ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉದ್ವಿಘ್ನ ಕಲ್ಲಡ್ಕ ಈಗ ಹೇಗಿದೆ? 'ಒನ್ಇಂಡಿಯಾ' ಗ್ರೌಂಡ್ ರಿಪೋರ್ಟ್

|
Google Oneindia Kannada News

ಮಂಗಳೂರು, ಜೂನ್ 29: ಕಳೆದ ಒಂದು ತಿಂಗಳಿನಿಂದ ಕೋಮು ಸಂಘರ್ಷದ ಮೂಲಕ ಸುದ್ದಿಯಾದ ಜಿಲ್ಲೆ ದಕ್ಷಿಣ ಕನ್ನಡ. ಸದ್ಯ ಸಹಜ ಸ್ಥಿತಿಯತ್ತ ಮರಳುತ್ತಿರುವ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಇನ್ನೂ ನಿಷೇಧಾಜ್ಞೆ ಮುಂದುವರೆಸಲಾಗಿದೆ. ಜಿಲ್ಲೆಯಲ್ಲಿ ಯಾಕೆ ನಿಷೇಧಾಜ್ಞೆ ಹೇರಲಾಯಿತು? ಇದರಿಂದ ಯಾರ್ಯಾರಿಗೆ ತೊಂದರೆಯಾಯಿತು? ಸದ್ಯ ಜಿಲ್ಲೆ ಪರಿಸ್ಥಿತಿ ಯಾವ ರೀತಿ ಇದೆ ಎಂಬುವುದನ್ನು 'ಓನ್ ಇಂಡಿಯಾ' ನಿಮ್ಮ ಮುಂದಿಡುತ್ತಿದೆ.

ಕೋಮು ಸಂಘರ್ಷ ಆರಂಭವಾಗಿದ್ದು ಹೀಗೆ

ಅದು ಜೂನ್ 27. ಬಂಟ್ವಾಳದ ಕಲ್ಲಡ್ಕ ಎಂಬಲ್ಲಿ ಮಿಥುನ್ ಎಂಬಾತ ಹಾಶೀರ್ ಎಂಬಾತನಿಗೆ ಚೂರಿಯಿಂದ ಇರಿಯುತ್ತಾನೆ. ತಕ್ಷಣ ಕಲ್ಲಡ್ಕದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುತ್ತದೆ. ಬೆನ್ನಿಗೆ ತಾಲೂಕಿನಾದ್ಯಾಂತ ಜೂನ್ 2ರ ತನಕ ಸಿಆರ್'ಪಿಸಿ ಸೆಕ್ಷನ್ 144 ಜಾರಿಯಾಗುತ್ತದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಪ್ರತಿಭಟನೆಗಳು ಜರುಗುತ್ತವೆ. ಬೂದಿ ಮುಚ್ಚಿದ ಕೆಂಡದಂತಾಗುತ್ತದೆ ಕಲ್ಲಡ್ಕ. ಪರಿಣಾಮ ಪೊಲೀಸ್ ಇಲಾಖೆ ನಿಷೇಧಾಜ್ಞೆಯನ್ನು ಮುಂದೂಡುತ್ತದೆ.

ಮುನ್ನಚ್ಚರಿಕೆ ಕ್ರಮವಾಗಿ ನಿಷೇದಾಜ್ಞೆ ಜಾರಿ ಇರುವಾಗಲೇ ಜೂನ್ 13ರಂದು ಕ್ಷುಲ್ಲಕ ಕಾರಣವೊಂದಕ್ಕೆ ರತ್ನಾಕರ್ ಶೆಟ್ಟಿ ಹಾಗೂ ಖಲೀಲ್ ಮಧ್ಯೆ ವೈಯುಕ್ತಿಕ ವಿಷಯಗಳಿಗೆ ಮಾರಾಮಾರಿ ನಡೆಯುತ್ತದೆ. ಅಲ್ಲಿಗ ತಣ್ಣಗಾಗುತ್ತಿದ್ದ ಕಲ್ಲಡ್ಕವನ್ನು ಈ ಒಂದು ಘಟನೆ ಮತ್ತೆ ಕೋಮು ಸಂಘರ್ಷದತ್ತ ಕೊಂಡೊಯ್ಯುತ್ತದೆ. ಪರಿಣಾಮ ಕಲ್ಲಡ್ಕದಲ್ಲಿರುವ ರಾಮ ಮಂದಿರ ಹಾಗೂ ಮಸೀದಿಗೆ ಕಲ್ಲು ಬೀಳುತ್ತದೆ.

 ಬೆಂಕಿಗೆ ತುಪ್ಪ ಸುರಿದ 'ರೈ' ವೈರಲ್ ವಿಡಿಯೋ

ಬೆಂಕಿಗೆ ತುಪ್ಪ ಸುರಿದ 'ರೈ' ವೈರಲ್ ವಿಡಿಯೋ

ಇಷ್ಟೆಲ್ಲಾ ಮಾರಾಮಾರಿ ನಡುವೆ ಜೂನ್ 18ರಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಬಿ.ಸಿ ರೋಡ್‍ನ ಐಬಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಜೊತೆಗೆ ಆರ್‍ಎಸ್‍ಎಸ್ ಪ್ರಮುಖ ಕಲ್ಲಡ್ಕ ಪ್ರಭಾಕರ್ ಭಟ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು.

ಈ ವಿಡಿಯೋ ಮಾಧ್ಯಮಗಳಿಗೆ ಸಿಕ್ಕಿ ರಾಜ್ಯಾದ್ಯಾಂತ ವೈರಲ್ ಆಯಿತು. ಜೊತೆಗೆ ಕಲ್ಲಡ್ಕದಲ್ಲಿ ನಡೆಯುತ್ತಿದ್ದ ಗಲಾಟೆಗೆ ತುಪ್ಪ ಸುರಿದಂತಾಯಿತು. ಇದರಿಂದ ಕೆಂಡಾಮಂಡಲರಾದ ಹಿಂದೂ ಸಂಘಟನೆಗಳು ರೈ ವಿರುದ್ದ ಜಿಲ್ಲೆಯಾದ್ಯಾಂತ ಉಗ್ರ ಪ್ರತಿಭಟನೆ ನಡೆಸಿದರು. ಈವರೆಗೆ ಕೇವಲ ಕಲ್ಲಡ್ಕದಲ್ಲಿ ನಡೆಯುತ್ತಿದ್ದ ಗಲಾಟೆ ತಾಲೂಕಿನಾದ್ಯಾಂತ ಹರಡಿತು.

 ಅಶ್ರಫ್ ಕಲಾಯಿ ಹತ್ಯೆ

ಅಶ್ರಫ್ ಕಲಾಯಿ ಹತ್ಯೆ

ಜೂನ್ 21ರಂದು ಬೆಳಗ್ಗೆ 11.30ರ ಸುಮಾರಿಗೆ ತಾಲೂಕಿನ ಬೆಂಜನಪದವು ಎಂಬಲ್ಲಿ ರಿಕ್ಷಾದಲ್ಲಿ ಬಾಡಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಎಸ್‍ಡಿಪಿಐ ಮುಖಂಡ ಮಹಮ್ಮದ್ ಅಶ್ರಫ್ ಕಲಾಯಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ನಡೆಸುತ್ತಾರೆ.

ಅಣ್ಣಾಮಲೈ ಆಗಮನ

ಅಣ್ಣಾಮಲೈ ಆಗಮನ

ಈ ಮಧ್ಯೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಬೊರಸೆ ಬೆಂಗಳೂರಿಗೆ ವರ್ಗಾವಣೆಯಾಗಿ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ ನೂತನ ಎಸ್ಪಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿಯನ್ನು ಒತ್ತಾಯದ ರಜೆಯ ಮೇಲೆ ಕಳುಹಿಸಲಾಗುತ್ತದೆ. ಅದಾಗಲೇ ಕೋಮು ಸಂಘರ್ಷ ಭುಗಿಲೆದ್ದು, ಪೊಲೀಸರ ಕೈಯಿಂದ ನಿಯಂತ್ರಣ ತಪ್ಪಿಹೋಗುವ ಹೊತ್ತಿಗೆ ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈಗೆ ಭದ್ರತಾ ಉಸ್ತುವಾರಿ ವಹಿಸಲಾಗುತ್ತದೆ.

ಇದೇ ವೇಳೆ ಜೂನ್ 25ರಂದು ಬೆಳ್ತಂಗಡಿ ತಾಲೂಕಿನಲ್ಲಿ ಒಂದೇ ಕೋಮಿಗೆ ಸೇರಿದ ಇಬ್ಬರು ಯುವಕರನ್ನು ಕಾಡಿಗೆ ಕರೆದೊಯ್ದು ಹಲ್ಲೆ ನಡೆಸುತ್ತಾರೆ. ಇದು ಇಡೀ ಜಿಲ್ಲೆಯನ್ನು ಬೆಚ್ಚಿ ಬೀಳಿಸುತ್ತದೆ.

ಇದು ಇಲ್ಲಿಯವರೆಗೆ ನಡೆದ ಘಟನೆಗಳು. ಇಲ್ಲಿಂದ ಮುಂದೆ ಜನರಿಗೆ ಏನಾಯ್ತು? ಜನ ಏನೇನು ಪಡಿಪಾಟಲುಗಳನ್ನು ಅನುಭವಿಸಿದರು? ಅವರ ಸಮಸ್ಯೆ, ನಿತ್ಯದ ದಿನಚರಿಗಳಲ್ಲಾದ ಬದಲಾವಣೆಯದ್ದೇ ಇನ್ನೊಂದು ಕಥೆ.

 ಯಾರಿಗೆ ನಷ್ಟ ಯಾರಿಗೆ ಲಾಭ

ಯಾರಿಗೆ ನಷ್ಟ ಯಾರಿಗೆ ಲಾಭ

ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ನಗರ ಹೊರತುಪಡಿಸಿ ನಾಲ್ಕು ತಾಲೂಕುಗಳಲ್ಲಿ ಜೂನ್ 30ವರೆಗೆ ನಿಷೇಧಾಜ್ಞೆ ವಿಸ್ತರಿಸಲಾಗಿದೆ. ಇಷ್ಟೆಲ್ಲಾ ಪ್ರಕರಣ ನಡೆದ ನಂತರ ಈಗ ಇದರಿಂದ ಯಾರಿಗೆ ನಷ್ಟ ಯಾರಿಗೆ ಲಾಭ ಎಂದು ಲೆಕ್ಕ ಹಾಕುತ್ತಿದ್ದಾರೆ.

ಇದರಿಂದ ಜಿಲ್ಲೆಯ ವ್ಯಾಪಾರಿಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ತಿಂಗಳುಗಳವರೆಗೆ ನಿಷೇಧಾಜ್ಞೆ ಜಾರಿಯಲ್ಲಿದುದರಿಂದ ಜನರು ಮನೆ ಬಿಟ್ಟು ಹೊರಬರುತ್ತಿಲ್ಲ. ಜೊತೆಗೆ ಕೆಲವೇ ಗಂಟೆಗಳ ಕಾಲ ಅಂಗಡಿ ಮುಗಟ್ಟು ತೆರೆಯಲು ಅವಕಾಶವಿರುವುದರಿಂದ ಲಾಭ ಬಿಡಿ ವ್ಯಾಪಾರವೇ ಆಗುತ್ತಿಲ್ಲ ಎನ್ನುತ್ತಾರೆ ವ್ಯಾಪಾರಿಗಳು.

ಹೋಟೆಲ್ ವ್ಯಾಪಾರವೇ ಇಲ್ಲ

ಹೋಟೆಲ್ ವ್ಯಾಪಾರವೇ ಇಲ್ಲ

ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ಹೊಟೇಲ್ ಉದ್ಯಮ ಇಲ್ಲಿ ಜಾಸ್ತಿ. ಆದರೆ, ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಯಾರೂ ಈ ದಾರಿಯಾಗಿ ತೆರಳುತ್ತಿಲ್ಲ. ಒಂದು ವೇಳೆ ತೆರಳಿದರೂ ಕಲ್ಲಡ್ಕದಲ್ಲಿ ಸದ್ಯ 4 ಜನಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಈ ಮೊದಲು ಮಧ್ಯರಾತ್ರಿವರೆಗೂ ತೆರೆದಿದ್ದ ಹೋಟೆಲ್‍ಗಳನ್ನು ಪೊಲೀಸರು ಕತ್ತಲಾಗುತ್ತಿದ್ದಂತೆ ಮುಚ್ಚಿಸುವುದರಿಂದ ವ್ಯಾಪಾರ ಸಂಪೂರ್ಣ ಕುಂಠಿತವಾಗಿದೆ.

ವರ್ಷಕ್ಕೊಮ್ಮೆ ಜಗಳ ಗ್ಯಾರಂಟಿ

ವರ್ಷಕ್ಕೊಮ್ಮೆ ಜಗಳ ಗ್ಯಾರಂಟಿ

"ನಾನು ಇಲ್ಲಿ 15 ವರ್ಷದಿಂದ ವ್ಯಾಪಾರ ನಡೆಸುತ್ತಿದ್ದೇನೆ. ವರ್ಷದಲ್ಲಿ ಒಂದು ಬಾರಿಯಾದರೂ ಇಲ್ಲಿ ಗಲಾಟೆ ನಡೆಯುತ್ತದೆ. ಈ ವೇಳೆ ನಮ್ಮ ಅಂಗಡಿ ಮುಂಗಟ್ಟು ಸೇರಿ ನಾವು ನಿಲ್ಲಿಸಿದ ವಾಹನಗಳಿಗೆ ಮೊದಲು ಕಲ್ಲು ಬೀಳುತ್ತದೆ. ಜೊತೆಗೆ ಪೊಲೀಸರು ಬಂದು ನಮ್ಮ ಅಂಗಡಿ ಮುಚ್ಚಿಸುತ್ತಾರೆ. ಮತ್ತು ನಮ್ಮನ್ನು ವಿಚಾರಣೆಗೆ ಕರೆಯುತ್ತಾರೆ. ನಾವು ಯಾವುದೇ ತಪ್ಪು ಮಾಡದಿದ್ದರೂ ನಮಗೇ ಏಕೆ ಈ ಶಿಕ್ಷೆ" ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಸ್ಥಳೀಯ ವ್ಯಾಪಾರಿಯೊಬ್ಬರು. ಘಟನೆ ಸೂಕ್ಷ್ಮವಾಗಿದ್ದರಿಂದ ಅವರು ತಮ್ಮ ಹೆಸರನ್ನು ಗೌಪ್ಯವಾಗಿಡಲು ಕೇಳಿಕೊಂಡರು.

 ಕ್ಷೀಣಿಸಿದ ಪ್ರವಾಸಿಗರು

ಕ್ಷೀಣಿಸಿದ ಪ್ರವಾಸಿಗರು

ಬಂಟ್ವಾಳ ತಾಲೂಕು ದೇವಾಲಯಗಳ ಊರು. ಇಲ್ಲಿ ಪಣೋಲಿಬೈಲು, ನರಹರಿ ಪರ್ವತ, ರಾಮ ಮಂದಿರ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ ಹೀಗೆ ಹತ್ತು ಹಲವು ಕಾರಣಿಕದ ದೇವಸ್ಥಾನಗಳಿವೆ.ಇಲ್ಲಿಗೆ ಪ್ರತಿನಿತ್ಯ ಜಿಲ್ಲೆ ಮತ್ತು ರಾಜ್ಯದಿಂದ ಸಾವಿರಾರು ಯಾತ್ರಿಕರು ಭೇಟಿ ನೀಡುತ್ತಾರೆ. ಸದ್ಯ ಗಲಾಟೆ ಹಿನ್ನೆಲೆಯಲ್ಲಿ ಇತ್ತ ಕಡೆ ಯಾರೂ ತಲೆ ಹಾಕದೆ ಪುಣ್ಯಕ್ಷೇತ್ರಗಳು ಭಕ್ತರಿಲ್ಲದೆ ಬಿಕೋ ಅನ್ನುತ್ತಿವೆ.

ಜತೆಗೆ ದೇಶದಲ್ಲಿ ಶೀಘ್ರವಾಗಿ ಬೇಳೆಯುತ್ತಿರುವ ನಗರಗಳಲ್ಲಿ ಮಂಗಳೂರು ನಗರವೂ ಇದೆ. ಇಂತಹ ಕೋಮುಸಂಘರ್ಷದಿಂದ ಜಿಲ್ಲೆಗೆ ಕೈಗಾರಿಕಾ ಕಂಪೆನಿಗಳು ಬರಲು ಹೆದರುತ್ತಿವೆ. ದೇಶದ ಮೊದಲ ಸ್ಮಾರ್ಟ್ ನಗರ ಎಂಬ ಕಿರೀಟ ಮಂಗಳೂರಿಗೆ ಇದ್ದರೂ ಇಲ್ಲಿಗೆ ಕಂಪೆನಿಗಳು ಮಾತ್ರ ಬರುವ ಮನಸ್ಸು ಮಾಡುತ್ತಿಲ್ಲ.

 ಮನೆಯಿಂದ ಹೊರಬರಲು ಹೆದರುತ್ತಿರುವ ಸಾಮಾನ್ಯರು

ಮನೆಯಿಂದ ಹೊರಬರಲು ಹೆದರುತ್ತಿರುವ ಸಾಮಾನ್ಯರು

ತಾಲೂಕಿನಲ್ಲಿ ಪ್ರಕರಣಗಳು ಮತ್ತೆ ಮತ್ತೆ ಮರುಕಳಿಸುತ್ತಿರುವುದರಿಂದ ಸಾಮಾನ್ಯರು ಮನೆಯಿಂದ ಹೊರಬರಲು ಹೆದರುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳ ಕಷ್ಟ ಹೇಳತೀರದು. ಬೆಳಗ್ಗೆ ಮನೆಯಿಂದ ಹೊರ ಹೋದ ವ್ಯಕ್ತಿ ಮತ್ತೆ ಮನೆಗೆ ಬರುತ್ತಾನೆ ಎಂಬ ನಂಬಿಕೆ ಸಾಮಾನ್ಯ ಜನರಲ್ಲಿ ಇಲ್ಲದಾಗಿದೆ.

ದೂರದ ಮಂಗಳೂರಿಗೆ ತೆರಳುವ ಕೆಲಸಗಾರರು, ಶಿಕ್ಷಣ ಪಡೆಯುವ ಮಕ್ಕಳು ತೀವ್ರ ತರವಾದ ಕಷ್ಟ ಅನುಭವಿಸುತ್ತಿದ್ದಾರೆ. ಕೆಲವು ಶಾಲೆಗಳಲ್ಲಿ ಕಳೆದ ಒಂದು ತಿಂಗಳಿನಿಂದ ಮಕ್ಕಳು ಬರುತ್ತಿಲ್ಲ ಎಂದು ಶಿಕ್ಷಕರು ದೂರುತ್ತಿದ್ದಾರೆ.

ಕೆಲವೇ ಸಮಯ ಅಂಗಡಿಗಳು ತೆರೆಯುವುದರಿಂದ ದಿನನಿತ್ಯದ ಅಗತ್ಯ ಸಾಮಾಗ್ರಿಗಳಿಗೆ ಕೊರತೆಯಾಗಿದೆ. ಸಕಾರಣಕ್ಕಾಗಿ ರಾತ್ರಿ ವೇಳೆ ತಿರುಗಾಡಿದರೆ ಪೊಲೀಸರ ಕಾಟ. ಹೀಗೆ ಹತ್ತು ಹಲವು ಕಷ್ಟ-ನಷ್ಟವನ್ನು ಸಾಮಾನ್ಯರು ಅನುಭವಿಸುತ್ತಿದ್ದರೆ ರಾಜಕೀಯ ನಾಯಕರು, ಸಂಘಟನೆಗಳು ಇದರ ಲಾಭ ಪಡೆಯಲು ಹೊಂಚುಹಾಕುತ್ತಿವೆ.

ದಕ್ಷ ಅಧಿಕಾರಿಗಳನ್ನು ಜಿಲ್ಲೆಗೆ ತನ್ನಿ

ದಕ್ಷ ಅಧಿಕಾರಿಗಳನ್ನು ಜಿಲ್ಲೆಗೆ ತನ್ನಿ

"ನಾನು ಒಂದು ತಿಂಗಳಿನಿಂದ ಮನೆಯಿಂದ ಹೊರ ಹೋಗಲು ಹೆದರುತ್ತಿದ್ದೇನೆ. ನನ್ನ ಮಕ್ಕಳೂ ಶಾಲೆಗೆ ಹೋಗುತ್ತಿಲ್ಲ. ದಿನನಿತ್ಯದ ಸಾಮಾಗ್ರಿಗಳಿಗೆ ಪರದಾಡುವ ಸ್ಥಿತಿ ಎದುರಾಗಿದೆ. ಸಂಬಂಧಿಕರ ಮದುವೆ, ಮುಂಜಿ ನಮಗೆ ದೂರದ ಮಾತಾಗಿದೆ. ಯಾಕೆ ಇದನ್ನು ಪೊಲೀಸರಿಂದ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇನ್ನಾದರೂ ದಕ್ಷ ಅಧಿಕಾರಿಗಳನ್ನು ಜಿಲ್ಲೆಗೆ ತನ್ನಿ ಎಂದು ಆಗ್ರಹಿಸುತ್ತೇವೆ". ಎನ್ನುತ್ತಾರೆ ಕಲ್ಲಡ್ಕ ನಿವಾಸಿ ಅಭಿಲಾಷ್.

ಪೊಲೀಸರ ಪಾಡು ದೇವರಿಗೇ ಪ್ರೀತಿ

ಪೊಲೀಸರ ಪಾಡು ದೇವರಿಗೇ ಪ್ರೀತಿ

ದೆಲ್ಲದರಾಚೆ ಕಳೆದ ಒಂದು ತಿಂಗಳಿನಿಂದ ಆಹಾರ, ನಿದ್ದೆ ಬಿಟ್ಟು ಪಹರೆ ಕಾಯುತ್ತಿರುವ ಪೊಲೀಸರಿಗೆ ಸೆಲ್ಯೂಟು ಹೊಡೆಯಲೇಬೇಕು. ರಾತ್ರಿ ಹಗಲೆನ್ನದೆ ಪೊಲೀಸ್ ಬಸ್‍ಗಳಲ್ಲಿ ವ್ಯಾಸ್ತವ್ಯ ಮಾಡುತ್ತಿದ್ದಾರೆ. ಅವರೂ ಮನುಷ್ಯರೇ; ತಿಂಗಳಾಚೆಯಿಂದ ಕುಟುಂಬಸ್ಥರ ಮುಖ ನೋಡಿಲ್ಲ. ಜತೆಗೆ ಊಟ, ವಸತಿ, ನಿದ್ದೆ ಸರಿಯಾಗಿಲ್ಲ. ಎಲ್ಲಿ ಯಾವ ಹೊತ್ತಿಗೆ ಏನು ನಡೆಯುತ್ತದೆ ಎಂಬುವುದನ್ನು ಊಹಿಸಲಸಾಧ್ಯ.

ಕೆಲವು ಒಳಪ್ರದೇಶಗಳಲ್ಲಿ ಭದ್ರತೆಗೆ ಒಬ್ಬರನ್ನೇ ನೇಮಿಸಿರುತ್ತಾರೆ. ಅವರ ಮುಖದಲ್ಲೂ ಭಯದ ವಾತಾವರಣ ಎದ್ದುಕಾಣುತ್ತಿತ್ತು. ಇದು ಕೆಳಸ್ತರದ ಪೊಲೀಸರ ಕಥೆಯಾದರೆ ಮೇಲಾಧಿಕಾರಿಗಳಿಗೆ ಮೇಲಿಂದ ಮೇಲೆ ಒತ್ತಡಗಳು ಜಾಸ್ತಿಯಾಗುತ್ತಿದೆ. ಜೊತೆಗೆ ಯಾವ ಪ್ರದೇಶದಲ್ಲಿ ಏನಾಗುತ್ತದೆ ಎಂಬುವುದನ್ನು ಊಹಿಸಲಾಸಾಧ್ಯ. ಒಂದು ಕಡೆ ಗಲಾಟೆ ನಿಯಂತ್ರಿಸಿದರೆ ಮತ್ತೊಂದೆಡೆ ಪರಿಸ್ಥಿತಿ ಭುಗಿಲೇಳುತ್ತದೆ.

ಒಂದು ತಿಂಗಳಿನಿಂದ ಕುಟುಂಬದವರ ಮುಖ ನೋಡಿಲ್ಲ

ಒಂದು ತಿಂಗಳಿನಿಂದ ಕುಟುಂಬದವರ ಮುಖ ನೋಡಿಲ್ಲ

"ನಾನು ಸತತ ಒಂದು ತಿಂಗಳಿನಿಂದ ಭದ್ರತೆಗೆ ನಿಯೋಜನೆಗೊಂಡಿದ್ದೇನೆ. ಒಂದು ತಿಂಗಳಿನಿಂದ ಹೆಂಡತಿ, ಮಕ್ಕಳ ಮುಖ ನೋಡಿಲ್ಲ. ಜೊತೆಗೆ ಸರಿಯಾದ ಊಟ, ವಸತಿ, ನಿದ್ರೆ ಸರಿ ಇಲ್ಲದಿರುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ಬಳಲಿದ್ದೇನೆ. ಅವರೆಲ್ಲರೂ ಗಲಾಟೆ ಮಾಡುತ್ತಾರೆ ನಮ್ಮ ಪರಿಸ್ಥಿತಿ ಕೇಳುವವರಾರು" ಎಂದು ಪ್ರಶ್ನಿಸುತ್ತಾರೆ ಭದ್ರತೆಗೆ ನಿಯೋಜನೆಗೊಂಡ ಪೇದೆಯೊಬ್ಬರು.

English summary
Famous Kalladka tea is now famous for Lati. How is the situation in Kalladka? What kind of problems are people suffering from? Here is a special report from Oneindia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X