ಪ್ರವಾಸಿಗರೇ ಗಮನಿಸಿ: ಗಡಾಯಿಕಲ್ಲು ಚಾರಣ ತಾತ್ಕಾಲಿಕ ನಿಷೇಧ, ಇಲ್ಲಿದೆ ಸಂಪೂರ್ಣ ಮಾಹಿತಿ
ಮಂಗಳೂರು, ಜುಲೈ 07: ಐತಿಹಾಸಿಕ ಪ್ರವಾಸಿ ತಾಣವಾಗಿರುವ ಬೆಳ್ತಂಗಡಿ ಸಮೀಪದ ನಡ ಗ್ರಾಮದಲ್ಲಿರುವ ಸಾವಿರ ಅಡಿ ಎತ್ತರದ ಗಡಾಯಿಕಲ್ಲು ಚಾರಣಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದೆ.
ವಿಪರೀತ ಮಳೆಯ ಕಾರಣ ಬಂಡೆಯಲ್ಲಿ ನೀರು ಹರಿಯುತ್ತಿರುವುದು ಮತ್ತು ಮೆಟ್ಟಿಲುಗಳಲ್ಲಿ ಪಾಚಿ ಬೆಳೆದು ಜಾರುವ ಅಪಾಯ ಇರುವ ಹಿನ್ನೆಲೆಯಲ್ಲಿ ಜುಲೈ 1ರಿಂದ ಮುಂದಿನ ಆದೇಶದ ತನಕ ಪ್ರವೇಶವನ್ನು ನಿಷೇಧಿಸಲಾಗಿದೆ. ಎಂದು ವನ್ಯಜೀವಿ ವಿಭಾಗದ ಬೆಳ್ತಂಗಡಿ ವಲಯಾರಣ್ಯಧಿಕಾರಿ ಸ್ವಾತಿ ತಿಳಿಸಿದ್ದಾರೆ.

ದಕ್ಷಿಣ ಕನ್ನಡದ ಪವಿತ್ರ ಸ್ಥಳಗಳಲ್ಲಿ ಒಂದಾದ ಧರ್ಮಸ್ಥಳಕ್ಕೆ ತುಂಬ ಹತ್ತಿರದಲ್ಲಿಯೇ ಗಡಾಯಿಕಲ್ಲು ಕೋಟೆಯಿದೆ. ಇದು ಕುದುರೇಮುಖ ಪರ್ವತ ಶ್ರೇಣಿಯ ಒಂದು ಭಾಗವಾಗಿದ್ದು ಇದನ್ನು ನರಸಿಂಹ ಗಢ, ಜಮಲಾಬಾದ್ ಕೋಟೆ ಎಂದೂ ಕರೆಯುತ್ತಾರೆ. ಸಮುದ್ರ ಮಟ್ಟದಿಂದ 1,788 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲು ಬೆಳ್ತಂಗಡಿಯಿಂದ 8 ಕಿಮೀ ದೂರದಲ್ಲಿದೆ. ಹೀಗಾಗಿ ಗಡಾಯಿಕಲ್ಲಿಗೆ ಇತರ ಜಿಲ್ಲೆಯ ಪ್ರವಾಸಿಗರಿಗಿಂತ ಸ್ಥಳೀಯರೇ ಹೆಚ್ಚಾಗಿ ಭೇಟಿ ನೀಡುತ್ತಾರೆ.
ಬೆಳ್ತಂಗಡಿ ಹಾಗೂ ಉಜಿರೆ ಪ್ರದೇಶದಲ್ಲಿ ಶಾಲಾ ಕಾಲೇಜುಗಳು ಹೆಚ್ಚಾಗಿದ್ದು, ಇಲ್ಲಿನ ವಿದ್ಯಾರ್ಥಿಗಳು ಹೆಚ್ಚಾಗಿ ಗಡಾಯಿಕಲ್ಲು ಚಾರಣ ಕೈಗೊಳ್ಳುತ್ತಾರೆ. ಅಲ್ಲದೇ ಚಾರ್ಮಾಡಿ ಘಾಟ್‌ಗೆ ಪ್ರವಾಸಕ್ಕೆ ಬರುವವರು ಕೂಡ ಗಡಾಯಿಕಲ್ಲು ಹತ್ತುತ್ತಾರೆ. ಗಡಾಯಿಕಲ್ಲು ಕಲ್ಲು ಹುಲ್ಲುಗಳಿರುವ ಎತ್ತರ ಮಟ್ಟಿಲುಗಳಿರುವ ಹಾದಿಯಾಗಿದೆ. ಕಳೆದ ಕೆಲ ದಿನಗಳಿಂದ ಭಾರೀ ಮಳೆಗಾಗುತ್ತಿದ್ದು, ಮೆಟ್ಟಿಲುಗಳಲ್ಲಿ ಪಾಚಿ ಬೆಳೆದಿದೆ. ಹೀಗಾಗಿ ಇಲ್ಲಿ ಸದ್ಯದ ಸ್ಥಿತಿಯಲ್ಲಿ ಚಾರಣ ಅಪಾಯವಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಸದ್ಯ ಗಡಾಯಿಕಲ್ಲು ಚಾರಣಕ್ಕೆ ನಿಷೇಧ ಹೇರಿದ್ದಾರೆ.
ಇನ್ನು ಮಂಗಳೂರಿನಿಂದ ಸುಮಾರು 50 ಕಿ.ಮೀ, ಧರ್ಮಸ್ಥಳದಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಗಾಡಾಯಿಕಲ್ಲನ್ನು ನೀವು ಈ ಮಾರ್ಗವಾಗಿ ಚಲಿಸುವಾಗ ನೋಡಬಹುದಾಗಿ. ನೋಡಲು ದೊಡ್ಡ ಬಂಡೆಯಂತೆ ಕಾಣುವ ಈ ಪ್ರದೇಶ ಚಾರಣ ಪ್ರಿಯರ ಮೆಚ್ಚಿನ ತಾಣವಾಗಿದೆ.












Click it and Unblock the Notifications