ರೈತರ ಪ್ರತಿಭಟನೆಗೆ ಬಿಜೆಪಿ ಪ್ರತಿತಂತ್ರ: ಕಾಯ್ದೆಗಳ ಬಗ್ಗೆ ವ್ಯಾಪಕ ಪ್ರಚಾರ
ನವದೆಹಲಿ, ಡಿಸೆಂಬರ್ 11: ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ನಡುವಿನ ಮಾತುಕತೆ ಕಗ್ಗಂಟಾಗಿ ಮುಂದುವರಿದಿದೆ. ದೇಶದಾದ್ಯಂತ ಜನರನ್ನು ತಲುಪಲು ರೈತ ಪ್ರತಿಭಟನೆಗಳಿಗೆ ಪ್ರತಿಯಾಗಿ ತಂತ್ರ ರೂಪಿಸಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ.
ಕೃಷಿ ಕಾಯ್ದೆಗಳು ರೈತರು ಹಾಗೂ ದೇಶದ ಒಳಿತಿಗಾಗಿ ಇವೆ ಎಂದು ಬಿಂಬಿಸಲು ಬಿಜೆಪಿಯು ದೇಶದಾದ್ಯಂತ 700ಕ್ಕೂ ಅಧಿಕ ಪತ್ರಿಕಾಗೋಷ್ಠಿಗಳನ್ನು ಮತ್ತು ಕೃಷಿ ಕಾಯ್ದೆಗಳ ಪರವಾಗಿ ಪ್ರಚಾರ ನಡೆಸಲು ಸುಮಾರು ನೂರು ಸಭೆಗಳನ್ನು ನಡೆಸಲಿದೆ. ಕೃಷಿ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಲು ವ್ಯಾಪಕ ಪ್ರಚಾರ ಕಾರ್ಯಗಳನ್ನು ನಡೆಸಲು ಪಕ್ಷ ಯೋಜನೆ ರೂಪಿಸಿದೆ.
ಈ ಯೋಜನೆಯಡಿ ಬಿಜೆಪಿ ನಾಯಕರು ದೇಶದಾದ್ಯಂತ 718 ಜಿಲ್ಲೆಗಳಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಇದಲ್ಲದೆ ವಿವಿಧ ರಾಜ್ಯಗಳಲ್ಲಿ ಸುಮಾರು 100 ಸ್ಥಳಗಳಲ್ಲಿ ಕಿಸಾನ್ ಸಮ್ಮೇಳನಗಳನ್ನು ಆಯೋಜಿಸಲಿದೆ. ಈ ಸುದ್ದಿಗೋಷ್ಠಿಗಳು ಮತ್ತು ಸಭೆಗಳ ದಿನಾಂಕಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುತ್ತದೆ.

ರೈತ ಸಂಘಟನೆಗಳ ಜತೆಗೆ ಮಾತುಕತೆ ಮುಂದುವರಿಸಲು ಹಾಗೂ ಅವರ ಆತಂಕಗಳನ್ನು ಪರಿಹರಿಸುವ ಕ್ರಮಗಳನ್ನು ತೆಗೆದುಕೊಳ್ಳುವ ಸರ್ಕಾರದ ಪ್ರಸ್ತಾವವನ್ನು ರೈತ ಮುಖಂಡರು ತಿರಸ್ಕರಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಅದಕ್ಕೆ ಪ್ರತಿ ಪ್ರಚಾರ ತಂತ್ರ ನಡೆಸಲು ಮುಂದಾಗಿದೆ.












Click it and Unblock the Notifications