ನಾನು ಸಾಲ ಮನ್ನಾ ಮಾಡುತ್ತೇನೆಂದು ಎಲ್ಲಿಯೂ ಹೇಳಿಲ್ಲ- ಸಿದ್ಧರಾಮಯ್ಯ
ಮೈಸೂರು, ಜೂನ್ 4 : ಸಾಲ ಮನ್ನಾ ಮಾಡುವ ವಿಚಾರದ ಕುರಿತಾಗಿ ನಾನು ಪ್ರಾಸ್ತಾಪಿಸಿಲ್ಲ. ಇದು ಮಾಧ್ಯಮಗಳ ತಪ್ಪುಗ್ರಹಿಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ಕೇಂದ್ರ ಸಾಲ ಮನ್ನಾ ಮಾಡಿದರೆ ನಾವು ಮಾಡ್ತೀವಿ. ಆ ಕಾರಣದಿಂದಲೇ ಕಾದು ನೋಡುವುದಾಗಿ ಹೇಳಿದ್ದೇನೆ. ನಾನು ಸಾಲ ಮನ್ನಾ ಮಾಡ್ತೀನಿ ಅಂತ ಹೇಳಿಲ್ಲ. ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದೇನೆ ಅಷ್ಟೆ," ಎಂದು ತಿಳಿಸಿದರು.[ಮೈಸೂರಿನಲ್ಲಿ ಟ್ರಿಣ್-ಟ್ರಿಣ್ ಸೈಕಲ್ ಯೋಜನೆಗೆ ಸಿದ್ದರಾಮಯ್ಯ ಚಾಲನೆ]

ಯಡಿಯೂರಪ್ಪ ಬೆದರಿಕೆಗೆ ಬಗ್ಗಲ್ಲ
ಇದೇ ವೇಳೆ ಬಿ.ಎಸ್ ಯಡಿಯೂರಪ್ಪ ವಿರುದ್ದ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, "ಯಡಿಯೂರಪ್ಪ ಬೆದರಿಕೆಗೆ ಬಗ್ಗಲ್ಲ. ಮುತ್ತಿಗೆ ಹಾಕ್ತೀನಿ, ರೈತರನ್ನ ಕರೆದುಕೊಂಡು ಬರ್ತೀನಿ, ಮೂಗು ಹಿಡಿತೀನಿ ಎಂಬ ಹೇಳಿಕೆಗೆ ಬಗ್ಗಲ್ಲ. ನಾವು ಸಾಲ ಮನ್ನಾ ಮಾಡುವುದಕ್ಕಿಂತ ಕೇಂದ್ರ ಮನ್ನಾ ಮಾಡಿದರೆ ಹೆಚ್ಚಿನ ಜನರಿಗೆ ಅನುಕೂಲ ಆಗುತ್ತೆ ಹೀಗಾಗಿ ಮೊದಲು ಅವರು ಸಾಲಮನ್ನಾ ಮಾಡಲಿ," ಎಂದು ಆಗ್ರಹಿಸಿದರು.
ನೇರ ಸಾಲ ಕೇಳಿ ಬಂದವನಿಗೆ ಹಣ ನೀಡಿದ ಸಿದ್ದರಾಮಯ್ಯ

ನೇರ ಸಾಲ ಕೇಳಿ ಬಂದ ವ್ಯಕ್ತಿಯೋರ್ವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 2000ರೂ. ನೀಡಿದ್ದಾರೆ.
ವರುಣಾ ಕ್ಷೇತ್ರದ ಹೊಸಹಳ್ಳಿಯ ಸಿದ್ದಯ್ಯ ಎಂಬವರು , ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿನಲ್ಲಿ ತೆರಳುವಾಗ ಕಾರನ್ನು ತಡೆದು ನನಗೆ ನೇರ ಸಾಲ ದೊರಕಿಸಿಕೊಡಿ, ಎತ್ತು ಕುರಿಗಳನ್ನು ತೆಗೆದುಕೊಳ್ಳಬೇಕು ಎಂದು ವಿನಂತಿಸಿಕೊಂಡರು. ಇದರಿಂದ ಮನಕರಗಿದ ಮುಖ್ಯಮಂತ್ರಿಗಳು ಆಯ್ತು ಮಾಡೋಣ ಎಂದರಲ್ಲದೇ ಸಿಬ್ಬಂದಿ ತಡೆದರೂ ಹತ್ತಿರಕ್ಕೆ ಕರೆದು ಎರಡು ಸಾವಿರ ರೂಪಾಯಿ ನೀಡಿದರು.
ಬಿಜೆಪಿ ಮಹಿಳಾ ಮೋರ್ಚಾದಿಂದ ಸಹಿ ಸಂಗ್ರಹ ಅಭಿಯಾನ
ಸಮಾನ ಪ್ರಾತಿನಿಧ್ಯ, ದೇಶದ ಮಹಿಳೆಯರ ಹಕ್ಕೊತ್ತಾಯಕ್ಕಾಗಿ ದೇಶದಾದ್ಯಂತ ಸಹಿ ಸಂಗ್ರಹ ನಡೆಸುವಂತೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಸೂಚನೆ ಹಿನ್ನೆಲೆಯಲ್ಲಿ ಇಂದು ಮೈಸೂರಿನ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಜಿಲ್ಲೆಯ ಕೈ ಪಕ್ಷದ ನಾಯಕಿಯರು ಸಹಿ ಸಂಗ್ರಹ ಅಭಿಯಾನಕ್ಕೆ ಸಾಥ್ ನೀಡಿದರು.

ಆ ಮೂಲಕ ಮಹಿಳಾ ಮೀಸಲಾತಿಯನ್ನು ಕಲ್ಪಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಮಹಿಳಾ ಪರವಾಗಿ ಚಿಂತಿಸಿ ದೇಶದ ಮಹಿಳೆಯರ ಹಕ್ಕೊತ್ತಾಯಕಾಗಿ ದೇಶದಾದ್ಯಂತ ಸಹಿ ಸಂಗ್ರಹ ನಡೆಸಲು ಆದೇಶಿಸಿದ್ದಾರೆ. ಆ ಮೂಲಕ ಮಹಿಳಾ ಮೀಸಲಾತಿಯನ್ನು ಕಲ್ಪಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿರುತ್ತಾರೆ. ಇದರ ಅಂಗವಾಗಿ ಮೈಸೂರಿನ ಸಿಎಂ ನಿವಾಸದಲ್ಲಿ ಪಕ್ಷದ ಜಿಲ್ಲಾ ಘಟಕದಿಂದಲೂ ಸಹಿ ಸಂಗ್ರಹಿಸಲಾಯಿತು. ಇದಕ್ಕೆ ಸಿಎಂ ಸಿದ್ದರಾಮಯ್ಯ ಸಾಥ್ ನೀಡಿದರು. ಕಾಂಗ್ರೆಸ್ ನ ಜಿಲ್ಲಾ ಮಟ್ಟದ ಮಹಿಳಾ ಮುಖಂಡರು ಇದರಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications