ಅಡಿಕೆ ಆಮದು: ಮಧ್ಯಪ್ರವೇಶಿಸಲು ರಾಜ್ಯಪಾಲರಿಗೆ ಎಎಪಿ ಒತ್ತಾಯ
ಬೆಂಗಳೂರು, ಅಕ್ಟೋಬರ್ 28: ಭೂತಾನ್‌ನಿಂದ ಅಡಿಕೆ ಆಮದು ಮಾಡಿಕೊಳ್ಳುವ ವಿಚಾರದಲ್ಲಿ ಮಧ್ಯಪ್ರವೇಶಿಸಿ ಅಡಿಕೆ ಬೆಳೆಗಾರರಿಗೆ ನೆರವಾಗಬೇಕು ಎಂದು ಆಗ್ರಹಿಸಿದ ಆಮ್ ಆದ್ಮಿ ಪಕ್ಷ ನಿಯೋಗವು ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್‌ಗೆ ಮನವಿ ಸಲ್ಲಿಸಿತು.
ಆಮ್ ಆದ್ಮಿ ಪಾರ್ಟಿ (ಎಎಪಿ) ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದ ನಿಯೋಗವು ಶುಕ್ರವಾರ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು. ಈ ವೇಳೆ ಪಕ್ಷದ ಮುಖಂಡರೂ ಆದ ಹಿರಿಯ ವಕೀಲ ಬ್ರಿಜೇಶ್ ಕಾಳಪ್ಪ, ಕೆ. ದಿವಾಕರ್ ಮತ್ತಿತರರು ನಿಯೋಗದಲ್ಲಿದ್ದರು.
ಮನವಿ ಸಲ್ಲಿಕೆ ನಂತರ ಸುದ್ದಿಗಾರರ ಜೊತೆ ಮಾತನಾಡಿದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಕೇಂದ್ರ ಸರ್ಕಾರ ಭಾರತಕ್ಕೆ 15,000 ಕ್ವಿಂಟಾಲ್ ಅಡಿಕೆಯನ್ನು ಭೂತಾನ್‌ನಿಂದ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. ಇದರಿಂದ ಕರ್ನಾಟಕದ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಹಾಸನ ಜಿಲ್ಲೆಗಳ ಅಡಿಕೆ ಬೆಳಗಾರರು ಚಿಂತೆಗೀಡಾಗಿದ್ದಾರೆ ಎಂದರು.

ಸಮಸ್ಯೆಯ ಗಂಭೀರತೆಯನ್ನು ಕೇಂದ್ರಕ್ಕೆ ತಿಳಿಸಿ
ಕಾಳಮೆಣಸು ಬೆಳಗಾರರಿಗೆ ಆದ ಅನ್ಯಾಯವು ಅಡಿಕೆ ಬೆಳಗಾರರಿಗೂ ಆಗಲಿದೆ. ಈ ಬಗ್ಗೆ ತಿಳಿದ ಕೂಡಲೇ ಸಂಭವನೀಯ ಸಮಸ್ಯೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಆದರೆ ಕೇಂದ್ರ ಸರ್ಕಾರದ ಗಮನವನ್ನು ಈ ಸಮಸ್ಯೆಯತ್ತ ಸೆಳೆಯುವ ನಮ್ಮ ಪ್ರಯತ್ನವು ಯಶಸ್ವಿಯಾಗಲಿಲ್ಲ. ಆದ್ದರಿಂದ ಸಮಸ್ಯೆಯ ಗಂಭೀರತೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲು ನೀವು (ರಾಜ್ಯಪಾಲರು) ಮಧ್ಯ ಪ್ರವೇಶಿಸಬೇಕು ಎಂದು ಅವರು ಮನವಿ ಮಾಡಿದರು.

ಮೇಕ್ ಇನ್ ಇಂಡಿಯಾ ವಿರುದ್ಧದ ನಿರ್ಧಾರ
ಮೇಕ್ ಇನ್ ಇಂಡಿಯಾ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿಯವರು ಅದಕ್ಕೆ ವಿರುದ್ಧವಾಗಿ ವಿದೇಶದಲ್ಲಿ ಬೆಳೆದ ಅಡಿಕೆ, ಕಾಳಮೆಣಸನ್ನು ಭಾರತಕ್ಕೆ ಆಮದು ಮಾಡಿಕೊಂಡು 'ಎಲ್ಲಾದರೂ ಬೆಳೆಯಿರಿ, ಭಾರತಕ್ಕೆ ತನ್ನಿ' ಎಂಬ ನೀತಿಯನ್ನು ಅನುಸರಿಸುತ್ತಿರುವುದೇಕೆ?. ರಾಜಕೀಯ ಪ್ರಭಾವಿಗಳು ಇದರಲ್ಲಿ ಭಾಗಿಯಾಗಿ ಆಮದು ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ಜಾರಿ ನಿರ್ದೇಶನಾಲಯದಿಂದ ಸಮಗ್ರ ತನಿಖೆ ಆಗಬೇಕು ಎಂದು ಅವರು ಆಗ್ರಹಿಸಿದರು.

ಆಮದು ಅಡಿಕೆ ಕಳಪೆಯಾಗಿರಲಿದೆ: ಎಎಪಿ
ಎಎಪಿ ಮುಖಂಡರು ಹಾಗೂ ಹಿರಿಯ ವಕೀಲರಾದ ಬ್ರಿಜೇಶ್ ಕಾಳಪ್ಪ ಮಾತನಾಡಿ, 'ನಮ್ಮಲ್ಲಿ ಬೆಳೆಯುವ ಅಡಿಕೆಗೆ ಹೋಲಿಕೆ ಮಾಡಿದರೆ ಭೂತಾನ್‌ನಿಂದ ಆಮದು ಮಾಡಿಕೊಳ್ಳುವ ಅಡಿಕೆಯು ಕಳಪೆ ಗುಣಮಟ್ಟದ್ದಾಗಿರಲಿದೆ. ಅದೇ ರೀತಿ, ವಿಯೆಟ್ನಾಂನಿಂದ ಶ್ರೀಲಂಕಾ ಮೂಲಕ ಆಮದು ಮಾಡಿಕೊಳ್ಳುವ ಕಾಳಮೆಣಸು ನಮ್ಮಲ್ಲಿ ಬೆಳೆಯುವ ಕಾಳಮೆಣಸಿಗಿಂತ ಕಳಪೆ ಗುಣಮಟ್ಟದ್ದಾಗಿದೆ. ಇಲ್ಲಿನ ಉತ್ತಮ ಗುಣಮಟ್ಟದ ಬೆಳೆಗಳೊಂದಿಗೆ ಆಮದು ಮಾಡಿಕೊಂಡ ಅವುಗಳು ಮಿಶ್ರವಾಗುವುದರಿಂದ ಭಾರತದ ಅಡಿಕೆ ಹಾಗೂ ಕಾಳುಮೆಣಸು ಕಳಪೆ ಗುಣಮಟ್ಟದ್ದೆಂಬ ತಪ್ಪು ಕಲ್ಪನೆ ಗ್ರಾಹಕರಲ್ಲಿ ಮೂಡುವ ಸಾಧ್ಯತೆ ಎಂದು ಅವರು ವಿವರಿಸಿದರು.

ಕಾಳುಮೆಣಸು ಬೆಳೆಗಾರರಿಗೆ ಕೆಜಿಗೆ 350 ರೂ.ನಷ್ಟ
ನಂತರ ಮುಖಂಡ ಬ್ರಿಜೇಶ್ ಕಾಳಪ್ಪ ಮಾತನಾಡಿ, ಕರ್ನಾಟಕದಲ್ಲಿ ವಾರ್ಷಿಕ 36,000 ಮೆಟ್ರಿಕ್ ಟನ್ ಕಾಳುಮೆಣಸು ಬೆಳೆಯಲಾಗುತ್ತಿದೆ. ಆಮದಿಗೂ ಮೊದಲು 850 ರೂ. ಇದ್ದ ಬೆಲೆಯು 500 ರೂಪಾಯಿಗೆ ಕುಸಿದಿದಿದ್ದು, ಇದರಿಂದ ಬೆಳೆಗಾರರಿಗೆ ಕೆಜಿಗೆ 350 ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಅಂದರೆ ರೈತರಿಗೆ ಒಟ್ಟು 1.26 ಲಕ್ಷ ಕೋಟಿ ರೂಪಾಯಿ ನಷ್ಟವಾಗುತ್ತಿದೆ. ಕಾಳುಮೆಣಸಿನ ಹಿಂದಿನ ಬೆಲೆಗೂ ಆಮದಿಗೆ ಅವಕಾಶ ನೀಡಿದ ನಂತರದ ಬೆಲೆಗೂ ಹೋಲಿಕೆ ಮಾಡಿದರೆ, ಗುತ್ತಿಗೆದಾರರು ಆರೋಪಿಸಿರುವಂತೆ ಶೇ.40 ರಷ್ಟು ಕಡಿಮೆಯಾಗಿರುವುದು ಗಮನಕ್ಕೆ ಬರುತ್ತದೆ ಎಂದು ಹೇಳಿದರು.
ಎಎಪಿ ಮುಖಂಡರು ಆದ ಹಿರಿಯ ವಕೀಲ ಕೆ.ದಿವಾಕರ್ ಅವರು, ದೇಶಕ್ಕೆ ಅಗತ್ಯವಿರುವಷ್ಟು ಅಡಿಕೆ ಹಾಗೂ ಕಾಳುಮೆಣಸು ನಮ್ಮಲ್ಲೇ ಉತ್ಪಾದನೆಯಾಗುತ್ತಿದ್ದರೂ ವಿದೇಶಗಳಿಂದ ಆಮದಿಗೆ ಮುಂದಾಗಿರುವುದು ಏಕೆ?. ಒಂದು ವೇಳೆ ಅಡಿಕೆ ಹಾಗೂ ಕಾಳುಮೆಣಸನ್ನು ಸರ್ಕಾರ ಆಮದು ಮಾಡಿಕೊಳ್ಳುವುದಾದರೆ, ಭಾರೀ ಮೊತ್ತದ ಆಮದು ಸುಂಕವನ್ನು ಇವುಗಳಿಗೆ ವಿಧಿಸಬೇಕು. ಭಾರತೀಯ ರೈತರನ್ನು ರಕ್ಷಿಸಲು ಪರಿಣಾಮಕಾರಿಯಾದ ಆಮದು ಸುಂಕ ನೀತಿ ಇಲ್ಲದಿರುವ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳಲು ಆಮದುದಾರರಿಗೆ ಅವಕಾಶ ನೀಡಬಾರದು ಎಂದು ಅವರು ಒತ್ತಾಯಿಸಿದರು.












Click it and Unblock the Notifications