ಕೊಪ್ಪಳ; ಮಳೆಯಾದಲ್ಲಿ ಬಿತ್ತನೆಗೆ ಬೀಜ ಕೊರತೆ ಆಗದಿರಲು ಸೂಚನೆ
ಕೊಪ್ಪಳ, ಜುಲೈ 03; ಜೂನ್ ತಿಂಗಳಿನಲ್ಲಿ ಮಳೆಯ ಕೊರತೆ ಕಾರಣ ಕೃಷಿ ಚಟುವಟಿಕೆಗಳು ಇನ್ನೂ ಆರಂಭವಾಗಿಲ್ಲ. ಜುಲೈ ತಿಂಗಳಿನಲ್ಲಿ ಮಳೆಯಾದರೆ ರೈತರಿಗೆ ಬಿತ್ತನೆ ಬೀಜಗಳ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
ಕೊಪ್ಪಳ ಜಿಲ್ಲಾ ಪಂಚಾಯತ್ ಕಚೇರಿಯ ಸಭಾಂಗಣದಲ್ಲಿ ಕೊಪ್ಪಳ ಜಿಲ್ಲಾ ಮೊದಲನೇ ತ್ರೈಮಾಸಿಕ ಕೆಡಿಪಿ ಸಭೆ ನಡೆಯಿತು. ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ಮಾತನಾಡಿದ ಅವರು, "ಮುಂಗಾರು ಹಂಗಾಮಿನ ಮಳೆ ಕೊರತೆ ಹಿನ್ನೆಲೆಯಲ್ಲಿ ವಿಳಂಬವಾಗಿರುವ ಮೆಕ್ಕೆಜೋಳ, ಸಜ್ಜೆ, ನವಣೆ ಸೇರಿದಂತೆ ಇನ್ನಿತರ ಬೆಳೆಗಳ ಪೂರ್ಣಪ್ರಮಾಣದ ಬಿತ್ತನೆಗೆ ಅನುಕೂಲವಾಗುವಂತೆ ವಿವಿಧ ಬಿತ್ತನೆ ಬೀಜಗಳ ಲಭ್ಯತೆಗೆ ಗಮನ ಹರಿಸಬೇಕು" ಎಂದು ಸೂಚನೆ ನೀಡಿದರು.
ಗೊಬ್ಬರ ದಾಸ್ತಾನಿಗೆ ಸೂಚನೆ: ಸಚಿವರು ಮಾತನಾಡಿ, "ನೀರಾವರಿ ಬೆಳೆಗಳ ಬಿತ್ತನೆ ವೇಳೆ ಯೂರಿಯಾ ರಸಗೊಬ್ಬರಕ್ಕೆ ಸಾಕಷ್ಟು ಬೇಡಿಕೆ ಬರುವ ಕಾರಣ, ಸಕಾಲಕ್ಕೆ ಗೊಬ್ಬರ ಸಿಗದೇ ರೈತರು ಕಾಳಸಂತೆಯ ಮೇಲೆ ಅವಲಂಬಿತರಾಗದಂತೆ ಗೊಬ್ಬರ ದಾಸ್ತಾನಿಗೆ ಮುಂಜಾಗ್ರತೆ ವಹಿಸಬೇಕು" ಎಂದು ಅಧಿಕಾರಿಗಳಿಗೆ ತಿಳಿಸಿದರು.
"ಜಿಲ್ಲೆಯ ಕೆಲವೆಡೆ ಕಳಪೆ ಬಿತ್ತನೆ ಬೀಜಗಳು ಪೂರೈಕೆಯಾದ ಬಗ್ಗೆ ಕೇಳಿ ಬಂದ ದೂರುಗಳ ಮೇಲೆ ಯಾವ ಕ್ರಮ ವಹಿಸಲಾಗಿದೆ" ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. "ಕಳಪೆ ಬೀಜ ಮಾರಾಟದ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿ ಆಧರಿಸಿ, ತನಿಖೆ ನಡೆಸಿ ತಪ್ಪಿತಸ್ಥರು ಯಾರೇ ಇರಲಿ ಕಳಪೆ ಬೀಜ ಪೂರೈಸುವವರನ್ನು ಶಿಕ್ಷೆಗೆ ಗುರಿಪಡಿಸಬೇಕು" ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
"ರಾಜ್ಯದೆಲ್ಲೆಡೆಯಂತೆ ಮಳೆ ಕೊರತೆಯು ಕೊಪ್ಪಳ ಜಿಲ್ಲೆಯಲ್ಲಿಯೂ ಕಂಡುಬಂದಿದೆ. ಹೀಗಾಗಿ ಬರ ಪರಿಸ್ಥಿತಿ ಎದುರಾದರೆ ಜಾನುವಾರುಗಳಿಗೂ ಸಹ ತೊಂದರೆಯಾಗಬಾರದು. ಸಮರ್ಪಕ ಮೇವು ಲಭ್ಯತೆಗೆ ಗಮನ ಹರಿಸಬೇಕು. ಬರ ಘೋಷಣೆಯಾದಲ್ಲಿ ಜಿಲ್ಲೆಯ ಯಾವ ಯಾವ ಕಡೆಗಳಲ್ಲಿ ಗೋಶಾಲೆ ತೆರೆಯುವ ಪರಿಸ್ಥಿತಿ ಬರಬಹುದು ಎಂಬುದರ ಬಗ್ಗೆ ಪೂರ್ವ ಯೋಜನೆಯೊಂದನ್ನು ಸಿದ್ದಪಡಿಸಿಕೊಳ್ಳಬೇಕು" ಎಂದು ಸಚಿವರು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಿಗೆ ತಿಳಿಸಿದರು.
ಇ-ಕೆವೈಸಿ ಅನುಷ್ಠಾನ; ಕೊಪ್ಪಳ ಜಿಲ್ಲೆಯಲ್ಲಿ ಇನ್ನು 45 ಸಾವಿರ ರೈತರು ಇ-ಕೆವೈಸಿಯಿಂದ ಹೊರಗಿದ್ದಾರೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು. ನೋಂದಣಿ ಪ್ರಗತಿಯು ಇದುವರೆಗೆ ಶೇ.72ರಷ್ಟು ಮಾತ್ರ ಆಗಿದೆ. ಶೇ.100ರಷ್ಟು ಪ್ರಗತಿ ತೋರುವ ಹಾಗೆ ರೈತರಿಗೆ ಇ-ಕೆವೈಸಿಯ ಬಗ್ಗೆ ತಿಳಿವಳಿಕೆ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.
ಇ-ಕೆವೈಸಿಯು ರೈತರಿಗೆ ನೇರವಾಗಿ ಲಾಭವಾಗುವ ಯೋಜನೆಯಾಗಿದೆ. ಶಿಸ್ತುಬದ್ಧ ಪ್ರಚಾರ ಕಾರ್ಯಕ್ರಮಗಳ ಮೂಲಕ ಪ್ರತಿಯೊಬ್ಬ ರೈತರ ಮನೆಗಳಿಗೆ ಮಾಹಿತಿ ರವಾನೆಯಾಗಬೇಕು. ನರೇಗಾ ಯೋಜನೆಯಡಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಜಿಲ್ಲೆಯ ರೈತರಿಗೆ ಅವಕಾಶ ಕಲ್ಪಿಸಲು ಒತ್ತು ಕೊಡಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಯಿತು.
ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಮಾತನಾಡಿ, "ಬಿತ್ತನೆಯಾದ ಮೇಲೆ ಯೂರಿಯಾ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದ್ದರಿಂದ 10,000 ಮೆಟ್ರಿಕ್ ಟನ್ ಹೆಚ್ಚುವರಿ ರಸಗೊಬ್ಬರಕ್ಕೆ ಬೇಡಿಕೆ ಕೋರಿ ಪತ್ರ ಬರೆಯಲಾಗಿದೆ" ಎಂದು ತಿಳಿಸಿದರು.
"ಜಿಲ್ಲೆಯಲ್ಲಿ ಈ ವರ್ಷ ಶೇ.33 ರಷ್ಟು ಮಳೆ ಕೊರತೆ ಆಗಿರುವುದರಿಂದ ಒಟ್ಟು 3 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಪೈಕಿ ಇಲ್ಲಿವರೆಗೆ 91 ಹೆಕ್ಟೇರ್‌ನಲ್ಲಿ ಮಾತ್ರ ಶೇ.30ರಷ್ಟು ಬಿತ್ತನೆಯಾಗಿದೆ. ಹಿಂದಿನ ವರ್ಷ ಈ ವೇಳೆಗೆ ಶೇ. 57ರಷ್ಟು ಬಿತ್ತನೆಯಾಗಿತ್ತು. ಮೆಕ್ಕೆಜೋಳ, ಸಜ್ಜೆ, ನವಣೆ, ಸೂರ್ಯಕಾಂತಿ, ಹೆಸರು, ಭತ್ತ ಸೇರಿ ಜಿಲ್ಲೆಯಲ್ಲಿ 6979 ಕ್ವಿಂಟಲ್ ನಷ್ಟು ಬಿತ್ತನೆ ಬೀಜಗಳ ದಾಸ್ತಾನು ಇದ್ದು, ಇದುವರೆಗೆ ಅಂದಾಜು 4300 ಕ್ವಿಂಟಲ್ ನಷ್ಟು ಬೀಜಗಳ ವಿತರಣೆಯಾಗಿದೆ. 64,000 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ" ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.












Click it and Unblock the Notifications