MSP Team: ರೈತರಿಗೆ ಸಿಹಿಸುದ್ದಿ ಕೊಡಲು ಒಂದೊಂದು ತಂಡದಲ್ಲಿ ಒಂದೊಂದು ಚರ್ಚೆ!
ನವದೆಹಲಿ, ಆಗಸ್ಟ್ 23: ಭಾರತದಲ್ಲಿ ರೈತರ ಬೆಳೆಗೆ ನ್ಯಾಯಯುತ ಬೆಲೆಯನ್ನು ಒದಗಿಸುವ ನಿಟ್ಟಿನಲ್ಲಿ ಕನಿಷ್ಠ ಬೆಂಬಲ ಬೆಲೆಯ (MSP) ಸಮಿತಿಯು ಮೊದಲ ಸಭೆಯನ್ನು ನಡೆಸಿತು. ಕಳೆದ ಆಗಸ್ಟ್ 22ರ ಸೋಮವಾರ ನಡೆದ ಸಭೆಯಲ್ಲಿ ಉಪ-ಗುಂಪುಗಳನ್ನು ರಚಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಪಾರದರ್ಶಕ ರೀತಿಯಲ್ಲಿ ಜಾರಿಗೊಳಿಸುವುದಕ್ಕೆ ಕ್ರಮ ತೆಗೆದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಕಡ್ಡಾಯ ಅಂಶಗಳ ಮೇಲೆ ಚರ್ಚೆ ನಡೆಸುವುದಕ್ಕೆ ಪ್ರಮುಖವಾಗಿ ನಾಲ್ಕು ಗುಂಪುಗಳನ್ನು ರಚಿಸಲಾಗಿದೆ. ಇದರ ಮಧ್ಯೆ ಸೋಮವಾರ ನಡೆದ ಸಭೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (SKM) ಗೈರು ಹಾಜರಾಗಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಲ್ಲಿ ರೈತರ ಹೋರಾಟ ಯಶಸ್ವಿಯಾಗಿದೆ. ಬಿಸಿಲು, ಮಳೆ, ಚಳಿಗೆ ಅಂಜದೇ ಅಳುಕದೇ ಹೋರಾಟ ನಡೆಸಿದ್ದ ರೈತರ ಬೇಡಿಕೆಗಳಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ಒದಗಿಸುವುದೂ ಒಂದಾಗಿತ್ತು.. ಈ ನಿಟ್ಟಿನಲ್ಲಿ ರೈತ ಸಂಘಟನೆಗಳು ತಮ್ಮದೇ ಸಮಿತಿ ಹಾಗೂ ತಂಡಗಳನ್ನು ರಚಿಸಿದ್ದವು. ಇದರ ಮಧ್ಯೆ ರೈತರ ಹೋರಾಟದ ಹಾದಿ ಹಾಗೂ ಈಗ ತಲುಪಿರುವ ಗುರಿಯ ಕುರಿತು ತಿಳಿಯಲು ಮುಂದೆ ಓದಿ.

ಆಗಸ್ಟ್ 22ರಂದು ನಡೆದ ಸಭೆಯಲ್ಲಿ ಚರ್ಚಿಸಿದ್ದೇನು?
ಭಾರತದಲ್ಲಿ ಬದಲಾಗುತ್ತಿರುವ ಅಗತ್ಯತೆಗಳನ್ನು ಗಮನದಲ್ಲಿ ಇಟ್ಟುಕೊಂಡು ಬೆಳೆಯ ಮಾದರಿಯನ್ನು ಬದಲಾಯಿಸಬೇಕು. ಶೂನ್ಯ ಬಜೆಟ್ ಆಧಾರಿತ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಬೇಕು. ಕನಿಷ್ಠ ಬೆಂಬಲ ಬೆಲೆಯನ್ನು ಜಾರಿಗೊಳಿಸುವುದನ್ನು ಹೆಚ್ಚು ಪರಿಣಾಮಕಾರಿ ಹಾಗೂ ಪಾರದರ್ಶಕಗೊಳಿಸಲು ಯಾವೆಲ್ಲ ಮಾರ್ಗಗಳಿವೆ ಎಂಬುದನ್ನು ಸಭೆಯಲ್ಲಿ ಚರ್ಚಿಸಲಾಯಿತು. ಮಾಜಿ ಕೃಷಿ ಕಾರ್ಯದರ್ಶಿ ಸಂಜಯ್ ಅಗರವಾಲ್ ನೇತೃತ್ವದ ಸಮಿತಿಯು ನಡೆಸಿದ ಸಭೆಯಲ್ಲಿ ಇನ್ನೂ ಹಲವು ಅಂಶಗಳನ್ನು ಚರ್ಚೆ ವಿಷಯವಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ಸಮಿತಿಯಲ್ಲಿ ಅಧ್ಯಕ್ಷರೂ ಸೇರಿದಂತೆ 26 ಮಂದಿ ಸದಸ್ಯರನ್ನು ಹೊಂದಿದೆ. ವಿಶೇಷವೆಂದರೆ ಈ ಸಮಿತಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಮೂರು ಸದಸ್ಯತ್ವದ ಸ್ಥಾನಗಳನ್ನು ಪಕ್ಕಕ್ಕೆ ಇರಿಸಲಾಗಿದೆ.

ಯಾವ ಆಧಾರದಲ್ಲಿ ಉಪ-ಗುಂಪು ರಚನೆ?
* ಮೊದಲ ಗುಂಪು - ರೈತರ ಗುಂಪಿನ ಸಿಎನ್‌ಆರ್‌ಐನಲ್ಲಿ ಪ್ರಧಾನ ಕಾರ್ಯದರ್ಶಿ ಆಗಿರುವ ಆನಂದ್, ಮೊದಲ ಗುಂಪು ಹಿಮಾಲಯ ರಾಜ್ಯಗಳ ಜೊತೆಗೆ ಬೆಳೆ ಮಾದರಿ ಮತ್ತು ಬೆಳೆ ವೈವಿಧ್ಯತೆ ಮತ್ತು ಆ ರಾಜ್ಯಗಳಲ್ಲಿನ ಕನಿಷ್ಛ ಬೆಂಬಲ ಬೆಲೆಯನ್ನು ಹೇಗೆ ಖಚಿತಪಡಿಸಿಕೊಳ್ಳುವುದು ಎಂಬುದನ್ನು ಅಧ್ಯಯನ ಮಾಡುತ್ತದೆ ಎಂದು ಹೇಳಿದರು.
* ಎರಡನೇ ಗುಂಪು - ಐಐಎಂ-ಅಹಮದಾಬಾದ್‌ನಿಂದ ಸುಖಪಾಲ್ ಸಿಂಗ್ ನೇತೃತ್ವದ ಸಮಿತಿಯು ನೀರಾವರಿ ಕುರಿತು ಚರ್ಚಿಸುವ ಎರಡನೇ ಗುಂಪಾಗಿದೆ. ಇದು ರೈತ ಕೇಂದ್ರಿತವಾಗಿ ಸೂಕ್ಷ್ಮ ನೀರಾವರಿಯನ್ನು ಮಾಡುವುದು ಹೇಗೆ ಎಂಬ ಬಗ್ಬೆ ಅಧ್ಯಯನ ಮಾಡುತ್ತದೆ. ಪ್ರಸ್ತುತ ಸೂಕ್ಷ್ಮ ನೀರಾವರಿಯನ್ನು ಸರ್ಕಾರದ ಸಹಾಯಧನದಿಂದ ನಡೆಸಲಾಗುತ್ತಿದೆ. ಇದಕ್ಕಾಗಿ ರೈತರ ಬೇಡಿಕೆಯನ್ನು ಹೇಗೆ ಉತ್ಪಾದಿಸಬಹುದು ಎಂಬುದನ್ನು ಗುಂಪು ಪರಿಶೀಲಿಸುತ್ತದೆ ಎಂದು ಹೇಳಲಾಗುತ್ತದೆ.
* ಮೂರನೇ ಗುಂಪು - ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಎಕ್ಸ್‌ಟೆನ್ಶನ್ ಮ್ಯಾನೇಜ್‌ಮೆಂಟ್ (ಮ್ಯಾನೇಜ್)ನ ಪ್ರತಿನಿಧಿ ನೇತೃತ್ವದಲ್ಲಿ ರಚಿಸಲಾಗಿದೆ. ಇದು ಸಾವಯವ ಮತ್ತು ನೈಸರ್ಗಿಕ ಕೃಷಿ ವಿಧಾನಗಳನ್ನು ಒಳಗೊಂಡಂತೆ 'ಶೂನ್ಯ ಬಜೆಟ್ ಆಧಾರಿತ ಕೃಷಿ' ಕುರಿತು ಅಧ್ಯಯನ ಮಾಡುತ್ತದೆ. ಇದರ ಬಗ್ಗೆ ರೈತರಲ್ಲಿ ಒಮ್ಮತವನ್ನು ಮೂಡಿಸುವ ಕಾರ್ಯವನ್ನು ಮಾಡುತ್ತದೆ.
* ನಾಲ್ಕನೇ ಗುಂಪು - ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ (ICAR) ನೇತೃತ್ವದಲ್ಲಿ ರಚಿಸಲಾಗಿದೆ. ಹೈದರಾಬಾದ್ ಮೂಲದ ಸೆಂಟ್ರಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಡ್ರೈಲ್ಯಾಂಡ್ ಅಗ್ರಿಕಲ್ಚರ್ (CRIDA) ಮತ್ತು ನಾಗ್ಪುರ ಮೂಲದ ನ್ಯಾಷನಲ್ ಬ್ಯೂರೋ ಆಫ್ ಸೋಲ್ ಸರ್ವೆ ಮತ್ತು ಲ್ಯಾಂಡ್ ಯೂಸ್ ಪ್ಲ್ಯಾನಿಂಗ್ (NBSSLUP) ಸಂಸ್ಥೆಗಳು ವೈವಿಧ್ಯಮಯ ಬೆಳೆಗಳ ಮಾದರಿ ಕುರಿತು ಅಧ್ಯಯನ ಮಾಡುತ್ತದೆ.
* ಈ ನಾಲ್ಕು ಗುಂಪುಗಳು ಪ್ರತ್ಯೇಕ ಸಭೆಗಳನ್ನು ನಡೆಸುತ್ತವೆ. ಇದರ ಕುರಿತು ಸಮಿತಿಯ ಅಂತಿಮ ಸಭೆಯನ್ನು ಸೆಪ್ಟೆಂಬರ್ ಅಂತ್ಯದ ವೇಳೆಗೆ ನಡೆಸಲಿದೆ ಎಂದು," ಆನಂದ್ ಹೇಳಿದ್ದಾರೆ. ದಿನವಿಡೀ ನಡೆದ ಸಭೆಯಲ್ಲಿ ಎಸ್‌ಕೆಎಂ ಪ್ರತಿನಿಧಿಗಳು ಹಾಜರಿರಲಿಲ್ಲ. ನೀತಿ ಆಯೋಗದ ಸದಸ್ಯ ರಮೇಶ್ ಬೇರೆ ಸಭೆಗಳ ಹಿನ್ನೆಲೆ ಈ ಚರ್ಚೆಯಿಂದ ಅಂತರ ಕಾಯ್ದುಕೊಂಡಿದ್ದರು.

ಸೋಮವಾರ ಸಭೆಯಿಂದ ಅಂತರ ಕಾಯ್ದುಕೊಂಡ ಎಸ್‌ಕೆಎಂ
ಕೇಂದ್ರ ಸರ್ಕಾರ ಜಾರಿಗೊಳಿಸಿದ ಮೂರು ವಿವಾದಾತ್ಮಕ ಕಾಯ್ದೆಗಳ ವಿರುದ್ಧ ರೈತರು ನಡೆಸಿದ ಪ್ರತಿಭಟನೆಯ ಹೊಣೆಯನ್ನು ಇದೇ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ವಹಿಸಿಕೊಂಡಿತ್ತು. ಆದರೆ ಅದೇ ಎಸ್‌ಕೆಎಂ ಈಗ ಸಮಿತಿಯಿಂದ ಅಂತರ ಕಾಯ್ದುಕೊಂಡಿದೆ. ಕಳೆದ ಜುಲೈ 18ರಂದು ಸಮಿತಿ ರಚಿಸುವುದಕ್ಕೆ ಒತ್ತಾಯಿಸಿದ್ದ ಎಸ್‌ಕೆಎಂ, ಈಗ ಸಮಿತಿಗೆ ಎಸ್‌ಕೆಎಂ ತನ್ನ ಪ್ರತಿನಿಧಿಗಳನ್ನು ನಾಮನಿರ್ದೇಶನ ಮಾಡದಿರಲು ನಿರ್ಧರಿಸಿದೆ.

ಸಮಿತಿ ರಚನೆ ಬಗ್ಗೆ ಭರವಸೆ ನೀಡಿದ್ದ ಪ್ರಧಾನಿ ಮೋದಿ
ಕಳೆದ ವರ್ಷ ನವೆಂಬರ್‌ನಲ್ಲಿ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ, ರೈತರ ಎಂಎಸ್‌ಪಿ ಸಮಸ್ಯೆಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವುದಾಗಿ ಭರವಸೆ ನೀಡಿದ್ದರು. ಈ ಸಭೆಯಲ್ಲಿ ಭಾಗವಹಿಸಿದ್ದ ರೈತ ಪ್ರತಿನಿಧಿಗಳಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ರೈತ ಭರತ್ ಭೂಷಣ ತ್ಯಾಗಿ ಹಾಗೂ ಗುಣವಂತ್ ಪಾಟೀಲ್, ಕೃಷ್ಣವೀರ್ ಚೌಧರಿ, ಪ್ರಮೋದ್ ಕುಮಾರ್ ಚೌಧರಿ, ಗುಣಿ ಪ್ರಕಾಶ್ ಮತ್ತು ಸೈಯ್ಯದ್ ಪಾಷಾ ಪಟೇಲ್ ಇದ್ದರು. ಇಫ್ಕೋ ಅಧ್ಯಕ್ಷ ದಿಲೀಪ್ ಸಂಘಾನಿ ಸಹ ಉಪಸ್ಥಿತರಿದ್ದರು.
ಕೃಷಿ ವಿಶ್ವವಿದ್ಯಾಲಯಗಳ ಹಿರಿಯ ಸದಸ್ಯರು, ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು ಮತ್ತು ಕರ್ನಾಟಕ, ಆಂಧ್ರಪ್ರದೇಶ, ಸಿಕ್ಕಿಂ ಮತ್ತು ಒಡಿಶಾದ ಮುಖ್ಯ ಕಾರ್ಯದರ್ಶಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.











Click it and Unblock the Notifications