ನೆರೆ ಪರಿಹಾರ ಕೋರಿ ಬೆಳಗಾವಿ ರೈತರ ಬಾರುಕೋಲು ಚಳವಳಿ
ಬೆಳಗಾವಿ, ಸೆಪ್ಟೆಂಬರ್ 16: ನೆರೆ ಪರಿಹಾರವನ್ನು ಸೂಕ್ತವಾಗಿ ದೊರಕಿಸಬೇಕೆಂದು ಆಗ್ರಹಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬೆಳಗಾವಿ ರೈತರು ಬಾರುಕೋಲು ಪ್ರತಿಭಟನೆಗೆ ಇಳಿದಿದ್ದಾರೆ.
ನೆರೆ ಪರಿಹಾರಕ್ಕಾಗಿ ಆಗ್ರಹಿಸಿ ಇಂದು ಹಸಿರು ಸೇನೆ, ರೈತ ಸಂಘಗಳು, 10 ಜಿಲ್ಲೆಗಳ ರೈತರು, ಬೆಳಗಾವಿಯಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು. ನಗರದ ಕೋಟೆ ಕೆರೆಯಿಂದ ಚೆನ್ನಮ್ಮ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ವಾಹನ ತಡೆದು ರಸ್ತೆ ಮಧ್ಯದಲ್ಲಿ ಕುಳಿತ ರೈತರು ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ಮಾಡಿಕೊಂಡು ಬಾರಕೋಲು ಚಳವಳಿಯನ್ನು ನಡೆಸಿದ್ದಾರೆ. ಕೋಲು ಹಿಡಿದು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.

ನೆರೆ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು, ನೆರೆಪೀಡಿತ ಜಿಲ್ಲೆಗಳ ರೈತರ ಸಾಲ ಮನ್ನಾ, ಕಬ್ಬಿನ ಬಾಕಿ ಬಿಲ್ ಪಾವತಿ, ಪ್ರವಾಹದಲ್ಲಾದ ಬೆಳೆ ನಾಶಕ್ಕೆ ಒಂದು ಎಕರೆಗೆ ಒಂದು ಲಕ್ಷ ಪರಿಹಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಲಾಯಿತು. ಉತ್ತರ ಕರ್ನಾಟಕದ ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಪ್ರತಿಭಟನಾ ಮೆರವಣಿಗೆ ಬಳಿಕ ಬೆಳಗಾವಿಯ ಡಿಸಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುವುದಾಗಿಯೂ ತಿಳಿಸಿದ್ದಾರೆ.












Click it and Unblock the Notifications