ಕೃಷಿಭಾಗ್ಯ ಯೋಜನೆ: ರೈತರಿಗೆ ಸಿಗುವ ಸಹಾಯಧನದ ವಿವರಗಳು
ಮಡಿಕೇರಿ, ಅಕ್ಟೋಬರ್ 13: ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಕೃಷಿಭಾಗ್ಯ ಯೋಜನೆ ಇಡೀ ದೇಶಕ್ಕೆ ಮಾದರಿಯಾಗಿದೆ. ಸರ್ಕಾರವೇ ಹೇಳುವಂತೆ ನೆರೆ ಹೊರೆಯ ರಾಜ್ಯದವರೂ ಈ ಯೋಜನೆ ಬಗ್ಗೆ ಮಾಹಿತಿ ಪಡೆದು, ಅದನ್ನು ಅಳವಡಿಕೆ ಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ. ಕೃಷಿಭಾಗ್ಯ ಯೋಜನೆ ಅಡಿ ರೈತರಿಗೆ ವಿವಿಧ ಸೌಲಭ್ಯಗಳು ಸಿಗುತ್ತವೆ. ಈ ಕುರಿತು ಕಾಲ ಕಾಲಕ್ಕೆ ರೈತರಿಗೆ ಮಾಹಿತಿಯನ್ನು ಸಹ ನೀಡಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಈಗ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ರೈತರಿಗೆ ಸಿಗುವ ಮಾಹಿತಿಗಳ ವಿವರ ಇಲ್ಲಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕುಗಳಲ್ಲಿ ಸುಸ್ಥಿರ ಕೃಷಿಯನ್ನು ಉತ್ತೇಜಿಸಿ, ಬೆಳೆ ಉತ್ಪಾದಕತೆ ಮತ್ತು ರೈತರ ಜೀವನಮಟ್ಟವನ್ನು ಸುಧಾರಿಸುವ ಸಲುವಾಗಿ ಕೃಷಿಭಾಗ್ಯ ಯೋಜನೆಯನ್ನು ಪ್ರಸ್ತುತ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ರೈತರಿಗೆ ಮಾಹಿತಿ ನೀಡಲಾಗಿದೆ.

ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ ಪದ್ಧತಿಯಿಂದ ಕೃಷಿ ಉತ್ಪಾದಕತೆಯನ್ನು ಉತ್ತಮ ಪಡಿಸುವುದು ಮತ್ತು ಆದಾಯವನ್ನು ಹೆಚ್ಚಿಸುವ ಉದ್ದೇಶವನ್ನು ಈ ಯೋಜನೆಯು ಹೊಂದಿದೆ. ಮಳೆ ನೀರನ್ನು ವ್ಯರ್ಥ ಮಾಡದೆ ಆಯ್ದ ಸ್ಥಳದಲ್ಲಿ ಕೃಷಿ ಹೊಂಡ ತೆಗೆದು ಜಲ ಸಂಗ್ರಹಿಸಿ, ಬೆಳೆಗಳ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಯೋಜನೆಯ ಘಟಕಗಳು: ಕ್ಷೇತ್ರ ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ ಅಳವಡಿಸುವುದು (ಸಾಮಾನ್ಯ ಶೇ.80, ಪರಿಶಿಷ್ಟ ಜಾತಿ/ ಪಂಗಡ ಶೇ.90), ಡೀಸೆಲ್, ಪೆಟ್ರೋಲ್, ಸೋಲಾರ್ ಪಂಪ್‍ಸೆಟ್ ವಿತರಣೆ (ಸಾಮಾನ್ಯ ಶೇ.50, ಪರಿಶಿಷ್ಟ ಜಾತಿ/ ಪಂಗಡ ಶೇ.90), ಸೂಕ್ಷ್ಮ (ತುಂತುರು, ಹನಿ) ನೀರಾವರಿ ಘಟಕ ವಿತರಣೆ (ಸಾಮಾನ್ಯ 90, ಪರಿಶಿಷ್ಟ ಜಾತಿ/ ಪಂಗಡ ಶೇ.90), ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ಅಳವಡಿಸುವುದು (ಸಾಮಾನ್ಯ ಶೇ.40, ಪರಿಶಿಷ್ಟ ಜಾತಿ/ ಪಂಗಡ ಶೇ.50). ಕೃಷಿ ಭಾಗ್ಯ ಯೋಜನೆ ಒಟ್ಟಾರೆ 6 ಕಡ್ಡಾಯ ಘಟಕಗಳನ್ನು ಒಳಗೊಂಡಿದ್ದು, ಎಲ್ಲಾ ಘಟಕಗಳನ್ನು ಫಲಾನುಭವಿ ರೈತರು ಯೋಜನೆಯ ಸಮಗ್ರ ಸದುಪಯೋಗ ಪಡೆಯಲು ತಪ್ಪದೆ ಅಳವಡಿಸುವುದು.
ರೈತರು ಒಟ್ಟು ಸಾಗುವಳಿ ಕ್ಷೇತ್ರದ ಒಂದು ಸರ್ವೆ ನಂಬರ್‌ನಲ್ಲಿ ಕನಿಷ್ಠ 1 ಎಕರೆ ಭೂಮಿ ಇರಬೇಕು. ಹಿಂದಿನ ಸಾಲುಗಳಲ್ಲಿ ಕೃಷಿಭಾಗ್ಯ ಯೋಜನೆ ಅಥವಾ ಇನ್ಯಾವುದೇ ಯೋಜನೆಯಡಿ ಕೃಷಿ ಹೊಂಡ ಫಲಾನುಭವಿಯಾಗಿದ್ದಲ್ಲಿ ರೈತರು ಈ ಯೋಜನೆಗೆ ಅರ್ಹತೆ ಹೊಂದಿರುವುದಿಲ್ಲ(ಕೆಕಿಸಾನ್ ತಂತ್ರಾಂಶದಲ್ಲಿ ಭೌತಿಕವಾಗಿ ಸ್ಥಳ ಪರಿಶೀಲಿಸಿ ಖಾತರಿಪಡಿಸಿಕೊಳ್ಳುವುದು)
ಸಹಾಯಧನ ಪಾವತಿ ವಿಧಾನ: ಕ್ಷೇತ್ರ ಬದು ನಿರ್ಮಾಣ ಹಾಗೂ ಕೃಷಿಹೊಂಡ ಪೂರ್ಣಗೊಂಡ ನಂತರ ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ ನಿರ್ಮಿಸಿಕೊಳ್ಳುವ ಬಗ್ಗೆ ರೈತರಿಂದ ದೃಢೀಕರಣ ಪತ್ರ ಪಡೆದುಕೊಂಡು, ಕ್ಷೇತ್ರ ಬದು ಹಾಗೂ ಕೃಷಿ ಹೊಂಡ ಘಟಕಗಳಿಗೆ ಸಂಬಂಧಿಸಿದ ಒಟ್ಟು ಸಹಾಯಧನದ ಶೇ.75 ರಷ್ಟು ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು.
ಕೃಷಿಭಾಗ್ಯ ಯೋಜನೆ ಪ್ಯಾಕೇಜ್ ಅಡಿ ಬರುವ 6 ಘಟಕಗಳ ಅನುಷ್ಠಾನ ಮತ್ತು ಕೆ-ಕಿಸಾನ್ ಮೊಬೈಲ್ ಆಪ್‍ನಲ್ಲಿ ದಾಖಲೀಕರಿಸಿದ ನಂತರ ಉಳಿಕೆ ಶೇ.25 ರಷ್ಟು ಸಹಾಯಧನ ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು.
ಆಸಕ್ತ ರೈತರು ಹೆಚ್ಚಿನ ಮಾಹಿತಿಗೆ ಹತ್ತಿರದ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬೇಕು ಎಂದು ವಿರಾಜಪೇಟೆ, ಪೊನ್ನಂಪೇಟೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಹೇಳಿದ್ದಾರೆ.
ಒಣ ಬೇಸಾಯ ಅವಲಂಬಿತ ರೈತರು, ಮಳೆ ಕೊರತೆಯಾಗಿ ಸಂಕಷ್ಟ ಅನುಭವಿಸುವ ರೈತರ ನೆರವಿಗಾಗಿಯೇ ಸರ್ಕಾರ ಕೃಷಿಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ. ಮಳೆಯ ನೀರು ವ್ಯರ್ಥವಾಗಿ ಹರಿದು ಹೋಗದಂತೆ ಕೃಷಿ ಹೊಂಡಗಳ ಮೂಲಕ ಸಂಗ್ರಹಿಸಿ, ಮಳೆಯ ಕೊರತೆ ಸಂದರ್ಭದಲ್ಲಿ ಈ ನೀರು ಉಪಯೋಗಿಸಿಕೊಂಡು, ರೈತರು ಆರ್ಥಿಕವಾಗಿ ಸಬಲರಾಗಬಹುದಾಗಿದೆ.
ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೃಷಿಭಾಗ್ಯ ಯೋಜನೆ ಜಾರಿಯಾಗಿದೆ. ರೈತ ಕುಟುಂಬಗಳು ಈ ಯೋಜನೆಯ ಸವಲತ್ತು ಪಡೆದುಕೊಳ್ಳುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿಯೂ ಕೃಷಿಭಾಗ್ಯ ಯೋಜನೆಯನ್ನು ರೈತರು ಮೆಚ್ಚಿಕೊಂಡಿದ್ದಾರೆ. ದೇಶದಲ್ಲಿಯೇ ಇಂತಹ ಯೋಜನೆಯನ್ನು ಮೊದಲ ಬಾರಿಗೆ ಜಾರಿಗೊಳಿಸಿರುವ ಕೀರ್ತಿ ಕರ್ನಾಟಕ ರಾಜ್ಯಕ್ಕೆ ಸಲ್ಲುತ್ತದೆ.












Click it and Unblock the Notifications