ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ವಿಜ್ಞಾನ - ತಂತ್ರಜ್ಞಾನ ಸಮ್ಮೇಳನದಲ್ಲಿ ಏನಿತ್ತು?

By Mahesh
|
Google Oneindia Kannada News

ವಿಜ್ಞಾನ ಸಾಹಿತ್ಯವನ್ನು ಸರಿಯಾದ ರೀತಿಯಲ್ಲಿ ಬೆಳೆಸುವ ಆಶಯದೊಂದಿಗೆ ಆಯೋಜನೆಗೊಂಡಿದ್ದ ಕನ್ನಡ ವಿಜ್ಞಾನ - ತಂತ್ರಜ್ಞಾನ ಬರಹಗಾರರ ಸಮ್ಮೇಳನ ಮತ್ತು ಕಾರ್ಯಾಗಾರ ಯಶಸ್ವಿಯಾಗಿದೆ. ಈ ಬಗ್ಗೆ ಪ್ರಶಾಂತವನ ಬ್ಲಾಗಿನ 'ಪ್ರಶಸ್ತಿ' ಅವರ ಅನಿಸಿಕೆ ಇಲ್ಲಿದೆ..

ಎಂಟರಿಂದ ಒಂಭತ್ತರವರೆಗಿನ ನೋಂದಣಿ ಮತ್ತು ಉಪಾಹಾರದ ಸಮಯದಲ್ಲಿ ಉಡುಪಿ, ವಿಜಾಪುರ, ಹೆಚ್.ಡಿ ಕೋಟೆಯಲ್ಲಿ "ಗಣಿತದ ಕಟ್ಟೆ" ಅಂತ ಕಮ್ಯುನಿಟಿ ರೇಡಿಯೋದಲ್ಲಿನ ಕಾರ್ಯಕ್ರಮ ನಡೆಸಿಕೊಡುತ್ತಿರುವ ತಂಡದವರು, ಬೆಂಗಳೂರಿನ ಹಲವೆಡೆಗಳ ಬರಹಗಾರದು ಇಲ್ಲಿ ನೆರೆದಿದ್ದರು.

ಭಾಷಣದ ವಿಷಯ "ವಿಜ್ಞಾನ ಸಂವಹನ:ಏನು ? ಏಕೆ ?ಹೇಗೆ?"

ವೈಜ್ಞಾನಿಕ ಅರಿವನ್ನು ಮೂಡಿಸುವುದು ನಮ್ಮೆಲ್ಲರ ಮೂಲಭೂತ ಕರ್ತವ್ಯಗಳಲ್ಲೊಂದು ಎಂಬ ಸಂವಿಧಾನದ ಉಲ್ಲೇಖದೊಂದಿಗೆ ತಮ್ಮ ಭಾಷಣವನ್ನು ಪ್ರಾರಂಭಿಸಿದ ಶರ್ಮರವರು ಕನ್ನಡದಲ್ಲೇ ಯಾಕೆ ಬರೆಯಬೇಕು ಎಂಬುದರ ಬಗ್ಗೆ ಹಲವು ಅಂಕಿ ಅಂಶಗಳನ್ನು ತೆರೆದಿಟ್ಟರು.

ಉದಾಹರಣೆಗೆ: ಸುಮಾರು 6 ಲಕ್ಷ ವಿದ್ಯಾರ್ಥಿಗಳು ಈ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದರು. ಅವರಲ್ಲಿ ಸುಮಾರು ಎರಡೂವರೆ ಲಕ್ಷ ಜನಕ್ಕಷ್ಟೇ ಮುಂದೆ ವಿಜ್ಞಾನ ವಿಷಯದಲ್ಲಿ ಪಿಯುಸಿಗೆ ಸೇರಲು, ಇಂಗ್ಲೀಷಿನಲ್ಲಿ ಮುಂದಿನ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತೆ. ಉಳಿದವರ ಕತೆ ? ಪ್ರತೀವರ್ಷ ಸೃಷ್ಟಿಯಾಗುತ್ತಿರುವ ಆರು ಲಕ್ಷಕನ್ನಡ ಓದುಗರು ಮತ್ತು ಎಸ್ಸೆಸ್ಸೆಲ್ಸಿಯವರೆಗೂ ಬಾರದಂತಹ ಓದುಗರನ್ನ ತಲುಪಲು ಕನ್ನಡದಲ್ಲೇ ಬರೆಯಬೇಕೆಂದು ಪ್ರಸ್ತಾಪಿಸಿದರು.

ನಂತರ ಜನಪ್ರಿಯ ವಿಜ್ಞಾನದ ಬಗ್ಗೆ ಬರೆಯುವಾಗ ಮುಖ್ಯವಾಗುವ ಅಂಶಗಳಾದ ಆಸಕ್ತಿ, ಆಕರ, ಮಾಧ್ಯಮದ ಅರಿವು ಮತ್ತು ಪರಿಕರ ಎಂಬ ಅಂಶಗಳ ಬಗ್ಗೆ ತಿಳಿಸಿದರು. ಸಂಶೋಧನಾ ಪತ್ರಿಕೆಗಳು, ಇ ಪತ್ರಿಕೆಗಳು, peer reviewed journals, ಮುಕ್ತ ಆಕರಗಳು, ಇ ಪ್ರಿಂಟ್ ಭಂಡಾರಗಳು, ಆನ್ ಲೈನ್ ಗ್ರಂಥಾಲಯ, ವರ್ಚುಯಲ್ ಪತ್ರಿಕೆಗಳ ಬಗ್ಗೆ ತಿಳಿಸಿದರು.

ಸೈನ್ಸ್ ಡೈರೆಕ್ಟ್, ವೈಲಿ, ಸ್ಪ್ರಿಂಗರ್, ಎಸಿಎಸ್, ಎಐಇಇಇ ಮುಂತಾದ ಡೈರೆಕ್ಟ್ರಿಗಳು, ಯುರೇಕ ಅಲರ್ಟ್, ಆಲ್ಪ ಗೆಲಿಲಿಯೋನಂತಹ ಪತ್ರಿಕಾ ಪ್ರಕಟಣೆಗಳ ಮಾಹಿತಿ ನೀಡೋ ಸೇವೆಗಳು, ಗುಬ್ಬಿ ಲ್ಯಾಬ್ಸಿನಂತಹ ತಾಣಗಳ ಬಗೆಗಿನ ಮಾಹಿತಿ ನೆರೆದ ಬರಹಗಾರರಿಗೆ ಮಾಹಿತಿಯ ಹಲವು ಆಕರಗಳೆಡೆಗೆ ದಿಕ್ಸೂಚಿಯಾಗಲು ಅಣಿಯಾಗಿತ್ತು.

ಸೈನ್ಸ್ ಡೈರಿಯಂತಹ ವೆಬ್ ತಾಣಗಳು ಕನ್ನಡಕ್ಕೆ ಬೇಕೆಂದು ಪ್ರತಿಪಾದಿಸಿದ ಶ್ರೀಯುತರು ಅಭಿವೃದ್ಧಿ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸೈಡೆವ್ ನೆಟ್ ನಲ್ಲಿ ಕನ್ನಡ ಅನುವಾದಕರಿಗಿರುವ ಅಗತ್ಯವನ್ನು ತಿಳಿಸಿದರು.

ಶ್ರವಣ, ದೃಶ್ಯ ಮಾಧ್ಯಮ ಮಹತ್ವ: ಬರಹಗಾರರು ಮಾಧ್ಯಮವೆಂದರೆ ಸಾಮಾನ್ಯವಾಗಿ ಮುದ್ರಣ ಮಾಧ್ಯಮವೊಂದೇ ಎಂದುಕೊಳ್ಳುತ್ತಾರೆ. ಆದರೆ ಅದರ ಹೊರತಾಗಿ, ಶ್ರವಣ, ದೃಶ್ಯ ಮಾಧ್ಯಮಗಳ ಬಳಸಬಹುದಾದ ಹೊಸ ಸಾಧ್ಯತೆಗಳತ್ತ ಶರ್ಮರವರು ನಂತರದ ಭಾಷಣದಲ್ಲಿ ದಾರಿ ತೋರಿದರು.

ಉದಾಹರಣೆಗೆ ಶ್ರವಣ ಮಾಧ್ಯಮದಲ್ಲಿ ಸ್ಪಷ್ಟತೆ, ನಿಖರತೆ ಮತ್ತು ಯಾರಿಗೆ ತಲುಪುತ್ತದೆ ಎಂಬ ವ್ಯಾಪ್ತಿಯ ಅರಿವು ಇರಬೇಕು. ರೇಡಿಯೋ, ಪಾಡ್ ಕಾಸ್ಟಿಂಗ್, ತಮ್ಮ ಹೆಚ್ಚಿನ ಸಮಯವನ್ನು ಪ್ರಯಾಣದಲ್ಲಿ ಕಳೆಯುವ ಯುವ ಪೀಳಿಗೆಗಾಗಿ ರೆಕಾರ್ಡ್ ಮಾಡಲಾದ ಎಂ.ಪಿ.ತ್ರೀಯ ಮೂಲಕ ವಿಜ್ಞಾನವನ್ನು ತಲುಪಿಸುವ ಸಾಧ್ಯತೆ, ಕಮ್ಯುನಿಟಿ ರೇಡಿಯೋಗಳ ಬಗೆಗಿನ ಮಾಹಿತಿ ಅವರ ಪ್ರಸ್ತುತಿಯಲ್ಲಿ ಮೂಡಿಬಂತು.

ದೃಶ್ಯ ಮಾಧ್ಯಮ ಅಂದರೆ ಕನ್ನಡ ವೀಡಿಯೋಗಳು, ಯೂಟ್ಯೂಬ್, ಕನ್ನಡದಲ್ಲಿನ ವಿಜ್ಞಾನ ಸಂಬಂಧಿ ಚಿತ್ರಗಳು, ಛಾಯಾಚಿತ್ರಗಳು, ಅನಿಮೇಷನ್, ಟೆಲಿವಿಷನ್ ಡಬ್ಬಿಂಗಿನಂತಹ ಕ್ಷೇತ್ರಗಳಲ್ಲಿ, ಖಾನ್ ಅಕಾಡೆಮಿ ಡಬ್ಬಿಂಗ್ ಎಂಬಲ್ಲಿ ಕನ್ನಡದ ಅನುವಾದಕ್ಕೆ ಇರುವ ಅಗತ್ಯದ ಬಗ್ಗೆಯೂ ತಿಳಿಸಲಾಯಿತು.

ವಿಜ್ಞಾನದ ಬಗೆಗಿನ ಮಾಹಿತಿ ಸಿದ್ದಪಡಿಸಲು, ಹಂಚಲು ಇಂದಿರೋ ಅನುಕೂಲಗಳಾದ ಗಣಕ, ಅಂತರ್ಜಾಲ, ಡಿಜಿಟಲ್ ಕ್ಯಾಮೆರಾಗಳು, ಎಂ.ಪಿ.ತ್ರೀ ಪ್ಲೇಯರ್ಗಳು, ಇ-ರೀಡರ್, ಇ.ಪುಸ್ತಕಗಳು, ಸ್ಮಾರ್ಟ್ ಫೋನುಗಳು, ಸಾಮಾಜಿಕ ಜಾಲತಾಣಗಳು, ವಾಟ್ಸಾಪಿನಂತಹ ಆಪ್ಗಳು, SMS ನಂತಹ ಹಲವು ಪರಿಕರಗಳ ಬಗ್ಗೆ ತಿಳಿಸಿ ಮನಸ್ಸಿದ್ದಲ್ಲಿ ಮಾರ್ಗವೆಂಬುದನ್ನು ತಿಳಿಸಿದರು.

ಭಾಷಣ "ಪತ್ರಿಕೆಗಳಿಗೆ ವಿಜ್ಞಾನ ಲೇಖನಗಳು" : ಟಿ.ಜೆ ಶ್ರೀನಿಧಿ

ಹೊಸ ಆವಿಷ್ಕಾರಗಳಿಂದ, ಈಗಷ್ಟೇ ಘಟಿಸಿದ ಸಂಗತಿಯವರೆಗೆ, ವರ್ಲ್ಡ್ ಫೋಟೋ ಡೇ, ಮೊದಲ ವಿಶ್ವ ಮಹಾಯುದ್ದದ ನೂರು ವರ್ಷದ ಸಂದರ್ಭ, ಹೀಗೆ ಪ್ರಮುಖ ಘಟನೆಯೊಂದರ ವಾರ್ಷಿಕೋತ್ಸವದಿಂದ, ಯಾವುದೋ ದಿನಾಂಕದವರೆಗೆ ಹೇಗೆ ಮತ್ತು ಯಾವ್ಯಾವ ವಿಷಯಗಳನ್ನು ಗುರುತಿಸಬಹುದು ಎಂಬುದನ್ನು ತಿಳಿಸಿದರು.

ಶ್ರೀನಿಧಿ ಅವರು ಈ ನಿಟ್ಟಿನಲ್ಲಿ ಬರೆಯಲು ಶುರು ಮಾಡುವವರು ಬಾವಿಯೊಳಗಿನ ಕಪ್ಪೆಯಂತೆ ಒಂದೇ ಕೇತ್ರಕ್ಕೆ ಅಂಟಿಕೊಳ್ಳದಿದ್ದರೂ ಪ್ರಾರಂಭದಲ್ಲಿ ತಮ್ಮದೊಂದು ಆದ್ಯತೆಯ ಕ್ಷೇತ್ರ(area of expertise) ಅಂತ ಗುರುತಿಸಿಕೊಂಡು ಅದರಲ್ಲಿ ಅಭಿವೃದ್ಧಿ ಹೊಂದಬಹುದೆಂದು ಅಭಿಪ್ರಾಯಪಟ್ಟರು.

ಎಲ್ಲೋ ಓದಿದ ಮಾಹಿತಿಯನ್ನು ಕಲೆಹಾಕಲು ಅನುವಾಗೋ cam scanner App ಬಗ್ಗೆ ತಿಳಿಸುತ್ತಾ ಅಧ್ಯಯನಶೀಲತೆಯ ಅಗತ್ಯವನ್ನು ತಿಳಿಸಿದ ಅವರು ಬರಹಗಾರ ಕೇಳಿಕೊಳ್ಳಬಹುದಾದ ಪ್ರಶ್ನೆಗಳ ಬಗ್ಗೆಯೂ ಬೆಳಕು ಚೆಲ್ಲಿದರು.

ಕನ್ನಡದಲ್ಲಿ ಪಾರಿಭಾಷಿಕ ಪದಗಳ ಬಳಕೆ ಅಂದರೆ ಪೋಗ್ರಾಮಿಂಗ್ ಅಂತ ಬಳಸಬೇಕಾ ಅಥವಾ ಅದನ್ನು ಕನ್ನಡೀಕರಿಸಿ ಅನುಸ್ಥಾಪನೆ ಎಂದು ಬಳಸಬೇಕಾ ಎಂದು ನಡೆಯುತ್ತಿರುವ ಬಲುದಿನಗಳ ಚರ್ಚೆಯ ಬಗ್ಗೆಯೂ ತಿಳಿಸಿದ ಅವರು ಜನ ಸಾಮಾನ್ಯರ ಬಳಕೆಯ ಭಾಗವೇ ಆಗಿರೋ ಪದಗಳನ್ನು ಕನ್ನಡದಲ್ಲಾದರೂ ಬಳಸಿ, ಆದ್ರೆ ಆ ಪದಗಳ ಪ್ರಮಾಣ ಮಿತಿಮೀರದಿರಲಷ್ಟೇ ಎಂದು ಅಭಿಪ್ರಾಯ ಪಟ್ಟರು.

ವಿಜ್ಞಾನಕ್ಕೆ ಸಂಬಂಧಿಸಿದ ಲೇಖನವನ್ನು ಒಂದು ದ್ರಾವಣಕ್ಕೆ ಹೋಲಿಸಿ ಸಾಮಾನ್ಯ ಓದುಗನಿಗೆ ಅರ್ಥವಾಗುವಂತೆ ಬರೆಯುವಾಗ ಅದನ್ನು ದುರ್ಬಲ ದ್ರಾವಣವಾಗಿಸೋ ಕೆಲಸದಲ್ಲಿ ಎಷ್ಟು ದುರ್ಬಲಗೊಳಿಸಬೇಕು ಎಂಬ ಅಂಶದ ಬಗೆಗಿನ ಎಚ್ಚರಿಕೆಯಿರಬೇಕಾದ ಅಗತ್ಯವನ್ನೂ ತಿಳಿಸಿದರು.

ಲೇಖನದ ಶೈಲಿ-ಸ್ವರೂಪ, ಪತ್ರಿಕೆಗಳ ಒಡನಾಟ, ಓದುಗರ ಸಂಪರ್ಕ ಬರಹಗಾರನಿಗೆ ಹೇಗೆ ಮುಖ್ಯ ಎಂಬಲ್ಲಿನ ಹಲವು ಅಂಶಗಳನ್ನು ಪರಿಚಯಿಸಿದ ಶ್ರೀಯುತ ಶ್ರೀನಿಧಿಯವರ ಭಾಷಣದ ನಂತರ ಮುಂದಿನ ಭಾಷಣಕಾರರಾದ ಡಾ|| ಯು.ಬಿ ಪವನಜ ಅವರನ್ನು ಪರಿಚಯಿಸಿ ಮುಂದಿನ ಭಾಷಣವಾದ "ವಿಶ್ವಕೋಶಗಳಿಗೆ ಬರವಣಿಗೆ" ಎಂಬ ವಿಷಯಕ್ಕೆ ಅನುವು ಮಾಡಿಕೊಟ್ಟರು.

Science Seminar, Bengaluru

ಪವನಜ ಅವರು ವಿಶ್ವಕೋಶಗಳಿಗೆ, ವಿಕಿಪೀಡಿಯಾಕ್ಕೆ ಬರೆಯುವಾಗ ಇರಬೇಕಾದ ಮಾಹಿತಿಯ ನಿಖರತೆಯ ಅಗತ್ಯತೆಯ ಬಗ್ಗೆ ಮಾತನಾಡುತ್ತಾ ಮಾಹಿತಿ ಸಂಗ್ರಹದ ಆಕರಗಳ ಬಗ್ಗೆ ಪ್ರಸ್ತಾಪಿಸಿದರು.ಪಾರಿಭಾಷಿಕ ಪದಗಳನ್ನು ಬಳಸುವಾಗ ಇರಬೇಕಾದ ಏಕರೂಪತೆ, ಮಾನಕ, ಶಿಷ್ಟತೆಗಳ ಬಗ್ಗೆಯೂ ತಿಳಿಸಿಕೊಟ್ಟರು.

ಉದಾ:ಲೇಖನದ ಉದ್ದಗಲಕ್ಕೂ ಒಂದೋ ಇಂಗ್ಲಿಷಿನ ಪದ ಅಥವಾ ಅದರ ಕನ್ನಡೀಕರಿಸಿದ ಪದ ಅಂತ ಒಂದೇ ರೀತಿ ಬರೆಯುವುದು, ಎಲ್ಲೆಡೆ ಇಂಚು ಅಥವಾ ಮಿ.ಮಿ ಎಂಬ ಒಂದೇ ಮಾಪನವನ್ನು ಬಳಸುವುದು(ಒಂದೆಡೆ ಇಂಚಿನಲ್ಲಿ ಮತ್ತೊಂದೆಡೆ ಮಿ.ಮೀನಲ್ಲಿ ಬಳಸದೇ ಇರುವುದು) ಮುಂತಾದ ಅಗತ್ಯತೆಗಳ ಬಗ್ಗೆ ತಿಳಿಸಿದರು.

ವಿಕಿಪೀಡಿಯಾಕ್ಕೆ ಬರೆಯಬೇಕಾದ ಅನುಸರಿಸಬೇಕಾದ ಸಾಮಾನ್ಯ ನಿಯಮಗಳಾದ ಬರಹದ ರಂಜನೀಯವಲ್ಲದ ಭಾಷೆ, ಕಥಾರೂಪ,ಉಪಮೆ, ಕಾವ್ಯಮಯವಲ್ಲದ ಭಾಷೆ, ಹೊಗಳಿಕೆ, ತೆಗಳಿಕೆ ವಿಶೇಷಣಗಳಿಲ್ಲದಿರುವಿಕೆ, ವ್ಯವಸ್ಥಿತ ಮಾಹಿತಿ ನಿರೂಪಣೆ, ಕಾವ್ಯಮಯ ಶೀರ್ಷಿಕೆಯಿಲ್ಲದಿರುವಿಕೆ ಮುಂತಾದ ಅಂಶಗಳ ಬಗ್ಗೆ ತಿಳಿಸಿದರು.

ವಿಕಿಪೀಡಿಯಾ, ಕನ್ನಡ ವಿಕಿಪೀಡಿಯಾದ ಪ್ರಸಕ್ತ ಸ್ವರೂಪ, ಅದರ ಎಡಿಟಿಂಗ್ ಬಗ್ಗೆ ತಿಳಿಸಿದ ಅವರು ಕನ್ನಡ ವಿಕಿಪೀಡಿಯಾದಲ್ಲಿ ಸದ್ಯ ನಡೆಯುತ್ತಿರುವ ಯೋಜನೆಗಳ ಬಗ್ಗೆ, ಮುಂದೊಮ್ಮೆ ವಿಕಿಪೀಡಿಯಾ ವರ್ಕ್ ಶಾಪ್ ಎಂದು ಆಯೋಜಿಸೋ ಯೋಜನೆಗಳ ಬಗ್ಗೆಯೂ ತಿಳಿಸಿದರು.

"ವಿಜ್ಞಾನದ ಪತ್ರಿಕಾವರದಿಗಳು" : ಬೇಳೂರು ಸುದರ್ಶನ್

ವಿಜ್ಞಾನ ಅಂದ್ರೆ ಏನೇನು ಆಗ್ಬೋದು ಎಂದು ಹೇಳುತ್ತಾ ವಿಜ್ಞಾನ ಎಂದರೆ ಬದುಕು ಎಂದು ಅಭಿಪ್ರಾಯಪಟ್ಟರು. ತಲೆಕೆಳಗಾದ ಪಿರಮಿಡ್ ಎಂಬ ಪತ್ರಿಕೋದ್ಯಮದ ಶೈಲಿಯನ್ನು ಇಲ್ಲಿ ಅಳವಡಿಸಿಕೊಳ್ಳುತ್ತಾ ರೋಟಿ, ಕಪಡಾ, ಮಕಾನ್, ವಾಹನ್ ಮತ್ತು ತಂತ್ರಜ್ಞಾನ್ ಎಂಬ ಪಂಚ ಸೂತ್ರಗಳಲ್ಲಿ ವಿಜ್ಞಾನದ ಏನೊಂದನ್ನೂ ತಂದು ಅದರ ಬಗ್ಗೆ ಬರೆಯಬಹುದಾದ ಸಾಧ್ಯತೆಗಳ ಬಗ್ಗೆ ಮಾತನಾಡಿದರು.

A field guide for technical writers ಎಂಬ ಪುಸ್ತಕ, ವಿಜ್ಞಾನ ವರದಿಗಾರಿಕೆಯಲ್ಲಿನ ಎರಡು ಕವಲುಗಳ ಬಗ್ಗೆ ಪ್ರಸ್ತಾಪಿಸಿದರು. ಮೊದಲನೆಯ ಕವಲಾದ data journalism ಅಂದ್ರೆ ಸಿಕ್ಕಿದ ಅಂಕಿ ಅಂಶಗಳಲ್ಲಿ ಯಾವುದು ಸೂಕ್ತ, ಅದನ್ನು ಹೇಗೆ ಬಳಸುವುದು ಎಂಬುದು.

ಇದಕ್ಕೆ ಸಂಬಂಧಿಸಿದ ಕಾನ್ವಾಸ್.ನೆಟ್ನಲ್ಲಿನ ಎರಡು ತಿಂಗಳ ಮುಕ್ತ ಅಂತರ್ಜಾಲ ಕೋರ್ಸಿನ ಬಗ್ಗೆಯೂ ಪ್ರಸ್ತಾಪಿಸಿದ ಶ್ರೀಯುತರು ನಂತರ ಎರಡನೆಯ ಕವಲಾದ visualization ಅಥವಾ infographics ಮತ್ತು ಪಾಕೇಜಿಂಗ್ ಬಗ್ಗೆ ತಿಳಿಸಿದರು. ಬರೆಯಲು ಅನುಕೂಲ ಮಾಡಿಕೊಡೋ ಇನ್ನಷ್ಟು ತಂತ್ರಾಂಶಗಳ ಪರಿಚಯಿಸಿದ ಸುದರ್ಶನರು ಲೆಬರೇ ಇಂದ ಇರೋ ಮುಕ್ತ ತಂತ್ರಾಂಶವಾದ spreadsheet, ಓಪನ್ ರಿಫೈನ್, ಗೂಗಲ್ spreadsheet, ಗೂಗಲ್ ಕೀಪ್, ಗೂಗಲ್ ನ್ಯೂಸ್ ಅಲರ್ಟ್, ಕಣಜ.ಇನ್ ಮುಂತಾದ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.

ವಿಷಯ "ಸಂವಹನಕ್ಕೆ ಸಿದ್ದತೆ: ಸಾಹಿತ್ಯ ಕೃತಿಗಳ ಓದು, ಭಾಷಾಜ್ಞಾನ ಮತ್ತು ಅಧ್ಯಯನ": ಡಾ. ಸಿ.ಪಿ.ರವಿಕುಮಾರ್

ವಿಜ್ಞಾನ ಬರಹಗಾರನಾದವನು ಜನರಿಗೂ, ವಿಜ್ಞಾನಿಗಳಿಗೂ ನಡುವಣ ಸೇತುವೆ ಎಂದು ಅಭಿಪ್ರಾಯಪಟ್ಟ ಶ್ರೀಯುತರು ಲೇಖನಕ್ಕೆ ಬೇಕಾದ ಪೂರ್ವಸಿದ್ದತೆ, ಹಸ್ತಪ್ರತಿಯನ್ನು ಕೆಲ ಕಾಲ ಬಿಟ್ಟು ಮತ್ತೊಮ್ಮೆ ಪರಾಮರ್ಶಿಸಬೇಕಾದ ಅಗತ್ಯ, ಕನ್ನಡ ಅಂತರ್ಜಾಲ ಪದಕೋಶಗಳ ಬಳಕೆಗಳ ಬಗ್ಗೆ ತಿಳಿಸಿದರು.

ಕನ್ನಡ ವಿಜ್ಞಾನ ಬರವಣಿಗೆಯಲ್ಲಿ ಪ್ರಯತ್ನವನ್ನೇ ಮಾಡದಿರುವಷ್ಟು ಕಮ್ಮಿ ಸಾಹಿತ್ಯವಿರುವ ಕ್ಷೇತ್ರಗಳಾದ ವಿಜ್ಞಾನಕ್ಕೆ ಸಂಬಂಧಪಟ್ಟ ಕಥೆ, ಕವಿತೆಗಳನ್ಯಾಕೆ ಪ್ರಯತ್ನಿಸಬಾರದೆಂಬ ನೆರೆದ ಕೇಳುಗರಲ್ಲಿ ಆಸಕ್ತಿಯನ್ನು ಕೆರಳಿಸಿದರು. ಆಗ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಕೀಟಗಳ ಬಗ್ಗೆ ಪರಿಚಯಿಸೋ ಅಂಕಣವನ್ನು ಬರೆವ, ಭೂರಮೆ ಬ್ಲಾಗಿನ ಶ್ರೀಮತಿ ಸುಮಾ ರವಿಕಿರಣ್ ಅವರು ತಾವು ವಿಜ್ಞಾನದ ಬಗೆಗಿನ ಕವಿತೆಗಳನ್ನು ಬರೆದಿರುವ, ತಮ್ಮ ಪತಿ ಸೋಲಾರ್ ಕವಿತೆಗಳು ಅಂತ ಬರೆದಿರುವ ವಿಷಯ ಪ್ರಸ್ತಾಪಿಸಿದರು.

ಬೇಳೂರು ಸುದರ್ಶನ್ ಅವರು ತಮ್ಮ ವಿಜ್ಞಾನಕ್ಕೆ ಸಂಬಂಧಪಟ್ಟ ಗೀತೆಗಳ ಕ್ಯಾಸೆಟ್ ಕೂಡ ಬಂದಿರೋ ವಿಚಾರ ತಿಳಿಸಿದಾಗ ಹೀಗೂ ಎಂಟೆ ಒಂಬ ಭಾವ ನೆರೆದ ಅನೇಕರಲ್ಲಿ. ಪ್ರತೀ ವರ್ಷ ಸೆಪ್ಟೆಂಬರ್ 15,16,17 ರಂದು "ಸ್ವದೇಶೀ ವಿಜ್ಞಾನ ಸಮೇಳನ" ಅಂತ ನಡೆಯುತ್ತೆ ಎಂಬ ಹೊಸ ವಿಷಯ ತಿಳಿದುಬಂದ ಸಂದರ್ಭದಲ್ಲಿ ಈ ವರ್ಷದ ಸಮ್ಮೇಳನ ರಾಯಚೂರಿನಲ್ಲಿ ನಡೆಯುತ್ತಿದೆ ಅಂತಲೂ ತಿಳಿಯಿತು.

ಪ್ರಶ್ನೋತ್ತರದ ನಂತರ ಪುಸ್ತಕಗಳಿಗಾಗಿ ಬರೆಯುವುದು ಹೇಗೆ, ಪುಸ್ತಕಗಳ ಪ್ರಕಾಶನ ಮಾಡೋದು ಹೇಗೆ ಎಂಬ ವಿಷಯದ ಚರ್ಚೆ ಹಲವು ಪ್ರಶ್ನೋತ್ತರಗಳೊಂದಿಗೆ, ಭಾಗವಹಿಸಿದವರ ಹಲವು ಅನುಭವಗಳೊಂದಿಗೆ ಹೊಸತಾಗಿ ಪುಸ್ತಕ ಹೊರತರೋ ಆಸೆಯಲ್ಲಿರುವವರಿಗೆ ಒಂದಿಷ್ಟು ಅಂಶಗಳತ್ತ ಬೆಳಕು ಚೆಲ್ಲಿತು.

ಪೋತಿ.ಕಾಂ, ನ್ಯೂಸ್ ಹಂಟ್ ನಲ್ಲಿ ಅಂತರ್ಜಾಲದಲ್ಲಿ ಮಾರಾಟ, custom publishing,ಫ್ರೀ ಬುಕ್ ಕಲ್ಚರ್.ಕಾಂ ನಂತಹ ಹೊಸ ವಿಷಯಗಳ ಪ್ರಸ್ತಾಪವಾದವು. ನಂತರ ಊಟದ ಜೊತೆಗೆ ಸಮ್ಮೇಳನಕ್ಕೆ ಆಗಮಿಸಿದ ಹಲವು ಕ್ಷೇತ್ರಗಳ ಬರಹಗಾರರೊಂದಿಗೆ ಮಾತನಾಡೋ ಅವಕಾಶ.

ನಂತರ ಭಾಗವಹಿಸುವವರು ಬರೆದು ತಂದ ಇನ್ನೂರು ಪದಗಳ ಲೇಖನದ ಜೊತೆಗೆ ಬೆಳಗಿನಿಂದ ಕಲಿತ ಅಂಶಗಳ ಅಳವಡಿಸಿಕೊಂಡು ನೂರರಿಂದ ಇನ್ನೂರು ಪದಗಳ ಅವಧಿಯ ಇನ್ನೊಂದು ಲೇಖನವನ್ನು ಬರೆಯಲು ತಿಳಿಸಲಾಯಿತು. ಮೂವತ್ತು ನಿಮಿಷದ ಅವಧಿಯ ನಂತರ ನಾವು ಬರೆದ ಲೇಖನಗಳ ಓದು ಮತ್ತು ಮುಂದಿನ ಬೆಳವಣಿಗೆಗೆ ಸಹಾಯಕವಾಗುವಂತಹ ವಿಮರ್ಶೆಯನ್ನು ನಡೆಸಲಾಯಿತು. ಈ ನಡುವೆ ವಿಜಯ ಕರ್ನಾಟಕದಲ್ಲಿ ಅಂಕಣಕಾರರಾದ ಅವಿನಾಶ್ ಅವರ ಮತ್ತು ವಿಜಾಪುರದ ಬಾಬಾ ನಗರ್ ಅವರ ಅನುಭವಗಳನ್ನೂ ಕೇಳಲಾಯಿತು.

ತದನಂತರದ ಚಹಾವಿರಾಮದ ಸಂವಹನಕ್ಕೆ ಸಿದ್ದತೆ ಎಂಬ ವಿಷಯದಲ್ಲಿ zotero ಎಂಬ ಫೈರ್ಫಾಕ್ಸಿನ ಪ್ಲಗ್ಗಿನ್, evernote, flipboard, endnote, pocket ಮುಂತಾದ ತಂತ್ರಾಂಶಗಳ ಬಳಕೆಯ ಸಾಧ್ಯತೆಗಳನ್ನು ಪರಿಚಯಿಸಲಾಯಿತು.

ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ: ಲೇಖನಕ್ಕೆ ಬೇಕಾದ ಅಧ್ಯಯನ, ಮಾಹಿತಿ ಸಂಗ್ರಹಣೆ, ಬರೆದ ಲೇಖನಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು, ನಮ್ಮ ಓದುಗರು ಯಾರು ಎಂಬ ಅರಿವಿನ ಮೇಲೆ ನಮ್ಮ ಶೈಲಿಯನ್ನು ಮಾರ್ಪಡಿಸಿಕೊಳ್ಳುವುದು ಮುಂತಾದ ವಿಷಯಗಳ ಮೇಲೆ ಮಾತಾಡಿದರು.

ಶ್ರವಣ, ಮುದ್ರಣ ಮಾಧ್ಯಮಗಳಲ್ಲಿರುವ ಸಿದ್ದತಾ ಸಮಯದ ಬಗ್ಗೆ, ದೃಶ್ಯ ಮಾಧ್ಯಮದಲ್ಲಿರುವ ತುರ್ತಿನ ಬಗ್ಗೆ ತಿಳಿಸಿದ ಅವರು ತಮ್ಮ ಜೀವನದಲ್ಲಾದ ಸ್ವಾರಸ್ಯಕರ ಪ್ರಸಂಗಗಳನ್ನೂ ಉಲ್ಲೇಖಿಸಿದರು. ಒಂದಿಷ್ಟು ಫೋಟೋಗಳು ಮತ್ತೊಂದಿಷ್ಟು ಇಮೇಲ್ ವಿಳಾಸ, ಮೊಬೈಲ್ ಸಂಖ್ಯೆ ವಿನಿಮಯದೊಂದಿಗೆ ಮತ್ತೆ ಸಿಗೋಣ ಎಂಬ ಬೀಳ್ಕೊಡಿಗೆ.

English summary
Kannada Science and Technology Writers conference and Workshop 2015 organized in Bengaluru by U.B Pavanaja, Haldodderi Sudhindra, T.G Srinidhi and others in association with Texas Instrument and IEEE. The event recently held at Bagmane tech Park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X