ವಿಜಯಪುರ-ಮಂಗಳೂರು ಪ್ರತಿದಿನದ ರೈಲು; ಬಿಗ್ ಅಪ್‌ಡೇಟ್
ವಿಜಯಪುರ, ಡಿಸೆಂಬರ್ 08; ಕರ್ನಾಟಕದ ಕರಾವಳಿ ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸುತ್ತದೆ ವಿಜಯಪುರ-ಮಂಗಳೂರು ಪ್ರತಿದಿನದ ಎಕ್ಸ್‌ಪ್ರೆಸ್ ರೈಲು. ಈ ರೈಲನ್ನು ಮಂಗಳೂರು ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಬೇಕು ಎಂದು ಹಲವು ಬಾರಿ ಬೇಡಿಕೆ ಇಡಲಾಗಿತ್ತು.
ಪಾಲಕ್ಕಾಡ್ ವಿಭಾಗ ಮಟ್ಟದ ರೈಲ್ವೇ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಈ ಬೇಡಿಕೆಗೆ ಮನ್ನಣೆ ನೀಡಲಾಗಿದೆ. ಸಭೆಯಲ್ಲಿ ಮಂಗಳೂರು-ಮುಂಬೈ ಸಿಎಸ್‌ಟಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, ಮಂಗಳೂರು-ಬೆಂಗಳೂರು ಎಕ್ಸ್‌ಪ್ರೆಸ್, ವಿಜಯಪುರ-ಮಂಗಳೂರು ಪ್ರತಿದಿನದ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರು ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಲಾಯಿತು.

ಮಂಗಳೂರು-ಮಡಗಾಂವ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರದ ಪ್ರಸ್ತಾವನೆ ಸಿದ್ಧವಾಗಿದೆ. ಇದಕ್ಕೂ ಮೊದಲು ಮಂಗಳೂರು ಜಂಕ್ಷನ್‌ನಿಂದ ಸಂಚಾರ ನಡೆಸುವ ಈ ಮೂರು ರೈಲುಗಳನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ.
ಅಧಿಕಾರಿಗಳು ಮಂಗಳೂರು-ವಿಜಯಪುರ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಲಾಗುತ್ತದೆ. ಆದರೆ ಅದಕ್ಕೆ ತಕ್ಕಂತೆ ವೇಳಾಪಟ್ಟಿ ಬದಲಾವಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ವಿಜಯಪುರದ ಸಂಸದರು ಕೇಂದ್ರ ರೈಲ್ವೆ ಇಲಾಖೆಗೆ ವಿಜಯಪುರ-ಮಂಗಳೂರು ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಬೇಕು ಎಂದು ಪತ್ರವನ್ನು ಬರೆದಿದ್ದರು.
ವೇಳಾಪಟ್ಟಿ ಬದಲು; ವಿಜಯಪುರ-ಮಂಗಳೂರು ಜಂಕ್ಷನ್ ರೈಲು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆಯಾದರೆ ಅದಕ್ಕೆ ತಕ್ಕಂತೆ ವೇಳಾಪಟ್ಟಿ ಬದಲಾವಣೆಯಾಗಲಿದೆ ಎಂದು ಅಧಿಕಾರಿಗಳ ಹೇಳಿದ್ದಾರೆ. ರೈಲು ವಿಜಯಪುರದಿಂದ ಮಂಗಳೂರು ಸೆಂಟ್ರಲ್‌ಗೆ ಮಧ್ಯಾಹ್ನ 1 ಗಂಟೆಗೆ ಆಗಮಿಸಲಿದೆ. 2.35ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ವಿಜಯಪುರಕ್ಕೆ ಹೊರಡಲಿದೆ.
ಸುಮಾರು ಎರಡು ವರ್ಷಗಳಿಂದ ಮಂಗಳೂರು ಮತ್ತು ವಿಜಯಪುರ ನಡುವೆ ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ಸಂಚಾರ ನಡೆಸುತ್ತಿದೆ. ಡಿಸೆಂಬರ್ 1, 2021ರಂದು ವಿಜಯಪುರದಿಂದ ಮತ್ತು ಡಿಸೆಂಬರ್ 2ರಿಂದ ಮಂಗಳೂರಿನಿಂದ ಈ ರೈಲು ಸೇವೆ ಆರಂಭವಾಯಿತು. ಆದರೆ ರೈಲು ಇನ್ನೂ ತತ್ಕಾಲ್ ಮಾದರಿಯಲ್ಲಿಯೇ ಇದೆ. ಈ ರೈಲನ್ನು ಕಾಯಂಗೊಳಿಸಬೇಕು ಎಂಬ ಬೇಡಿಕೆಗೆ ಇನ್ನೂ ಮನ್ನಣೆ ಸಿಕ್ಕಿಲ್ಲ.
ರೈಲು ತತ್ಕಾಲ್ ಮಾದರಿಯಲ್ಲಿ ಇರುವುದರಿಂದ ರೈಲಿನ ದರಗಳು ಹೆಚ್ಚಿದೆ. ಈ ರೈಲಿನಲ್ಲಿ ಮಂಗಳೂರು, ಉಡುಪಿ, ಮಣಿಪಾಲಕ್ಕೆ ಆರೋಗ್ಯ ಸೇವೆ ಪಡೆಯಲು, ವ್ಯಾಸಂಗಕ್ಕಾಗಿ ಹಲವಾರು ಜನರು ಪ್ರಯಾಣಿಸುತ್ತಾರೆ. ಅಲ್ಲದೇ ಕುಕ್ಕೆ ಸುಬ್ರಮಣ್ಯ ಸೇರಿದಂತೆ ವಿವಿಧ ದೇವಾಲಯಗಳಿಗೆ ಭಕ್ತರು ಆಗಮಿಸುತ್ತಾರೆ. ಈ ರೈಲನ್ನು ಕಾಯಂಗೊಳಿಸಿದರೆ ದರಗಳು ಕಡಿಮೆಯಾಗಲಿದೆ. ಆಗ ಇನ್ನೂ ಹೆಚ್ಚಿನ ಜನರು ಸಂಚಾರ ನಡೆಸಲು ಅನುಕೂಲವಾಗಲಿದೆ ಎಂದು ರೈಲ್ವೆ ಇಲಾಖೆಗೆ ಮಾಡಿರುವ ಮನವಿಯಲ್ಲಿ ತಿಳಿಸಲಾಗಿದೆ.
ನೈಋತ್ಯ ರೈಲ್ವೆ ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಆದೇಶವೊಂದನ್ನು ಹೊರಡಿಸಿತ್ತು. ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಜಂಕ್ಷನ್ ಪ್ರತಿದಿನದ ವಿಶೇಷ ರೈಲನ್ನು ಅಕ್ಟೋಬರ್ 1ರಿಂದ ಡಿಸೆಂಬರ್ 31ರ ತನಕ ವಿಸ್ತರಣೆ ಮಾಡಿತ್ತು. ಅದೇ ರೀತಿ ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್-ವಿಜಯಪುರ ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಅಕ್ಟೋಬರ್ 2ರಿಂದ ಜನವರಿ 1, 2024ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಆದರೆ ರೈಲಿನ ವೇಳಾಪಟ್ಟಿ, ನಿಲ್ದಾಣ, ಬೋಗಿಗಳ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ಈಗ ಮಂಗಳೂರು ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್ ತನಕ ರೈಲು ವಿಸ್ತರಣೆಯಾದರೆ ವೇಳಾಪಟ್ಟಿ ಬದಲಾವಣೆಯಾಗಲಿದೆ. ವಿಸ್ತರಣೆ ಕುರಿತು ಯಾವಾಗ ಅಧಿಕೃತ ಆದೇಶವಾಗಲಿದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications