ಕಾವೇರಿ ವಿವಾದ: ತಮಿಳುನಾಡಿನಲ್ಲಿ ಮೂರನೇ ಬೆಳೆಗೆ ನಿರ್ಬಂಧ ವಿಧಿಸುವಂತೆ ಮಾಜಿ ಸಚಿವ ತಮ್ಮಣ್ಣ ಒತ್ತಾಯ
ಮಂಡ್ಯ, ಅಕ್ಟೋಬರ್, 04: ರಾಷ್ಟ್ರದ ಬಹುತೇಕ ಎಲ್ಲ ರಾಜ್ಯಗಳಲ್ಲೂ ವರ್ಷಕ್ಕೆ ಎರಡು ಬೆಳೆ ಬೆಳೆಯಲು ಅವಕಾಶ ಇದೆ. ಆದರೆ ತಮಿಳುನಾಡಿನಲ್ಲಿ ಮಾತ್ರ ಮೂರು ಬೆಳೆ ಬೆಳೆಯುತ್ತಿದ್ದಾರೆ. ಇದಕ್ಕೆ ಮೊದಲು ನಿರ್ಬಂಧ ವಿಧಿಸುವ ನಿಟ್ಟಿನಲ್ಲಿ ಕಾನೂನು ಹೋರಾಟ ಮಾಡಬೇಕು ಎಂದು ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಒತ್ತಾಯಿಸಿದರು.
ನಗರದ ಸರ್.ಎಂ.ವಿ. ಪ್ರತಿಮೆ ಬಳಿ ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಕೃತಿ ಯಾರ ಸ್ವತ್ತೂ ಅಲ್ಲ, ಮಳೆ ಕೊರತೆಯಾಗಿ ಸಂಕಷ್ಟ ಪರಿಸ್ಥಿತಿ ಬಂದಂತಹ ಸಂದರ್ಭದಲ್ಲಿ ನೀರನ್ನು ಮಿತವಾಗಿ ಬಳಕೆ ಮಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

ಕರ್ನಾಟಕದ ರೈತರು ಬೇರಲ್ಲ, ತಮಿಳುನಾಡಿನವರು ಬೇರೆಲ್ಲ, ಆದರೆ ನಮ್ಮಲ್ಲಿ ಒಂದು ಬೆಳೆಗೆ ನೀರು ಕೊಡುವುದಿರಲಿ, ಕುಡಿಯಲೂ ನೀರಿಲ್ಲದ ಪರಿಸ್ಥಿತಿ ಇರುವಾಗ ಮೂರನೇ ಬೆಳೆ ಬೆಳೆಯಲು ನೀರು ಕೇಳುವುದು ಯಾವ ನ್ಯಾಯ ಎಂಬುದನ್ನು ಎಲ್ಲರೂ ಅರಿಯಬೇಕು. ಮತ್ತು ಈ ವಿಚಾರವನ್ನು ಸುಪ್ರೀಂ ಕೋರ್ಟ್‌ಗೆ ನಮ್ಮ ಕಾನೂನು ತಂಡ ಮನವರಿಕೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಮೂರನೇ ಬೆಳೆ ಬೆಳೆಯಲು ಸುಪ್ರೀಂ ಕೋರ್ಟ್ ನಿರ್ಬಂಧ ಹೇರಬೇಕು. ಈ ಬಗ್ಗೆ ನ್ಯಾಯಾಲಯಕ್ಕೆ ಸಮಗ್ರ ಮಾಹಿತಿಯೊಂದಿಗೆ ಮನವರಿಕೆ ಮಾಡಿಕೊಟ್ಟಲ್ಲಿ ನಮಗೆ ಸ್ವಲ್ಪ ಮಟ್ಟಿಗೆ ನ್ಯಾಯ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ನೀರು ಹಂಚಿಕೆಯಾಗಿದೆ. ಆದರೆ ಸಂಕಷ್ಟ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟವಾಗಿ ಆದೇಶದಲ್ಲಿ ತಿಳಿಸಿಲ್ಲ. ಈ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದರು.
ವಿಪರೀತ ಮಳೆ ಬಂದು ತಮಿಳುನಾಡಿಗೆ ಹೆಚ್ಚುವರಿ ನೀರು ಹರಿದುಹೋಗುತ್ತಿರುವ ಬಗ್ಗೆಯೂ ಮಾಹಿತಿ ನೀಡಬೇಕು. ಅದನ್ನು ಸಂಗ್ರಹಿಸಿ ಉಪಯೋಗ ಮಾಡಿಕೊಳ್ಳುವ ಬಗ್ಗೆಯೂ ನ್ಯಾಯಾಲಯದಿಂದಲೇ ಆದೇಶ ಪಡೆಯಬೇಕು ಎಂದು ಹೇಳಿದರು. ಹಾಗೆಯೇ ಈ ಎಲ್ಲಾ ಬೇಡಿಕೆಗಳನ್ನು ಸುಪ್ರೀಂ ಕೋರ್ಟ್‌ನ ಮುಂದಿಟ್ಟು ತಾತ್ಕಾಲಿಕವಾಗಿ ಪರಿಹಾರ ಕಂಡುಕೊಂಡು ಉಪಯೋಗ ಮಾಡಿಕೊಂಡ ನಂತರ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೋರಾಟ ರೂಪಿಸಬೇಕು ಎಂದು ತಿಳಿಸಿದರು.
ಕರ್ನಾಟಕದಿಂದ ತಮಿಳುನಾಡಿಗೆ ಹರಿದುಹೋಗುವ ನೀರನ್ನು ಅಳೆಯಲು ಬಿಳಿಗುಂಡ್ಲು ಬಳಿ ಅಳತೆ ಮಾಪನ ಅಳವಡಿಸಲಾಗಿದೆ. ಅದೇ ರೀತಿ ತಮಿಳುನಾಡಿನಲ್ಲಿ ಕಾವೇರಿ ಸಮುದ್ರಕ್ಕೆ ಸೇರುವ ಸ್ಥಳದಲ್ಲೂ ಅಳತೆ ಮಾಪನವನ್ನು ಅಳವಡಿಸಬೇಕು. ಎಷ್ಟು ಪ್ರಮಾಣದಲ್ಲಿ ಸಮುದ್ರಕ್ಕೆ ನೀರು ಹರಿದುಹೋಗುತ್ತದೆ ಎಂಬುದರ ಬಗ್ಗೆಯೂ ಮಾಹಿತಿ ಪಡೆಯಬೇಕು ಎಂದು ಹೇಳಿದರು.
ತಮಿಳುನಾಡಿನಲ್ಲಿ ಹೆಚ್ಚಾಗಿ ಅಂತರ್ಜಲ ಇದೆ. ಸಂಕಷ್ಟ ಸಮಯದಲ್ಲಿ ಅಂತರ್ಜಲವನ್ನು ಬಳಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಾವು ಸುಪ್ರೀಂ ಕೋರ್ಟ್‌ಗೆ ಎಲ್ಲ ಸಂಗತಿಗಳನ್ನೂ ತಿಳಿಸಿಕೊಡುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.












Click it and Unblock the Notifications