ಬಂಪರ್ ಬೆಲೆಯಿದ್ದು, ಇನ್ನು ಮೂರು ತಿಂಗಳೊಳಗೆ 50 ಲಕ್ಷಕ್ಕೂ ಅಧಿಕ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದರು. ಆದರೆ ರಾತ್ರೋರಾತ್ರಿ ಕಿಡಿಗೇಡಿಗಳು ಜಮೀನಿಗೆ ನುಗ್ಗಿ ಕಳೆನಾಶಕವನ್ನು ಸಿಂಪಡಿಸಿ ಹೋಗಿದ್ದಾರೆ. ಇದೀಗ ಶುಂಠಿ ಬೆಳೆಯೆಲ್ಲವೂ ಕೊಳೆಯೋ ಹಂತಕ್ಕೆ ತಲುಪಿದ್ದು, ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಅಂತಾ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ಕಿಡಿಗೇಡಿಗಳು ಜಮೀನಿನಲ್ಲಿರುವ ಎಲ್ಲಾ ಗಿಡಗಳ ಮೇಲೆ ಕಳೆನಾಶಕ ಸಿಂಪಡಿಸಿದ್ದು, ಈ ಹಿನ್ನೆಲೆ ಕಳೆದೊಂದು ವಾರದಿಂದ ಶುಂಟಿ ಬೆಳೆ ಹಸಿರು ಬಣ್ಣದಿಂದ ಕಂದು ಬಣ್ಣಕ್ಕೆ ತಿರುಗುತ್ತಾ ಕೊಳೆಯುವ ಹಂತಕ್ಕೆ ತಲುಪಿದೆ. ಕೇವಲ ಎಲೆಯಷ್ಟೇ ಅಲ್ಲದೇ ಭೂಮಿಯ ಒಳಗಿರುವ ಶುಂಠಿ ಕೂಡ ಕಪ್ಪು ಬಣ್ಣಕ್ಕೆ ತಿರುಗಿ ಕೊಳೆಯುತ್ತಿದೆ. ಯಾವುದೇ ದಾರಿಯಿಲ್ಲದೆ ಇದೀಗ ಎಳೆ ಶುಂಠಿಯನ್ನೇ ಕಟಾವು ಮಾಡಲೇಬೇಕಿದೆ.
ಇಲ್ಲದಿದ್ದರೆ ಕೆಲವೇ ದಿನಗಳಲ್ಲಿ ಶುಂಠಿ ಸಂಪೂರ್ಣವಾಗಿ ಮಣ್ಣುಪಾಲಾಗಲಿದೆ. ಸ್ಥಳಕ್ಕೆ ಕೃಷಿ, ತೋಟಗಾರಿಕಾ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇನ್ನು ಘಟನೆ ಸಂಬಂಧ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ, ಜಮೀನು ಮಾಲೀಕರು ಆಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ದಾಖಲಿಸಿಕೊಂಡಿರುವ ಆಲೂರು ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗುಳ್ಳುವ ಭರವಸೆ ನೀಡಿದ್ದಾರೆ. ಇನ್ನು ಕಿಡಿಗೇಡಿಗಳ ಕೃತ್ಯಕ್ಕೆ ಗ್ರಾಮಸ್ಥರು ಕೂಡ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಇಂತಹ ದುಷ್ಕೃತ್ಯ ಎಸಗಿರುವ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಸೂಕ್ತ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications