ಇದು 21ನೇ ಶತಮಾನ, ಸ್ವಲ್ಪನೂ ಕೂದಲು ತೋರಿಸೋದಿಲ್ಲವೆಂದರೆ ಹೇಗೆ?; ಶಾಸಕ ರಘುಪತಿ ಭಟ್
ಉಡುಪಿ, ಫೆಬ್ರವರಿ 21: ರಾಜ್ಯದಲ್ಲಿ ಹಿಜಾಬ್ ಗಲಾಟೆ ಜೋರಾಗಿದ್ದು, ದಿನದಿಂದ ದಿನಕ್ಕೆ ಮತ್ತಷ್ಟು ಕಾಲೇಜುಗಳಿಗೆ ಹಿಜಾಬ್ ವಿವಾದ ಪಸರಿಸುತ್ತಿದೆ. ಉಡುಪಿಯಿಂದ ಆರಂಭವಾದ ವಿವಾದ ಈಗ ರಾಜ್ಯದೆಲ್ಲೆಡೆ ಸದ್ದು ಮಾಡುತ್ತಿದೆ. ಈ ವಿವಾದ ಮುಂದಿನ ವಾರ ಅಂತ್ಯವಾಗುವ ಭರವಸೆಯನ್ನು ಉಡುಪಿ ಶಾಸಕ ರಘುಪತಿ ಭಟ್ ನೀಡಿದ್ದಾರೆ.
ಉಡುಪಿಯಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಶಾಸಕ ರಘುಪತಿ ಭಟ್, "ಮುಂದಿನ ವಾರ ತೀರ್ಪು ಬರಬಹುದು. ಆಗ ವಿವಾದ ಇತಿಶ್ರೀ ಆಗುತ್ತದೆ. ಮುಸ್ಲಿಂ ವಿದ್ಯಾರ್ಥಿಗಳು ಸಂಘಟನೆ ಮಾತಿಗೆ ಕಿವಿಗೊಡಬೇಡಿ. ನ್ಯಾಯಾಲಯದ ಆದೇಶ ಪಾಲಿಸಿ. ತರಗತಿಯಲ್ಲಿ ಹಿಜಾಬ್ ತೆಗೆದು ಕುಳಿತುಕೊಳ್ಳಿ. ಇದು 21ನೇ ಶತಮಾನ. ಇನ್ನು ಕೂಡ ಸ್ವಲ್ಪವೂ ಕೂದಲು ತರಗತಿಯಲ್ಲಿ ತೋರಿಸಬಾರದೆಂದರೆ ಹೇಗೆ," ಎಂದು ಶಾಸಕ ರಘುಪತಿ ಭಟ್ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ.
"ಹಿಂದೂ ಧರ್ಮದ ಆಚರಣೆ ಮೂಢನಂಬಿಕೆ, ಇದು 21ನೇ ಶತಮಾನ ಎನ್ನುತ್ತಿದ್ದ ಪ್ರಗತಿಪರರು ಈಗ ಗೂಡಿನೊಳಗೆ ಹೋಗಿದ್ದಾರೆ. ಈಗ ಆದರೂ ಅವರು ಬುದ್ದಿವಾದ ಹೇಳಲಿ. ನ್ಯಾಯಾಲಯದ ಆದೇಶದವರೆಗೆ ತರಗತಿಗೆ ಹೋಗಲಿ. ಒಂದೊಂದು ದಿನದ ಶಿಕ್ಷಣ ಮುಖ್ಯ, ಪ್ರಗತಿಪರರು ಮುಂದೆ ಬರಲಿ," ಎಂದು ರಘುಪತಿ ಭಟ್ ಹೇಳಿದ್ದಾರೆ.

"ರಾಜ್ಯದಲ್ಲಿ ಪೋಷಕರು ಮತ್ತು ಮಕ್ಕಳ ಮೇಲೆ ಒತ್ತಡ ತರುವ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆ. ಹಿಜಾಬ್ ಹಾಕಿ ವಿರೋಧ ವ್ಯಕ್ತಪಡಿಸಿದರೆ ಕೋರ್ಟ್ ಆದೇಶಕ್ಕೆ ಸಹಾಯ ಆಗಲಿದೆ ಎನ್ನುವ ತಪ್ಪು ಭಾವನೆ ಇದೆ. ನ್ಯಾಯಾಲಯಕ್ಕೆ ಇದೊಂದು ದೊಡ್ಡ ನಿರ್ಧಾರವಾಗಿದೆ. ಹೀಗಾಗಿ ವಾದಿಗಳಿಗೆ ಹೆಚ್ಚು ಅವಕಾಶ ನೀಡಲಾಗುತ್ತದೆ. ಪ್ರತಿವಾದಿಗಳ ವಾದ ಇಂದಿನಿಂದ ಆರಂಭ ಆಗಿದೆ. ಮೂರ್ನಾಲ್ಕು ದಿನ ವಾದ- ಪ್ರತಿವಾದ ನಡೆಯುತ್ತದೆ. ಆ ಬಳಿಕ ಸ್ಪಷ್ಟವಾದ ತೀರ್ಪು ಬರಲಿದೆ," ಎಂದರು.
"ಶಾಸಕ ರಘುಪತಿ ಭಟ್ ಅಜ್ಞಾನಿ, ಅನರ್ಹ ಶಾಸಕ ಎಂಬ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಮಜೀದ್ ಕೊಡ್ಲಿಪೇಟೆ ಆರೋಪದ ಬಗ್ಗೆ ಉತ್ತರಿಸಿದ ಶಾಸಕ ಭಟ್, ಹೊರಗಿನಿಂದ ಬಂದವರಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಕ್ಷೇತ್ರದ ಮುಸ್ಲಿಂ ಬಾಂಧವರಿಗೆ ಉತ್ತರ ಕೊಡುತ್ತೇನೆ. ಎಸ್‌ಡಿಪಿಐನಿಂದ ಪ್ರಶಂಸೆ ಕೇಳುವ ಸರ್ಟಿಫಿಕೇಟ್ ಅಗತ್ಯ ಇಲ್ಲ. ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಕೂಡಾ ನಮಗೆ ಬೆಂಬಲ ಸೂಚಿಸಿದ್ದಾರೆ. ಇಸ್ಲಾಂ ಧರ್ಮ, ಆಚರಣೆ ವಿರುದ್ಧ ನಾನು ಮಾತನಾಡಿಲ್ಲ. ಹೊರಗಿನಿಂದ ಬಂದು ಬೆಂಕಿ ಹಾಕುವವರ ಬಗ್ಗೆ ನಾನು ಮಾತನಾಡಲ್ಲ. ಹಿಜಾಬ್ ಇಸ್ಲಾಂನ ಧರ್ಮದಲ್ಲಿ ಇದೆ. ಅವರು ಬೇರೆಡೆ ಹಿಜಾಬ್ ಹಾಕಲಿ. ಆದರೆ ತರಗತಿ ಒಳಗೆ ಬೇಡ ಅನ್ನುವುದಷ್ಟೇ ನಮ್ಮ ವಾದ," ಎಂದು ಸ್ಪಷ್ಟಪಡಿಸಿದರು.
ಇನ್ನು ಹಿಜಾಬ್ ಷಡ್ಯಂತ್ರದ ಕುರಿತಾದ ತನಿಖೆಯ ಬಗ್ಗೆ ಮಾತನಾಡಿದ ರಘುಪತಿ ಭಟ್, ಈ ಕುರಿತು ಬಹಿರಂಗ ತನಿಖೆ ಆಗಬೇಕಿಲ್ಲ. ಮಾಹಿತಿ ಕಲೆ ಹಾಕಲು ಶುರು ಆಗಿದೆ. ಏನೆಲ್ಲ ನಡೆದಿದೆ ಅನ್ನುವುದು ಗುಪ್ತಚರ ಇಲಾಖೆಗೆ ಗೊತ್ತಿದೆ. ನ್ಯಾಯಾಲಯದ ತೀರ್ಪು ಬಂದ ಬಳಿಕ ತನಿಖಾಧಿಕಾರಿಗಳು ತನಿಖೆಯನ್ನು ಗುರಿ ಮುಟ್ಟಿಸುತ್ತಾರೆ ಅಂತಾ ರಘುಪತಿ ಭಟ್ ಹೇಳಿದರು.
ಪ್ರಮೋದ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕ ರಘಪತಿ ಭಟ್, ಪ್ರಮೋದ್ ಬಿಜೆಪಿಗೆ ಬರುವುದಾದರೆ ಸ್ವಾಗತ ಇದೆ. ಅವರಿಂದ ಪಕ್ಷ ಮತ್ತಷ್ಟು ಗಟ್ಟಿಯಾಗುತ್ತದೆ. ಬಿಜೆಪಿ ಪಕ್ಷದ ಗೇಟ್ ಅವರಿಗೆ ಓಪನ್ ಇದೆ ಅಂತ ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ನನಗೆ ಅವರು ಪಕ್ಷ ಸೇರ್ಪಡೆ ಕುರಿತು ಯಾವುದೇ ಮಾಹಿತಿ ಇಲ್ಲ. ಪಕ್ಷಕ್ಕೆ ನಮ್ಮಲ್ಲಿ ಕೇಳಿ ತಗೋಳ್ಳುವುದಿಲ್ಲ. ಹಿಂದೆ ಚುನಾವಣಾ ಸಂದರ್ಭದಲ್ಲಿ ವಿರೋಧ ಮಾಡಿದ್ದೇನೆ ಕಾರಣ ಆಗ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದ್ದರಿಂದ ಸ್ವಾಭಾವಿಕವಾಗಿ ವಿರೋಧ ಮಾಡಿದ್ದೆ. ಈಗ ಅವರು ಬಂದರೆ ಸ್ವಾಗತವಿದೆ. ಯಾಕೆಂದರೆ ಈಗ ನಮ್ಮ ಬುಡ ಗಟ್ಟಿ ಇದ್ದು, ನಮಗೆ ಯಾವುದೇ ಸಮಸ್ಯೆ ಇಲ್ಲ. ಅವರು ಬಿಜೆಪಿಗೆ ಬಂದರೆ ಪಕ್ಷ ಗಟ್ಟಿಯಾಗುತ್ತದೆ ಎಂದು ರಘುಪತಿ ಭಟ್ ಆಹ್ವಾನ ನೀಡಿದರು.












Click it and Unblock the Notifications