ಅಡಿಕೆ ಬೆಳೆಯಲ್ಲಿ ಹಿಂಗಾರ ಒಣಗುವಿಕೆ; ಹತೋಟಿ ಕ್ರಮಗಳು
ಶಿವಮೊಗ್ಗ, ನವೆಂಬರ್ 09 : ಕರ್ನಾಟಕದಲ್ಲಿ ಅಡಿಕೆ ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿ ಶಿವಮೊಗ್ಗ ಸಹ ಒಂದು. ಜಿಲ್ಲೆಯ ಕೆಲವು ಭಾಗಗಳಲ್ಲಿ ಅಡಿಕೆ ಬೆಳೆಯಲ್ಲಿ ಹಿಂಗಾರ ಒಣಗುವ ರೋಗ ಹಾಗೂ ಹಿಂಗಾರ ತಿನ್ನುವ ಹುಳುವಿನ ಬಾಧೆ ಕಂಡು ಬಂದಿದೆ.
ಈ ಹಿನ್ನಲೆಯಲ್ಲಿ ತೋಟಗಾರಿಕಾ ಇಲಾಖೆ ಅಧಿಕಾರಿಗಳು ರೈತರಿಗೆ ಸಲಹೆಗಳನ್ನು ನೀಡಿದ್ದಾರೆ. ರೈತರು ಈ ಬಾಧೆಯ ನಿರ್ವಹಣೆಗೆ ಈಗಾಗಲೇ ಔಷಧ ಸಿಂಪರಣೆ ಮಾಡುತ್ತಿದ್ದಾರೆ. ಹಿಂಗಾರಕ್ಕೆ ರಾಸಾಯನಿಕಯುಕ್ತ ಔಷಧ ಸಿಂಪರಣೆ ಮಾಡುವುದರಿಂದ ಹೂವಿನ ಮಕರಂದ ಹೀರಲು ತೋಟಗಳಿಗೆ ಬಂದು ಹೋಗುವ ಜೇನು ನೊಣಗಳಿಗೆ ಹಾನಿಯಾಗಲಿದೆ.
ರೈತರು ಸಿಂಪರಣೆ ಕೈಗೊಳ್ಳುವ ಮೊದಲು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಅಥವಾ ವಿಜ್ಞಾನಿಗಳನ್ನು ಸಂಪರ್ಕಿಸಿ ಔಷಧಗಳ ಬಗ್ಗೆ ಸೂಕ್ತ ಮಾಹಿತಿ ಹಾಗೂ ಶಿಫಾರಸ್ಸು ಪಡೆಯಬೇಕು, ಬಳಿಕ ಹತೋಟಿ ಕ್ರಮ ತೆಗೆದುಕೊಳ್ಳಬೇಕು.

ಖಾಸಗಿ ವ್ಯಕ್ತಿಗಳು/ ಕಂಪನಿ/ಏಜೆನ್ಸಿ ಶಿಪಾರಸ್ಸು ಮಾಡಿದ ಔಷಧ ಬಳಕೆಗೆ ಮೊದಲು ಸೂಕ್ತವಾಗಿ ಪರಿಶೀಲಿಸಿದ ನಂತರವೇ ಸಿಂಪರಣೆ ಮಾಡಬೇಕು ಎಂದು ರೈತರಿಗೆ ಕರೆ ನೀಡಲಾಗಿದೆ.
ಅಡಿಕೆ ಹಿಂಗಾರ ಕೆರೆದು ತಿನ್ನುವ ಹುಳು ಹಿಂಗಾರದಲ್ಲಿ ಗೂಡು ಕಟ್ಟಿಕೊಂಡು ಜೀವಿಸುತ್ತವೆ. ಈ ಗೂಡಿನಲ್ಲಿ ಹುಳುವಿನ ಹಿಕ್ಕೆ ಹಾಗೂ ಹಿಂಗಾರದಿಂದ ಕೆರೆದು ಉಳಿದಿರುವ ಭಾಗಗಳು ಅಲ್ಲಿಯೇ ಶೇಖರಣೆಯಾಗುತ್ತದೆ. ಇದರಿಂದ ಹಿಂಗಾರದ ಎಸಳುಗಳು ಒಣಗಲು ಆರಂಭವಾಗಿ ಹಿಂಗಾರ ಕಂದುಬಣ್ಣಕ್ಕೆ ತಿರುಗಿ ಉದುರಲು ಆರಂಭವಾಗುತ್ತದೆ
ಹತೋಟಿ ಕ್ರಮಗಳು; ರೋಗ ನಿಯಂತ್ರಣಕ್ಕಾಗಿ ಕಾಪರ್ ಆಕ್ಸಿ ಕ್ಲೋರೈಡ್ 2 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಹಿಂಗಾರದ ಒಳಗಡೆ ಹುಳುಗಳು ಹಾನಿಯುಂಟು ಮಾಡಿದಲ್ಲಿ ಕೀಟದ ನಿರ್ವಹಣೆಗೆ ಶೇ. 1 ರ ಬೇವಿನೆಣ್ಣೆ 2 ಮಿ.ಲೀ. 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ತೋಟದಲ್ಲಿ ಜೇನು ಸಾಕಾಣಿಕೆ ಮಾಡುವ ರೈತರು, ಜೇನುಪೆಟ್ಟಿಗೆಗಳನ್ನು ಔಷಧ ಸಿಂಪರಣೆಯಾದ ಸಮಯದಲ್ಲಿ ಸುಮಾರು 3 ರಿಂದ 4 ದಿವಸಗಳ ಕಾಲ ಬೇರೆ ಪ್ರದೇಶಕ್ಕೆ ಸ್ಥಳಾಂತರ ಮಾಡುವುದು ಉತ್ತಮ.
ಔಷಧ ಸಿಂಪರಣೆಯಾದ ತೋಟದಲ್ಲಿ ಸಾಧ್ಯವಾದಷ್ಟು ಜೇನುಪೆಟ್ಟಿಗೆ ಸುತ್ತ ಪರದೆಯನ್ನು ಹಾಕಿ ಜೇನು ನೊಣಕ್ಕೆ ಕೃತಕ ಆಹಾರವನ್ನು ಒದಗಿಸುವುದು ಸೂಕ್ತ. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ ಕಚೇರಿಗೆ ಭೇಟಿ ನೀಡಿ.












Click it and Unblock the Notifications