ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಡವೆ ಮಾರಿ ಶಾಲೆಗೆ ಅಂತರಾಷ್ಟ್ರೀಯ ಟಚ್ ನೀಡಿದ ಶಿಕ್ಷಕಿ

ತನ್ನ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ದರ್ಜೆಯ ಶಿಕ್ಷಣ ನೀಡಬೇಕು ಎಂಬ ಮಹದಾಸೆಯಿಂದ ವಿಲ್ಲುಪುರಂನಲ್ಲಿ ಸರಕಾರಿ ಶಾಲೆಯ ಶಿಕ್ಷಕಿಯಾಗಿರುವ ಅನ್ನಪೂರ್ಣ ತನ್ನ ಒಡವೆಯನ್ನೇ ಮಾರಿದ್ದಾರೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಚೆನ್ನೈ, ಏಪ್ರಿಲ್ 24: ಸರಕಾರಿ ಶಾಲೆಗಳು ಸವಲತ್ತುಗಳಿಂದ ಸೊರಗುತ್ತಿರುತ್ತವೆ. ಇಂಥಹ ಶಾಲೆಗಳಲ್ಲೂ ಸರಕಾರದ ಹಣ ವಂಚನೆ ಮಾಡಿದ ಶಿಕ್ಷಕರ ವರದಿಗಳನ್ನು ನೋಡುತ್ತಿರುತ್ತೇವೆ. ಆದರೆ ತಮಿಳುನಾಡಿನ ಶಿಕ್ಷಕಿ ಅನ್ನಪೂರ್ಣ ಮೋಹನ್ ಹಾಗಲ್ಲ.

ತನ್ನ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ದರ್ಜೆಯ ಶಿಕ್ಷಣ ನೀಡಬೇಕು ಎಂಬ ಮಹದಾಸೆಯಿಂದ ಅನ್ನಪೂರ್ಣ ತನ್ನ ಒಡವೆಯನ್ನೇ ಮಾರಿದ್ದಾರೆ. ವಿಲ್ಲುಪುರಂನಲ್ಲಿ ಸರಕಾರಿ ಶಾಲೆಯ ಶಿಕ್ಷಕಿಯಾಗಿರುವ ಈಕೆ ತನ್ನ ಆಭರಣ ಮಾರಿ ಆ ಹಣದಲ್ಲಿ ಶಾಲೆಯ ಕೊಠಡಿ ನವೀಕರಣದ ಜತೆಗೆ ಶಿಕ್ಷಣಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಿದ್ದಾರೆ.[ಜಯಲಲಿತಾಗೆ ಸೇರಿದ ಟೀ ಎಸ್ಟೇಟ್ ನಲ್ಲಿ ಕೊಲೆ!]

Meet TN teacher, who sold her jewellery, to provide international standard education to kids

ಇದೀಗ ಇಲ್ಲಿನ ಮೂರನೇ ತರಗತಿ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ದರ್ಜೆಯ ಇಂಟೆರಾಕ್ಟಿವ್ ಸ್ಮಾರ್ಟ್ ಬೋರ್ಡ್ ಗಳ ಮೂಲಕ ಪಾಠ ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳಿಗಾಗಿ ಇಂಗ್ಲೀಷ್ ಪುಸ್ತಕಗಳನ್ನು ಪೀಠೋಪಕರಣಗಳನ್ನು ಈಕೆ ಖರೀದಿಸಿದ್ದಾರೆ.

ಅನ್ನಪೂರ್ಣ ಮೋಹನ್ ಅವರ ಈ ಕೆಲಸ ವಿದ್ಯಾರ್ಥಿಗಳು ಮತ್ತು ಪೋಷಕರ ಮನ ಗೆದ್ದಿದ್ದು ಮಾತ್ರವಲ್ಲ ಆಕೆಗೆ ಸಾಮಾಜಿಕ ಜಾಲತಾಣದಲ್ಲಿಯೂ ಹಲವರು ಪ್ರಶಂಸೆಯ ಸುರಿಮಳೆ ಗೈದಿದ್ದಾರೆ.

ಶಾಲೆಗೆ ಬೇಕಾದ ವಸ್ತುಗಳನ್ನು ಮಾತ್ರ ಈಕೆ ತೆಗೆದುಕೊಟ್ಟಿಲ್ಲ. ವಿದ್ಯಾರ್ಥಿಗಳು ಉತ್ತಮವಾಗಿ ಇಂಗ್ಲೀಷ್ ಭಾಷೆ ಮಾತಾಡುವಂತಾಗಬೇಕು ಎಂದು ದಿನ ನಿತ್ಯ ಇಂಗ್ಲೀಷ್ ಸ್ಪೀಕಿಂಗ್ ತರಗತಿಗಳನ್ನು ನಡೆಸುತ್ತಿದ್ದಾರೆ.

ಸ್ಪೀಕಿಂಗ್ ಇಂಗ್ಲೀಷ್ ತರಗತಿಗಳನ್ನು ತೆಗೆದುಕೊಳ್ಳುವ ಮುನ್ನ ಇಲ್ಲಿನ ವಿದ್ಯಾರ್ಥಿಗಳು ಖಾಸಗಿ ಶಾಲೆಯ ಮಕ್ಕಳಿಂದ ಇಂಗ್ಲೀಷ್ ಭಾಷೆಯ ಕಲಿಕೆಯಲ್ಲಿ ಹಿಂದೆ ಉಳಿದಿದ್ದರು. ಇದೀಗ ಅವರ ಜತೆಗೇ ಸ್ಪರ್ಧೆಗೆ ಇಳಿದಿದ್ದಾರೆ.

ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಇಂಗ್ಲೀಷ್ ಭಾಷೆ ಬರುವುದಿಲ್ಲ ಎಂಬ ಒಂದೇ ಕಾರಣಕ್ಕೆ ಹಲವರು ಉದ್ಯೋಗದಿಂದ ವಂಚಿತರಾಗುತ್ತಾರೆ. ಇದನ್ನು ಮನಗಂಡು ಇಂಗ್ಲೀಷ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ ಎನ್ನುತ್ತಾರೆ ಅನ್ನಪೂರ್ಣ.

"ನನ್ನ ಇಂಗ್ಲೀಷ್ ತರಗತಿಗಳಲ್ಲಿ ಉತ್ತಮ ವಾತಾವರಣ ನಿರ್ಮಿಸಲು ನಾನು ಪ್ರಯತ್ನಪಟ್ಟಿದ್ದೇನೆ. ನನ್ನ ವಿದ್ಯಾರ್ಥಿಗಳಿಗೆ ತರಗತಿಯ ಆರಂಭದಿಂದಲೂ ಇಂಗ್ಲೀಷ್ ಕಲಿಸುತ್ತಾ ಬಂದಿದ್ದೇನೆ. ಆರಂಭದಲ್ಲಿ ಇಂಗ್ಲೀಷ್ ವಿದ್ಯಾರ್ಥಿಗಳಿಗೆ ಅರ್ಥವಾಗುತ್ತಿರಲಿಲ್ಲ. ಆದರೆ ಈಗ ನಿಧಾನಕ್ಕೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ," ಎನ್ನುತ್ತಾರೆ ಅನ್ನಪೂರ್ಣ. [ಶಾಲೆಗಾಗಿ ಚಿನ್ನದ ಬಳೆ ದಾನ ಮಾಡಿದ ಏಳನೇ ತರಗತಿ ಬಾಲಕಿ]

ತನ್ನ ತರಗತಿಗಳು ಉತ್ಸಾಹ ಭರಿತವಾಗಿರಬೇಕು ಎಂಬ ಕಾರಣಕ್ಕೆ ಆಕೆ ಪ್ರತೀ ಪಠ್ಯವನ್ನೂ ವಿದ್ಯಾರ್ಥಿಗಳಿಂದ ಸ್ಕಿಟ್ ರೂಪದಲ್ಲಿ ಹೊರ ತರುತ್ತಾರೆ. ಈ ಸ್ಕಿಟ್ ಗಳನ್ನು ವಿಡಿಯೋ ಮಾಡಿ ಫೇಸ್ಬುಕ್ ಗೆ ಅಪ್ಲೋಡ್ ಮಾಡಿದ್ದಾರೆ. ಇದಕ್ಕೆ ಅವರ ಗೆಳೆಯರೆಲ್ಲಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

"ನಾನು ಸ್ಕಿಟ್ ಗಳನ್ನು ವಿಡಿಯೋ ಮಾಡಿ ಫೇಸ್ಬುಕ್ ಗೆ ಹಾಕಿದ್ದೆ. ಇದನ್ನು ನೋಡಿ ವಿದ್ಯಾರ್ಥಿಗೆ ಯಾರೋ ಒಬ್ಬರು 10 ರೂಪಾಯಿ ಮನಿ ಯಾರ್ಡರ್ ಕಳುಹಿಸಿದರು. ಇದನ್ನು ನೋಡಿ ವಿದ್ಯಾರ್ಥಿ ಪುಳಕಿತನಾದ. ಮುಂದಿನ ಸ್ಕಿಟ್ ಗಳಲ್ಲಿ ಆತನ ಮತ್ತಷ್ಟು ಉತ್ಸಾಹದಿಂದ ನಟಿಸಲು ಆರಂಭಿಸಿದ," ಎನ್ನುತ್ತಾರೆ ಅನ್ನಪೂರ್ಣ.

ಹೀಗೆ ಅನ್ನಪೂರ್ಣ ತನ್ನ ಮಕ್ಕಳಿಗೆ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದು ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ. ಆಕೆಯ ನಡೆ ಉಳಿದವರಿಗೂ ಪ್ರೇರಣೆಯಾಗುವ ಜತೆಗೆ ಸರಕಾರ ಇಂಥಹವರನ್ನು ಗುರುತಿಸಬೇಕಾಗಿದೆ. ಆಗ ಹೆಚ್ಚು ಹೆಚ್ಚು ಶಿಕ್ಷಕರು ಇಂಥಹ ಕೆಲಸದಲ್ಲಿ ತೊಡಗಿಸಿಕೊಳ್ಳಲ್ಲಿದ್ದಾರೆ.

ಏನೇ ಆಗಲಿ ನಮ್ಮ ಕಡೆಯಿಂದ ಮಾದರಿ ಶಿಕ್ಷಕಿ ಅನ್ನಪೂರ್ಣ ಮೋಹನ್ ಅವರಿಗೊಂದು ಸಲಾಂ.

English summary
Meet Annapurna Mohan, a government school teacher from TN's Villupuram, who sold her jewellery, to raise funds to give her classroom an international look. Now, the students of class 3 in the school have access to facilities like an interactive smart board, piles of English books and furniture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X