Vande Bharat: ಮಾ. 12ರಿಂದ ಮಂಗಳೂರಿಗೆ ಮತ್ತೊಂದು ರೈಲು, ವೇಳಾಪಟ್ಟಿ
ಮಂಗಳೂರು, ಮಾರ್ಚ್ 10: ಕರ್ನಾಟಕದ ಕರಾವಳಿ ನಗರ ಮಂಗಳೂರಿಗೆ ಮತ್ತೊಂದು ವಂದೇ ಭಾರತ್ ರೈಲು ಸಿಕ್ಕಿದೆ. ಮಾರ್ಚ್ 12ರಿಂದ ವಿಸ್ತರಣೆಗೊಂಡ ರೈಲು ಸಂಚಾರ ಆರಂಭವಾಗಲಿದ್ದು, ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ರೈಲ್ವೆ ಸಚಿವಾಲಯ ಕಾಸರಗೋಡು-ತಿರುವನಂತಪುರಂ-ಕಾಸರಗೋಡು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಿತ್ತು. ಈ ರೈಲು ಸೇವೆಗೆ ಮಾರ್ಚ್ 12ರಂದು ಚಾಲನೆ ಸಿಗಲಿದೆ.

ಈ ಕುರಿತು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, 'ನಮ್ಮ ಮನವಿಯ ಮೇರೆಗೆ ಮಂಗಳೂರಿನವರೆಗೂ ವಿಸ್ತರಣೆ ಮಾಡಲಾದ ತಿರುವನಂತಪುರ-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಇದೇ ಮಾರ್ಚ್ 12ರಂದು ಬೆಳಗ್ಗೆ 8 ಗಂಟೆಗೆ ಮಂಗಳೂರು ಕೇಂದ್ರ ರೈಲು ನಿಲ್ದಾಣದಲ್ಲಿ ಪ್ರಧಾನಿ ಶ್ರೀ Narendra Modi ಅವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ' ಎಂದು ಹೇಳಿದ್ದಾರೆ.
'ಇದೇ ಸಂದರ್ಭದಲ್ಲಿ ಮಂಗಳೂರು ಕೇಂದ್ರ ರೈಲು ನಿಲ್ದಾಣ ಹಾಗೂ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಪ್ರಾರಂಭಿಸಲಿರುವ 'ಒನ್ ಸ್ಟೇಷನ್- ಒನ್ ಪ್ರಾಡಕ್ಟ್' ಮಳಿಗೆಗಳಿಗೂ ಮೋದಿಯವರು ಚಾಲನೆ ನೀಡಲಿದ್ದಾರೆ' ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ವಂದೇ ಭಾರತ್ ರೈಲು ವೇಳಾಪಟ್ಟಿ: ದಕ್ಷಿಣ ಕನ್ನಡ ಮತ್ತು ಕೇರಳ ನಡುವೆ ಪ್ರತಿದಿನ ಸಾವಿರಾರು ಜನರು ಸಂಚಾರ ನಡೆಸುತ್ತಾರೆ. ವಂದೇ ಭಾರತ್ ರೈಲು ಸಂಚಾರದಿಂದ ಪ್ರಯಾಣಿಕರಿಗೆ ಸಹಕಾರಿಯಾಗಲಿದೆ.
ಮಂಗಳೂರು-ತಿರುವನಂತಪುರಂ ನಡುವಿನ ವಂದೇ ಭಾರತ್ ರೈಲು ಬುಧವಾರ ಹೊರತು ಪಡಿಸಿ ವಾರ 6 ದಿನಗಳ ಕಾಲ ಸಂಚಾರ ನಡೆಸಲಿದೆ. ಮಂಗಳೂರಿನಿಂದ ಬೆಳಗ್ಗೆ 6.15ಕ್ಕೆ ಹೊರಡುವ ರೈಲು ಮಧ್ಯಾಹ್ನ 3.05ಕ್ಕೆ ತಿರುವನಂತಪುರ ತಲುಪಲಿದೆ. ಹಾಗೆಯೇ ತಿರುವನಂತಪುರದಿಂದ ಸಂಜೆ 4.05ಕ್ಕೆ ಹೊರಟು ರಾತ್ರಿ 12.40ಕ್ಕೆ ಮಂಗಳೂರು ತಲುಪಲಿದೆ.
ಈಗಾಗಲೇ ಮಂಗಳೂರು-ಮಡಗಾಂವ್ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿದೆ. ದಕ್ಷಿಣ ಕನ್ನಡ ಸಂಸದರ ಕೋರಿಕೆಯಂತೆ ರೈಲ್ವೆ ಸಚಿವಾಲಯ ಕಾಸರಗೋಡು-ತಿರುವನಂತಪುರಂ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಿದೆ. ಈ ಮೂಲಕ ಮಂಗಳೂರು ನಗರಕ್ಕೆ 2 ವಂದೇ ಭಾರತ್ ರೈಲುಗಳು ಸಿಕ್ಕಿವೆ.
ತಿರುವನಂತಪುರಂ-ಕಾಸರಗೋಡು ನಡುವೆ ರೈಲು ಸಂಖ್ಯೆ 20631/ 20632 ಸಂಚಾರ ನಡೆಸುತ್ತದೆ. ಕೇರಳದ ರಾಜಧಾನಿ ತಿರುವನಂತಪುರಂ ಅನ್ನು ಕರ್ನಾಟಕ-ಕೇರಳ ಗಡಿಯಲ್ಲಿರುವ ಕಾಸರಗೋಡಿಗೆ ಈ ರೈಲು ಸಂಪರ್ಕಿಸುತ್ತದೆ.
ಮಂಗಳೂರು ಸೆಂಟ್ರಲ್-ತಿರುವನಂತರಪುರಂ ವಂದೇ ಭಾರತ್ ರೈಲು 9 ನಿಲುಗಡೆಯನ್ನು ಹೊಂದಿದೆ. 574 ಕಿ. ಮೀ. ದೂರವನ್ನು ರೈಲು 8.5 ಗಂಟೆಗಳಲ್ಲಿ ಕ್ರಮಿಸುತ್ತದೆ. ಗಂಟೆಗೆ ಸುಮಾರು 73 ಕಿ. ಮೀ. ವೇಗದಲ್ಲಿ ರೈಲು ಸಂಚಾರ ನಡೆಸಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications