ಬದಲಾಗಿದೆ ತುರ್ತು ಪರಿಸ್ಥಿತಿಯ ವ್ಯಾಖ್ಯಾನ: ರವಿಕುಮಾರ
"ಸುಭಿಕ್ಷವಾಗಿರುವ ದೇಶವೊಂದರಲ್ಲಿ ತುರ್ತುಪರಿಸ್ಥಿತಿ ಇರಲು ಸಾಧ್ಯವೇ? ಸಹಜವಾಗಿ ಉತ್ತರ ಇಲ್ಲವೆಂದೇ ಆಗಿರುತ್ತದೆ. ಅದಕ್ಕೆ ಮಾನದಂಡವೇನು? ಆ ದೇಶದ ನಾಗರಿಕರ ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಮೊತ್ತ ಸಾವಿರಾರು ಕೋಟಿ ಹೆಚ್ಚಳವಾಗಿರುವುದು. ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುವುದರಲ್ಲಿ ಹೊಸತೇನಿದೆ ಎಂದು ಕೆಲವರು ಹುಬ್ಬೇರಿಸಿದರೆ ಹಲವರು ಅದನ್ನೇ ಪ್ರಗತಿಪಥವೆಂದು ಸಾರಬಹುದು.''
"ಆದರೆ ಅದೇ ಕಾಲಕ್ಕೆ ಆ ದೇಶದ ಬಡವರ ಸಂಖ್ಯೆಯೂ ಕೋಟಿಗಟ್ಟಲೆ ಹೆಚ್ಚಾಗಿದ್ದರೆ, ಕೆಲವರ, ಅಂದರೆ ಕೆಲವೇ ಕೆಲವರ, ಕಣ್ಣು ಕೆಂಪಾಗಬಹುದು. ಆ ಕೆಲವೇ ಕೆಲವರಲ್ಲಿ ಮೂರು ವಿಧ. ಮೊದಲನೆಯವರು ಮೊದಲೇ ಬಡವಾಗಿದ್ದವರು ಪುನಃ ಅಥವಾ ಇನ್ನಷ್ಟು ಬಡವರಾಗಿರುವವರು. ಅವರ ಸಿಟ್ಟು ಅವರ ದವಡೆಗೆ ಮೂಲವಾಗಿರುವುದರಿಂದ ಯಾರೂ ಅವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಎರಡನೆಯವರು ಅವರ ಮೇಲೆ ಕನಿಕರ ತೋರುವ ಸಿರಿವಂತರು. ಈ ವರ್ಗದವರು ಆರ್ಥಿಕವಾಗಿಯೇ ಸಿರಿವಂತರಾಗಿರಬೇಕಿಲ್ಲ. ಬೌದ್ಧಿಕ ಸಿರಿವಂತರೂ ಆಗಿರಬಹುದು. ಮೂರನೆಯವರು ಸ್ವಿಸ್ ಬ್ಯಾಂಕಿನ ತಮ್ಮ ಖಾತೆಯಲ್ಲಿ ಹೆಚ್ಚಳವಾಗಬೇಕಿದ್ದ ಹಣ ಇನ್ನೂ ಹೆಚ್ಚಾಗದಿರುವುದಕ್ಕೆ ಆ ಬಡವರ ಕೊಳ್ಳುವ ಶಕ್ತಿ ಕುಂದಿರುವುದಕ್ಕಾಗಿ ಕಣ್ಣು ಕೆಂಪಾಗಿರುವವರು.''

ಬಡತನಕ್ಕೂ, ತುರ್ತುಪರಿಸ್ಥಿತಿಗೂ ಸಂಬಂಧವೇನು
"ಸಿರಿತನಕ್ಕೂ, ಬಡತನಕ್ಕೂ, ತುರ್ತುಪರಿಸ್ಥಿತಿಗೂ ಸಂಬಂಧವೇನು ಎಂಬ ಪ್ರಶ್ನೆ ಮೂಡಿದ್ದರೆ, ನೀವು ಸರಿಯಾದ ಹಾದಿಯಲ್ಲಿದ್ದೀರಿ. ಕಾರಣ ತುರ್ತುಪರಿಸ್ಥಿತಿಯ ವ್ಯಾಖ್ಯಾನ ಈಗ ಬದಲಾಗಿದೆ. ಓಬಿರಾಯನ ಕಾಲದಲ್ಲಿ ತುರ್ತು ಪರಿಸ್ಥಿತಿ ಅಂದರೆ ಅಧಿಕಾರದಲ್ಲಿರುವವರ ಅಧಿಕಾರದ ದಾಹ ಇನ್ನಷ್ಟು ಹೆಚ್ಚಾಗಿ ಎಲ್ಲವನ್ನೂ ಹಾಗೂ ಎಲ್ಲರನ್ನೂ ತಮ್ಮ ಮುಷ್ಠಿಯಲ್ಲಿ ಬಿಗಿಯಾಗಿ ಹಿಡಿದಿಡುವುದಕ್ಕಾಗಿ, ತಮ್ಮ ನಿರಂಕುಶ ನಡೆಗಳಿಗೆ ಕುತ್ತು ತರಬಹುದಾದ ಜನತೆಯನ್ನೂ ಜನನಾಯಕರನ್ನೂ ಬಂಧನದಲ್ಲಿರಿಸಿ, ತಮ್ಮ ಮನಬಂದಂತೆ ದೇಶವನ್ನು ಆಳುವುದೆಂಬುದು ಜನಮಾನಸದಲ್ಲಿ ಹೊಕ್ಕಿರುವ ಅಭಿಪ್ರಾಯ. ಆಗಲೋ, ಈಗಲೋ ಅಣಕಿ ಹಾಕುವ ಈ ಅಭಿಪ್ರಾಯ, ಅದೂ ಕೆಲವರ ರಾಜಕೀಯ ಹಿತಾಸಕ್ತಿಗಾಗಿ, ಮತ್ತೆ ಗೂಡು ಸೇರುವ ಸಣ್ಣ ಪರಿಕರವಿದು. ಬಹುತೇಕ ಎಲ್ಲಾ ಕುಟುಂಬಗಳಲ್ಲೂ, ಸಮುದಾಯಗಳಲ್ಲೂ, ಸಮಾಜಗಳಲ್ಲೂ, ದೇಶಗಳಲ್ಲೂ ಹಾಗೂ ದೇಶಗಳ ಒಕ್ಕೂಟಗಳಲ್ಲೂ, ತುರ್ತುಪರಿಸ್ಥಿತಿ ಮರುಕಳಿಸುವವರೆಗೂ, ಕಂಡು ಬರಬಹುದಾದ ಚಿಕ್ಕ ಪ್ರಕ್ರಿಯೆ ಇದು.''

ತುರ್ತುಪರಿಸ್ಥಿತಿಯ ವ್ಯಾಖ್ಯಾನವನ್ನು ಬದಲಿಸುವ ತುರ್ತು
"ಪ್ರಜಾಪ್ರಭುತ್ವವಿರುವ ಒಂದು ದೇಶದಲ್ಲಿ ಒಂದು ಪಕ್ಷಕ್ಕೆ ಸಂಪೂರ್ಣ ಬಹುಮತ ಬಂದು ಅದಕ್ಕೆ ಎದುರಾಗಿ ಒಂದು ಪ್ರಬಲವಾದ ವಿರೋಧ ಪಕ್ಷ ಅಸ್ತಿತ್ವದಲ್ಲಿದ್ದಾಗ ಮೇಲೆ ತಿಳಿಸಿದ ಚಿಕ್ಕ ಪ್ರಕ್ರಿಯೆ ಬಗ್ಗೆ ಅಷ್ಟೇನು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆದರೆ ಯಾವುದಾದರೂ ಒಂದು ಪಕ್ಷ ಪರಿಪೂರ್ಣ ಬಹುಮತ ಪಡೆದು ಅದಕ್ಕೆ ಎದುರಾಗಿ ಕಳೆಗುಂದಿದ ಕ್ಷೀಣವಾಗಿರುವ ವಿರೋಧ ಪಕ್ಷವಿದ್ದು, ಸಂಪೂರ್ಣ ಅಧಿಕಾರ ಆಳುವ ಪಕ್ಷದ ಪಾಲಾಗಿದ್ದು, ಅದರ ನಾಯಕರಿಗೆ ಅದರ ಎಲ್ಲೆಗಳನ್ನು ದಾಟುವ ದಾಹ ಹೆಚ್ಚಾಗಿರುವಾಗ ತುರ್ತುಪರಿಸ್ಥಿತಿಯ ವ್ಯಾಖ್ಯಾನವನ್ನು ಬದಲಿಸುವ ತುರ್ತು ಹೆಚ್ಚಾಗಿರುತ್ತದೆ. ಎಮರ್ಜೆನ್ಸಿ ಡಿಕ್ಲೇರ್ ಮಾಡಿದರಲ್ಲವೇ ಎಮರ್ಜೆನ್ಸಿಯ ಮಸಿ ಮುಖಕ್ಕೆ ತಾಗುವುದು? ಒಮ್ಮೆಲೇ ವಿರೋಧಿ ನಾಯಕರನ್ನು ಬಂಧಿಸುವುದರ ಬದಲು, ಅಲ್ಲಲ್ಲಿ ಹೆಕ್ಕಿ ಬೇರೆ ಬೇರೆ ಕಾಲದಲ್ಲಿ ಅಂತಹ ನಾಯಕರನ್ನು "ಕಾನೂನು ಬದ್ಧವಾಗಿ" ಪ್ರಶ್ನಿಸಿದರೇ, ಹೊಸ ಬಗೆಯ ಕುದುರೆ ವ್ಯಾಪಾರವನ್ನು ಆರಂಭಿಸಿದರೇ, ಯಾರೂ ಅದನ್ನು ತುರ್ತುಪರಿಸ್ಥಿತಿ ಎನ್ನುವ "ಧೈರ್ಯ" ತೋರುವುದಿಲ್ಲ. ಬದಲಾಗಿ ಅದನ್ನು ರಾಜಕೀಯ ಮುತ್ಸದ್ದಿತನವೆಂದು ಅವರ ಅಂಧ ಅನುಯಾಯಿಗಳು ಮೀಸೆ ತಿರುವೋದು ತಪ್ಪುವುದಿಲ್ಲ.''

ದೇಶದ ರಕ್ಷಣಾ ಮಂತ್ರಿಗೆ ಅದರ ಸಂಪೂರ್ಣ ಮಾಹಿತಿ ಇರುವುದಿಲ್ಲ
"ಈಗ ಇನ್ನೊಂದಷ್ಟು ಉದಾಹರಣೆಗಳತ್ತ ದೃಷ್ಟಿ ಹಾಯಿಸೋಣ. ಆರೇಳು ತಿಂಗಳಿಂದ ರಾಜಧಾನಿಯಲ್ಲಿ ಧರಣಿ ನಿರತರಾಗಿರುವ ರೈತರನ್ನು ತಮ್ಮ ಕಾರ್ಯಸಾಧನೆಗೆ ನೆರೆ ದೇಶದ ಉಗ್ರರು ಗುರಿಯಾಗಿಸಬಹುದೆಂಬ ಗೂಢಚಾರ ಮಾಹಿತಿ ದೇಶಾದ್ಯಂತ ಕೆಲವೇ ಗಂಟೆಗಳಲ್ಲಿ ಪ್ರಸಾರವಾಗುತ್ತದೆ. ಆದರೆ, ಕೆಲವು ವರ್ಷಗಳ ಹಿಂದೆ, ಮತ್ತೊಂದು ದೇಶದಿಂದ ಯುದ್ಧವಿಮಾನಗಳನ್ನು ಖರೀದಿಸುವ ಸಂದರ್ಭದಲ್ಲಿ, ಆ ದೇಶದ ರಕ್ಷಣಾ ಮಂತ್ರಿಗೆ ಅದರ ಸಂಪೂರ್ಣ ಮಾಹಿತಿ ಇರುವುದಿಲ್ಲ. ಆಡಳಿತ ಪಕ್ಷದ ಮುಂಚೂಣಿ ನಾಯಕರ ಪರಿಚಯಸ್ಥ ವರ್ತಕರು ಖರೀದಿ ವ್ಯವಹಾರದಲ್ಲಿ ಪ್ರಮುಖ ಪಾಲುದಾರರಾಗುವುದು ಕೇವಲ ಕಾಕತಾಳೀಯವಷ್ಟೇ. ನಾಯಕರಿಗೆ ತಮ್ಮ ಸಮೀಪದಲ್ಲಿರುವ ಸಚಿವರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳುವ ಅವಶ್ಯಕತೆ ಕಾಣದಿದ್ದಾಗ, ನೋಟು ಬ್ಯಾನ್, ತೆರಿಗೆ ನೀತಿ ಬದಲಿಸಲು ತಮ್ಮನ್ನು ಆಯ್ಕೆ ಮಾಡಿದ ಜನಸಾಮಾನ್ಯರ ಅಭಿಪ್ರಾಯ ಕೇಳುವ ತಾಳ್ಮೆ ಇರುತ್ತದೆಂದು ಅಪೇಕ್ಷಿಸುವುದು ದೊಡ್ಡ ಪ್ರಮಾದವೇ ಆಗುತ್ತದೆ. ಈ ನಡೆಗಳು "ಪ್ರಶ್ನಾತೀತ" (ಪ್ರಶ್ನೆಗಳನ್ನು ಇಷ್ಟಪಡದ, ಅದರಲ್ಲೂ ಪತ್ರಕರ್ತರ ಪ್ರಶ್ನೆಗಳನ್ನು ಸಹಿಸದ) ನಾಯಕರ ನಿರಂಕುಶತ್ವಕ್ಕೆ ಹಿಡಿದ ಕೈಗನ್ನಡಿಗಳು.''

ಕಪ್ಪುಹಣವನ್ನು ತೊಲಗಿಸುವುದು
"ನೋಟು ಬ್ಯಾನ್ ಮಾಡುವ ಉದ್ದೇಶಗಳಲ್ಲಿ ಒಂದು "ಕಪ್ಪುಹಣವನ್ನು ತೊಲಗಿಸುವುದು." ಅವರ ಈ ಆಶಯ ಬಹುತೇಕ ಈಡೇರಿತು. ಅಂದಾಜು ಶೇಕಡಾ ನೂರರಷ್ಟು ನೋಟುಗಳು ಬ್ಯಾಂಕುಗಳನ್ನು ಸೇರಿದವು ಎಂದು ಅದೇ ಸರ್ಕಾರ ಘೋಷಿಸಿತು. ಅದರ ಉದ್ದೇಶವೂ ಈಡೇರಿತ್ತು. ಹಾಗಾದರೆ ಕಪ್ಪು ಹಣವೇನಾಯಿತು. ಬಹುಶಃ ಅನೇಕರು ಅದನ್ನು ಬಿಳಿ ಮಾಡಿದ್ದರು. ಒಂದು ದೇಶ ಒಂದು ತೆರಿಗೆ ಎಂದರೂ ಇನ್ನೂ ಅನೇಕ ಸರಕುಗಳು ಹೊಸ ತೆರಿಗೆಯ ವ್ಯಾಪ್ತಿಗೆ ಬಂದಿಲ್ಲ. ಆದರೆ ದಕ್ಷಿಣದ ರಾಜ್ಯಗಳು ಒಪ್ಪಿಸುವ ತೆರಿಗೆಯ ಹಣ ಮಾತ್ರ ಉತ್ತರದ ರಾಜ್ಯಗಳಿಗೆ ವ್ಯಯವಾಗುತ್ತಿದೆ. ಆರ್ಥಿಕ ನ್ಯಾಯ ಒದಗಿಸುವ ದೃಷ್ಟಿಯಿಂದ ಅದನ್ನು ಸಹಿಸಿಕೊಳ್ಳಬಹುದು. ಒಂದು ದೇಶ ಒಂದು ಭಾಷೆಯ ಹೇರಿಕೆಯನ್ನು ಎಲ್ಲಾ ರಾಜ್ಯಗಳು ಹೇಗೆ ಸಹಿಸುವುದು.''

ಚಿಕ್ಕ ಬ್ಯಾಂಕುಗಳನ್ನು ನಷ್ಟದಲ್ಲಿರುವ ದೊಡ್ಡ ಬ್ಯಾಂಕುಗಳೊಡನೆ ವಿಲೀನ
"ಒಂದನೇ ತರಗತಿಯಿಂದಲೇ ಮಕ್ಕಳು ಹಿಂದಿ ಕಲಿಯುವಂತಾಗಿದೆ. ಮಾತೃಭಾಷೆ ಮನೆಯಲ್ಲೇ ಕಲಿಯುತ್ತಾರಲ್ಲ ಎಂಬ ಹುಂಬತನವಿದ್ದೀತು. ಹಾಗೆಯೇ ಲಾಭದಲ್ಲಿರುವ ಚಿಕ್ಕ ಚಿಕ್ಕ ಬ್ಯಾಂಕುಗಳನ್ನು ನಷ್ಟದಲ್ಲಿರುವ ದೊಡ್ಡ ದೊಡ್ಡ ಬ್ಯಾಂಕುಗಳೊಡನೆ ವಿಲೀನ ಮಾಡುವುದು ಅಧಿಕಾರ ಕೇಂದ್ರೀಕರಣದತ್ತ ಮತ್ತೊಂದು ಬೃಹತ್ ಹೆಜ್ಜೆ. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮತ್ತೊಂದು ಗದಾಪ್ರಹಾರ. ಭಾರತೀಯ ರೈಲ್ವೆಯ ಸರಕು ಸಾಗಾಣಿಕೆ ಬೋಗಿಗಳ ಮೇಲೆ ಈಗ ದೇಶದ ಪ್ರಮುಖ ವರ್ತಕರೊಬ್ಬರ ಹೆಸರು ರಾರಾಜಿಸುತ್ತಿದೆ. ಆರಂಭದ ದಿನಗಳಲ್ಲಿ ಗುಣಮಟ್ಟ ಸುಧಾರಿಸುತ್ತದೆಂದು ಶಿಕ್ಷಣದ ಖಾಸಗೀಕರಣಕ್ಕೆ ಒತ್ತು ಕೊಟ್ಟ ಪರಿಣಾಮ ಏನಾಗಿದೆ ಎಂದು ಬಿಡಿಸಿ ಹೇಳಬೇಕಿಲ್ಲ.''

ತಮಗೇನು ಬೇಕೋ ಆ ಕ್ರಿಯೆಯಲ್ಲಿ ನಿರತ
"ಅಭಿವೃದ್ಧಿ ಎಂದರೆ ಬುಲೆಟ್ ಟ್ರೇನ್ ಬಿಡುವುದು, ಎತ್ತರದ ಪ್ರತಿಮೆಗಳನ್ನು ಸ್ಥಾಪಿಸುವುದು, ಶಕ್ತಿಕೇಂದ್ರಗಳನ್ನು ನಿರ್ಮಿಸುವುದೆಂದು ಭಾವಿಸಿದ್ದರೆ ಇಂತಹ ಅವಘಡಗಳು ಆಗುವುದು ಸಹಜವೇ. ಪ್ರಜಾಪ್ರಭುತ್ವದ ಎಲ್ಲಾ ಅಂಗಗಳ ಮೇಲೆ ಹಿಡಿತ ಸಾಧಿಸಿದರೆ ಇದು ಸುಲಭಸಾಧ್ಯವಾದ ಕ್ರಿಯೆಯೇ. ಅಭಿವೃದ್ಧಿಯನ್ನು ನೋಡುವ ದೃಷ್ಟಿಕೋನಗಳು ಬೇರೆ ಬೇರೆಯಾಗಿರುತ್ತವೆ ಎಂದು ಯಾರಾದರೂ ನಕ್ಕು ಬಿಡಬಹುದು. ಎಲ್ಲರೂ ತಮಗೇನು ಬೇಕೋ ಆ ಕ್ರಿಯೆಯಲ್ಲಿ ನಿರತರಾಗಿದ್ದಾರೆ, ಸ್ವಚ್ಛಂದವಾಗಿ ಓಡಾಡಿಕೊಂಡಿದ್ದಾರೆ, ಒಂದು ಸುಂದರ ಸಮಾಜದ ಭಾಗವಾಗಿರಲು ಇನ್ನೇನು ಬೇಕು ಎಂದು ಕುಹುಕವಾಡಬಹುದು. ಆ ಕುಹಕದ ನಗುವಿನಲ್ಲೂ ನಿರಂಕುಶತ್ವದ ಕರಾಳ ಛಾಯೆ ಅಡಗಿದೆ. ಅದು ಭೂತಕಾಲದಲ್ಲಾದ ಅವಘಡಗಳನ್ನೇ ಪುನರುಚ್ಚರಿಸಿ, ಚಲನೆ ಕಳೆದುಕೊಂಡ ತಟಸ್ಥವಾದ ವ್ಯವಸ್ಥೆ ವಿಗತಿಯೆಡೆಗೆ ಜಾರುತ್ತಿರುವುದನ್ನು ಪ್ರಗತಿಯೆಡೆಗೆ ಸಾಗಿದೆ ಎಂಬ ಭ್ರಮೆ ನಿರ್ಮಿಸಲು ವಿದ್ಯಾವಂತರ, ಕಲಿತವರ ಮನಸ್ಸಿನಲ್ಲಿ ಅಂಧ ಭಕ್ತಿ ತುಂಬುವುದು.''

ಅಂಧ ಭಕ್ತಿ ಆತನನ್ನು ಪ್ರಶ್ನಾತೀತ ನಾಯಕನನ್ನಾಗಿಸುತ್ತದೆ
"ವ್ಯಕ್ತಿಯೊಬ್ಬನ ಮೇಲಿನ ಅಂಧ ಭಕ್ತಿ ಆತನನ್ನು ಪ್ರಶ್ನಾತೀತ ನಾಯಕನನ್ನಾಗಿಸುತ್ತದೆ. ಆ ಭಕ್ತಿ ಎಲ್ಲೆ ಮೀರಿ ಹೆಚ್ಚಾದರೇ ನಾಯಕನ ಹುಚ್ಚು ಹೆಚ್ಚಾಗಿ ನೆತ್ತಿಗೇರುತ್ತದೆ. ಕಣ್ಣುಗಳು ಕನ್ನಡಿಯನ್ನು ಮಾತ್ರ ನೋಡುವ ಸ್ಥಿತಿ ತಲುಪುತ್ತವೆ. ಸಾಂಕ್ರಾಮಿಕ ರೋಗ ತಡೆಗಟ್ಟಲು ತಟ್ಟೆ ಬಡಿಯಿರಿ, ದೀಪ ಬೆಳಗಿಸಿ ಎಂದು ಕರೆ ಕೊಡುವುದು. ಪುಸ್ತಕ ಓದುವ ಫೋಸು ಕೊಡುವುದು, ಹಕ್ಕಿ ಪಕ್ಷಿಗಳ ಜೊತೆ ಪಟ ತೆಗೆಸಿಕೊಳ್ಳುವುದು ಕನ್ನಡಿಯೊಳಗಿನ ಬಿಂಬದ ಮೇಲೆ ಮೋಹ ಹೆಚ್ಚಾಗಿರುವುದರ ಸಂಕೇತ. ನಟನೊಬ್ಬ ಧರಿಸುವ ಉಡುಪು ಪಾತ್ರದಂತೆ ಕಾಣಲು ಸಹಾಯ ಮಾಡುತ್ತದೆ. ಆ ಪಾತ್ರವಾಗಲು ನಟನೆಯ ಶ್ರಮ ಬೇಕಾಗುತ್ತದೆ. ಆಡಳಿತ ನಡೆಸುವ ಅಧಿಕಾರಿಗಳಿಗೂ, ರಾಜಕಾರಣಿಗಳಿಗೂ, ಜನನಾಯಕರಿಗೂ ಇದು ಅನ್ವಯವಾಗುತ್ತದೆ. ಅದಕ್ಕೆ ಏಳು ದಶಕ ಆಡಳಿತ ನಡೆಸಿದ ನಾಯಕರು ಕಾರಣವಾಗುವುದಿಲ್ಲ.''

ಇಂದು ಇಂಧನಕ್ಕಾಗಿ ನೋಟು ಸುಡಲಾಗುತ್ತಿದೆ
"ಆ ಏಳು ದಶಕ ಒಂದು ದೇಶದ ಆಡಳಿತ ನಡೆಸಿದ ಕುಟುಂಬದ ಬಗ್ಗೆ ಒಂದು ಕತೆ ಇದೆ. ಅದರ ಗೋಜಲು ಗೋಜಲಾದ ಸಾರಾಂಶ ಹೀಗಿದೆ. ಅವರ ಮನೆಗೆ ಪರಿಚಯದವರು ಬಂದಾಗ ಚಹಾ ತಯಾರಿಸಲು ಉರುವಲು ಕೊರತೆ ಕಂಡು ಬಂದಾಗ, ಕರೆನ್ಸಿ ನೋಟುಗಳನ್ನೇ ಒಲೆಗೆ ಒಟ್ಟಿ ಬಂದವರಿಗೆ ಚಹಾ ತಯಾರಿಸಿ ಕೊಟ್ಟಿದ್ದರಂತೆ. ಈಗ ಆ ದೇಶದ ಪ್ರತಿಯೊಬ್ಬ ವಾಹನದ ಮಾಲೀಕನು ಪ್ರತಿ ದಿನ ನೂರರ ನೋಟನ್ನು ಸುಡುತ್ತಿದ್ದಾನೆ. ವ್ಯತ್ಯಾಸವಿಷ್ಟೇ, ಅಂದು ನೋಟು ಇಂಧನವಾಗಿತ್ತು, ಇಂದು ಇಂಧನಕ್ಕಾಗಿ ನೋಟು ಸುಡಲಾಗುತ್ತಿದೆ. ಅಂದರೆ ಆ ದೇಶ ಸುಭಿಕ್ಷವಾಗಿರುವುದರಲ್ಲಿ ಎಳ್ಳಷ್ಟೂ ಗೊಂದಲವಿಲ್ಲ. ಅಷ್ಟು ಅಚಲವಾಗಿದೆ ಆ ನಂಬಿಕೆ. ಯಾವುದೇ ದೇಶದ ಜನರಲ್ಲಿ, ತನ್ನ ದೇಶ ಸುಭಿಕ್ಷವಾಗಿದೆ ಎಂಬ ನಂಬಿಕೆ ಅಚಲವಾಗಿದ್ದರೆ, ಹಾಗೂ ಅದು ಸುಶಿಕ್ಷಿತರಲ್ಲಿ ಇನ್ನೂ ಹೆಚ್ಚಾಗಿದ್ದರೆ, ಆ ದೇಶಕ್ಕೆ ಮತ್ಯಾವ ತುರ್ತುಪರಿಸ್ಥಿತಿಯನ್ನೂ ಹೇರುವ ಅಗತ್ಯವಿಲ್ಲ.''
- ರವಿಕುಮಾರ












Click it and Unblock the Notifications