ಬೀಚಗಾನಹಳ್ಳಿಯಲ್ಲಿ ಕರುಗಳ ಪ್ರದರ್ಶನ; ಉತ್ತಮ ರಾಸುಗಳಿಗೆ ಬಹುಮಾನ, ವಿವರ ಇಲ್ಲಿದೆ
ಚಿಕ್ಕಬಳ್ಳಾಪುರ, ಜನವರಿ, 08: ಹಸು ಹಾಗೂ ಎಮ್ಮೆ ಕರುಗಳ ಸಾಕಾಣಿಕೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಪ್ರೋತ್ಸಾಹಿಸುವ ಉದ್ದೇಶದಿಂದ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾದ ಕರುಗಳ ಪ್ರದರ್ಶನ ಗಮನ ಸೆಳೆಯಿತು.
ಜಿಲ್ಲಾ ಪಂಚಾಯಿತಿ ಮತ್ತು ಪಶುಪಾಲನಾ ಇಲಾಖೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ತಾಲೂಕಿನ ಬೀಚಗಾನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಕರುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಈ ಪ್ರದರ್ಶನದಲ್ಲಿ ಆರೋಗ್ಯಕರವಾಗಿದ್ದ ಅತ್ಯುತ್ತಮ ಕರುಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಹಾಗೂ ಪ್ರದರ್ಶನದಲ್ಲಿ ಪಾಲ್ಗೊಂಡ ಎಲ್ಲ ಕರುಗಳಿಗೂ ಸಮಾಧಾನಕರ ಬಹುಮಾನ ನೀಡಲಾಯಿತು. ಜರ್ಸಿ, ಮಿಶ್ರತಳಿ, ಆಕಳುಗಳ ಹಾಗೂ ಎಮ್ಮೆಗಳು ಸೇರಿದಂತೆ ಹಾಲು ಉತ್ಪಾದಕರ ಸಹಕಾರ ಸಂಘದ ವ್ಯಾಪ್ತಿಯಲ್ಲಿನ ಬೀಚಗಾನಹಳ್ಳಿ, ಬಂದಾರ್ಲಹಳ್ಳಿ ಗ್ರಾಮಗಳಿಂದ ಸುಮಾರು 32ಕ್ಕೂ ಅಧಿಕ ಕರುಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ. ರವಿಚಂದ್ರ ಮಾತನಾಡಿ, ಕರುಗಳ ಆರೈಕೆ ಉತ್ತಮವಾಗಿ ಮಾಡಿದಲ್ಲಿ ಹಸುಗಳು ಉತ್ತಮ ಹಾಲು ನೀಡುತ್ತದೆ. ಕರು ಜನಿಸಿದ 20 ದಿನದೊಳಗಾಗಿ ಕೊಂಬು ಬಾರದಂತೆ ಚುಚ್ಚುಮದ್ದು ಕೊಡಿಸಬೇಕು. ಇದರಿಂದ ಅದರ ಆಕಾರ, ಆರೋಗ್ಯ ಉತ್ತಮವಾಗಿರುತ್ತದೆ. ಜವಾರಿ ಆಕಳಿಗಿಂತ ಮಿಶ್ರ ತಳಿ ಹಸುಗಳು ಜಂತುಭಾದೆಗೆ ತುತ್ತಾಗುತ್ತಿದ್ದು, ಕಾಲಕಾಲಕ್ಕೆ ಅಗತ್ಯ ಚುಚ್ಚುಮದ್ದು, ಲಸಿಕೆ ಕೊಡಿಸಿ ಆರೈಕೆ ಮಾಡಬೇಕು. ಕರುಗಳ ಪಾಲನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಈ ಪ್ರದರ್ಶನ ಆಯೋಜಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಕೆಎಂಎಫ್ ಹಸುಗಳಿಗೂ ಕೂಡ ವಿಮೆ
ಹಸುವಿನಿಂದ ಹಾಲಿನ ಜೊತೆ, ಉತ್ತಮ ಗೊಬ್ಬರ ದೊರೆಯುತ್ತದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಪಶು ಇಲಾಖೆ ಹಾಗೂ ಕೆಎಂಎಫ್ ಹಸುಗಳಿಗೂ ಕೂಡ ವಿಮೆ ಮಾಡಿಸುತ್ತಿದೆ. ವಿಮೆ ಪಡೆದು 21 ದಿನಗಳ ನಂತರ ಯಾವಾಗ ಮೃತಪಟ್ಟರೂ ಪರಿಹಾರ ದೊರೆಯುತ್ತದ. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬೀಚಗಾನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ವೆಂಕಟನರಸಪ್ಪ, ಹೈನುಗಾರಿಕೆಯು ಒಂದು ಲಾಭದಾಯಕ ಉದ್ದಿಮೆಯಾಗಿದೆ. 2-3 ಹಸು ಸಾಕಣೆ ಮಾಡಿದಲ್ಲಿ ಓರ್ವ ಸರ್ಕಾರಿ ನೌಕರರನ್ನು ಮೀರಿಸುವಂತಹ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ನಿರಂತರ ಆದಾಯ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಹಾಲು ಕಉತ್ಪಾದನೆ ಡಿಮೆ, ರೈತರಿಗೆ ಆತಂಕ
ಕಾಂಗ್ರೇಸ್ ಮುಖಂಡ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಬಾಲೇನಹಳ್ಳಿ ರಮೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಾಸುಗಳಿಗೆ ಚರ್ಮ ಗಂಟು ರೋಗ, ಮೇವಿನ ದರ ಏರಿಕೆ, ಕೂಲಿ ಕಾರ್ಮಿಕರ ಕೊರತೆ ಹೀಗೆ ಹತ್ತಾರು ಸಂಕಷ್ಟಗಳಿಂದ ಹಾಲು ಉತ್ಪಾದನೆ ಕಡಿಮೆಯಾಗಿದೆ. ಇದರಿಂದ ಜನರು ಹೈನೋದ್ಯಮ ಮಾಡಲು ಹಿಂಜರಿಯುತ್ತಾರೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಮತ್ತು ಹೈನುಗಾರರು ಪಟ್ಟು ಬಿಡದೆ ಗೋವುಗಳನ್ನು ಸಾಕಿ ದೇಶದ ಲಕ್ಷಾಂತರ ಜನರಿಗೆ ಶುದ್ಧ ಹಾಲನ್ನು ತಲುಪಿಸುತ್ತಿದ್ದಾರೆ ಎಂದರು.

ಆರ್ಥಿಕ ಲಾಭ ಕಂಡುಕೊಳ್ಳಲು ಸಲಹೆ
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರದೀಪ್ ಕುಮಾರ್ ಮಾತನಾಡಿ, ಬೀಚಗಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 198 ಜನ ಷೇರುದಾರ ರೈತರಿದ್ದಾರೆ. ಪ್ರತಿನಿತ್ಯವೂ ಸುಮಾರು 350 ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ರೈತರು ಹೆಚ್ಚಿನ ಪ್ರಮಾಣದಲ್ಲಿ ಹೈನುಗಾರಿಕೆ ಮಾಡುವುದರಿಂದ ಹೆಚ್ಚು ಲಾಬದಾಯಕದ ಜೊತೆಗೆ ಆರ್ಥಿಕ ಲಾಭ ವೃದ್ಧಿಸಬಹುದಾಗಿದೆ ಎಂದು ತಿಳಿಸಿದರು.

ಬಹುಮಾನಗಳ ವಿವರ ಇಲ್ಲಿದೆ
ಇನ್ನು ಈ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ಪಡೆದ ಹಸುಗಳ ಮಾಲಿಕರಿಗೆ 10 ಲೀಟರ್ ಹಾಲಿನ ಕ್ಯಾನ್‌ಗಳನ್ನು, ದ್ವಿತೀಯ ಬಹುಮಾನ ಪಡೆದ ಹಸುಗಳಿಗೆ 7 ಲೀಟರ್ ಕ್ಯಾನ್‌ಗಳನ್ನು ಮತ್ತು ತೃತೀಯ ಬಹುಮಾನ ಪಡೆದ ಹಸುಗಳಿಗೆ 5 ಲೀಟರ್ ಕ್ಯಾನ್‌ಗಳನ್ನು ವಿತರಿಸಿದರು. ಎಲ್ಲಾ ಹಸುಗಳಿಗೆ ಜಂತು ಹುಳ ಮಾತ್ರೆಗಳನ್ನು ಹಾಗೂ ಒಂದೊಂದು ಕೆ.ಜಿ. ಮಿನರಲ್ ಮಿಕ್ಷರ್ ಅನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ವೆಂಕಟರೋಣಪ್ಪ, ಸುಬ್ರಮಣಿ, ರಾಮರೆಡ್ಡಿ, ಪಶು ವೈದ್ಯಾಧಿಕಾರಿಗಳಾದ ಡಿ.ನಟರಾಜ್, ಮಂಜುಳ, ಸಾದಿವುಲ್ಲಾ, ಬೀಚಗಾನಹಳ್ಳಿ ಎಂ.ಪಿ.ಸಿ.ಎಸ್ ಸಿಬ್ಬಂದಿ, ಷೇರುದಾರರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications