ಕೊಡಗಿನ ಚೇಲಾವರ ಜಲಪಾತದಲ್ಲಿ ಸ್ನಾನಕ್ಕಿಳಿದವರು ಸಾವನ್ನಪ್ಪುವುದೇಕೆ..? ಪ್ರವಾಸಿಗರು ತಿಳಿಯಲೇಬೇಕಾದ ಸಂಗತಿ
ಮಡಿಕೇರಿ, ಫೆಬ್ರವರಿ 05: ಕೊಡಗಿನಲ್ಲಿರುವ ಜಲಪಾತಗಳನ್ನು ದೂರದಿಂದ ನೋಡಿ ಹಿಂತಿರುಗಿ, ಯಾವುದೇ ಕಾರಣಕ್ಕೂ ಇಲ್ಲಿ ಮೇಲಿಂದ ಧುಮುಕುವ ಜಲಧಾರೆಗೆ ತಲೆಕೊಟ್ಟು ಸ್ನಾನ ಮಾಡುವುದಾಗಲೀ, ಈಜುವುದಾಗಲೇ ಮಾಡಬೇಡಿ ಎಂಬ ಸೂಚನೆಗಳನ್ನು ನೀಡುತ್ತಾ ಬರಲಾಗುತ್ತಿದೆ.
ದೂರದಿಂದ ಬರುವ ಪ್ರವಾಸಿಗರು ಇದ್ಯಾವುದನ್ನೂ ಲೆಕ್ಕಿಸದೆ ನೀರಿಗಿಳಿದು ಆಡಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಬಹಳ ವರ್ಷಗಳ ಬಳಿಕ ಚೇಲಾವರದ ಜಲಪಾತದಲ್ಲಿ ದುರಂತವೊಂದು ನಡೆದಿದೆ. ಇಲ್ಲಿನ ನೀರಿನಲ್ಲಿ ಸ್ನಾನ ಮಾಡಲು ಹೋದ ಕೇರಳದ ಪ್ರವಾಸಿಗ ಸುಳಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.

ಸಾಮಾನ್ಯವಾಗಿ ಈ ಸಮಯದಲ್ಲಿ ಜಲಪಾತದ ಬಳಿಗೆ ಹೋಗುವವರಿಗೆ ತಲೆಸುಡುವ ಬಿಸಿಲಿಗೆ ತಣ್ಣಗಿನ ನೀರಿನಲ್ಲಿ ಆಟವಾಡಬೇಕೆನಿಸುವುದು ಸಹಜವೇ.. ಆದರೆ ಮೊದಲೇ ಅಪಾಯಕಾರಿ ಜಲಪಾತ ಎಂಬ ಹೆಸರು ಪಡೆದಿರುವ ಚೇಲಾವರ ಜಲಪಾತದಲ್ಲಿ ಅಂತಹದೊಂದು ಸಾಹಸ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಬಗ್ಗೆ ನಾಮಫಲಕಗಳನ್ನು ಅಳವಡಿಸಿದ್ದರೂ ಕೆಲವರು ಸ್ನಾನ ಮಾಡಲು ಹೋಗಿ ಅಪಾಯವನ್ನು ತಂದುಕೊಳ್ಳುತ್ತಾರೆ.
ಈಗ ಆಗಿದ್ದು ಕೂಡ ಅದೇ... ಕೇರಳದ ಮಟ್ಟನ್ನೂರು ನಿವಾಸಿ ರಶೀದ್( 25) ಎಂಬಾತ ತನ್ನ ಮೂವರು ಸ್ನೇಹಿತರೊಂದಿಗೆ ಕೊಡಗಿಗೆ ಪ್ರವಾಸ ಬಂದಿದ್ದು, ಹೀಗೆ ಬಂದವರು ನಾಪೋಕ್ಲು ಸಮೀಪದ ಚೇಲಾವರ ಜಲಪಾತಕ್ಕೆ ಹೋಗಿದ್ದರು. ಈ ಸಮಯದಲ್ಲಿ ಯಾವುದೇ ಅಬ್ಬರವಿಲ್ಲದೆ. ಕರಿಬಂಡೆ ಮೇಲೆ ಧುಮುಕುವ ಜಲಪಾತ ಮೇಲ್ನೋಟಕ್ಕೆ ಅಪಾಯ ಮಾಡುವಂತೆ ಕಾಣುವುದಿಲ್ಲ. ಆದರೆ ಜಲಪಾತವನ್ನು ದೂರದಿಂದ ನೋಡಿ ಬಂದಿದ್ದರೆ ಯಾವುದೇ ತೊಂದರೆ ಆಗುತ್ತಿರಲಿಲ್ಲ.
ಇಲ್ಲಿ ಸಾವನ್ನಪ್ಪಿದವರ ದೊಡ್ಡಪಟ್ಟಿಯಿದೆ
ಜಲಪಾತದ ಬಳಿ ಹೊಂಡವಿದ್ದು ಇಲ್ಲಿ ಸ್ನಾನ ಮಾಡಲು ರಶೀದ್ ಹೋಗಿದ್ದು. ಇಲ್ಲಿರುವ ಸುಳಿಗೆ ಸಿಲುಕಿ ನೀರಿನಲ್ಲಿ ಮುಳುಗಿದ್ದಾನೆ. ಸ್ನೇಹಿತರು ನೀಡಿದ ಮಾಹಿತಿ ಮೇರೆಗೆ ನಾಪೋಕ್ಲು ಪೊಲೀಸರು ಸ್ಥಳಕ್ಕೆ ತೆರಳಿ, ಅಗ್ನಿಶಾಮಕ ದಳದ ಸಿಬ್ಬಂದಿಯ ಮೂಲಕ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚೇಲಾವರ ಜಲಪಾತದಲ್ಲಿ ಆಗಿಂದಾಗ್ಗೆ ದುರಂತಗಳು ಸಂಭವಿಸುತ್ತಲೇ ಇರುತ್ತವೆ. ಇಲ್ಲಿನ ನೀರಿನ ಸುಳಿಗೆ ಸಿಲುಕಿ ಸಾವನ್ನಪ್ಪಿದ ಪ್ರವಾಸಿಗರ ದೊಡ್ಡಪಟ್ಟಿಯೇ ಇದೆ. ಕೊಡಗಿನ ಮಟ್ಟಿಗೆ ಇದೊಂದು ಅನಾಹುತಕಾರಿ ಜಲಪಾತ ಎಂದರೂ ತಪ್ಪಾಗಲಾರದು. ಇಷ್ಟಕ್ಕೂ ಇಲ್ಲಿ ಏಕೆ ದುರಂತಗಳು ಸಂಭವಿಸುತ್ತವೆ ಎನ್ನುವುದನ್ನು ನೋಡಿದ್ದೇ ಆದರೆ ಜಲಧಾರೆ ಧುಮುಕುವ ಸ್ಥಳದಲ್ಲಿ ಆಳದ ಹೊಂಡವಿರುವುದು ಮತ್ತು ಇಲ್ಲಿರುವ ಸುಳಿಯೇ ಕಾರಣ ಎನ್ನಲಾಗುತ್ತಿದೆ.
ಅಪಾಯಕಾರಿ ಚೇಲಾವರ ಜಲಪಾತ ಎಲ್ಲಿದೆ?
ಚೇಲಾವರ ಜಲಪಾತದ ಬಗ್ಗೆ ಹೇಳಬೇಕೆಂದರೆ ಇದು ಮಡಿಕೇರಿ ತಾಲೂಕಿಗೆ ಸೇರಿದ ನಾಪೋಕ್ಲುಗೆ ಸಮೀಪದ ಚೆಯ್ಯಂಡಾಣೆಯಿಂದ ಸುಮಾರು 3 ಕಿ.ಮೀ. ದೂರದಲ್ಲಿದೆ. ಈ ಜಲಪಾತ ಸುತ್ತಲೂ ಕಾಫಿತೋಟ, ಬೆಟ್ಟಗುಡ್ಡ, ಕಾನನಗಳಿದ್ದು, ಸುತ್ತಲಿನ ನಿಸರ್ಗ ಜಲಪಾತದ ಸೌಂದರ್ಯವನ್ನು ಹೆಚ್ಚಿಸಿದೆ. ಹೀಗಾಗಿಯೇ ಇಲ್ಲಿಗೆ ಹೋಗಬೇಕೆಂದು ಹೆಚ್ಚಿನ ಪ್ರವಾಸಿಗರು ಬಯಸುತ್ತಾರೆ. ಮೊದಲೆಲ್ಲ ಈ ಜಲಧಾರೆಯತ್ತ ಜನ ಬರುತ್ತಿರಲಿಲ್ಲ. ಈಗ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಪಟ್ಟಣದ ಗೌಜು ಗದ್ದಲದಲ್ಲಿ ಬದುಕು ಕಟ್ಟಿಕೊಂಡವರು ವಾರದ ರಜಾವನ್ನು ಮಜಾದಿಂದ ಕಳೆಯಲು ಇಲ್ಲಿಗೆ ಆಗಮಿಸುವುದು ಸಾಮಾನ್ಯವಾಗಿದೆ.
ಇನ್ನು ಚೇಲಾವರದ ಜಲಪಾತದತ್ತ ಆಗಮಿಸುವ ದೂರದ ಪ್ರವಾಸಿಗರು ಜಲಪಾತವನ್ನು ದೂರದಿಂದಲೇ ನೋಡಿ ಹಿಂತಿರುಗಿದರೆ ತೊಂದರೆಯಿಲ್ಲ. ಆದರೆ ಹಾಗೆ ಮಾಡುವುದಿಲ್ಲ. ಬದಲಿಗೆ ಧುಮುಕುವ ಜಲಧಾರೆಯಲ್ಲಿ ಈಜುವ, ಸ್ನಾನ ಮಾಡುವ ದುಸ್ಸಾಹಸಕ್ಕೆ ಇಳಿಯುತ್ತಾರೆ. ಹೀಗೆ ಮಾಡಿಯೇ ಹೆಚ್ಚಿನವರು ಪ್ರಾಣಕಳೆದುಕೊಳ್ಳುತ್ತಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದು ಮೂಲದ ಪ್ರಕಾರ ಈ ಜಲಪಾತದಲ್ಲಿ ಬಲಿಯಾದವರ ಸಂಖ್ಯೆ ಸುಮಾರು ಹದಿಮೂರಕ್ಕೂ ಹೆಚ್ಚಿದ್ದು, ಮೃತರ ಪೈಕಿ ಬಹಳಷ್ಟು ಜನ ಮೋಜು ಮಸ್ತಿ ಮಾಡಿಯೇ ಪ್ರಾಣ ಕಳೆದುಕೊಂಡವರಾಗಿದ್ದಾರೆ.

ನೀರಿಗಿಳಿದವರು ಸಾವನ್ನಪ್ಪಲು ಕಾರಣ ಏನು?
ಜಲಧಾರೆಯ ಸುಂದರ ನೋಟ ಆಕರ್ಷಿಸುವುದು ಸಹಜ. ಕರ್ರಗಿನ ಹೆಬ್ಬಂಡೆಯ ಮೇಲೆ ಭೂತಾಯಿಯ ಒಡಲ ಬೆಳ್ಳಿ ಕರಗಿ ಹರಿಯುತ್ತದೆಯೇನೋ ಎಂಬಂತೆ ಭಾಸವಾಗುವ ದೃಶ್ಯ ಮನಮೋಹ. ಈ ದೃಶ್ಯ ನೋಡುತ್ತಿದ್ದರೆ ನೀರಿನಲ್ಲಿ ಆಟವಾಡಬೇಕೆಂಬ ಬಯಕೆ ಹುಟ್ಟುವುದು ಸಹಜ. ಹಾಗೆಂದು ನೀರಿಗೆ ಇಳಿಯುವ ಮುನ್ನ ಒಂದು ಕ್ಷಣ ಯೋಚಿಸಿದರೆ ಯಾವುದೇ ಪ್ರಾಣಾಪಾಯವಿಲ್ಲದೆ ಹಿಂತಿರುಗಬಹುದು. ಆದರೆ ಹಾಗೆ ಮಾಡದೆ ನೀರಿಗಿಳಿಯುವ ಸಾಹಸ ಮಾಡುತ್ತಿರುವುದೇ ದುರಂತಗಳಿಗೆ ದಾರಿ ಮಾಡಿಕೊಡುವಂತಾಗಿದೆ.
ಇಲ್ಲಿ ದುರಂತ ಏಕೆ ಸಂಭವಿಸುತ್ತದೆ ಎಂಬುದನ್ನು ನೋಡುತ್ತಾ ಹೋದರೆ, ಹೆಬ್ಬಂಡೆಯ ಮೇಲಿನಿಂದ ತಳಕ್ಕೆ ಜಲಧಾರೆ ಸುಮಾರು 80 ಅಡಿ ಎತ್ತರದಿಂದ ಧುಮುಕುತ್ತದೆ. ಹೀಗಾಗಿ ಜಲಪಾತದ ಅರ್ಧ ಭಾಗದಲ್ಲಿ ಸುಮಾರು 40 ಅಡಿಯಷ್ಟು ಆಳದ ಹೊಂಡವೊಂದಿದೆ. ಅಷ್ಟೇ ಅಲ್ಲದೆ ಬಂಡೆಯ ಕೆಳಗೆ 15 ಅಡಿ ದೂರದವರೆಗೆ ಟೊಳ್ಳಾದ ಜಾಗವಿದೆ. ನೀರಿಗೆ ಬಿದ್ದ ವ್ಯಕ್ತಿಗಳು ಮೇಲಿನಿಂದ ಬೀಳುವ ನೀರಿನ ರಭಸಕ್ಕೆ ಕಲ್ಲು ಬಂಡೆಯ ಸಂದಿಯಲ್ಲಿ ಸಿಲುಕಿಕೊಳ್ಳುತ್ತಾರೆ. ಹೀಗೆ ಸಿಲುಕಿಕೊಂಡವರು ಮತ್ತೆ ಈಚೆಗೆ ಬರುವುದು ಅಸಾಧ್ಯ. ಇಲ್ಲಿ ಸಿಲುಕಿಯೇ ಹೆಚ್ಚಿನವರು ಪ್ರಾಣಕಳೆದುಕೊಂಡಿದ್ದಾರೆ.
ಕಂದಕದ ಆಳ ಕಂಡು ಹಿಡಿಯಲು ಸಾಧ್ಯವಾಗಿಲ್ಲ
ಜಲಪಾತದಲ್ಲಿ ಮುಳುಗಿ ಸಾಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೆಲವು ವರ್ಷಗಳ ಹಿಂದೆ ಬೇಸಿಗೆ ದಿನಗಳಲ್ಲಿ ಜಲಪಾತದ ಆಳವನ್ನು ಅರಿಯುವ ಸಲುವಾಗಿ ಹದಿನೈದು ಮಂದಿ ಮೋಟಾರ್ ಮೂಲಕ ನೀರನ್ನು ಹೊರತೆಗೆದು ಆಳ ನೋಡುವ ಪ್ರಯತ್ನ ಮಾಡಿದರಾದರೂ ಸುಮಾರು ಇಪ್ಪತ್ತು ಅಡಿ ನೀರನ್ನಷ್ಟೆ ಖಾಲಿ ಮಾಡಲು ಸಾಧ್ಯವಾಯಿತು. ಆದರೆ ಕೆಳಭಾಗದ ಆಳ ಕಂಡು ಹಿಡಿಯಲು ಸಾಧ್ಯವಾಗಲಿಲ್ಲವಂತೆ. ಇದೆಲ್ಲವನ್ನು ಗಮನಿಸಿದಾಗ ಇಲ್ಲಿ ಸ್ನಾನ ಮಾಡಲು ತೆರಳುವುದು ಎಷ್ಟೊಂದು ಅಪಾಯಕಾರಿ ಎನ್ನುವುದು ಗೊತ್ತಾಗುತ್ತದೆ.
ಇನ್ನಾದರೂ ಕೊಡಗಿನ ಚೇಲಾವರ ಜಲಪಾತವನ್ನು ವೀಕ್ಷಿಸಲು ತೆರಳುವವರು ಜಲಧಾರೆಗೆ ತಲೆಕೊಟ್ಟು ಸ್ನಾನ ಮಾಡಲು ಮುಂದಾಗದೆ ದೂರದಿಂದಲೇ ಜಲಪಾತದ ಸೌಂದರ್ಯವನ್ನು ಸವಿದು ಹಿಂತಿರುಗಿ. ಅಷ್ಟೇ ಅಲ್ಲದೆ ಈ ಬಗ್ಗೆ ಸ್ನೇಹಿತ(ತೆ) ಯರಿಗೆ ತಿಳಿಸಿ. ಇಲ್ಲದೆ ಹೋದರೆ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಸ್ಥಳೀಯ ಆಡಳಿತ ಕೂಡ ಜಲಪಾತದ ಹತ್ತಿರ ಪ್ರವಾಸಿಗರು ತೆರಳದಂತೆ ಕ್ರಮ ಕೈಗೊಂಡು ಮುಂದೆ ಆಗಲಿರುವ ಪ್ರಾಣ ಹಾನಿಯನ್ನು ತಪ್ಪಿಸಬೇಕಿದೆ.












Click it and Unblock the Notifications