ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಹಾವು ಕಚ್ಚಿ ರೈತ ಸಾವು
ಮಂಡ್ಯ: ಹಾವು ಕಚ್ಚಿ ರೈತ ಸಾವನ್ನಪ್ಪಿದ ಘಟನೆ ಇಲ್ಲಿನ ಮೈಷುಗರ್ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಲು ಹೋಗಿದ್ದ ವೇಳೆ ಈ ಘಟನೆ ನಡೆದಿದ್ದು, ಸಾವನ್ನಪ್ಪಿದ ರೈತ ಬೇಲೂರು ಗ್ರಾಮದ ಬೊಮ್ಮಯ್ಯ (45) ಎಂದು ಗುರುತಿಸಲಾಗಿದೆ.
ರೈತ ಬೊಮ್ಮಯ್ಯ ಬುಧವಾರ ಕಾರ್ಖಾನೆಗೆ ಎತ್ತಿನಗಾಡಿಯಲ್ಲಿ ಕಬ್ಬು ತಂದಿದ್ದು, ಕಾರ್ಖಾನೆಯಲ್ಲಿ ಕಬ್ಬು ಅರೆಯಲು ವಿಳಂಬವಾದ್ದರಿಂದ ಕಾರ್ಖಾನೆ ಆವರಣದಲ್ಲಿಯೇ ರಾತ್ರಿ ಉಳಿದಿದ್ದರು ಎನ್ನಲಾಗಿದೆ.

ಗುರುವಾರ ಮುಂಜಾನೆ ನಾಲ್ಕರ ಸಮಯದಲ್ಲಿ ಯಾರ್ಡ್‌ನಿಂದ ಕಬ್ಬು ಅನ್‌ಲೋಡ್ ಮಾಡಲು ಕಾರ್ಖಾನೆಯ ಮಿಲ್ ಬಳಿ ತೆರಳಿ, ಎತ್ತಿನ ಗಾಡಿಯಿಂದ ಕಬ್ಬನ್ನು ಅನ್‌ಲೋಡ್ ಮಾಡಿದ ಅಲ್ಲಿನ ಅಧಿಕಾರಿ ಬಳಿ ತೂಕದ ಟಿಕೆಟ್‌ಗೆ ಸಹಿ ಮಾಡಿಸಲು ತೆರಳಿದ ವೇಳೆ ಅವರಿಗೆ ಕತ್ತಲಲ್ಲಿದ್ದ ಹಾವು ಕಚ್ಚಿದೆ.
ಹಾವು ಕಚ್ಚಿರುವುದು ತಿಳಿಯುತ್ತಿದ್ದಂತೆಯೇ ರೈತ ಅದನ್ನು ಕಲ್ಲಿನಿಂದ ಜಜ್ಜಿ ಸಾಯಿಸಿದ್ದಾರೆ. ಆದರೆ ಅಷ್ಟರಲ್ಲೇ ವಿಷವೇರಿ ಅವರು ಅಸ್ವಸ್ಥಗೊಂಡಿದ್ದು ಅದು ಯಾರ ಗಮನಕ್ಕೂ ಬಾರದ ಹಿನ್ನಲೆಯಲ್ಲಿ ಚಿಕಿತ್ಸೆ ಸಿಗದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರೈತ ಸಾವನ್ನಪ್ಪಿದ ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಖಾನೆ ಆವರಣದಲ್ಲಿ ರೈತರು ಸೇರಿ ಆಕ್ರೋಶ ವ್ಯಕ್ತಪಡಿಸಿದ್ದು, ಮೂಲ ಸೌಲಭ್ಯಗಳು ಇಲ್ಲದ ಕಾರಣ ರೈತರು ಹಾಗೂ ಜಾನುವಾರುಗಳಿಗೆ ತೊಂದರೆಯಾಗಿದೆ ಎಂದು ದೂರಿದ್ದಾರೆ. ಅಲ್ಲದೆ, ಕಾರ್ಖಾನೆ ಆವರಣದಲ್ಲಿಯೇ ಶವವಿಟ್ಟು ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಶಾಸಕ ಎಂ.ಶ್ರೀನಿವಾಸ್, ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಸ್ಥಳಕ್ಕೆ ಭೇಟಿ ನೀಡಿ, ಕಾರ್ಖಾನೆಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ಹಿನ್ನಲೆಯಲ್ಲಿ ಮೃತ ಬೊಮ್ಮಯ್ಯನ ಕುಟುಂಬಕ್ಕೆ ಕಾರ್ಖಾನೆಯಿಂದ ಐದು ಲಕ್ಷ ಪರಿಹಾರ ನೀಡಲು ಒಪ್ಪಿದ್ದರಿಂದ ಪ್ರತಿಭಟನೆ ಹಿಂಪಡೆದು ಶವ ಸಂಸ್ಕಾರ ನಡೆಸಲಾಗಿದೆ.












Click it and Unblock the Notifications