ಸಿಂಗಪುರದಲಿ ಭಾರತೀಯರ ವೈಷ್ಣವ ಜನತೋ

Swara-Raaga in Singapore
ಅಕ್ಟೋಬರ್ 2, ಶನಿವಾರ ಸಂಜೆ ಸಿಂಗಪುರ ಕನ್ನಡಸಂಘ ಹಾಗೂ ವುಡ್‌ಲ್ಯಾಂಡ್ಸ್ ಕಮ್ಯುನಿಟಿ ಕ್ಲಬ್, ಇಂಡಿಯನ್ ಅಕ್ಟಿವಿಟಿ ಕಮಿಟಿ ವತಿಯಿಂದ ಗಾಂಧೀತಾತನ ಸನ್ನಿಧಿಗೆಂದು ಅಜಯ್-ವಾರಿಯರ್ ಹಾಗೂ ದಿವ್ಯಾ-ರಾಘವನ್ ಅವರಿಂದ "ಸ್ವರ-ರಾಗ" ಸಂಗೀತ ಕಾರ್ಯಕ್ರಮ ನಡೆಯಿತು. ಕನ್ನಡ-ಮಲಯಾಳಂ ಒಕ್ಕೂಟದ ಈ ಜಂಟಿ ಪ್ರಯತ್ನ 'ಭಾವೈಕ್ಯದಲಿ ಕೂಡಿ ನಡೆಯುವೆವು' ಎಂಬುದಕ್ಕೆ ಒಂದು ನಿದರ್ಶನವಾಗಿತ್ತು. ಭಾಷೆ, ಭಾಷೆಗೂ ತಕರಾರಿಲ್ಲದೆ ಅಂದು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಫಿಲ್ಮಿ ಗೀತೆಗಳ ಈ ಕಾರ್ಯಕ್ರಮದ ಪ್ರಾರಂಭ ನಾದಸ್ವರ ಹಾಗೂ ಪುಟಾಣಿ ಧೃತಿ ಭಟ್ ಅವರಿಂದ ಗಂ-ಗಣಪತಯೇ ಎಂಬ ಗಣಪ ವಂದನೆ.

ಗಾಂಧಿ-ಜಯಂತಿಯಂದು ಗಾಂಧೀಜಿ ಅವರಿಗೆ ಪ್ರಿಯವಾದ ಸುಪ್ರಸಿದ್ಧ ಗುಜರಾತಿ ಕವಿ ನಾರಸೀ ಮೆಹತಾ ಅವರ 'ವೈಷ್ಣವ ಜನತೋ ತೇನೇ ಕಹಿಯೆ ಜೆ' ದಿವ್ಯಾ ಅವರು ಇಂಪಾಗಿ ಹಾಡಿದರು. ನಂತರ ರಾಜನ್-ನಾಗೇಂದ್ರ ಸಂಗೀತ, ಚಿ.ಉದಯಶಂಕರ್ ವಿರಚಿತ 'ಮಾಮರವೆಲ್ಲೋ, ಕೋಗಿಲೆ ಎಲ್ಲೋ' ಹಾಡಿನಿಂದ ಅಜಯ್ ವಾರಿಯರ್ ಹಾಡಿದರು. ಸಂಗೀತ ಕ್ಷೇತ್ರದಲ್ಲಿ ಕಳೆದ 8 ವರ್ಷದಲ್ಲಿ, ಸಾಕಷ್ಟು ಹೆಸರು ಮಾಡಿರುವ ಅಜಯ್-ದಿವ್ಯಾ ಜೋಡಿ ಹಾಡಿದ ಕನ್ನಡ, ತಮಿಳು, ಮಲಯಾಳಂ, ಹಿಂದಿ ಹಾಡುಗಳು "ಹಾಡು ಹಳೆಯದಾದರೇನು, ಭಾವ ನವ-ನವೀನ" ಎನಿಸಿದ್ದಂತೂ ನಿಜ. ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು, ಒನ್ಸ್‌ಮೋರ್ ಕೇಳಬೇಕೆನಿಸಿದರೆ, ದಿವ್ಯಾ ಹಾಡಿದ ದೂರದಿಂದ ಬಂದಂಥ ಹಾಡಿಗೆ ವಯಸ್ಸಿನ ಅಂತರವಿಲ್ಲದೆ ವೇದಿಕೆಯ ಮೇಲೆ ಕುಣಿದರು ಸಭಿಕರು. ಅಂದು ಎಲ್.ಆರ್.ಈಶ್ವರಿ ಕೊರಳಲ್ಲಿ ಮೂಡಿ ಬಂದ ಈ ಹಾಡಿಗೆ ತಲೆದೂಗಿದರು ಸಾವಿರಾರು, ಹೆಜ್ಜೆ ಹಾಕಿದರು ಕೆಲವರು ಆದರೆ ಇಂದು ಯಾರೇ ಈ ಹಾಡು ಹಾಡಲಿ ವೇದಿಕೆಯ ಏರಿ "ನಾ ಕುಣಿವೆ, ನಾ ಕುಣಿವೆ ನನ್ನ ದೇವರಾಣೆ" ಎಂದು ಕುಣಿವ ಸಭಿಕರಿಗಂತೂ ಕಮ್ಮಿ ಇಲ್ಲ.

ಕಾರ್ಯಕ್ರಮ ಸ್ವರ-ರಾಗ ಎಂದಿತ್ತಾದರೂ ಗಾಯಕರಿಗೆ ಬ್ರೇಕ್ ನೀಡಲು ನೃತ್ಯ ಅಳವಡಿಸಲಾಗಿತ್ತು. ಸ್ಥಳೀಯ ಮಕ್ಕಳಿಂದ ಚುಕುಬುಕು ರೈಲು, ಇಸ್ಲಾಂ ಪದ್ದತಿಯ ಮದುವೆ, ಕೋಲಾಟ, ಮತ್ತು ಪ್ರಭುದೇವ ಡ್ಯಾನ್ಸ್ ಅಕಾಡೆಮಿ ಅವರಿಂದ ಬಾಲಿವುಡ್ ನೃತ್ಯಗಳು ಮುದ ನೀಡಿದವು. ಕನ್ನಡ ಸಂಘದ ಅಧ್ಯಕ್ಷರಾದ ಡಾ.ವಿಜಯ್‌ಕುಮಾರ್ ಅವರಿಂದ ಸ್ವಾಗತ ಭಾಷಣ, ಗಿರೀಶ್ ಅಂದಲಗಿ ಅವರಿಂದ ನಿರೂಪಣೆ.

"ಸ್ವರ-ರಾಗ" ಸಂಗೀತ ಮಾಧುರ್ಯದ ಜೊತೆಗೆ ಯಾವುದೇ ಭಾಷೆಯ ಹಾಡಿಗೂ ತಕರಾರಿಲ್ಲದೆ ಐನೂರು ಜನರು ಭಾರತದ ಬೇರೆ, ಬೇರೆ ಪ್ರಾಂತ್ಯದ ಸಭಿಕರು "ನಮ್ಮ ಹಾಡು, ನಿಮ್ಮ ಹಾಡು ಎಂಬ ಭಾಷಾ ತಕರಾರಿಲ್ಲದೆ, ಸಂಗೀತಕ್ಕೆ ಭಾಷೆ ಇಲ್ಲ, ಭಾವವಿದೆ, ಅದು ಎಲ್ಲರೂ ಆನಂದಮ್.. ಆನಂದಮ್, ಆನಂದಮೇ ಸದಾನಂದಂ - ಎಂದು ಆಸ್ವಾದಿಸುವ ಭಾವ ನಮ್ಮಲ್ಲಿ ಇರಬೇಕು ಎಂಬುದನ್ನು ಸಾಬೀತು ಪಡಿಸಿದರು. ಸೊಗಸಾದ ಭೋಜನ, ದಿವ್ಯಾ-ಅಜೇಯರ ಗಾಯನ, ಮಿಲೇ ಸುರ್ ಮೇರಾ ತುಮ್ಹಾರಾ, ತೊ ಸುರ್ ಬನೇ ಹಮಾರ ಎಂಬುದನು ಮತ್ತೊಮ್ಮೆ ಮನದಟ್ಟು ಮಾಡಿತು.

ವೈಷ್ಣವ ಜನತೋ ಆನಂದಿಸಿದ್ದ ಗಾಂಧೀಜಿ

1927 ಆಗಸ್ಟ್ 27 ಬೆಂಗಳೂರಿನ ದೇಶಿ ವಿದ್ಯಾಶಾಲೆಯಲ್ಲಿ ವ್ಯಾಯಾಮ ಘಟಕ ಉದ್ಘಾಟಿಸಿದ್ದರು. ಈ ಸಮಾರಂಭದಲ್ಲಿ ತಿರುಮಲೆ ರಾಜಮ್ಮನವರು ಗಾಂಧೀಜಿಗೆ ಪ್ರಿಯವಾದ 'ವೈಷ್ಣವ ಜನತೋ' ಗೀತೆಯನ್ನು 'ಮಾಯಾಮಾಳವಗೌಳ' ರಾಗದಲ್ಲಿ ಹಾಡಿದರು. ಗಾಂಧಿ ಸಂತೋಷ ಹೊಂದಿದ್ದರು. ಮರುದಿನ ಗಾಂಧಿ ಮೌನ. ಆದರೆ ರಾಜಮ್ಮನವರಿಗೆ ತಮ್ಮ ಬೀಡಾರಕ್ಕೆ ಬಂದು ಹಾಡಲು ಹೇಳಿದರು. ಮರುದಿನ ರಾಜಮ್ಮನವರು ಬಂದಾಗ ಹರೀಂದ್ರನಾಥ ಚಟ್ಟೋಪಾಧ್ಯಾಯರು ತಮ್ಮ ಪತ್ನಿ ಕಮಲಾದೇವಿಯೊಡನೆ ಬಂದಿದ್ದರು. ಕೈಯಲ್ಲಿ ತಂಬೂರಿ. ರಾಜಮ್ಮನವರು ಹಾಡಿದರು. ನಂತರ ಹರೀಂದ್ರನಾಥರು ಹಾಡಿದರು. ಪುನಃ ರಾಜಮ್ಮನವರು ವೈಷ್ಣವಜನತೋ ಶ್ರೀರಾಗದಲ್ಲಿ ಹಾಡಿದರು. ಮತ್ತೆ ಹರೀಂದ್ರನಾಥರು. ಗಾಂಧಿ ಮುಖದಲ್ಲಿ ಸಂತೃಪ್ತಿ. ಗಾಂಧೀಜಿ ಒಂದು ಚೀಟಿಯಲ್ಲಿ ಈ ರೀತಿ ಬರೆದು ಕಮಲಾದೇವಿಗೆ ಕೊಟ್ಟರು "ಇಬ್ಬರು ನಿಪುಣರು ಕಲಾ ಕೌಶಲ್ಯ ತೋರಿಸಿದ್ದಾರೆ. ಪತಿ(ಹರೀಂದ್ರನಾಥ)ಯ ಕೌಶಲ್ಯ ಕಂಡು ಸತಿ ಹಿಗ್ಗುತ್ತಿದ್ದಾಳೆ ಸತಿ(ರಾಜಮ್ಮ)ಯ ಕೌಶಲ್ಯ ಕಂಡು ಪತಿ (ತಿತಾಶರ್ಮ) ಹಿಗ್ಗುತ್ತಿದ್ದಾರೆ".

1924ರಲ್ಲಿ ಬೆಳಗಾಂ ಕಾಂಗ್ರೆಸ್ ಅಧಿವೇಶನ. ಪ್ರಸಿದ್ಧ ಆಸ್ಥಾನ ವಿದ್ವಾಂಸ ವೀಣೆ ಶೇಷಣ್ಣನವರು ಗಾಂಧಿಯವರ ಎದುರಿಗೆ ಕಾಲು ಘಂಟೆ ಕಾಪಿ ರಾಗ ನುಡಿಸಿದರು. ಗಾಂಧೀಜಿ ಏಕಚಿತ್ತರಾಗಿ ಆಲಿಸಿದರು. ಸಂಗೀತದ ಸಮಯ ಮುಗಿಯಿತು. ಗಾಂಧಿ ಅಂದು ಮೌನ. ಒಂದು ಚೀಟಿ ಬರೆದು ಕಾರ್ಯದರ್ಶಿ ಮಹಾದೇವ ದೇಸಾಯಿಗೆ ಕೊಟ್ಟರು. 'ಸಂಗೀತ ಮುಂದುವರಿಯಲಿ' ಎಂದಷ್ಟೇ ಇದ್ದಿತು. ಮಹದೇವ ಅವರು ಈಗ ನಿಮಗೆ ಮೀಟಿಂಗ್ ಇದೆ ಎಂದಾಗ ಗಾಂಧಿ ಮತ್ತೆ ಬರೆದರು, ಸಂಗೀತ ಮುಂದುವರೆಯಲಿ, ಮತ್ತೆ ಕಾಲು ಘಂಟೆ ಸಂಗೀತ. ಆ ಮೇಲೆ ಇನ್ನೊಂದು ಚೀಟಿ ಬರದರು. "ಅವರಿಗೆ ತಿಳಿಸು. ಮನಸ್ಸಿಗೆ ಬಹಳ ಶಾಂತಿ ಕೊಟ್ಟಿದ್ದಾರೆ" ವೀಣೆ ಶೇಷಣ್ಣನವರ ಸಂತೋಷಕ್ಕೆ ಪಾರವೇ ಇಲ್ಲ, ವೀಣೆ ಮೀಟಿದಾತ, ಆಲಿಸಿದಾತ ಈರ್ವರಿಗೂ ಧನ್ಯತಾ ಭಾವ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+