ಮೇ 28ರಂದು ಕರ್ನಾಟಕ ಬಂದ್ ಕರೆ ನೀಡಲ್ಲ : ಯಡಿಯೂರಪ್ಪ
ಬೆಂಗಳೂರು, ಮೇ 27 : 'ಮೇ 28ರ ಸೋಮವಾರ ಕರ್ನಾಟಕ ಬಂದ್‌ಗೆ ನಾನು ಕರೆ ನೀಡಿಲ್ಲ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಯಡಿಯೂರಪ್ಪ ಅವರು, 'ಸಾಲ ಮನ್ನಾ ಮಾಡದೇ ಇದ್ದರೆ ರೈತರು ಸ್ವಯಂ ಪ್ರೇರಿತವಾಗಿ ಬಂದ್ ನಡೆಸುತ್ತಾರೆ ಎಂದು ಹೇಳಿದ್ದೆ. ಬಂದ್‌ಗೆ ಬಿಜೆಪಿ ಕರೆ ನೀಡಿಲ್ಲ' ಎಂದು ಹೇಳಿದರು.
'ರೈತರ ಸಾಲ ಮನ್ನಾ ಮಾಡುವುದಾಗಿ ಶುಕ್ರವಾರ ಸಂಜೆಯೊಳಗೆ ಘೋಷಣೆ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್ ನಡೆಸುತ್ತೇವೆ' ಎಂದು ಶುಕ್ರವಾರ ಯಡಿಯೂರಪ್ಪ ಸದನದಲ್ಲಿ ಹೇಳಿ, ವಿಶ್ವಾಸ ಮತ ಯಾಚನೆಗೂ ಮೊದಲೇ ಸಭಾತ್ಯಾಗ ಮಾಡಿದ್ದರು.

'ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 24ಗಂಟೆಯೊಳಗೆ ರೈತರ ಎಲ್ಲಾ ಸಾಲ ಮನ್ನಾ ಮಾಡುವುದಾಗಿ ಎಚ್.ಡಿ.ಕುಮಾರಸ್ವಾಮಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದರು'. ಎಂದು ಯಡಿಯೂರಪ್ಪ ಹೇಳಿದರು.
'ಈಗ ಸಮ್ಮಿಶ್ರ ಸರ್ಕಾರ ರಚನೆಯಾದ ಮೇಲೆ ಆಲೋಚನೆ ಮಾಡಬೇಕು ಎಂದು ಯೂಟರ್ನ್ ಹೊಡೆದಿದ್ದಾರೆ. ಇದರಿಂದಾಗಿ ರೈತರು ಬೀದಿಗಿಳಿದು ಹೋರಾಟ ನಡೆಸುತ್ತಾರೆ' ಎಂದು ಹೇಳಿದ್ದೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಬಿ.ಎಸ್.ಯಡಿಯೂರಪ್ಪ ಅವರು ಬಂದ್ ನಡೆಸುತ್ತೇವೆ ಎಂದು ಹೇಳಿದ ಬಗ್ಗೆ ಭಾರೀ ಚರ್ಚೆ ಆಗಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಯಡಿಯೂರಪ್ಪ ಅವರ ಹೇಳಿಕೆಯನ್ನು ಖಂಡಿಸಿದ್ದರು. ಈಗ ಅವರು ಬಂದ್ ಕರೆ ನೀಡಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications