ರೈತರೇ ಎಚ್ಚರ..! ಭತ್ತದ ಬೆಳೆಗೆ ಮಾರಕವಾದ ‘ಸೈನಿಕ ಹುಳು': ಪರಿಹಾರವೇನು..?

ಮೈಸೂರು, ನವೆಂಬರ್‌ 09: ಈ ಬಾರಿ ರೈತರು ಮಳೆಯ ಕೊರತೆ ನಡುವೆಯೂ ಅಲ್ಲಲ್ಲಿ ಭತ್ತದ ಕೃಷಿಯನ್ನು ಮಾಡಿದ್ದಾರೆ. ಬಹಳಷ್ಟು ರೈತರಿಗೆ ಭತ್ತದ ಕೃಷಿಯೇ ಆದಾಯದ ಮೂಲವಾಗಿದ್ದು, ಕೀಟಗಳಿಂದ ರಕ್ಷಿಸಿ ಉತ್ತಮ ಇಳುವರಿ ಪಡೆಯುವುದು ಸವಾಲಾಗಿ ಪರಿಣಮಿಸಿದೆ. ಇತ್ತೀಚೆಗಿನ ವರ್ಷಗಳಲ್ಲಿ ಭತ್ತದ ಬೆಳೆಯನ್ನು ಸೈನಿಕ ಹುಳು ಕಾಡುತ್ತಿದ್ದು ಆದ್ದರಿಂದ ಅದರತ್ತ ರೈತರು ಗಮನಹರಿಸುವುದು ಬಹುಮುಖ್ಯವಾಗಿದೆ.

ಭತ್ತದ ಬೆಳೆ ಹುಲುಸಾಗಿ ಬೆಳೆದು ತೆನೆಯೊಡೆದು ಫಸಲಿಗೆ ಬರುತ್ತಿರುವಾಗಲೇ ಸೈನಿಕ ಹುಳುವಿನ ಕಾಟ ಶುರುವಾಗುತ್ತದೆ. ಅದನ್ನು ಸಕಾಲದಲ್ಲಿ ನಿಯಂತ್ರಣ ಮಾಡದಿದ್ದರೆ ಬೆಳೆಯನ್ನೆಲ್ಲ ತಿಂದು ಹಾಕಿ ರೈತನ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಮಾಡಿದರೂ ಅಚ್ಚರಿಯಿಲ್ಲ. ಇನ್ನು ಈ ಸೈನಿಕ ಹುಳವು ಪ್ರತಿವರ್ಷವೂ ಕಾಣಿಸುವುದಿಲ್ಲ. ಸುಮಾರು ಹತ್ತೋ ಇಪ್ಪತ್ತೋ ವರ್ಷಗಳಿಗೊಮ್ಮೆ ಕಂಡು ಬರುತ್ತಿವೆ.

paddy-crop-destroying-by-sainika-hulu

ಸೈನಿಕ ಹುಳು ಚಿಟ್ಟೆಯಿಂದ ಉತ್ಪತ್ತಿಯಾಗುತ್ತವೆ. ಚಿಟ್ಟೆಯು ಎಲೆ ಮತ್ತು ಕಾಂಡದ ಮೇಲೆ ಒಂದರ ಮೇಲೊಂದು ಸಾಲುಗಳಲ್ಲಿ ಗೊಂಚಲು ರೀತಿಯಲ್ಲಿ ಮೊಟ್ಟೆಯಿಡುತ್ತವೆ. ಒಂದು ಗೊಂಚಲಿನಲ್ಲಿ ಸುಮಾರು 200 ರಿಂದ 300 ಮೊಟ್ಟೆಗಳಿರುತ್ತವೆ. ಈ ಮೊಟ್ಟೆಗಳನ್ನು ಬದುಗಳಲ್ಲಿರುವ ಹುಲ್ಲುಗಳ ಮೇಲೆ ಇಡುತ್ತವೆ. ಮೊಟ್ಟೆ ಮರಿಯಾಗಲು 2ರಿಂದ 5 ದಿನ ತೆಗೆದುಕೊಳ್ಳುತ್ತದೆ. ಮರಿಹುಳುಗಳು ತೆವರಿ ಮೇಲಿರುವ ಹುಲ್ಲುತಿಂದು ನಂತರ ಭತ್ತ ಮತ್ತು ರಾಗಿ ಬೆಳೆಗಳ ಮೇಲೆಯೂ ದಾಳಿ ಮಾಡುತ್ತದೆ.

ಭತ್ತದ ಗರಿಯನ್ನು ತಿನ್ನುವ ಹುಳುಗಳು

ಈ ಹುಳುಗಳು ಹಸಿರು ಬಣ್ಣದ ದೇಹದ ಜೊತೆಗೆ ಉದ್ದನೆಯ ಗೆರೆಗಳನ್ನು ಹೊಂದಿರುತ್ತದೆ. ಇದು 2 ರಿಂದ 4.5 ಸೆಂ.ಮೀ. ಉದ್ದವಿರುತ್ತದೆ. ಈ ಹುಳುಗಳು ರಾತ್ರಿಯ ಸಮಯದಲ್ಲಿ ಎಲೆಯನ್ನು ಮತ್ತು ತೆನೆಯ ದಂಟನ್ನು ತಿನ್ನುತ್ತದೆ ಮತ್ತು ಹಗಲಿನಲ್ಲಿ ಸಸಿಗಳ ಬುಡದಲ್ಲಿ ಅವಿತಿರುತ್ತವೆ. ಸಾಮಾನ್ಯವಾಗಿ ಈ ಕೀಟದ ಹಾವಳಿಯು 10 ರಿಂದ 15 ವರ್ಷಗಳಿಗೊಮ್ಮೆ ಅದರಲ್ಲೂ ಹೆಚ್ಚು ಮಳೆ ಬಿದ್ದಂತಹ ವರ್ಷದಲ್ಲಿ ಕಾಣಿಸಿಕೊಳ್ಳುತ್ತದೆ.

ಇವು ರಾಗಿ ಮತ್ತು ಭತ್ತದ ಗರಿಗಳನ್ನು, ಎಲೆಗಳನ್ನು, ಗೊನೆಗಳನ್ನು ಸಂಪೂರ್ಣವಾಗಿ ತಿಂದು ಹಾಳು ಮಾಡುತ್ತಿವೆ. ಕಾಳು ಕಟ್ಟುವ ಹಂತದಲ್ಲಿರುವ ಗೊನೆಯ ಕೆಳಭಾಗದಲ್ಲಿ ಹಾನಿ ಮಾಡುತ್ತದೆ ಇದರಿಂದ ಗೊನೆಗಳು ತುಂಡಾಗುತ್ತವೆ ಮತ್ತು ಒಣಗುತ್ತವೆ. ಇವುಗಳಿಂದಾಗಿ ಒಟ್ಟು ಇಳುವರಿಯ ಹಾವಳಿಯಿಂದ ಶೇ.10 ರಿಂದ 15ರಷ್ಟು ಇಳುವರಿಯಲ್ಲಿ ನಷ್ಟವುಂಟಾಗುತ್ತದೆ. ಹೀಗಾಗಿ ಒಂದಷ್ಟು ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ನಿಯಂತ್ರಣ ಮಾಡಬಹುದಾಗಿದೆ.

paddy-crop-destroying-by-sainika-hulu

ಮುಂಜಾಗ್ರತಾ ಕ್ರಮಕೈಗೊಳ್ಳುವುದು ಅಗತ್ಯ

ಮೊದಲಿಗೆ ಮಾಗಿ ಉಳುಮೆ ಮಾಡುವುದು, ರೋಗ ನಿರೋಧಕ ತಳಿಗಳನ್ನು ಬಳಕೆ ಮಾಡುವುದು, ತಡವಾಗಿ ಬಿತ್ತನೆ ಮತ್ತು ನಾಟಿ ಮಾಡದೆ ಬೇಗ ಮಾಡುವ ಮೂಲಕ ಮುಂಜಾಗ್ರತೆ ವಹಿಸುವುದು ಅಗತ್ಯ. ಇನ್ನು ಮರಿ ಹುಳುಗಳು ಕಂಡು ಬಂದ ತಕ್ಷಣ ಕಂದಕದಲ್ಲಿ ಬೂದಿಯನ್ನು ಹಾಕುವುದು. ಭತ್ತದ ಗದ್ದೆಯ ಸುತ್ತಲೂ ರೆಂಬೆಕೊಂಬೆಗಳನ್ನು ಹಾಕಿ ಹುಳುಗಳನ್ನು ಒಟ್ಟುಗೂಡಿಸಿ ಕೈನಿಂದಲೇ ತೆಗೆದು ಹಾಕುವುದು, ನೈಸರ್ಗಿಕ ಶತ್ರುಗಳಾದ ಕಣಜ ಮತ್ತು ಜೇಡಗಳನ್ನು ಸಾಯಿಸದಿರುವುದು, ರಕ್ಷಿಸುವುದರಿಂದ ಅವು ಈ ಹುಳುಗಳನ್ನು ತಿಂದು ಹಾಕುವ ಮೂಲಕ ನಾಶ ಮಾಡುತ್ತವೆ.

ಇನ್ನೊಂದೆಡೆ ಕ್ಲೋರೋಪೈರಿಪಾಸ್ 2 ಮಿ.ಲೀ ಒಂದು ಲೀಟರ್ ನೀರಿನಲ್ಲಿ ಅಥವಾ ರೊಗರ್ 1.70 ಮಿ.ಲೀ ಒಂದು ಲೀಟರ್ ನೀರಿನಲ್ಲಿ ಅಥವಾ ನಿಂಬಿಸಿಡನ್ 5 ಮಿ.ಲೀ ಒಂದು ಲೀಟರ್ ನೀರನಲ್ಲಿ ಬೆರೆಸಿ ಸಿಂಪಡಿಸುವುದು ಅಥವಾ ಹರಳು ರೂಪದ ಕೀಟನಾಶಕಗಳಾದ ಪೋರೇಟ್ 15 ಕೆ.ಜಿ ಅಥವಾ ಕಾರ್ಬೊಪ್ಯುರಾನ್ 10 ಕೆ.ಜಿ.ಯನ್ನು ಮರಳಿನಲ್ಲಿ ಮಿಶ್ರಣ ಮಾಡಿ ಎರಚುವುದರಿಂದಲೂ ನಿಯಂತ್ರಣ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+