ಕುಂದಾಪುರ: ಬೃಹತ್ ಹೆಬ್ಬಾವು ಹಿಡಿದ ಏಳನೇ ತರಗತಿ ಪೋರ, ವಿಡಿಯೋ ಸಖತ್ ವೈರಲ್
ಕುಂದಾಪುರ, ನವೆಂಬರ್ 23: ಇತ್ತೀಚಿಗೆ ಜನ ಸಂದಣಿ ಇರುವ ಜಾಗದಲ್ಲೇ ಹಾವು ಕಂಡು ಬರುವುದು ಜಾಸ್ತಿಯಾಗುತ್ತಿದೆ. ಬೇಸಿಗೆಯ ಧಗೆಗೆ ನೀರು ಅರಸಿ ಹಾವುಗಳು ಬಿಲದಿಂದ, ಹುತ್ತದಿಂದ ಹೊರಬರುತ್ತವೆ. ಹೀಗಾಗಿ ಜನರಿರುವ ಪ್ರದೇಶದಲ್ಲಿ ಹಾವುಗಳ ಒಡಾಟ, ಅವುಗಳ ರಕ್ಷಣೆ ಕಾರ್ಯಗಳು ಹೆಚ್ಚಾಗುತ್ತಿದೆ.
ಹಾವುಗಳನ್ನು ಕಂಡರೆ ಯಾರಿಗೆ ಭಯ ಇಲ್ಲ ಹೇಳಿ..? ಹಾವುಗಳೆಂದರೆ ಅಲ್ಲಿಂದ ಕಾಲ್ಕಿತ್ತು ಓಡುವವರೇ ಹೆಚ್ಚು. ಉರಗ ತಜ್ಞರು ಎಷ್ಟು ಜಾಗೃತಿ ಮೂಡಿಸಿದರೂ ಕೂಡ ಕೆಲವರು ಕಂಡ ಕಂಡಲ್ಲಿ ಹಾವುಗಳನ್ನು ಹೊಡೆದು ಕೊಲ್ಲುತ್ತಾರೆ. ಆದರೆ ಇಲ್ಲೊಬ್ಬ ಬಾಲಕ ಹಾವಿನ ಕುತ್ತಿಗೆಗೆ ಕೈ ಹಾಕಿ ಬೃಹತ್ ಗಾತ್ರದ ಹಾವನ್ನು ಹಿಡಿದಿದ್ದಾನೆ.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಾಲಿಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಾಲಕ ಹೆಬ್ಬಾವು ಹಿಡಿದಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಸಾಲಿಗ್ರಾಮ ಪರಿಸರದಲ್ಲಿ ಬೃಹತ್ ಹೆಬ್ಬಾವೊಂದು ಕಂಡು ಬಂದಿತ್ತು. ಈ ಬಗ್ಗೆ ಸ್ಥಳೀಯರು ಉರಗ ತಜ್ಞ ಸುಧೀಂದ್ರ ಐತಾಳ್ ಅವರಿಗೆ ಮಾಹಿತಿ ನೀಡದ್ದಾರೆ.
ಈ ವೇಳೆ ತಂದೆಯ ಜೊತೆಗೆ ಸ್ಥಳಕ್ಕೆ ಬಂದ 12 ವರ್ಷದ ಪೋರ ಧೀರಜ್ ಐತಾಳ್ ಹೆಬ್ಬಾವಿನ ಬಾಯಿಯ ಬಳಿ ಕೈ ಹಾಕಿ ತಂದೆಯ ಜೊತೆಗೆ ಹಾವನ್ನು ಹಿಡಿದಿದ್ದಾನೆ. ಈ ವಿಡಿಯೋ ವಾಟ್ಸ್ಆ್ಯಪ್, ಫೇಸ್ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಧೈರ್ಯದಿಂದ ಹೆಬ್ಬಾವನ್ನು ಹಿಡಿದು ಭೇಷ್ ಎನಿಸಿಕೊಂಡಿರುವ ಬಾಲಕನ ಹೆಸರು ಧೀರಜ್ ಐತಾಳ್. ಈತ ಚಿತ್ರಪಾಡಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾನೆ. ಈ ಪುಟ್ಟ ಪೋರನ ಧೀರತನಕ್ಕೆ ಮನಸೋತಿರುವ ಜನರು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಧೀರಜ್ ಐತಾಳ್ ತಂದೆ ಸುಧೀಂದ್ರ ಐತಾಳ್ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಸಮೀಪ ವಾಸವಿದ್ದಾರೆ. ಸುಧೀಂದ್ರ ಅವರು ಪ್ರಾಣಿ-ಪ್ರೇಮಿಯಾಗಿದ್ದು ಗಾಯಗೊಂಡ ಪ್ರಾಣಿ-ಪಕ್ಷಿಗಳಿಗೆ ಮನೆಯಲ್ಲೇ ಚಿಕಿತ್ಸೆ ನೀಡುತ್ತಿದ್ದಾರೆ. ತಾವು ಪ್ರಾಣಿಗಳೊಂದಿಗೆ ಸ್ನೇಹ ಸಂಬಂಧ ವೃದ್ಧಿಸಿಕೊಳ್ಳುವುದರ ಜೊತೆಗೆ ಪುತ್ರನಿಗೂ ಆ ಕುರಿತ ಅಭಿರುಚಿ ಬೆಳೆಸಿದ್ದಾರೆ. ಕುಂದಾಪುರ ಮಾತ್ರವಲ್ಲದೇ ಉಡುಪಿ ಜಿಲ್ಲೆಯ ಮೂಲೆ ಮೂಲೆಯಿಂದ ಸುಧೀಂದ್ರ ಐತಾಳ್ ಅವರ ಸಾಲಿಗ್ರಾಮ ನಿವಾಸಕ್ಕೆ ಭೇಟಿ ನೀಡಿ ಪ್ರಾಣಿ-ಪಕ್ಷಿಗಳನ್ನು ವೀಕ್ಷಿಸುತ್ತಾರೆ. ಸದ್ಯ ಸುಧೀಂದ್ರ ಐತಾಳ್ ಅವರ ಮನೆ ಸ್ಥಳೀಯವಾಗಿ ಪ್ರವಾಸಿ ತಾಣವಾಗಿದೆ.












Click it and Unblock the Notifications