ಕೃಷಿ ಮೇಲೂ ಕೊರೊನಾ ಎಫೆಕ್ಟ್: ಕಲ್ಲಂಗಡಿ ಬೆಲೆ ಪಾತಾಳಕ್ಕೆ
ಉಡುಪಿ, ಮಾರ್ಚ್ 16: ಜಾಗತಿಕ ಮಟ್ಟದಲ್ಲಿ ಸಾಕಷ್ಟು ಭಯ ಹುಟ್ಟಿಸಿ, ಸಾವು-ನೋವಿಗೆ ಕಾರಣವಾಗಿರುವ ಕೊರೊನಾ ಮಹಾಮಾರಿ ಈಗ ಕೃಷಿ ಕ್ಷೇತ್ರದ ಮೇಲೂ ತನ್ನ ಪರಿಣಾಮ ಬೀರಿದೆ.
ರಾಜ್ಯ ಮತ್ತು ದೇಶದಲ್ಲಿ ಕೊರೊನಾ ಎಫೆಕ್ಟ್ ಮತ್ತು ಕೊರೊನಾ ಎಮರ್ಜೆನ್ಸಿ ಹಿನ್ನೆಲೆಯಲ್ಲಿ ಕಲ್ಲಂಗಡಿ ಹಣ್ಣಿನ ಬೆಲೆ ಪಾತಾಳಕ್ಕೆ ಇಳಿದಿದೆ. ಕಳೆದ ಕೆಲವು ವರ್ಷಗಳ ಹಿಂದಿನ ಕಲ್ಲಂಗಡಿ ಹಣ್ಣಿನ ದರಕ್ಕೆ ಹೋಲಿಸಿದರೆ ಈ ವರ್ಷ ಅದರ ಅರ್ಧದಷ್ಟು ಕೂಡ ಬೆಲೆ ಇಲ್ಲದೆ ಇರುವುದು ಕಲ್ಲಂಗಡಿ ಕೃಷಿಕರ ಆತಂಕ ಹೆಚ್ಚು ಮಾಡಿದೆ.
ಕಳೆದ ಕೆಲವು ವರ್ಷಗಳಿಂದ ಒಂದು ಕೆ.ಜಿಗೆ 14, 15 ರುಪಾಯಿ ದರದಲ್ಲಿ ಕೃಷಿಕರಿಂದ ಕಲ್ಲಂಗಡಿ ಖರೀದಿಯಾಗುತ್ತಿತ್ತು. ಆದರೆ ಕೊರೊನಾ ಎಫೆಕ್ಟ್‌ನಿಂದಾಗಿ ಕಲ್ಲಂಗಡಿಯನ್ನು ಸದ್ಯ 5 ರಿಂದ 7 ರುಪಾಯಿ ಪ್ರತಿ ಕಿಲೋ ಗೆ ಕೃಷಿಕರಿಂದ ಖರೀದಿಸಲಾಗುತ್ತಿದೆ.

ಈ ಬೇಸಿಗೆ ಸಮಯದಲ್ಲಿ ಕಲ್ಲಂಗಡಿ ಅತೀ ಹೆಚ್ಚು ಬೇಡಿಕೆಯಿರುವ ಹಣ್ಣಾದರೂ ಕೂಡ ಸಾಂಕ್ರಾಮಿಕ ರೋಗ ಭೀತಿ ಹಿನ್ನೆಲೆಯಲ್ಲಿ ಬೆಳೆದ ಕಲ್ಲಂಗಡಿ ಗದ್ದೆಯಲ್ಲೇ ಉಳಿದಿದೆ.

ಈ ವರ್ಷ ಉತ್ತಮ ಫಸಲು ಬಂದಿದ್ದರೂ, ಮಾರುಕಟ್ಟೆಯಲ್ಲಿ ಕೊರೊನಾ ಭೀತಿಯಿಂದಾಗಿ ಕಲ್ಲಂಗಡಿ ಬೆಳೆಗೆ ಸಮಸ್ಯೆಯಾಗಿದೆ. ಮುಖ್ಯವಾಗಿ ಕಲ್ಲಂಗಡಿ ಸೇವಿಸಿದರೆ ಶೀತ, ಕೆಮ್ಮು ಶುರುವಾಗಬಹುದು ಎಂಬ ಭಯವೇ ಇದಕ್ಕೆ ಕಾರಣ. ಕೋಟದ ಕೃಷಿಕ ಭೋಜ ಪೂಜಾರಿ ತಿಂಗಳ ಹಿಂದೆ ಕೇರಳಕ್ಕೆ ಒಂದು ಲಾರಿ ಕಲ್ಲಂಗಡಿ ಮಾರಾಟ ಮಾಡಿದ್ದಾರೆ, ಆದರೆ ಎರಡನೇ ಕಟಾವು ಕೇಳುವವರಿಲ್ಲದಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications