ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ: ಅರಣ್ಯದಲ್ಲಿಯೇ ಜೋಡಿ ಹಳಿ ನಿರ್ಮಾಣ
ಕಾರವಾರ, ಆಗಸ್ಟ್ 11: ಶಿರೂರು ಗುಡ್ಡ ಕುಸಿತ ಪ್ರಕರಣ, ಸಕಲೇಶಪುರದಲ್ಲಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದು ಬಿದ್ದ ಘಟನೆಯಿಂದಲೂ ರೈಲ್ವೆ ಇಲಾಖೆ, ಸರ್ಕಾರಗಳು ಪಾಠ ಕಲಿತಂತೆ ಕಾಣುತ್ತಿಲ್ಲ. ಹುಬ್ಬಳ್ಳಿ-ಅಂಕೋಲಾ ಬ್ರಾಡ್ ಗೇಜ್ ರೈಲು ಮಾರ್ಗದ ವಿನ್ಯಾಸ ಬದಲಿಸಿರುವ ಇಲಾಖೆ ಅರಣ್ಯ ಪ್ರದೇಶದಲ್ಲಿಯೇ ಜೋಡಿ ಹಳಿ ನಿರ್ಮಾಣ ಮಾಡಲು ಮುಂದಾಗಿದೆ.
ಕರ್ನಾಟಕದ ಅತ್ಯಂತ ಹಳೆಯ ರೈಲು ಯೋಜನೆಗಳಲ್ಲಿ ಒಂದು ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ. 1996-97ರಲ್ಲಿ ಅನುಮೋದನೆಗೊಂಡ ಈ ಯೋಜನೆ ಇನ್ನೂ ಕಾರ್ಯಗತಗೊಂಡಿಲ್ಲ. ಅರಣ್ಯ ಪ್ರದೇಶದಲ್ಲಿ ರೈಲು ಮಾರ್ಗ ಹಾದು ಹೋಗಲಿದೆ ಎಂಬ ಕಾರಣಕ್ಕೆ ಯೋಜನೆ ವಿರೋಧಕ್ಕೆ ಕಾರಣವಾಗಿತ್ತು. ನ್ಯಾಯಾಲಯದ ಮೆಟ್ಟಿಲನ್ನು ಏರಿದ್ದ ಯೋಜನೆಯ ಹೊಸ ಅಪ್‌ಡೇಟ್ ಈಗ ಸಿಕ್ಕಿದೆ.

ರೈಲ್ವೆ ಸಚಿವರ ಉತ್ತರ: ಲೋಕಸಭೆ ಕಲಾಪದಲ್ಲಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೇಳಿದ್ದ ಪ್ರಶ್ನೆಗೆ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಉತ್ತರ ನೀಡಿದ್ದಾರೆ. ಸಚಿವರು ಉತ್ತರದಲ್ಲಿ "ಯೋಜನೆಯ ಎಲ್ಲಾ ಪಾಲುದಾರರ ಜೊತೆ ಸಮಾಲೋಚನೆ ನಡೆಸಿ, ಅರಣ್ಯದಲ್ಲಿ ದ್ವಿಪಥಕ್ಕಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ" ಎಂದು ಹೇಳಿದ್ದಾರೆ.
ಡೆಹರಾಡೂನ್‌ನ ವನ್ಯಜೀವಿ ಸಂಸ್ಥೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ರೈಲ್ವೆ ಇಲಾಖೆ ಉತ್ತರ ಕರ್ನಾಟಕ ಮತ್ತು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾಕ್ಕೆ ಸಂಪರ್ಕಿಸುವ ಹುಬ್ಬಳ್ಳಿ-ಅಂಕೋಲಾ ಬ್ರಾಡ್ ಗೇಜ್ ರೈಲು ಮಾರ್ಗದ ಡಿಪಿಆರ್ ಸಿದ್ಧಪಡಿಸಿದೆ.
ಸಚಿವರು ತಮ್ಮ ಉತ್ತರದಲ್ಲಿ, 'ಯೋಜನೆಗಾಗಿ ಹುಬ್ಬಳ್ಳಿ-ಕಿರಾವತಿ ನಡುವಿನ 47 ಕಿ. ಮೀ. ವಿಭಾಗದಲ್ಲಿ ಮಣ್ಣು ಮತ್ತು ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ 569.64 ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಕಾಮಗಾರಿಗೆ ಸಂಬಂಧಿಸಿದಂತೆ ಅರಣ್ಯ ಮತ್ತು ವನ್ಯಜೀವಿ ಮಂಡಳಿ ಅನುಮೋದನೆ ಬಾಕಿ ಇದ್ದ ಕಾರಣ ಕಾಮಗಾರಿ ಆಗಿಲ್ಲ. ಈಗ ಎಲ್ಲಾ ವ್ಯಾಜ್ಯ ಇತ್ಯರ್ಥವಾಗಿದೆ. ವನ್ಯಜೀವಿಗಳಿಗೆ ಪದೇ ಪದೇ ತೊಂದರೆ ಆಗುವುದು ತಪ್ಪಿಸಲು ಅರಣ್ಯ ಪ್ರದೇಶದಲ್ಲಿ ಜೋಡಿ ಹಳಿ ನಿರ್ಮಾಣ ಮಾಡಲಾಗುತ್ತದೆ" ಎಂದು ವಿವರಣೆ ನೀಡಿದ್ದಾರೆ.
ರಾಷ್ಟ್ರೀಯ ವನ್ಯಜೀವಿ ಮಂಡಳಿ ಇತ್ತೀಚೆಗೆ ಕೇಂದ್ರ ಪರಿಸರ ಇಲಾಖೆಯ ತಜ್ಞರ ಸಮಿತಿಯ ಶಿಫಾರಸು ಪ್ರಕಾರ ರೈಲ್ವೆ ಇಲಾಖೆ ಯೋಜನೆಯ ಹೊಸ ಪ್ರಸ್ತಾಪ ಸಲ್ಲಿಸಬೇಕು ಎಂದು ಸೂಚನೆ ನೀಡಿತ್ತು. ದಟ್ಟ ಅರಣ್ಯದ ನಡುವೆ ರೈಲು ಮಾರ್ಗ ಸಾಗುವ ಕಾರಣ ಈಗಿರುವ ಸ್ವರೂಪದಲ್ಲಿ ಯೋಜನೆಗೆ ಒಪ್ಪಿಗೆ ನೀಡಲು ಆಗುವುದಿಲ್ಲ ಎಂದು ಹೇಳಿತ್ತು.
ಕರ್ನಾಟಕ ಸರ್ಕಾರ ಹುಬ್ಬಳ್ಳಿ-ಅಂಕೋಲಾ ನಡುವಿನ ಸುಮಾರು 164 ಕಿ. ಮೀ. ರೈಲು ಮಾರ್ಗ ಯೋಜನೆಗೆ ಒಪ್ಪಿಗೆ ನೀಡುವಂತೆ 2017ರಲ್ಲಿ ಕೇಂದ್ರ ಪರಿಸರ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಶರಾವತಿ ವನ್ಯಧಾಮ, ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ರೈಲು ಮಾರ್ಗ ಹಾದು ಹೋಗಲಿದೆ ಎಂಬುದು ಪ್ರಸ್ತಾವನೆಯಲ್ಲಿತ್ತು. ಆದ್ದರಿಂದ ಪರಿಸರ ಪ್ರೇಮಿಗಳು ಸಹ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು.
ಈ ರೈಲು ಮಾರ್ಗ ಕರ್ನಾಟಕದಲ್ಲಿ ನೈಋತ್ಯ ರೈಲ್ವೆಯ ಪ್ರಧಾನ ಕಛೇರಿ ಇರುವ ಹುಬ್ಬಳ್ಳಿಯನ್ನು, ಕೊಂಕಣ ರೈಲ್ವೆಯ ಪ್ರಧಾನ ಜಂಕ್ಷನ್ ಆಗಿರುವ ಅಂಕೋಲಾ ಜೊತೆ ಸಂಪರ್ಕಿಸುತ್ತದೆ. ಹುಬ್ಬಳ್ಳಿಯಿಂದ ಹೊರಡುವ ರೈಲು ಕಲಘಟಗಿ, ಕಿರವತ್ತಿ, ಯಲ್ಲಾಪುರ, ಇಡಗುಂದಿ ಮೂಲಕ ಅಂಕೋಲಾ ತಲುಪಲಿದ್ದು, ನೈಋತ್ಯ ಮತ್ತು ಕೊಂಕಣ ರೈಲ್ವೆ ಒಂದಾಗಲಿದೆ.
ನೈಋತ್ಯ ರೈಲ್ವೆಯೇ ಈ ಮಾರ್ಗದ ನಿಲ್ದಾಣಗಳ ಮರು ವಿನ್ಯಾಸ, ನಿರ್ಮಾಣ ಪ್ರಕ್ರಿಯೆ ಕಾರ್ಯವನ್ನು ಆರಂಭಿಸಿತ್ತು. ನಿಲ್ದಾಣಗಳ ನೂತನ ವಿನ್ಯಾಸದ ಕುರಿತು ಕೊಂಕಣ ರೈಲ್ವೆಗೆ ಸಹ ನಕ್ಷೆಯನ್ನು ಕಳಿಸಿಕೊಡಲಾಗಿದೆ. ಅಂತಿಮ ಒಪ್ಪಿಗೆ, ಕೇಂದ್ರದ ವಿವಿಧ ಇಲಾಖೆಗಳ ಅನುಮೋದನೆ ಸಿಕ್ಕ ಬಳಿಕ ಕಾಮಗಾರಿ ಆರಂಭವಾಗಲಿದೆ.
ಹುಬ್ಬಳ್ಳಿಯಿಂದ ಅರಣ್ಯ ಪ್ರದೇಶವಿಲ್ಲದ 34 ಕಿ. ಮೀ.ಯಲ್ಲಿ ಈ ಯೋಜನೆ ಕಾರ್ಯಗತಗೊಂಡಿದೆ. ಉಳಿದ ಮಾರ್ಗ ಅರಣ್ಯದಲ್ಲಿ ಸಾಗಬೇಕಾದ ಕಾರಣ ಪರಿಸರವಾದಿಗಳು ವಿರೋಧಿಸಿದ್ದರು. ಅಲ್ಲದೇ ಕರ್ನಾಟಕ ವನ್ಯಜೀವಿ ಮಂಡಳಿ 2020ರ ಮಾರ್ಚ್‌ನಲ್ಲಿ ಯೋಜನೆಗೆ ನೀಡಿದ್ದ ಅನುಮೋದನೆಯನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.
ಕೋರ್ಟ್ ತೀರ್ಪಿನ ಬಳಿಕ 2023ರ ಜೂನ್‌ನಲ್ಲಿ ನೈಋತ್ಯ ರೈಲ್ವೆ ಹುಬ್ಬಳ್ಳಿ-ಅಂಕೋಲಾ ನಡುವಿನ ರೈಲು ಮಾರ್ಗದ ಅಂತಿಮ ಸ್ಥಳ ಸಮೀಕ್ಷೆಗೆ ಟೆಂಡರ್ ಕರೆದಿತ್ತು. ಈಗ ಹೊಸ ಡಿಪಿಆರ್‌ನಲ್ಲಿ ಯೋಜನೆ ಮರು ವಿನ್ಯಾಸವಾಗಿದೆ. ಅಲ್ಲದೇ ಅಂಕೋಲಾ-ಗುತ್ತಿ ರಾಷ್ಟ್ರೀಯ ಹೆದ್ದಾರಿ ಎರಡು ಕಡೆಯಲ್ಲಿ ಹಳಿ ಜೋಡಣೆ ಸಾಧ್ಯವೇ? ಎಂಬ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಸದ್ಯಕ್ಕೆ ಡಿಪಿಆರ್ ವಿವರ ಬಿಡುಗಡೆ ಮಾಡಿಲ್ಲ, ಸಚಿವರು ಕೆಲವು ಅಂಶದ ಬಗ್ಗೆ ಮಾತ್ರ ಲೋಕಸಭೆಯಲ್ಲಿ ಉತ್ತರ ನೀಡಿದ್ದಾರೆ.












Click it and Unblock the Notifications