ರಾಜ್ಯ ರಾಜಕಾರಣಕ್ಕೆ ಯಡಿಯೂರಪ್ಪ ಮರಳುವುದು ಪಕ್ಕಾ
ಬೆಂಗಳೂರು, ಅಕ್ಟೋಬರ್: 22: ಸಂಸದರಾಗಿ ಆಯ್ಕೆಯಾಗಿ ತೆರಳಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಜ್ಯ ರಾಜಕಾರಣಕ್ಕೆ ಮರಳುವುದು ಪಕ್ಕಾ ಆಗಿದೆ.
ನವರಾತ್ರಿ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿ ಹಬ್ಬದ ಶುಭಾಶಯ ತಿಳಿಸಿದ ಬಿಎಸ್ ವೈ, ನನಗೆ ರಾಷ್ಟ್ರ ರಾಜಕಾರಣಕ್ಕಿಂತ ರಾಜ್ಯ ರಾಜಕಾರಣದಲ್ಲೇ ಆಸಕ್ತಿ ಜಾಸ್ತಿ. ಇದು ನಮ್ಮ ಹಿರಿಯ ನಾಯಕರಿಗೂ ಗೊತ್ತು. ರಾಜ್ಯ ರಾಜಕಾರಣದಲ್ಲೇ ಮುಂದುವರಿಯಲು ಇಚ್ಛೆ ಪಡುತ್ತೇನೆ ಎಂದು ಹೇಳಿದರು.[ಯಡಿಯೂರಪ್ಪ ಮನ್ ಕೀ ಬಾತ್]

ಮುಂದಿನ ಅವಧಿಗೆ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಗುರಿ. ರೈತ ಚೈತನ್ಯ ಯಾತ್ರೆಗೆ ಉತ್ತಮ ಜನಬೆಂಬಲ ಸಿಕ್ಕಿದ್ದು ಮೂರನೇ ಹಂತದ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಮತ್ತು ಆಡಳಿತದ ಮೇಲೆ ವಾಗ್ದಾಳಿ ಮಾಡಿದ ಯಡಿಯೂರಪ್ಪ, ರಾಜ್ಯ ಸರ್ಕಾರ ರೈತರ ಹಿತವನ್ನು ಸಂಪೂರ್ಣವಾಗಿ ಕಡೆಗಳಿಸಿದೆ, ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಪ್ರತಿ ದಿನ ಅತ್ಯಾಚಾರ, ಕಳ್ಳತನ ನಡೆಯುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.[ಕರ್ನಾಟಕ ಬಿಜೆಪಿಗೆ ನೂತನ ಸಾರಥಿ ಯಾರು?]
ಜವಾಬ್ದಾರಿ ವಹಿಸಿದರೆ ನಿರ್ವಹಿಸಲು ಸಿದ್ಧ
ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಬಗ್ಗೆ ನಮಾತನಾಡಿದ ಬಿಎಸ್ ವೈ, ಕೇಂದ್ರದ ನಾಯಕರು ಜವಾಬ್ದಾರಿ ವಹಿಸಿದರೆ ನಿರ್ವಹಿಸಲು ಸಿದ್ಧ. ಎಲ್ಲ ಜಿಲ್ಲೆಯ ನಾಯಕರನ್ನು ಒಟ್ಟಿಗೆ ಕರೆದುಕೊಂಡು ಹೋಗುವೆ ಎಂದು ಹೇಳಿದರು.[ಬಿಎಸ್ ಯಡಿಯೂರಪ್ಪ ರಾಜ್ಯ ರಾಜಕಾರಣಕ್ಕೆ ಮರಳಿದರೆ?]
ಈ ಬೆಳವಣಿಗೆಗಳು ರಾಜ್ಯ ಬಿಜೆಪಿ ವಲಯದಲ್ಲಿ ಗಮನಾರ್ಹ ಪರಿಣಾಮ ಉಂಟುಮಾಡಲಿವೆ. ತಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂಬ ಮಾತನ್ನು ಯಡಿಯೂರಪ್ಪ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ರವಾನೆ ಮಾಡಿದ್ದಾರೆ. ಬಿಜೆಪಿ ಹೈಕಮಾಂಡ್ ಮುಂದಿನದಿನಗಳಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂದಬುದನ್ನು ಕಾದು ನೋಡಬೇಕು.












Click it and Unblock the Notifications