ರೈತರನ್ನು ಭಯೋತ್ಪಾದಕರೆಂದು ಕರೆದು ಗಲಭೆ ಸೃಷ್ಟಿಸಿದ ವ್ಯಕ್ತಿ
ನವದೆಹಲಿ, ಡಿಸೆಂಬರ್ 19: ದೆಹಲಿಯಲ್ಲಿ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟ ಮುಂದುವರೆದಿದ್ದು, ಪ್ರತಿಭಟನೆ ವೇಳೆ ವ್ಯಕ್ತಿಯೊಬ್ಬ ರೈತರನ್ನು ಭಯೋತ್ಪಾದಕರು ಎಂದು ಕರೆದು ಗಲಭೆ ಸೃಷ್ಟಿಸಿದ ಘಟನೆ ನಡೆದಿದೆ.
ದೆಹಲಿಯ ಗಡಿ ಪ್ರದೇಶ ಚಿಲ್ಲಾದಲ್ಲಿ ಪ್ರತಿಭಟನಾನಿರತ ರೈತರ ಹೋರಾಟವನ್ನು ಪ್ರಶ್ನಿಸಿದ ವ್ಯಕ್ತಿಯು ಅವರನ್ನು "ಭಯೋತ್ಪಾದಕರು" ಎಂದು ಕರೆದಿದ್ದಾನೆ. ಇದರಿಂದ ಕೆಲ ಕಾಲ ಸ್ಥಳದಲ್ಲಿ ಗಲಭೆ ಸೃಷ್ಟಿಯಾಗಿತ್ತು. ರೈತರೊಂದಿಗೆ ವಾಗ್ವಾದಕ್ಕಿಳಿದಿದ್ದ 28 ವರ್ಷದ ಅಮರ್ ಪಾಲ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದ್ದಕ್ಕಿದ್ದಂತೆ ರೈತರ ಗುಂಪಿನಲ್ಲಿ ಕಾಣಿಸಿಕೊಂಡ ವ್ಯಕ್ತಿಯು ಹೋರಾಟದ ಕುರಿತು ಪ್ರಶ್ನೆ ಎತ್ತಿದ್ದಾನೆ. ರೈತರ ಪರವಾಗಿ ಕೇಂದ್ರದ ಈ ಕಾಯ್ದೆಗಳಿವೆ. ನೀವು ಹೋರಾಟ ಮಾಡುತ್ತಿರುವುದು ಯಾವ ಕಾರಣಕ್ಕೆ? ಈ ಕಾಯ್ದೆಗೆ ವಿರೋಧಿಸಲು ಕಾರಣವೇನಿದೆ? ಎಂದು ವಾದಿಸಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಪೊಲೀಸರು ಈತನನ್ನು ವಶಪಡಿಸಿಕೊಂಡಿದ್ದಾರೆ.

ಘಟನೆ ಕುರಿತಂತೆ ರೈತರು ಪ್ರತಿಕ್ರಿಯಿಸಿದ್ದು, "ಈ ವ್ಯಕ್ತಿಯನ್ನು ಎಂದಿಗೂ ನಾವು ನೋಡಿರಲಿಲ್ಲ. ಇಬ್ಬರು ಮೂವರ ಜೊತೆ ಈತ ಬಂದಿದ್ದ. ಪೊಲೀಸರು ಬರುತ್ತಿದ್ದಂತೆ ಅವರೆಲ್ಲ ತಪ್ಪಿಸಿಕೊಂಡರು. ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ಇದಾಗಿರಬಹುದು" ಎಂದು ಭಾರತೀಯ ಕಿಸಾನ್ ಯೂನಿಯನ್ ನ ಭಾನು, ಯೋಗೇಶ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. ಮಾಧ್ಯಮದ ಎದುರು ಶಾಂತಿ ಕದಡಲು ಆತ ಪ್ರಯತ್ನಿಸುತ್ತಿದ್ದ. ನಮ್ಮನ್ನು ಭಯೋತ್ಪಾದಕರು ಎನ್ನುತ್ತಿದ್ದ. ನಾವು ಭಯೋತ್ಪಾದಕರೇ? ನಾವೆಲ್ಲಾ ಇಲ್ಲಿ ನಮ್ಮ ನೋವನ್ನು ಕೇಂದ್ರದೊಂದಿಗೆ ಹಂಚಿಕೊಳ್ಳಲು ಬಂದಿದ್ದೇವೆ" ಎಂದು ರೈತ ಸಂಘದ ಪ್ರವೀಣ್ ಶರ್ಮಾ ಎಂಬುವರು ಬೇಸರ ವ್ಯಕ್ತಪಡಿಸಿದರು.












Click it and Unblock the Notifications