Shorapur Assembly By Elections 2024: ಸುರಪುರ ವಿಧಾನಸಭೆ ಉಪಚುನಾವಣೆ- ಮತಭೇಟೆಗೆ ಕಮಲ ಕೈ ಕಸರತ್ತು
ಸುರಪುರ ಮಾರ್ಚ್ 24: ಸುರಪುರ ವಿಧಾನಸಭೆ ಉಪಚುನಾವಣೆ ಗರಿಗೆದರಿದೆ. ಗೆಲುವಿನ ಲೆಕ್ಕಾಚಾರದಲ್ಲಿ ಪಕ್ಷದ ನಾಯಕರು, ಮುಖಂಡರು ಸರಣಿ ಸಭೆಗಳು ನಡೆಯುತ್ತಿವೆ. ಮತದಾರರನ್ನು ಸೆಳೆಯಲು ಬಿಜೆಪಿ, ಕಾಂಗ್ರೆಸ್ ನಾಯಕರ ಕಸರತ್ತು ಶುರುವಾಗಿದೆ.
ಶಾಸಕರಾಗಿದ್ದ, ಹಿರಿಯ ಕಾಂಗ್ರೆಸ್ಸಿಗ ರಾಜಾ ವೆಂಕಟಪ್ಪನಾಯಕ ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿರುವ ಸುರಪುರಕ್ಕೆ ಚುನಾವಣೆ ನಡೆಯಲಿದೆ. ಎಸ್ಟಿ ಮೀಸಲು ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಮೇ 7ರಂದು ಚುನಾವಣೆ ಘೋಷಿಸಿಲಾಗಿದೆ. ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ್ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ ಅವರಿಗೆ ಕಾಂಗ್ರೆಸ್ ಪಕ್ಷ ಅಧಿಕೃತ ಅಭ್ಯರ್ಥಿಯೆಂದು ಘೋಷಿಸಿದೆ.

ಇನ್ನು ಭಾರತೀಯ ಜನತಾ ಪಕ್ಷದಿಂದ ಮಾಜಿ ಸಚಿವ ನರಸಿಂಹನಾಯಕ (ರಾಜೂಗೌಡ) ಅವರಿಗೇ ಟಿಕೆಟ್ ಸಹಜ ಎನ್ನಲಾಗಿದೆ. ಹೀಗಾಗಿ ಲೋಕಸಭಾ ಚುನಾವಣೆಯ ಕಾಲದಲ್ಲೇ ವಿಧಾನಸಭೆ ಉಪ ಚುನಾವಣೆಯೂ ಬಂದೆರಗಿರುವುದು ಚುನಾವಣಾ ವಾತಾವರಣವನ್ನು ಮತ್ತಷ್ಟೂ ಕಾವೇರಿಸಿದೆ.
ಮತದಾರರ ಮನೆ-ಮನೆ ಗೆಲ್ಲಲು ನಾಯಕರ ಕೆಸರತ್ತು: ಮತಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರನ್ನು ತಮ್ಮತ್ತ ಒಲಿಸಿಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮತದಾರರ ಮನೆ ಬಾಗಿಲಿಗೆ ಎಡತಾಕುತ್ತಿದ್ದಾರೆ. ತಾವು ಮಾಡಿರುವ ಮತ್ತು ಮುಂದೆ ಮಾಡಲಿರುವ ಕನಸಿನ ಯೋಜನೆಗಳನ್ನು ಜನರ ಮುಂದೆಯಿಡುತ್ತ ಮನವೊಲಿಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ.
ಕಾಂಗ್ರೆಸ್: ಕೆಲದಿನಗಳಿಂದ ಕಾಂಗ್ರೆಸ್ ಕಚೇರಿಯಲ್ಲಿ ಮತ್ತು ಪ್ರಮುಖ ಗ್ರಾಮಗಳಲ್ಲಿ ಸಭೆಗಳಲ್ಲಿ ನಡೆಯುತ್ತಿದೆ. ಅಲ್ಲದೆ ಇಫ್ತಾರಕೂಟಗಳಲ್ಲಿ ನಾಯಕರುಗಳು ಕಾಣಿಸಿಕೊಂಡಿದ್ದಾರೆ. ಮದುವೆ, ಗೃಹಪ್ರವೇಶ, ಜಾತ್ರೆ ಸೇರಿದಂತೆ ವಿವಿಧ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ಯಾರು?
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ರಾಜೂಗೌಡರಿಗೇ ಬಿಜೆಪಿ ಟಿಕೆಟ್ ಎಂಬುದಾಗಿ ಘೋಷಿಸಿದ್ದು, ಅಧಿಕೃತ ಮುದ್ರೆ ಒತ್ತುವುದು ಬಾಕಿಯಿದ್ದು, ಭಾನುವಾರ ಹೆಸರು ಘೋಷಣೆ ಸಾಧ್ಯತೆಯಿದೆ ಎನ್ನಲಾಗಿದೆ. ಬಿಜೆಪಿ ನಾಯಕರು ಹುಣಸಗಿ ಮತ್ತು ಸುರಪುರದಲ್ಲಿ ಮುಖಂಡರು, ನಾಯಕರ ಸಭೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಬೂತ್ ಮಟ್ಟದ ಏಜಂಟರ್ ಸಭೆ, ಕಾರ್ಯಕರ್ತರ ಸಭೆಗಳು ಜರಗುತ್ತಿವೆ.
ಬಿಜೆಪಿ ನಾಯಕರು 15 ದಿನಗಳಿಂದ ಸಕ್ರೀಯವಾಗಿ ತೊಡಗಿಕೊಂಡ ಸಮಾರಂಭಗಳಲ್ಲಿ ಪಾಲ್ಗೊಂಡು ಕಾರ್ಯಕರ್ತರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬಿಜೆಪಿ ಮತ್ತು ತಾವು ಮಾಡಿರುವ ಸಾಧನೆಗಳನ್ನು ಮತದಾರರಿಗೆ ಮನವರಿಗೆ ಮಾಡಿಕೊಡುತ್ತಿದ್ದಾರೆ.
ಇನ್ನು ತಂದೆ, ಶಾಸಕರಾದ ವೆಂಕಟಪ್ಪ ನಾಯಕರು ಅಕಾಲಿಕ ಮರಣ ಹೊಂದುತ್ತಾರೆಂದು ಯಾರು ಭಾವಿಸಿರಲಿಲ್ಲ. ಇದು ಸಾಕಷ್ಟು ನೋವು ತಂದಿದೆ. ಕಾಂಗ್ರೆಸ್ ಕಾರ್ಯಕರ್ತರು ನಿರಾಶೆಗೆ ಒಳಗಾಗಬೇಕಿಲ್ಲ, ನಿಮ್ಮೊಂದಿಗೆ ವೆಂಕಟಪ್ಪನಾಯಕನ ಕುಟುಂಬವಿದೆ ಎಂಬುದು ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಮಾತಾಗಿದೆ.
ಉಪಚುನಾವಣೆಯನ್ನು ನಾವು ಬಯಸಿರಲಿಲ್ಲ. ಸುರಪುರ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಮತದಾರರು ಯಾರು ಮರೆತಿಲ್ಲ. ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಒತ್ತಾಯದ ಮೇರೆಗೆ ಚುನಾವಣೆ ಎದುರಿಸಲಿದ್ದೇವೆ ಎಂಬುದು ಮಾಜಿ ಸಚಿವ ರಾಜೂಗೌಡರ ಅಭಿಪ್ರಾಯವಾಗಿದೆ.












Click it and Unblock the Notifications