ಕೊನೆ ಕ್ಷಣದ ಒಂದು ಲಕ್ಷದ ಆಫರ್ ಇಂಡಿಯಾ ಒಕ್ಕೂಟಕ್ಕೆ ನೆರವಾಯ್ತು: ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಜೂನ್ 04: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಭರ್ಜರಿ ಗೆಲುವು ಸಾಧಿಸಿದ್ದು, ಚುನಾವಣಾ ಆಯೋಗದಿಂದ ಅಧೀಕೃತ ಘೋಷಣೆಯೊಂದೇ ಬಾಕಿ ಇದೆ. ತಮ್ಮ ಅಮೋಘ ಗೆಲುವಿನ ಬಗ್ಗೆ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದು, ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಗೆಲುವಿಗೆ ಸಹಕರಿಸಿದ ಎಲ್ಲಾ ಮತದಾರರಿಗೆ ಕೃತಜ್ಞತೆಗಳು. ದುಡಿದ ಕಾರ್ಯಕರ್ತರಿಗೆ ಧನ್ಯವಾದಗಳು. ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂಬ ಹಂಬಲದಿಂದ ಜನರು ನನಗೆ ಮತ ಹಾಕಿದ್ದಾರೆ. ಎನ್‌ಡಿಎ ಸ್ಪಷ್ಟ ಬಹುಮತ ಪಡೆಯುವ ನಿರೀಕ್ಷೆ ನಮಗೆ ಇತ್ತು. ಬಿಜೆಪಿ ಅತಿ ಹೆಚ್ಚು ಸ್ಥಾನ ಗೆಲ್ಲುವ ಭರವಸೆ ಇತ್ತು. ಎನ್‌ಡಿಎ 295ರ ಆಸು ಪಾಸು ಗೆಲುವು ಪಡೆದಿದೆ. ನಿಶ್ಚಯವಾಗಿ ಎನ್‌ಡಿಎ ಅಧಿಕಾರಕ್ಕೆ ಬರುತ್ತದೆ ಎಂದಿದ್ದಾರೆ.

ನಿರೀಕ್ಷೆ ಮಟ್ಟಕ್ಕೆ ಮುಟ್ಟಿಲ್ಲ ನಿಜ. ಉತ್ತರ ಪ್ರದೇಶ ಪಶ್ಚಿಮ ಬಂಗಾಳ ರಾಜಸ್ಥಾನದಲ್ಲಿ ನಾವು ಊಹೆ ಮಾಡಿದ ಪ್ರಮಾಣದಲ್ಲಿ ಗೆಲುವು ಪಡೆದಿಲ್ಲ. ಕೊನೆಯ ಹಂತದಲ್ಲಿ ಇಂಡಿಯಾ ಒಕ್ಕೂಟದವರು ಒಂದು ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದರು. ಮನೆ ಮನೆಗೆ ಮಾಡಿದ ಪ್ರಚಾರ ಸಾಮಾನ್ಯ ಜನರಲ್ಲಿ ಬದಲಾವಣೆಗೆ ಕಾರಣವಾಗಿರಬಹುದು. ನಿರೀಕ್ಷೆಯ ಮಟ್ಟ ಮುಟ್ಟದಿದ್ದರೂ ಎನ್‌ಡಿಎ ಮತ್ತೊಮ್ಮೆ ಗೆದ್ದಿದೆ ಎಂದರು.
ರಾಜ್ಯದಲ್ಲಿ 20ಕ್ಕೂ ಅಧಿಕ ಸ್ಥಾನ ಗೆಲ್ಲುವ ಭರವಸೆ ಇತ್ತು. ಸ್ವಲ್ಪ ಕಡಿಮೆ ಇದ್ದೇವೆ. ತುಂಬಾ ಕಡಿಮೆ ಏನೂ ಬಂದಿಲ್ಲ. ಭಾರತಕ್ಕೆ ನರೇಂದ್ರ ಮೋದಿ ತುಂಬಾ ಕೆಲಸ ಮಾಡಿದ್ದಾರೆ. ಬಡವರ ಕಲ್ಯಾಣ ಯೋಜನೆಗಳು ಕೈ ಹಿಡಿದಿವೆ. 370 ರದ್ದು ಮಾಡಿದ್ದು ಅಯೋಧ್ಯೆಯಲ್ಲಿ ರಾಮಮಂದಿರ ಮಾಡಿದ್ದು, ಎಲ್ಲಾ ಘಟನೆಗಳು ಕಣ್ಣಮುಂದೆ ಇದ್ದರೂ, ಜನ ಒಂದು ಲಕ್ಷ ರೂಪಾಯಿ ನೀಡುವ ಇಂಡಿಯಾ ಒಕ್ಕೂಟ ಘೋಷಣೆಗೆ ಗಮನ ಸೆಳೆದಿದ್ದಾರೆ. ಇಂಡಿಯಾ ಒಕ್ಕೂಟದ ಈ ತಂತ್ರ ಕೆಲಸ ಮಾಡಿದ್ದು ಸತ್ಯ. ಬಹಳ ಬೇಗ ಹಿಂದಿ ಇಂಗ್ಲಿಷ್ ಕಲಿಯುತ್ತೇನೆ ವಿಶ್ವಾಸ ಇದೆ ಎಂದಿದ್ದಾರೆ.












Click it and Unblock the Notifications