ಭಾರೀ ಮಳೆ: ಕೊಳೆರೋಗಕ್ಕೆ ಅಡಿಕೆ ಬೆಳೆಗಾರರು ಕಂಗಾಲು, ಮರದ ರಕ್ಷಣೆ ಕ್ರಮಗಳು
ಶಿವಮೊಗ್ಗ, ಸೆಪ್ಟೆಂಬರ್ 08: ಈ ಬಾರಿಯ ನೈಋತ್ಯ ಮುಂಗಾರು ಮಳೆ ಕರ್ನಾಟಕದಲ್ಲಿ ವಾಡಿಕೆಗಿಂತ ಹೆಚ್ಚಾಗಿಯೇ ಸುರಿದಿದೆ. ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಇದುವರೆಗೂ ಸುರಿದ ಮಳೆ ಮತ್ತು ಈಗ ಆಗುತ್ತಿರುವ ಸಾಧಾರಣ ಮಳೆ ಸಹ ಅಡಿಕೆ ಬೆಳೆಗಾರರು ಕಂಗಾಲಾಗುವಂತೆ ಮಾಡಿದೆ. ಅಡಿಕೆ ಬೆಳೆಗೆ ಕೊಳೆ ರೋಗ ಕಾಣಿಸಿಕೊಂಡಿದೆ. 2 ಬಾರಿ, 3 ಬಾರಿ ಔಷಧ ಸಿಂಪಡಣೆ ಮಾಡಿದರೂ ಸಹ ಅಡಿಕೆ ಕಾಯಿಗಳು ಉದುರುವುದು ತಪ್ಪಿಲ್ಲ. ಅಡಿಕೆ ಮರಗಳನ್ನು ರಕ್ಷಣೆ ಮಾಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ.
ಪ್ರಸ್ತುತ ಹೆಚ್ಚು ಮಳೆ, ಮೋಡಕವಿದ ವಾತಾವರಣ, ತೋಟದಲ್ಲಿ ನೀರು ನಿಲ್ಲುವಿಕೆ, ಹೆಚ್ಚಾದ ಮಣ್ಣಿನ ತೇವಾಂಶ, ಅಧಿಕ ಆದ್ರತೆ (ಶೇ. 90 ಕ್ಕಿಂತ ಹೆಚ್ಚು) ಮತ್ತು ಸೂರ್ಯನ ಬೆಳಕಿನ ಕೊರತೆಯಿಂದ ಕೊಳೆ ರೋಗವು ಹೆಚ್ಚಾಗುತ್ತಿದೆ.

ಆದ್ದರಿಂದ ಅಡಿಕೆ ಬೆಳೆಗಾರರು ಮರಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ಸಲಹೆಗಳನ್ನು ನೀಡಲಾಗಿದೆ. ಡಾ. ನಾಗರಾಜಪ್ಪ ಅಡಿವಪ್ಪರ್, ಮುಖ್ಯಸ್ಥರು, ಅಡಿಕೆ ಸಂಶೋಧನಾ ಕೇಂದ್ರ, ನವಿಲೆ, ಶಿವಮೊಗ್ಗ ರೈತರು ಈ ಕೆಳಕಂಡ ಕ್ರಮಗಳನ್ನು ಅನುಸರಿಸಬೇಕು ಎಂದು ಮಾಹಿತಿಯನ್ನು ನೀಡಿದ್ದಾರೆ.
ರೈತರಿಗೆ ಸಲಹೆಗಳು
* ಅಡಿಕೆ ತೋಟಗಳಲ್ಲಿ ಹೆಚ್ಚಾಗಿ ನೀರು ನಿಲ್ಲದಂತೆ ಬಸಿಗಾಲುವೆ ಚೊಕ್ಕ ಮಾಡಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡುವುದು.
* ಕೊಳೆಬಾಧಿತ ಬಿದ್ದಂತಹ ಕಾಯಿಗಳನ್ನು ಆರಿಸಿ ಹೊರಗೆ ಹಾಕಬೇಕು. ಗಾಳಿ ಆಡುವಂತೆ ಮಾಡಲು ಅಂತರ ಬೆಳೆಗಳ ಹಾಗೂ ತೋಟದ ಅಂಚಿನ ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯುವುದು.
* ವೈಜ್ಞಾನಿಕವಾಗಿ ತಯಾರಿಸಿದ ರಸಸಾರ (pH) 7ರ ಶೇ.1 ರ ಬೋರ್ಡೋದ್ರಾವಣ ಅಥವಾ ಶೇ.0.2ರ ಮೆಟಲಾಕ್ಸಿಲ್ ಎಂ.ಜಡ್ (2 ಗ್ರಾಂ 1 ಪ್ರತಿ ಲೀ. ನೀರಿನಲ್ಲಿ ಕರಗಿಸಿ) ಅಥವಾ ಶೇ.0.2 ರ ಮೆಟಲಾಕ್ಸಿಲ್ + ಮ್ಯಾಂಕೋಜೆಬ್ (2 ಗ್ರಾಂ 1 ಪ್ರತಿ ಲೀ. ನೀರಿನಲ್ಲಿ ಕರಗಿಸಿ) ಅಥವಾ ಶೇ. 0.1 ರ ಮ್ಯಾಂಡಿಪ್ರ‍್ರೇಪಮಿಡ್ (1 ಮಿ.ಲಿ ಪ್ರತಿ ಲೀ. ನೀರಿನಲ್ಲಿ) ಅಥವಾ ಶೇ. 0.3 ರ ತಾಮ್ರದ ಆಕ್ಸಿಕ್ಲೋರೈಡ್ (3 ಗ್ರಾಂ 1 ಪ್ರತಿ ಲೀ. ನೀರಿನಲ್ಲಿ ಕರಗಿಸಿ) ದಿಂದ ಗೊನೆಗಳಿಗೆ ಹಾಗೂ ಎಲೆಗಳಿಗೆ ಮತ್ತು ಸುಳಿಭಾಗಕ್ಕೆ ಚೆನ್ನಾಗಿ ನೆನೆಯುವಂತೆ ಸೂಕ್ತ ಅಂಟಿನೊಂದಿಗೆ (ರಾಳ) ಸಿಂಪರಣೆ ಮಾಡಿ.
ಈ ಕ್ರಮಗಳನ್ನು ಕೈಗೊಳ್ಳುವುದರಿಂದ ಕೊಳೆರೋಗದ ಜೊತೆಗೆ ಎಲೆಚುಕ್ಕೆ ರೋಗವನ್ನು ನಿಯಂತ್ರಿಸಲು ಸಹಾಯಕವಾಗುತ್ತದೆ. ಈ ಮೇಲಿನ ಕ್ರಮಗಳನ್ನು ಸಾಮೂಹಿಕವಾಗಿ ಏಕಕಾಲದಲ್ಲಿ ಅನುಸರಿಸಿದಲ್ಲಿ ಮರಗಳನ್ನು ಸುಳಿಕೊಳೆ ಅಥವಾ ಶಿರಕೊಳೆಯಿಂದ ಸಾಯುವುದನ್ನು ತಪ್ಪಿಸಬಹುದಾಗಿದೆ ಎಂದು ಮಾಹಿತಿ ನೀಡಲಾಗಿದೆ.
2022, 2023ನೇ ವರ್ಷದಲ್ಲಿ ಮಲೆನಾಡಿನ ಅಡಿಕೆ ಬೆಳೆಗಾರರು ಎಲೆ ಚುಕ್ಕೆರೋಗದಿಂದ ನಷ್ಟ ಅನುಭವಿಸಿದ್ದರು. ಅಡಿಕೆ ಬೆಳೆಯಲ್ಲಿ ಕಾಣಿಸಿಕೊಂಡ ಎಲೆ ಚುಕ್ಕೆರೋಗ ಅರಿವಿಗೆ ಬರುವುದು ತಡವಾಗಿತ್ತು. ಇದರಿಂದ ಅಡಿಕೆ ಫಸಲಿನ ಮೇಲೆ ಪರಿಣಾಮ ಉಂಟಾಗಿತ್ತು. ಎಲ್ಲಾ ಅಡಿಕೆ ಬೆಳೆಗಾರರು ಸಾಮೂಹಿಕವಾಗಿ ಮುಂಜಾಗೃತ ಕ್ರಮಕೈಗೊಂಡು ಸೂಕ್ತ ಔಷಧ ಸಿಂಪರಣೆ ಮಾಡುವುದು ಅಗತ್ಯ ಎಂದು ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ವಿಜ್ಞಾನಿಗಳಾದ ಡಾ. ನಿರಂಜನ್ ಕೆ. ಎಸ್. ತಿಳಿಸಿದ್ದರು.
ಅಡಿಕೆ ಬೆಳೆಯುವ ರೈತರಿಗೆ ಎಲೆಚುಕ್ಕೆ ರೋಗಕ್ಕೆ ಕಾರಣವಾಗುವ ಅಂಶಗಳನ್ನು ವಿವರಿಸಲಾಗಿತ್ತು. ಸತತ ಮಳೆಯ ಕಾರಣ ಅಡಿಕೆಗೆ ಅಗತ್ಯವಿರುವ ಪ್ರಮಾಣದ ಬಿಸಿಲು ಸಿಗುತ್ತಿಲ್ಲ, ಹೀಗಾಗಿ ಯಥೇಚ್ಛವಾಗಿ ಸುರಿಯುತ್ತಿರುವ ಮಳೆ ಎಲೆಚುಕ್ಕೆ ರೋಗಕ್ಕೆ ಪ್ರಮುಖ ಕಾರಣ. ರೋಗಕ್ಕೆ ಕಾರಣವಾಗುವ ಶಿಲೀಂಧ್ರಗಳಾದ ಕೊಲೆಟೋಟ್ರೈಕಮ್, ಫಿಲೋಸ್ಟಿಕ್ಟಾ ಅರೆಕಾ ಮತ್ತು ಪೆಸ್ಟಲೋಸಿಯಾ ಇವುಗಳ ತೀವ್ರತೆಯ ಬಗ್ಗೆಯೂ ವಿವರಿಸಲಾಗಿತ್ತು.
ಎಲೆಚುಕ್ಕೆರೋಗ ಬಾಧಿತ ಮರದ ಸೋಗೆಗಳ ಮೇಲ್ಭಾಗದಲ್ಲಿ ಹಳದಿ ಮತ್ತು ಕಪ್ಪು ಬಣ್ಣದ ಚುಕ್ಕೆಗಳು ಕಾಣಿಸುತ್ತವೆ. ಈ ಚುಕ್ಕೆಗಳು ಶೀಘ್ರವಾಗಿ ಒಂದಕ್ಕೊಂದು ಕೂಡಿಕೊಂಡು ಪೂರ್ತಿ ಸೋಗೆಗಳನ್ನು ಆವರಿಸುತ್ತದೆ. ನಂತರ ಸೋಗೆಗಳು ಒಣಗಲಾರಂಭಿಸುತ್ತವೆ. ಇಂತಹ ಒಣಗಿದ ಎಲ್ಲಾ ಸೋಗೆಗಳು ಜೋತುಬಿದ್ದು ಮರ ಶಕ್ತಿ ಕಳೆದುಕೊಂಡು ಇಳುವರಿ ಕುಂಠಿತಗೊಳ್ಳುತ್ತದೆ ಎಂದು ತಿಳಿಸಿದ್ದರು.
ಆದರೆ ಈ ವರ್ಷ ಬೇಸಿಗೆಯಲ್ಲಿ ಬರದ ಕಾರಣ ಅಡಿಕೆ ಬೆಳೆಗೆ ರೈತರು ಕಷ್ಟಪಷ್ಟು ನೀರುಣಿಸಿ ಮರಗಳನ್ನು ಕಾಪಾಡಿಕೊಂಡಿದ್ದರು. ಆದರೆ ಸತತವಾಗಿ ಎರಡು ತಿಂಗಳುಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಅಡಿಕೆಗೆ ಕೊಳೆರೋಗ ಕಾಣಿಸಿಕೊಂಡಿದೆ.












Click it and Unblock the Notifications