ಮಂಡ್ಯದಲ್ಲಿ ಡಿ.14ರಿಂದ ಎರಡು ದಿನಗಳ ಕಾಲ ಸಿರಿಧಾನ್ಯ ಸಂಸ್ಕರಣೆ ಸಮ್ಮೇಳನ
ಮಂಡ್ಯ, ಡಿಸೆಂಬರ್ 13 : ಕೃಷಿ ಇಲಾಖೆ, ನಬಾರ್ಡ್, ವಿಕಸನ ಸಂಸ್ಥೆ ಇವರ ವತಿಯಿಂದ ಡಿಸೆಂಬರ್ 14 ಹಾಗೂ 15ರಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಖರೀದಿದಾರರು ಹಾಗೂ ಮಾರಾಟಗಾರರ ಸಮ್ಮೇಳನ ಮತ್ತು ಸಿರಿಧಾನ್ಯ ಸಂಸ್ಕರಣೆ ಕುರಿತು ಕಾರ್ಯಾಗಾರ ನಡೆಯಲಿದೆ ಎಂದು ಜಂಟಿ ಕೃಷಿ ನಿರ್ದೇಶಕ ಅಶೋಕ್ ತಿಳಿಸಿದರು.
ಜಿಲ್ಲೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಗಿ-ಸಿರಿಧಾನ್ಯಗಳು, ಅವುಗಳ ಉಪ ಉತ್ಪನ್ನಗಳು, ದೇಸಿ ಅಕ್ಕಿ, ಬೆಲ್ಲ-ಬೆಲ್ಲದ ಇತರೆ ಉತ್ಪನ್ನಗಳು, ತರಕಾರಿಗಳು, ಹಣ್ಣುಗಳು, ಅಡುಗೆ ಎಣ್ಣೆ ಕಾಳುಗಳು, ಹಪ್ಪಳ, ಉಪ್ಪಿನಕಾಯಿ, ಗಾರ್ಮೆಂಟ್ಸ್ ಉಡುಗೆಗಳು ಹೀಗೆ ವಿವಿಧ ವೈವಿಧ್ಯ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಇರುತ್ತದೆ. ಪ್ರತಿದಿನ 500ಕ್ಕೂ ಹೆಚ್ಚು ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ವಿವಿಧ ಇಲಾಖೆಗಳು, ನಬಾರ್ಡ್, ಸಂಪನ್ಮೂಲ ಸಂಸ್ಥೆಗಳ ಸಹಯೋಗದಲ್ಲಿ 25ಕ್ಕೂ ಹೆಚ್ಚು ರೈತ ಉತ್ಪಾದಕ ಕಂಪನಿಗಳನ್ನು ರಚಿಸಲಾಗಿದೆ. ಈ ಎರಡೂ ದಿನಗಳ ಸಮ್ಮೇಳನದಲ್ಲಿ ಮಂಡ್ಯ ಮತ್ತು ಅಕ್ಕಪಕ್ಕದ ಜಿಲ್ಲೆಗಳಿಂದ ಸುಮಾರು 50ಕ್ಕೂ ಹೆಚ್ಚು ರೈತ ಉತ್ಪಾದಕರ ಕಂಪನಿ ಪ್ರತಿನಿಧಿಗಳು, ಸ್ವ ಸಹಾಯ ಸಂಘ ಆಹಾರ ಸಂಸ್ಕರಣೆದಾರರು ಪ್ರಗತಿಪರ ರೈತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ರೈತ ಉತ್ಪಾದಕರ ಕಂಪನಿಗಳು-ಸ್ವಸಹಾಯ ಸಂಘ ಹಾಗೂ ಆಹಾರ ಸಂಸ್ಕರಣೆ, ಮೌಲ್ಯವರ್ಧನೆಯಲ್ಲಿ ತೊಡಗಿರುವವರಿಗೆ ಈ ಸಮ್ಮೇಳನದ ಮೂಲಕ ಮಾರುಕಟ್ಟೆ ಸಂಪರ್ಕ ಕಲ್ಪಿಸುವುದು, ಉತ್ಪಾದಕರು-ಖರೀದಿಗಾರರ ನಡುವೆ ಸಮನ್ವಯತೆ ಸಾಧಿಸುವುದು ಮತ್ತು ಉತ್ಪಾದಕರಲ್ಲಿ ಆತ್ಮವಿಶ್ವಾಸ ತುಂಬುವುದು ಇದರ ಉದ್ದೇಶವಾಗಿದೆ ಎಂದು ವಿವರಿಸಿದರು.

ಬುಧವಾರ ಬೆಳಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ನಬಾರ್ಡ್ ಉಪ ಮಹಾಪ್ರಬಂಧಕರು, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತರು ಇತರೆ ಅಧಿಕಾರಿಗಳು ಭಾಗವಹಿಸುವರು. ಡಿ. 15ರಂದು ನಡೆಯುವ ಮಾರಾಟ, ಒಡಂಬಡಿಕೆ, ಉದ್ಘಾಟನಾ ಕಾರ್ಯಕ್ರಮಕ್ಕೆ ಕೃಷಿ ಸಚಿವ ಬಿ.ಸಿ. ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ರೇಷ್ಮೆ ಖಾತೆ ಸಚಿವ ಕೆ.ಸಿ. ನಾರಾಯಣಗೌಡ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಡಿ. 23ರಂದು ಕಿಸಾನ್ ದಿವಸ್ ಎಂದು ಘೋಷಿಸಲಾಗಿದೆ. ಅಂದು ಸಿರಿಧಾನ್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 20, 21, 22ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದೆ. ಈ ಹಿಂದೆ ನಡೆದ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರಮೋದಿಯವರು ಅಂತರಾಷ್ಟ್ರೀಯ ಸಿರಿಧಾನ್ಯ ದಿವಸ್ ಆಚರಣೆಗೆ ಒತ್ತಾಯಿಸಿದ ಕಾರಣ 2023ನೇ ವರ್ಷವನ್ನು ಸಿರಿಧಾನ್ಯ ವರ್ಷವನ್ನಾಗಿ ಘೋಷಿಸಲಾಗಿದೆ ಎಂದು ಅಶೋಕ್ ತಿಳಿಸಿದರು.
ಆತ್ಮನಿರ್ಭರ ಭಾರತ ಯೋಜನೆಯಲ್ಲಿ ಮಂಡ್ಯ ಬೆಲ್ಲ ದೇಶಕ್ಕೆ ನಂಬರ್ ಸ್ಥಾನದಲ್ಲಿ ಉತ್ಪಾದನೆಯಾಗುತ್ತಿದೆ. 129 ಆಲೆಮನೆಗಳಿಗೆ ಸಾಲ ಸೌಲಭ್ಯ ನೀಡಲಾಗಿದ್ದು, 8.31 ಕೋಟಿ ರೂಪಾಯಿ ಸಹಾಧನ ನೀಡಲಾಗಿದೆ. ಗುಣಮಟ್ಟದ ಬೆಲ್ಲ ತಯಾರಿಕೆಗೆ ಒತ್ತು ನೀಡಲಾಗಿದ್ದು, ಸಂಸ್ಕರಣೆ, ಗುಣಮಟ್ಟ ಪರಿಶೀಲನೆಗೆ ಸಿಎ್ಟಿಆರ್‌ಐಗೆ ಕಳುಹಿಸಿ ಪ್ರಮಾಣ ಪತ್ರ ಪಡೆಯಲಾಗುತ್ತದೆ. ರೈತರಿಗೂ ಸಹ ಉತ್ತಮ ಗುಣಮಮಟ್ಟದ ಬೆಲ್ಲ ತಯಾರಿಕೆಗೆ ಸಂಬಂಧಿಸಿದಂತೆ ಕಾರ್ಯಾಗಾರಗಳನ್ನು ನಡೆಸಲಾಗಿದೆ. ಜಿಲ್ಲೆಯಲ್ಲಿ ಕಲಬೆರಕೆ ಬೆಲ್ಲ ತಯಾರಿಕೆಗೆ ಕಡಿವಾಣ ಹಾಕಲಾಗಿದೆ ಎಂದು ತಿಳಿಸಿದರು.
ಇನ್ನು ಬೆಲ್ಲ ಸಿಹಿಕಾರದಂತೆ ಆಯುರ್ವೇದ ಔಷಧವಾಗಿಯೂ ಇದೆ. ಇತ್ತೀಚಿನ ದಿನಗಳಲ್ಲಿ ಬಣ್ಣ ಆಕರ್ಷಣಿಯವಾಗಿರುವ ಕಾರಣ ಬಣ್ಣವನ್ನು ಮಿಶ್ರಣ ಮಾಡಲಾಗುತ್ತಿತ್ತು. ಈ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸಿದ ಕಾರಣ ಬಣ್ಣದ ಬೆಲ್ಲಕ್ಕೆ ಬೇಡಿಕೆ ದಿನೇ ದಿನೇ ಕಡಿಮೆಯಾಗುತ್ತಿದೆ ಎಂದು ವಿವರಿಸಿದರು.












Click it and Unblock the Notifications