ಡಿಡಿ ಕಿಸಾನ್ ಪ್ರಚಾರಕ್ಕೆ ಅಮಿತಾಬ್ ಪಡೆದಿದ್ದು ಎಷ್ಟು?
ನವದೆಹಲಿ, ಜುಲೈ 21: ದೂರದರ್ಶನದ ಕಿಸಾನ್ ಚಾನೆಲ್‌ನ ಪ್ರಚಾರ ಜಾಹೀರಾತಿನಲ್ಲಿ ಪಾಲ್ಗೊಳ್ಳಲು ಬಾಲಿವುಡ್ ನಟ ಅಮಿತಾಬ್ ಬಚ್ಚನ್‌ಗೆ ಭಾರಿ ಮೊತ್ತ ನೀಡಲಾಗಿದೆ ಎಂಬುದು ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದೆ. ಅದರೆ, ಈ ಬಗ್ಗೆ ಖುದ್ದು ಅಮಿತಾಬ್ ಅವರೇ ಸ್ಪಷ್ಟನೆ ನೀಡಿದ್ದಾರೆ.
ಅಮಿತಾಬ್ ಅವರಿಗೆ 6.1 ಕೋಟಿ ರು ನೀಡಿ, ಡಿಡಿ ಕಿಸಾನ್ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ ಎಂಬ ವರದಿಯನ್ನು ಅಮಿತಾಬ್ ಬಚ್ಚನ್ ಅವರ ಕಚೇರಿ ಅಧಿಕೃತವಾಗಿ ತಳ್ಳಿ ಹಾಕಿದೆ.
'ದೂರದರ್ಶನದೊಂದಿಗೆ ನಾನು ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಹಾಗೂ ಅವರಿಂದ ಹಣವನ್ನೂ ಪಡೆದಿಲ್ಲ ಎಂದು ನಾನು ಹೇಳಬಯಸುತ್ತೇನೆ' ಎಂದು ಬಚ್ಚನ್ ಸ್ಪಷ್ಟಪಡಿಸಿದ್ದಾರೆ.

ಡಿಡಿ ಕಿಸಾನ್‌ನ ಪ್ರಚಾರಕ್ಕೆ ಸಂಬಂಧಿಸಿ ದಂತೆ ಲಿಂಟಾಸ್ ಎಂಬ ಜಾಹೀರಾತು ಸಂಸ್ಥೆಯೊಂದಿಗೆ ಕಾರ್ಯ ನಿರ್ವಹಿಸಿದ್ದಾಗಿ ಅಮಿತಾಬ್ ಹೇಳಿದ್ದಾರೆ. ಅದರೆ, ಈ ಬಗ್ಗೆ ಪ್ರಸಾರ ಭಾರತಿ ಮತ್ತು ತಮ್ಮ ನಡುವೆ ಯಾವುದೇ ಒಪ್ಪಂದವಿಲ್ಲ ಎಂದಿದ್ದಾರೆ.
ಸಾರ್ವಜನಿಕ ಹಿತಕ್ಕಾಗಿ ಕೆಲಸ ಮಾಡುತ್ತೇನೆ ಹಾಗೂ ಡಿಡಿ ಕಿಸಾನ್ ಅವುಗಳ ಪೈಕಿ ಒಂದು ಎಂದಿರುವ ಅಮಿತಾಬ್ ಅವರ ಮಾತುಗಳನ್ನು ಲಿಂಟಾಸ್ ಕಂಪನಿ ಕೂಡಾ ಪುಷ್ಟಿಕರಿಸಿದೆ. 72 ವರ್ಷ ವಯಸ್ಸಿನ ಅಮಿತಾಬ್ ಅವರು ಇಂಥ ಕಾರ್ಯಗಳಿಗೆ ಚುಕ್ಕಾಸು ಕೂಡಾ ಪಡೆಯುವುದಿಲ್ಲ. ಸಾಮಾಜಿಕ ಕಳಕಳಿ ಇರುವ ಕಾರ್ಯಕ್ರಮಕ್ಕೆ ತಮ್ಮ ನೆರವು ನೀಡುತ್ತಾರೆ ಯಾವುದೇ ರೀತಿ ಧನಾಪೇಕ್ಷೆ ಅವರಲ್ಲಿ ಇಲ್ಲ ಎಂದು ಸಂಸ್ಥೆ ಹೇಳಿದೆ.
2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ನೀಡಿದ ಭರವಸೆಯಂತೆ ಕೃಷಿಕರಿಗಾಗಿ ಪ್ರತ್ಯೇಕ ವಾಹಿನಿಯನ್ನು ಆರಂಭಿಸಲಾಗಿದೆ. 2014-15ರ ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಈ ವಾಹಿನಿಗೆ ಸುಮಾರು 100 ಕೋಟಿ ರು ಅನುದಾನ ನೀಡಿದ್ದಾರೆ. ಇಂಥ ವಾಹಿನಿ ಪರ ಪ್ರಚಾರಕ್ಕೆ ಅಮಿತಾಬ್ ಅವರು 6.31 ಕೋಟಿ ರು ಪಡೆದುಕೊಂಡಿದ್ದಾರೆ ಎಂಬುದು ಆಕ್ಷೇಪಕ್ಕೆ ಕಾರಣವಾಗಿತ್ತು. ಈಗ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದೆ.












Click it and Unblock the Notifications