ಕರಾವಳಿ ಬಿಜೆಪಿಯಲ್ಲಿ ಅಪಸ್ವರ: ಪಕ್ಷದಿಂದ ರಘುಪತಿ ಭಟ್ ಉಚ್ಚಾಟನೆಗೆ ತೀವ್ರ ಆಗ್ರಹ
ಉಡುಪಿ, ಮೇ 23: ಈ ಬಾರಿಯ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿರುವ ರಘುಪತಿ ಭಟ್ ಬಿಜೆಪಿಗೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಕರಾವಳಿ ನಾಯಕರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ರಘುಪತಿ ಭಟ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದಾಗಿ ತಿಳಿಸಿ, ನಾಮಪತ್ರ ಸಲ್ಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಯ ವಿರುದ್ಧ ಬಂಡಾಯ ಸಾರಿರುವ ಬಿಜೆಪಿಯ ಮಾಜಿ ಶಾಸಕರಾದ ರಘುಪತಿ ಭಟ್ ಅವರನ್ನು ಪಕ್ಷದಿಂದ ಕೂಡಲೇ ಉಚ್ಚಾಟಿಸುವಂತೆ ಜಿಲ್ಲಾ ಬಿಜೆಪಿ ಮುಖಂಡರು ಪಕ್ಷದ ರಾಜ್ಯ ಸಮಿತಿಗೆ ಶಿಫಾರಸು ಮಾಡಿದೆ.

ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ಅವರು ಬಿಜೆಪಿ ಕಾರ್ಯಕರ್ತರ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿರುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದೆ. ಮತದಾರರಲ್ಲೂ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಹಾಗಾಗಿ ಅವರನ್ನು ಉಚ್ಛಾಟಿಸುವಂತೆ ಶಿಫಾರಸು ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಬಿಜೆಪಿ ವಿರುದ್ಧ ರಘುಪತಿ ಭಟ್ ಬಹಿರಂಗ ಅಸಮಾಧಾನ
ಶಿಕ್ಷಕರ ಕ್ಷೇತ್ರದ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ರಘುಪತಿ ಭಟ್ ಬಹಿರಂಗವಾಗಿ ಬಿಜೆಪಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ಶಿಕ್ಷಕರ ಕ್ಷೇತ್ರದ ಟಿಕೆಟ್ ಜೆಡಿಎಸ್ ಪಕ್ಷದ ಚಿಕ್ಕಮಗಳೂರು ಅಭ್ಯರ್ಥಿಗೆ ನೀಡಿ ಪದವೀಧರ ಕ್ಷೇತ್ರದ ಟಿಕೆಟ್ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿಗೆ ನೀಡಲಾಗಿದೆ. ಇದು ನಾಲ್ಕು ದಶಕಗಳಿಂದ ಬಿಜೆಪಿ ಸಂಪ್ರದಾಯ ಮುರಿದು ಕರಾವಳಿ ಭಾಗಕ್ಕೆ ನೀಡುತ್ತಿದ್ದ ಶಿಕ್ಷಕರ ಕ್ಷೇತ್ರದ ಟಿಕೆಟ್ ನೀಡದೆ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಭಾಗದ ವಿದ್ಯಾವಂತ, ಪ್ರಜ್ಞಾವಂತ ಮತದಾರರಿಗೆ ಅನ್ಯಾಯ ಮಾಡಿದ ಹಾಗಾಗಿದೆ.

1994 ರಿಂದಲೂ ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಕಾರ್ಯಕರ್ತನಾಗಿ, ಪದಾಧಿಕಾರಿಯಾಗಿ ವಿವಿಧ ಸ್ಥರಗಳಲ್ಲಿ ಕೆಲಸ ಮಾಡಿದ್ದೇನೆ. ವಿಧಾನ ಸಭೆಗೆ ಸ್ಪರ್ಧಿಸಿದ 3 ಬಾರಿಯೂ ಗೆದ್ದಿರುತ್ತೇನೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನಗೆ ಯಾವುದೇ ಮಾಹಿತಿ ನೀಡದೆ ನನ್ನನ್ನು ಬದಲಾಯಿಸಲಾಯಿತು. ಈಗ ವಿಧಾನ ಪರಿಷತ್ ಟಿಕೆಟ್ ಘೋಷಣೆಯಾಗಿದೆ.
ಆದರೆ ನಾಲ್ಕು ದಶಕಗಳಿಂದ ಬಿಜೆಪಿ ಸಂಪ್ರದಾಯ ಮುರಿದು ಕರಾವಳಿ ಭಾಗಕ್ಕೆ ನೀಡುತ್ತಿದ್ದ ಶಿಕ್ಷಕರ ಕ್ಷೇತ್ರ ನೀಡದೆ ಮಾಡಿದ ಅನ್ಯಾಯಕ್ಕೆ ನ್ಯಾಯ ಕೊಡುವವರು ಯಾರು? ಪಕ್ಷ ತೆಗೆದುಕೊಂಡಿರುವ ಈ ನಿಲುವಿಂದ ವಿಚಲಿತನಾಗಿದ್ದೇನೆ. ಇದು ಪಕ್ಷದ ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತ ಮತ್ತು ಪಕ್ಷದ ಅಭಿಮಾನಿಗಳು ಚಿಂತಿಸುವ ಕಾಲ ಎಂದು ರಘುಪತಿ ಭಟ್ ಬಿಜೆಪಿ ವಿರುದ್ಧ ಬೇಸರ ಹೊರಹಾಕಿದ್ದರು.












Click it and Unblock the Notifications