ಬರಗಾಲ; ರೈತರು ಮೇವು ಸಂಗ್ರಹಿಸಿ ಗೋಶಾಲೆಗೆ ನೀಡಲು ಮನವಿ
ಬೆಂಗಳೂರು, ಡಿಸೆಂಬರ್ 18; ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಜನ ಮತ್ತು ಜಾನುವಾರು ಇಬ್ಬರಿಗೂ ಸಂಕಷ್ಟ ಎದುರಾಗಿದೆ. ಬೆಳೆ ಇಲ್ಲದೇ ರೈತ ನಷ್ಟ ಅನುಭವಿಸಿದ್ದಾನೆ. ಅತ್ತ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುತ್ತಿದೆ.
ಕರ್ನಾಟಕ ಸರ್ಕಾರ ಬರ ಪರಿಹಾರದ ಮಾರ್ಗಸೂಚಿಯಡಿ ಸಾಕಷ್ಟು ಪ್ರಮಾಣದ ಮೇವು ದಾಸ್ತಾನಿರುವ ಕುರಿತು ಗಮನಹರಿಸಬೇಕು. ಅಲ್ಲದೇ ಅಗತ್ಯಕ್ಕೆ ತಕ್ಕಂತೆ ರೈತರಿಗೆ ಮೇವಿನ ಬೀಜಗಳನ್ನು ವಿತರಿಸಲು ಸಹ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ. ಹಲವು ಜಿಲ್ಲೆಗಳಲ್ಲಿ ಹೊರ ರಾಜ್ಯಗಳಿಗೆ ಮೇವು ಮಾರಾಟ ಮಾಡುವುದನ್ನು ಸಹ ತಡೆಯಲು ಜಿಲ್ಲಾ ಗಡಿಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪನೆ ಮಾಡಲಾಗಿದೆ.

ದಾವಣಗೆರೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶ ಡಾ. ಚಂದ್ರಶೇಖರ್ ಸುಂಕದ್ ರೈತರಿಗೆ ಮನವಿಯೊಂದನ್ನು ಮಾಡಿದ್ದಾರೆ. ಮಳೆಯ ಅಭಾವದಿಂದ ಬರ ಪರಿಸ್ಥಿತಿ ತಲೆದೋರಿದ್ದು, ದಾವಣಗೆರೆ ಜಿಲ್ಲೆಯ ಹೊಸಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಗೋಶಾಲೆಗೆ ಹೆಚ್ಚುವರಿ ಮೇವನ್ನು ಸಂಗ್ರಹಿಸಬೇಕಾಗಿರುತ್ತದೆ ಎಂದು ಹೇಳಿದ್ದಾರೆ.
ಗೋಶಾಲೆಗೆ ಮೇವು ನೀಡಿ; ಜಿಲ್ಲೆಯಲ್ಲಿ ಅಧಿಕ ಮೇವಿನ ದಾಸ್ತಾನಿರುವ ರೈತರು, ಮೇವು ಪೂರೈಕೆದಾರರು ಮೇವನ್ನು ಗೋಶಾಲೆಗೆ ನೀಡಲು ಅವಕಾಶವಿದ್ದು, ಬೇಲು ಮಾಡಿದ ಸ್ಥಿತಿಯಲ್ಲಿ ಒಣಗಿದ ಭತ್ತದ ಹುಲ್ಲು, ಒಣಗಿದ ಮೆಕ್ಕೆಜೋಳದ ಸಪ್ಪೆ, ಬಿಳಿಜೋಳದ ಸಪ್ಪೆ ಮತ್ತು ಒಣಗಿದ ರಾಗಿ ಹುಲ್ಲಿಗೆ ಪ್ರತಿ ಮೆಟ್ರಿಕ್ ಟನ್ ಮೇವಿನ ದರವನ್ನು ನಮೂದಿಸಿ, ಡಿಸೆಂಬರ್ 26ರೊಳಗೆ ಸಲ್ಲಿಕೆ ಮಾಡುವಂತೆ ತಿಳಿಸಿದ್ದಾರೆ.
ಉಪನಿರ್ದೇಶಕರು (ಆಡಳಿತ) ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ದಾವಣಗೆರೆ ಕಚೇರಿಗೆ ಸಲ್ಲಿಸಿದಲ್ಲಿ ಉಪನಿರ್ದೇಶಕರು (ಆಡಳಿತ)ರವರು ನಿಮ್ಮ ಮೇವಿನ ಗುಣಮಟ್ಟವನ್ನು ಪರಿಶೀಲಿಸಿ ಗೋಶಾಲೆಗೆ ಅವಶ್ಯವಿರುವಷ್ಟು ಮೇವನ್ನು ನಿಯಮಾನುಸಾರ ಖರೀದಿಸಲಾಗುತ್ತದೆ. ಹೊಸಳ್ಳಿ ಗ್ರಾಮದ ಗೋಶಾಲೆಗೆ ಹತ್ತಿರವಿರುವ ರೈತರು ಮತ್ತು ಮೇವು ಪೂರೈಕೆದಾರರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿಯೂ ಸಹ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಬಹುದು ಎಂಬ ಕುರಿತು ಚರ್ಚೆಗಳು ನಡೆದವು. ಈ ಸಂದರ್ಭದಲ್ಲಿ ಸರ್ಕಾರ ಉತ್ತರ ನೀಡುವಾಗ ರಾಜ್ಯದಿಂದ ಹೊರ ರಾಜ್ಯಕ್ಕೆ ಮೇವು ಮಾರಾಟ, ಸಾಗಾಟ ನಿರ್ಬಂಧಿಸಲಾಗಿದೆ ಎಂದು ಹೇಳಿದೆ.
ಪಶು ಸಂಗೋಪನಾ ಇಲಾಖೆ ಸಚಿವ ಕೆ. ವೆಂಕಟೇಶ ಮಾತನಾಡಿ, ಭತ್ತ, ಮೇವಿನ ಜೋಳ ಮತ್ತು ಜೋಳದ ಕಟಾವು ಸಂದರ್ಭದಲ್ಲಿ ಮೇವು ಸುಡದಂತೆ ವ್ಯಾಪಕವಾಗಿ ಪ್ರಚಾರ ಮಾಡಲಾಗುತ್ತಿದೆ. ಬರಗಾಲಪೀಡಿತ ತಾಲೂಕಗಳಲ್ಲಿ ಮೇವಿನ ಸಂಗ್ರಹ ಹೆಚ್ಚಿಸಲು ರಾಜ್ಯ ಮತ್ತು ರಾಷ್ಟ್ರೀಯ ವಿಕೋಪ ನಿಧಿ ಮತ್ತು ಇಲಾಖಾ ಅನುದಾನ 22 ಕೋಟಿಯಲ್ಲಿ ಮೇವಿನ ಬೀಜದ ಮಿನಿಕಿಟ್ ಕೊಡಲಾಗಿದೆ ಎಂದು ಹೇಳಿದ್ದಾರೆ.
ಬರ ಪೀಡಿತ ತಾಲೂಕುಗಳಲ್ಲಿ ರೈತರು ತಮ್ಮ ಕೃಷಿ ಭೂಮಿಯಲ್ಲಿ ಬೆಳೆಯುವ ಧಾನ್ಯಗಳ ಕಟಾವಣೆಯಾದ ನಂತರ ಜಾನುವಾರುಗಳು ತಿನ್ನಲು ಯೋಗ್ಯವಾದ ಮೇವನ್ನು ಸಂರಕ್ಷಣೆ ಮಾಡಬೇಕು ಎಂದು ಕರೆ ಕೊಡಲಾಗಿದೆ. ಭತ್ತ, ಮುಸುಕಿನ ಜೋಳ, ಜೋಳ, ಗೋಧಿ, ರಾಗಿ, ಬಾಜ್ರಾ, ಕಡಲೆಕಾಯಿ, ಸಿರಿಧಾನ್ಯ, ಎಲ್ಲಾ ದ್ವಿದಳ ಧಾನ್ಯದ ಬೆಳೆಗಳು, ಅವರೆ, ಉದ್ದು, ಅಲಸಂದೆ, ತೊಗರಿ, ಹೆಸರುಬೇಳೆ, ಕಡಲೆಕಾಳು ಮತ್ತು ಹುರುಳಿ ಮುಂತಾದ ಬೆಳೆಗಳ ಹುಲ್ಲುಗಳನ್ನು ಬಣವೆ ಹಾಕಿ ಸಂರಕ್ಷಿಸಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಬೆಳೆ ಕಟಾವಿನ ನಂತರ ಮೇವನ್ನು ಸುಡದೆ, ಮಳೆ ನೀರಿನಿಂದ ಕೊಳೆತು ಹೋಗದಂತೆ ಜಾಗರೂಕತೆಯಿಂದ ಶೇಖರಿಸಿಟ್ಟುಕೊಳ್ಳಬೇಕು. ಒಂದು ವೇಳೆ ತಮ್ಮ ಬಳಿ ಇರುವ ಜಾನುವಾರುಗಳಿಗೆ ಬೇಕಾದ ಮೇವಿನ ಪ್ರಮಾಣಕ್ಕಿಂತ ಹೆಚ್ಚಿಗೆ ಇದ್ದಲ್ಲಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗಳಲ್ಲಿ ಹೆಚ್ಚಿನ ಮೇವಿನ ಪ್ರಮಾಣ, ದರ, ತಮ್ಮ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ನೋಂದಾಯಿಸಿಕೊಳ್ಳುವಂತೆಯೂ ಸೂಚನೆ ಕೊಡಲಾಗಿದೆ.












Click it and Unblock the Notifications