ಕರ್ನಾಟಕದ ಕಥೆ: ಲಾಕ್ ಡೌನ್ ವೇಳೆ ಪ್ರತಿನಿತ್ಯ ಒಬ್ಬ ರೈತ ಆತ್ಮಹತ್ಯೆ!
ಬೆಂಗಳೂರು, ಜುಲೈ.02: ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆ ಕರ್ನಾಟಕವು ಲಾಕ್ ಡೌನ್ ಆಗಿದೆ. ಕಳೆದ 61 ದಿನಗಳಲ್ಲಿ ಪ್ರತಿನಿತ್ಯ ರಾಜ್ಯದಲ್ಲಿ ಒಬ್ಬ ರೈತನು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಅಂಶವು ಬೆಳಕಿಗೆ ಬಂದಿದೆ.
Recommended Video
ಏಪ್ರಿಲ್ ಮತ್ತು ಮೇ ತಿಂಗಳ 61 ದಿನಗಳಲ್ಲಿ ಸರಿಸುಮಾರು 75 ಮಂದಿ ರೈತರು ಸಾವಿಗೆ ಶರಣಾಗಿದ್ದಾರೆ ಎಂಬ ಅಂಕಿ-ಅಂಶಗಳು ಹೊರ ಬಿದ್ದಿದೆ. ಶ್ರಮಪಟ್ಟು ಬೆಳೆದ ಇಳುವರಿಯನ್ನು ಮಾರಾಟ ಮಾಡುವುದಕ್ಕೆ ಆಗದೇ, ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದ ಹಿನ್ನೆಲೆ ಸಾಕಷ್ಟು ರೈತರು ತಾವು ಬೆಳೆದ ಬೆಳೆಯನ್ನು ನಡುರಸ್ತೆಯಲ್ಲಿ ಎಸೆದ ಸಾಕಷ್ಟು ಉದಾಹರಣಗಳಿವೆ.
ಕರ್ನಾಟಕ ಲಾಕ್ ಡೌನ್ ನಿಂದಾಗಿ ರೈತರು ಬೆಳೆದ ಬೆಳೆಗೆ ಬೇಡಿಕೆ ಕುಸಿದಿದೆ. ಇದರ ನಡುವೆ ಸರ್ಕಾರದಿಂದ ಸೂಕ್ತ ಬೆಂಬಲ ಬೆಲೆ ಸಿಗದ ಹಿನ್ನೆಲೆ ರಾಜ್ಯದ ಅನ್ನದಾತರು ರೋಸಿ ಹೋಗಿದ್ದಾರೆ. ರೈತರಿಗೆ ಸರ್ಕಾರವು ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಒಂದು ಹೆಕ್ಟರ್ ಪ್ರದೇಶಕ್ಕೆ 25 ಸಾವಿರ ನೀಡಿದ ಸಿಎಂ
ಕಳೆದ ಮೇ.6ರಂದು ಕೊವಿಡ್-19 ಪರಿಹಾರ ನಿಧಿ ಅಡಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬರೋಬ್ಬರಿ 1600 ಕೋಟಿ ಪ್ಯಾಕೇಜ್ ಘೋಷಿಸಿದರು. ಈ ಪೈಕಿ ರೈತರಿಗೆ ಹೆಚ್ಚಿನ ಅನುದಾನವನ್ನು ಮೀಸಲು ಇರಿಸಲಿಲ್ಲ. ಬದಲಿಗೆ ಪ್ರತಿ ಹೆಕ್ಟರ್ ಪ್ರದೇಶಕ್ಕೆ ಒಂದು ಬಾರಿ 25,000 ರೂಪಾಯಿ ನೀಡುವುದಾಗಿ ತಿಳಿಸಿದರು. ಮೇ.16ರಂದು ಆಶಾ ಕಾರ್ಯಕರ್ತೆಯರು ಮತ್ತು ಮೆಕ್ಕೆಜೋಳ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದರು. ಅದರ ಪ್ರಕಾರ ಮೆಕ್ಕೆಜೋಳ ಬೆಳೆಗಾರರಿಗೆ ಒಂದು ಬಾರಿ 5000 ರೂಪಾಯಿ ಪರಿಹಾ ನೀಡುವುದಾಗಿ ಘೋಷಿಸಿದರು.
ಕರ್ನಾಟಕದಲ್ಲಿ ಈ ವರ್ಷದಲ್ಲಿ ರೈತರು ಬೆಳೆದ ಬೆಳೆಗೆ ಉತ್ತಮ ಇಳುವರಿ ಬಂದಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಬಹಳ ಉತ್ತಮವಾಗಿ ಬೆಳೆಯು ಬೆಳೆದಿದ್ದಾರೆ. ಆದರೆ ಈ ಬಾರಿ ಕರ್ನಾಟಕ ಲಾಕ್ ಡೌನ್ ನಿಂದಾಗಿ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಕೆ.ಎಸ್.ಸುಧೀರ್ ಕುಮಾರ್ ತಿಳಿಸಿದ್ದಾರೆ. ರೇಷ್ಮೆ ಬೆಳೆಗಾರರು ಶೇ.50ರಷ್ಟು ಬೆಲೆಗೆ ರೇಷ್ಮೆ ಮಾರಾಟ ಮಾಡುತ್ತಿದ್ದಾರೆ. ಬೇಳೆ ಹಾಗೂ ಭತ್ತದ ಬೆಲೆಯೂ ಕೂಡಾ ಪಾತಾಳಕ್ಕೆ ಕುಸಿದಿದ್ದು, ರೈತರನ್ನು ಕಂಗೆಡುವಂತೆ ಮಾಡಿದೆ ಎಂದು ಮಾಜಿ ಮುಖಂಡ ಮಾರುತಿ ಮಾನಪಡೆ ದೂಷಿಸಿದ್ದಾರೆ.
ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಕಿಂಚಿತ್ತೂ ಕಡಿಮೆಯಾಗಿಲ್ಲವೇ ಎಂಬ ಅನುಮಾನ ಹುಟ್ಟಿಕೊಳ್ಳುವಂತೆ ಈ ಅಂಕಿ-ಅಂಶಗಳು ಮಾಡುತ್ತಿವೆ. ಕಳೆದ 2019ರ ಏಪ್ರಿಲ್.01 ರಿಂದ 2020ರ ಮಾರ್ಚ್.31ರವರೆಗೂ ಬರೋಬ್ಬರಿ 800 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.












Click it and Unblock the Notifications