ಜೇನು ಕೃಷಿ; ಕಡಿಮೆ ಬಂಡವಾಳ, ಅಧಿಕ ಲಾಭ
ಚಾಮರಾಜನಗರ, ಫೆಬ್ರವರಿ 06 : ನಿಸರ್ಗದಲ್ಲಿ ವ್ಯರ್ಥವಾಗಬಹುದಾದ ಸಂಪನ್ಮೂಲ ಬಳಸಿ, ಕಡಿಮೆ ಬಂಡವಾಳದಿಂದ ಹೆಚ್ಚು ಲಾಭ ಪಡೆಯುವ ಕಸುಬುಗಳಲ್ಲಿ ಜೇನು ಕೃಷಿ ಮುಂಚೂಣಿಯಲ್ಲಿದೆ. ಇತರೆ ಕೃಷಿ ಪದ್ಧತಿಗಳಗೆ ಸ್ಪರ್ಧೆಯೊಡ್ಡದೇ ಸುಲಭ ತಾಂತ್ರಿಕತೆಯನ್ನು ಹೊಂದಿರುವ ಜೇನು ಕೃಷಿ ಮಾಡುವುದಕ್ಕೆ ಆಸಕ್ತಿ ಅಷ್ಟೇ ಮುಖ್ಯ.
ಹಲವಾರು ಕಡೆ ಜೇನು ಕೃಷಿಯನ್ನು ರೈತರು ಉಪಕಸುಬಾಗಿ ಮಾಡಿಕೊಂಡಿದ್ದಾರೆ. ಜೇನು ಕೃಷಿಯನ್ನೇ ಮುಖ್ಯ ವೃತ್ತಿಯಾಗಿಸಿಕೊಂಡು ಉತ್ತಮ ಲಾಭ ಗಳಿಸುವ ರೈತರೂ ಸಹ ನಮ್ಮ ನಡುವೆ ಇದ್ದಾರೆ. ಆಸಕ್ತಿಯಿಂದ ಹೊಸ ತಂತ್ರಜ್ಞಾನ ಬಳಸಿ ಕೃಷಿ ಮಾಡಿದರೆ ಜೇನು ಸಿಹಿಯ ಜೊತೆ ಲಾಭವನ್ನು ನೀಡುತ್ತದೆ.
ಒಂದು ಜೇನು ಪೆಟ್ಟಿಗೆ (ಕುಟುಂಬ)ದಿಂದ ಪ್ರತಿ ವರ್ಷ ಸರಾಸರಿ 15-20 ಕಿ.ಗ್ರಾಂ. ಜೇನುತುಪ್ಪವನ್ನು ಪಡೆಯಬಹದಾಗಿದೆ. ಇದರಿಂದ 800 ರಿಂದ 2000 ರೂ. ವರೆಗೆ ನಿವ್ವಳ ಲಾಭ ಗಳಿಸಬಹುದಾಗಿದೆ. ಅಲ್ಲದೇ ಜೇನು ನೊಣಗಳ ಪರಾಗಸ್ಪರ್ಶದಿಂದ ಇತರೆ ಬೆಳೆಗಳ ಇಳುವರಿ ಸಹ ಹೆಚ್ಚಾಗಲಿದೆ.

ತೋಟಗಾರಿಕಾ ಇಲಾಖೆ ಸಹಾಯ
ಜೇನು ಕೃಷಿಯನ್ನು ಮತ್ತಷ್ಟು ಪ್ರಚುರಪಡಿಸಲು ತೋಟಗಾರಿಕೆ ಇಲಾಖೆ ಕೃಷಿ ಕೈಗೊಳ್ಳಲು ವಿವಿಧ ಯೋಜನೆಯಡಿ ಸಹಾಯಧನ ನೀಡುತ್ತಿದೆ. ಅಷ್ಟೇ ಅಲ್ಲದೇ ಉತ್ತಮ ಗುಣಮಟ್ಟದ ಹಾಗೂ ರೋಗ ರಹಿತ ಜೇನು ಕುಟುಂಬಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸಿ, ವಿತರಿಸುವ ಉದ್ದೇಶದಿಂದ ಖಾಸಗಿ ಮಧುವನಗಳ ಸ್ಥಾಪನೆಗೂ ಮಹತ್ವ ನೀಡಲಾಗಿದೆ.

ತೋಟಗಾರಿಕಾ ಬೆಳೆಗಳು
ಜೇನುನೊಣಗಳ ಪರಾಗ ಸ್ಪರ್ಶದಿಂದ ವಿವಿಧ ತೋಟಗಾರಿಕೆ ಬೆಳೆಗಳಾದ ತೆಂಗು, ಮಾವು, ಅಡಿಕೆ ಇಳುವರಿಯಲ್ಲಿ ಶೇ.20, ಟೊಮೆಟೋ ಬೆಳೆಯಲ್ಲಿ ಶೇ.25, ದ್ರಾಕ್ಷಿ ಬೆಳೆಯಲ್ಲಿ ಶೇ.35, ಸೌತೆ, ಕುಂಬಳ, ಸೀಬೆಯಲ್ಲಿ ಶೇ.40 ಹಾಗೂ ಕಲ್ಲಂಗಡಿ ಬೆಳೆಯಲ್ಲಿ ಶೇ.80 ರಷ್ಟು ಅಧಿಕ ಇಳುವರಿ ಪಡೆಯಬಹುದಾಗಿದೆ. ಅಷ್ಟೇ ಅಲ್ಲದೇ ಏಲಕ್ಕಿ, ನಿಂಬೆ, ತರಕಾರಿ, ಹೂವು, ಔಷಧಿ ಹಾಗೂ ಸುಗಂಧ ದ್ರವ್ಯ ಬೆಳೆಗಳೂ ಸಹ ಪರಾಗ ಸ್ಪರ್ಶದಿಂದ ಧನಾತ್ಮಕ ಪ್ರಯೋಜನ ಹೊಂದಲಿವೆ.

10 ಜೇನು ಪೆಟ್ಟಿಗೆ
ಜಮೀನು ಹೊಂದಿರುವವರಿಗೆ ಗರಿಷ್ಟ 10 ಜೇನು ಪೆಟ್ಟಿಗೆ, ಕುಟುಂಬ (ಜೇನುನೊಣಗಳ ಸಮೂಹ) ಹಾಗೂ ಸ್ಟ್ಯಾಂಡ್ ಮತ್ತು ಜಮೀನು ರಹಿತ ಕುಟುಂಬಗಳಿಗೆ ಗರಿಷ್ಟ 4 ಜೇನು ಪೆಟ್ಟಿಗೆ, ಕುಟುಂಬ(ಜೇನುನೊಣಗಳ ಸಮೂಹ) ಹಾಗೂ ಸ್ಟ್ಯಾಂಡ್ ಖರೀದಿಸಲು ಇಲಾಖೆ ವತಿಯಿಂದ ಸಹಾಯಧನ ಲಭ್ಯವಿದೆ. ಮಧುವನ ಹಾಗೂ ಜೇನು ಸಾಕಾಣಿಕೆ ಅಭಿವೃದ್ಧಿ ಯೋಜನೆಯಡಿ ಶೇ. 75ರಂತೆ 3375 ರೂ. ಗಳ ಸಹಾಯಧನ ಸಹ ನೀಡಲಾಗುತ್ತಿದೆ.

ಜೇನು ಉತ್ಪಾದನೆ
ಜೇನುಕೃಷಿಯನ್ನು ಅಳವಡಿಸಿಕೊಳ್ಳುವುದರಿಂದ ರೈತರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೆಚ್ಚು ಲಾಭ ಗಳಿಸಬಹುದಾಗಿದೆ. ಅಲ್ಲದೇ ಕೃಷಿಕರಲ್ಲದವರೂ ಸಹ ಜೇನುಕೃಷಿಯನ್ನು ಆಚರಿಸಬಹುದಾಗಿದೆ. ಹೀಗಾಗಿ ಆಸಕ್ತರು ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ಮೂಲಕ ಸರ್ಕಾರದ ಸಹಾಯಧನ ಪಡೆಯಬಹುದಾಗಿದೆ.











Click it and Unblock the Notifications