No Rain: ಚಿಕ್ಕಬಳ್ಳಾಪುರದತ್ತ ಸುಳಿಯದ ಮಳೆ: ಬಿತ್ತನೆ ಅವಧಿ ಮುಗಿದರೂ ಬಾರದ ವರುಣ, ರೈತ ಕಂಗಾಲು
ಚಿಕ್ಕಬಳ್ಳಾಪುರ ಜುಲೈ 30: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ವರುಣನ ಅರ್ಭಟಕ್ಕೆ ಬೆಳೆಗಳು ನಾಶವಾಗಿ ಹೋಗಿವೆ. ಆದರೆ ಕೆಲವು ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಕೆಲವು ತಾಲೂಕುಗಳಲ್ಲಿ ಮಾತ್ರ ಬಿತ್ತನೆಗೆ ಅನುಕೂಲವಾಗುವಂತಹ ಮಳೆ ಬಿದ್ದಿದೆಯಾದರೂ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಸೇರಿದಂತೆ ಕೆಲವು ತಾಲೂಕುಗಳಲ್ಲಿ ಸರಿಯಾದ ಮಳೆಯಾಗದೆ ಮಳೆಗಿಂತ ಬಿರುಗಾಳಿ ಹೆಚ್ಚಾಗಿದ್ದು ಬಿತ್ತನೆಗೆ ತೊಡಕಾಗಿ ಪರಿಣಮಿಸಿದೆ.
ಕಳೆದ 2-3 ದಿನಗಳಿಂದ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದೆ. ಇನ್ನೇನು ಮಳೆ ಬಂದೇ ಬಿಡ್ತು ಎನ್ನುವಷ್ಟರಲ್ಲಿ ಮೋಡಗಳು ಮರೆಯಾಗಿ ರೈತರಿಗೆ ನಿರಾಸೆ ಮೂಡಿಸುತ್ತಿವೆ. ಬಿದ್ದಿರುವ ಅಲ್ಪಸ್ವಲ್ಪ ಮಳೆಯಿಂದ ಉಳುಮೆ ಮಾಡಿಕೊಂಡು ಬಿತ್ತನೆ ಮಾಡಲು ಉತ್ತಮ ಮಳೆಗಾಗಿ ಎದುರು ನೋಡುತ್ತಿದ್ದಾರೆ ರೈತರು. ಆದರೆ ಮಳೆಗಿಂತ ಬಿರುಗಾಳಿಯ ಅಬ್ಬರ ಹೆಚ್ಚಾಗಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಜನರು ಕಂಗಾಲಾಗಿದ್ದಾರೆ.

ಮಳೆ ಕೊರತೆಯಿಂದ ಕಂಗಾಲು:
ಕಳೆದ ಬಾರಿ ಬರ ಆವರಿಸಿದ್ದನ್ನು ಬಿಟ್ಟರೆ ಅದಕ್ಕೂ ಹಿಂದಿನ ನಾಲೈದು ವರ್ಷಗಳಲ್ಲಿ ಜಿಲ್ಲೆಯಲ್ಲಿ ವಿಪರೀತ ಮಳೆ ಸುರಿದಿತ್ತು. ಅತಿವೃಷ್ಟಿಯಿಂದ ಲಕ್ಷಾಂತರ ರೂಪಾಯಿ ಬೆಳೆ ನಷ್ಟ ಸಂಭವಿಸಿತ್ತು. ಹಿಂದೆಲ್ಲ ಸಾಕಪ್ಪ ಸಾಕು ಮಳೆಯ ಸಹವಾಸ ಎನ್ನುತ್ತಿದ್ದವರು ಈಗ ಬಾರೋ ಬಾರೋ ಮಳೆರಾಯ ಎಂದು ಬಾರಿ ವರುಣದೇವನ ಮೊರೆಹೋಗಿದ್ದಾರೆ. ಇಷ್ಟೊತ್ತಿಗೆ ಬಿತ್ತನೆಯಾಗಿ ಕಳೆ ಕೀಳುವ ಹಂತಕ್ಕೆ ಬರಬೇಕಿದ್ದ ಹೊಲಗಳು ಇನ್ನು ಸರಿಯಾಗಿ ಉಳುಮೆ ಕೂಡಾ ಆಗಿಲ್ಲ. ಬಿತ್ತನೆಯಾಗಿರುವ ಕೆಲವು ಹೊಲಗಳಲ್ಲಿ ಮೊಳಕೆ ನೆಲದಲ್ಲೇ ಕಮರುತ್ತಿದೆ.
ಶೇ.58ರಷ್ಟು ಮಾತ್ರ ಬಿತ್ತನೆ:
ಜಿಲ್ಲೆಯಲ್ಲಿ ಜೂನ್‌ನಲ್ಲಿ ಬಿತ್ತನೆ ಶುರುವಾಗಿ ಜುಲೈನೊಳಗೆ ಬಿತ್ತನೆ ಬಹುತೇಕ ಪೂರ್ಣಗೊಳ್ಳುತ್ತಿತ್ತು. ಆದರೆ ಈ ಬಾರಿ ಜೂನ್ ಹೋಗಿ ಜುಲೈ ಅಂತ್ಯವಾಗುತ್ತಿದ್ದರೂ ಸರಿಯಾಗಿ ಮಳೆ ಬಂದಿಲ್ಲ. ಕೆಲವು ತಾಲೂಕುಗಳನ್ನು ಹೊರತುಪಡಿಸಿದರೆ ಎಲ್ಲಿಯೂ ಬಿರುಸಿನ ಮಳೆ ಬಿದ್ದಿಲ್ಲ. ಹೀಗಾಗಿ ಈ ಬಾರಿ ಬಿತ್ತನೆಗೆ ಭಾರೀ ಹಿನ್ನಡೆಯಾಗಿದ್ದು ಇದುವರೆಗೂ ಜಿಲ್ಲಾದ್ಯಂತ ಶೇ.58ರಷ್ಟು ಮಾತ್ರ ಬಿತ್ತನೆಯಾಗಿದೆ.
ಯಾವ ಬೆಳೆ ಎಷ್ಟು ಬಿತ್ತನೆ?:
ಜಿಲ್ಲೆಯಲ್ಲಿ ಈ ಬಾರಿ ಒಟ್ಟು 1,28,495 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಆದರೆ ಇದು ವರೆಗೂ ಕೇವಲ 74,276 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. 42,630 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಗೆ ಗುರಿ ಹೊಂದಿದ್ದರೂ ಇದುವರೆಗೂ 16,443 ಹೆಕ್ಟೇರ್ ಪ್ರದೇಶ ಅಂದರೆ ಶೇ.38ರಷ್ಟು ಮಾತ್ರ ಬಿತ್ತನೆಯಾಗಿದೆ.

55,571 ಹೆಕ್ಟೇರ್ ಪ್ರದೇಶದಲ್ಲಿ ಹೈಬ್ರಿಡ್ ಮುಸುಕಿನ ಜೋಳ ಬಿತ್ತನೆಯ ಗುರಿ ಇದ್ದು, ಇದುವರೆಗೂ 39,705 ಹೆಕ್ಟೇರ್ ಪ್ರದೇಶದಲ್ಲಿ ಶೇ.71ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ. 2756 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಗುರಿಹೊಂದಿದ್ದು, ಇದುವರೆಗೂ 2290 ಹೆಕ್ಟೇರ್ ಪ್ರದೇಶ ಶೇ.83ರಷ್ಟು ಬಿತ್ತನೆಯಾಗಿದೆ. 20,433 ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ ಬಿತ್ತನೆ ಗುರಿ ಹೊಂದಲಾಗಿದ್ದು, 14,041 ಹೆಕ್ಟೇರ್ ಪ್ರದೇಶ ಶೇ.69 ರಷ್ಟು ಬಿತ್ತನೆಯಾಗಿದೆ.
ಎಲ್ಲೆಲ್ಲಿ ಮಳೆ:
ಗೌರಿಬಿದನೂರು, ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದು ಚಿಕ್ಕಬಳ್ಳಾಪುರ ಚಿಂತಾಮಣಿ ಮತ್ತು ಶಿಡ್ಲಘಟ್ಟ ತಾಲೂಕುಗಳಲ್ಲಿ ಸರಿಯಾದ ಮಳೆಯಾಗಿಲ್ಲ. ಹೀಗಾಗಿ ಮಳೆಯಾಗದ ಮುರೂ ತಾಲೂಕುಗಳಲ್ಲಿ ಶೇ.30ರಷ್ಟು ಬಿತ್ತನೆ ಕೂಡಾ ಆಗಿಲ್ಲ, ಜುಲೈ ಮೊದಲ ವಾರದಲ್ಲಿ ಸ್ವಲ್ಪ ಮಳೆಯಾಗಿದ್ದನ್ನು ಬಿಟ್ಟರೆ ಉಳಿದ ವಾರಗಳಲ್ಲಿ ಮಳೆಗಿಂತ ಕೇವಲ ಬಿರುಗಾಳಿಯ ಅಬ್ಬರವೇ ಹೆಚ್ಚಾಗಿದೆ.
ಪ್ರಮುಖ ಬೆಳೆಯಾದ ರಾಗಿ ಬಿತ್ತ ನೆಯೂ ಇನ್ನು ಶೇ.11 ರಷ್ಟು ಮಾತ್ರ ಬಿತ್ತನೆಯಾ ಗಿದ್ದು ಚಿಂತೆಗೆ ಕಾರಣವಾಗಿದೆ. ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆಯಾದರೂ ಬಿತ್ತನೆ ಅವಧಿ ಮೀರಿರುವುದು ಫಸಲಿನ ಮೇಲೆ ಪರಿಣಾಮ ಬೀರಲಿದೆ.

ಬಿತ್ತನೆ ಅವಧಿ ಮೀರಿದ ಭಯ:
ಆಗಸ್ಟ್ ತಿಂಗಳಲ್ಲೂ ರಾಜ್ಯಾದ್ಯಂತ ಮಳೆ ಬೀಳುವ ಮುನ್ಸೂಚನೆ ಇರುವುದರಿಂದ ಇನ್ನಾದರೂ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿಯಬಹುದೆಂಬ ನಿರೀಕ್ಷೆ ಇದೆ. ಕಳೆದ ಕೆಲವು ವರ್ಷಗಳಿಂದ ಹಿಂಗಾರು ಮಳೆಗಳು ಉತ್ತಮವಾಗಿ ಆಗಿರುವ ಹಿನ್ನೆಲೆ ಈ ಬಾರಿಯೂ ರೈತಾಪಿ ವರ್ಗ ಇನ್ನೂ ಬಿತ್ತನೆಯ ಹುಮ್ಮಸ್ಸಿನಲ್ಲಿದ್ದಾರೆ.
ಆದರೆ ಸದಾ ಮೋಡ ಮುಸುಕಿದ ವಾತಾವರಣ ವಿದ್ದರೂ ಮಳೆ ಸುರಿಯದಿರುವುದರಿಂದ ರೈತರು ಆಕಾಶ ನೋಡುವಂತಾಗಿದೆ. ಇನ್ನೊಂದೆಡೆ ಬಿರುಗಾಳಿಯ ಅಬ್ಬರಕ್ಕೆ ಬೆಚ್ಚಿಬಿದ್ದಿದ್ದಾರೆ. ಕಳೆದ ಬಾರಿ ಬರ ಕಾಡಿದ್ದರಿಂದ ಕೆರೆಗಳು ಆಗಲೇ ಖಾಲಿಯಾಗಿದ್ದವು. ಈ ಬಾರಿ ಉತ್ತಮ ಮಳೆ ಸುರಿದು ಕೆರೆಗಳು ತುಂಬಿಕೊಳ್ಳುವ ನಿರೀಕ್ಷೆಯಲ್ಲಿದ್ದ ರೈತರಿಗೆ ಮತ್ತೆ ನಿರಾಸೆಯಾಗಿದೆ. ಎಚ್‌ಎನ್ ವ್ಯಾಲಿ ವ್ಯಾಪ್ತಿಯ ಕೆಲವು ಕೆರೆಗಳು ತುಂಬಿರುವುದನ್ನು ಬಿಟ್ಟರೆ ಮಳೆಯಾಶ್ರಿತ ಕೆರೆಗಳಲ್ಲಿ ನೀರಿಲ್ಲದೆ ಒಣಗಿಹೋಗಿವೆ.
ಯಾವ ತಾಲೂಕಲ್ಲಿ ಎಷ್ಟು ಬಿತ್ತನೆ?
ಬಾಗೇಪಲ್ಲಿ ತಾಲೂಕಿನಲ್ಲಿ 27,864 ಹೆಕ್ಟೇರ್ ಗುರಿಯಲ್ಲಿ 19,539 ಹೆಕ್ಟೇರ್ ನಲ್ಲಿ ಬಿತ್ತನೆಯಾ ಗಿದೆ. ಚಿಂತಾಮಣಿ ತಾಲೂಕಿನಲ್ಲಿ 27,089 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 8828 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಶಿಡ್ಲಘಟ್ಟ ತಾಲೂಕಿನಲ್ಲಿ 15,475 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 3946 ಎಕರೆ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 13,773 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 9,288 ಹೆಕ್ಟೇರ್ ಬಿತ್ತನೆಯಾಗಿದೆ. ಗೌರಿಬಿದನೂರು ತಾಲೂಕಿನಲ್ಲಿ 35,531 ಹೆಕ್ಟೇರ್ ಗುರಿ ಪೈಕಿ 27,6442 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಗುಡಿಬಂಡೆ ತಾಲೂಕಿನಲ್ಲಿ 8799 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾ ಗಿದ್ದು, ಇದುವರೆಗೂ 5033 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.

ಎರಡು ವರ್ಷಗಳ ಹಿಂದೆ ಅಬ್ಬರಿಸಿದ್ದ ಮಳೆ:-
ಕಳೆದ 2021 ಮತ್ತು 22ನೇ ಸಾಲಿನ ಈ ಅವಧಿಯಲ್ಲಿ ರಾಜ್ಯದ ಜನರು ಚಿಕ್ಕಬಳ್ಳಾಪುರದತ್ತ ತಿರುಗಿ ನೋಡುವಷ್ಟು ಮಳೆ ಸುರಿದಿತ್ತು. ಬಯಲು ಸೀಮೆಯ ಚಿಕ್ಕಬಳ್ಳಾಪುರ ಮಲೆನಾಡಂತೆ ಕಂಡಿತ್ತು. ಜಕ್ಕಲಮಡುಗು ಜಲಾಶಯ, ಶ್ರೀನಿವಾಸ ಸಾಗರ, ಪರಗೋಡು ಜಲಾಶಯ ಹೀಗೆ ಜಿಲ್ಲೆಯ ಜಲಾಶಯಗಳು ನೀರಿನಿಂದ ತುಂಬಿದ್ದವು. ನಂದಿಗಿರಿಧಾಮದ ಅಲ್ಲಲ್ಲಿ ಝರಿಗಳು ಸಹ ಸೃಷ್ಟಿ ಆಗಿದ್ದವು. 2023ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಈ ಅವಧಿಯಲ್ಲಿ ಮುಂಗಾರು ಮಳೆ ದುರ್ಬಲ ಎನಿಸಿತ್ತು. 2022 ಮತ್ತು 2023ರ ನಡುವಿನ ಮಳೆ ಪ್ರಮಾಣವನ್ನು ತುಲನೆ ಮಾಡಿದರೆ 2023ನೇ ಸಾಲಿನಲ್ಲಿ -20.3ರಷ್ಟು ಶೇಕಡಾವಾರು ವ್ಯತ್ಯಾಸವಾಗಿತ್ತು.
ರೈತರು ಎನನ್ನುತ್ತಾರೆ?
ಕಳೆದ 2-3 ತಿಂಗಳಿಂದ ಮೋಡ ಮುಸುಕಿದ ವಾತಾವರಣವಿದೆ. ಅಲ್ಪಸ್ವಲ್ಪ ಮಳೆಯಾಗಿರುವುದನ್ನು ಬಿಟ್ಟರೆ ಬಿರುಗಾಳಿ ಅಪಾಯಕಾರಿಯಾಗಿ ಬೀಸುತ್ತಿದೆ. ಜುಲೈ ತಿಂಗಳಲ್ಲಿ ಮಳೆ ಬರುವ ನಿರೀಕ್ಷೆ ಇತ್ತಾದರೂ ಮಳೆ ಬಂದಿಲ್ಲ. ಹೀಗಾಗಿ ಭೂಮಿಯನ್ನು ಉಳುಮೆ ಮಾಡಿದ್ದೇವೆ. ಆದರೆ ಬಿತ್ತನೆ ಮಾಡುವಷ್ಟು ಮಳೆ ಮಾತ್ರ ಬರುತ್ತಿಲ್ಲ ಎಂದು ಸದಾಶಿವರೆಡ್ಡಿ ರೈತರು ಆರೋಪಿಸಿದ್ದಾರೆ.
ರೈತ ಮುಖಂಡರು ಏನಂದರು..?
ದಾಖಲೆಗಳಲ್ಲಿ ಮಾತ್ರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಜಿಲ್ಲೆಯ ಅರ್ಧದಷ್ಟು ತಾಲೂಕುಗಳಲ್ಲಿ ಸರಿಯಾದ ಮಳೆಯಾಗಿಲ್ಲ. ಇನ್ನೂ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ, ಹೀಗಾಗಿ ಸರಕಾರ ಜಿಲ್ಲೆಯ ಕೃಷಿ ಬಗ್ಗೆ ವಿಶೇಷ ಗಮನ ಕೊಟ್ಟು ರೈತರ ನೆರವಿಗೆ ಬರಬೇಕಿದೆ ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮುರಳಿಕೃಷ್ಣ ಅಭಿಪ್ರಯಾಪಟ್ಟಿದ್ದಾರೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications