ಡ್ರಗ್ಸ್ ಜಾಲದ ವಿರುದ್ಧ ಸಿಡಿದೆದ್ದ ಉಡುಪಿಯ ಮಾಹೆ ವಿಶ್ವ ವಿದ್ಯಾಲಯ: 42 ವಿದ್ಯಾರ್ಥಿಗಳ ಅಮಾನತು
ಡ್ರಗ್ಸ್ ಸೇವನೆ ಸಂಬಂಧ ಮಾಹೆ ವಿವಿಯು 42 ವಿದ್ಯಾರ್ಥಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಹಾಗಾದರೆ ವಿದ್ಯಾರ್ಥಿಗಳನ್ನು ಎಷ್ಟು ತಿಂಗಳವರೆಗೆ ಅಮಾನತು ಮಾಡಲಾಗಿದೆ ಎನ್ನುವ ವಿವರ ಇಲ್ಲಿದೆ ತಿಳಿಯಿರಿ.
ಉಡುಪಿ, ಫೆಬ್ರವರಿ, 23: ಮಂಗಳೂರಿನಲ್ಲಿ ಡ್ರಗ್ಸ್ ಸೇವನೆ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೀಗ ಶೈಕ್ಷಣಿಕ ಹಬ್ ಆಗಿರುವ ಉಡುಪಿ ಜಿಲ್ಲೆಯಲ್ಲಿಯೂ ಡ್ರಗ್ಸ್ ಸೇವನೆ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಮಣಿಪಾಲದಲ್ಲಿ ಮಾದಕ ವ್ಯಸನಿ ಪ್ರಕರಣಗಳು ಹೆಚ್ಚಾಗಿದ್ದು, ಈ ಸಂಬಂಧ ಮಾಹೆ ವಿವಿಯ 42 ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ಈ ವಿದ್ಯಾರ್ಥಿಗಳನ್ನು ಒಂದು ತಿಂಗಳ ಅವಧಿಗೆ ಅಮಾನತು ಮಾಡಿ ಮಾಹೆ ವಿವಿ ಆದೇಶ ಹೊರಡಿಸಿದೆ.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ದಿಟ್ಟ ನಿರ್ಧಾರದ ಬಗ್ಗೆ ಮಾಹೆ ವಿವಿಯು ಆದೇಶ ಹೊರಡಿಸಿದ್ದು, ಆದೇಶ ಪತ್ರದಲ್ಲಿ ಅಮಾನತಗೆ ಕಾರಣಗಳನ್ನು ತಿಳಿಸಿದೆ. ಸಹಜ ಜೀವನ ನಡೆಸುವ ಉದ್ದೇಶದಲ್ಲಿ ಈ ಆದೇಶವನ್ನು ಹೊರಡಿಸಿದ್ದೇವೆ. ಆರೊಗ್ಯಕರ ವಾತಾವರಣ ಸೃಷ್ಟಿಸಲು ನಾವು ಬದ್ಧರಾಗಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪೊಲೀಸ್ ಮತ್ತು ಮಾಹೆ ವಿವಿಯ ಆಂತರಿಕ ತನಿಖೆಯಿಂದ ಮಾದಕ ವ್ಯಸನಿ ಪ್ರಕರಣ ಕಂಡುಬಂದಿದ್ದು,
ವಿದ್ಯಾರ್ಥಿಗಳು ಇದನ್ನು ಸೇವನೆ ಮಾಡುವುದನ್ನು ಸಹಿಸಲ್ಲ. ಜೀರೋ ಟಾಲರೆನ್ಸ್ ಇಂತಹ ಪ್ರಕರಣ ಮುಂದುವರೆಯಬಾರದು ಹೇಳಿದೆ. ಇತ್ತೇಚೆಗಷ್ಟೇ ಮಂಗಳೂರಿನಲ್ಲಿ ವೈದ್ಯರ ಡ್ರಗ್ಸ್ ಪ್ರಕರಣ ಭಾರಿ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮಣಿಪಾಲ ಮಾಹೆ ವಿವಿಯು ಕಟ್ಟುನಿಟ್ಟಿನ ನಿರ್ಧಾರವನ್ನು ತೆಗೆದುಕೊಂಡಿದೆ.

42 ವಿದ್ಯಾರ್ಥಿಗಳ ಅಮಾನತು
ಮಣಿಪಾಲ ವಿವಿ ವಿದ್ಯಾರ್ಥಿಗಳ ಅಮಾನತು ಪ್ರಕರಣದ ಕುರಿತು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಮಚ್ಚೀಂದ್ರ ಹಾಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಾವು ಹಲವಾರು ಡ್ರಗ್ಸ್ ಪ್ರಕರಣಗಳನ್ನು ಪತ್ತೆ ಮಾಡಿದ್ದೇವೆ. ಈ ಕಾರ್ಯಾಚರಣೆಯಲ್ಲಿ ಅನೇಕ ಮಂದಿ ಪೆಡ್ಲರ್‌ಗಳನ್ನ ವಶಕ್ಕೆ ತೆಗೆದುಕೊಂಡಿದ್ದೇವೆ. ಪೆಡ್ಲರ್‌ಗಳ ಮೂಲಕ ಗ್ರಾಹಕರು ಯಾರು ಅನ್ನುವುದು ಕೂಡ ಪತ್ತೆಯಾಗಿದೆ ಎಂದರು.

ಮಾದಕ ದ್ರವ್ಯಗಳು ಪತ್ತೆಯಾಗಿವೆ
ಕೆಲ ಗ್ರಾಹಕರಿಂದ ಪೆಡ್ಲರ್‌ಗಳು ಯಾರು ಅನ್ನುವುದು ಪತ್ತೆಯಾಗಿದೆ. ಮಾಹೆಯ ಕೆಲ ವಿದ್ಯಾರ್ಥಿಗಳು ಕೂಡ ಪೆಡ್ಲೆರ್‌ಗಳಾಗಿದ್ದಾರೆ. ಅವರಿಂದ ಹೆಚ್ಚಿನ ಪ್ರಮಾಣದ ಮಾದಕ ದ್ರವ್ಯಗಳು ಪತ್ತೆಯಾಗಿತ್ತು. ಈ ಪ್ರಕರಣದ ಬಗ್ಗೆ ನಾವು ವಿವಿಗೆ ಮಾಹಿತಿ ನೀಡಿದ್ದೆವು ಎಂದು ಅಕ್ಷಯ್ ಮಚ್ಚೇಂದ್ರ ತಿಳಿಸಿದ್ದಾರೆ.

ಸಕಾರಾತ್ಮಕವಾಗಿ ಸ್ಪಂದಿಸಿದ ವಿವಿ
ಕಾಲೇಜು ಮತ್ತು ಹಾಸ್ಟೆಲ್ ಆವರಣದಲ್ಲಿ ಡ್ರಗ್ಸ್ ವ್ಯವಹಾರ ಸಂಬಂಧಿಸಿದಂತೆ ವಿದ್ಯಾರ್ಥಿಗಳನ್ನು ಗುರುತಿಸಿ ಪಟ್ಟಿ ನೀಡಿದ್ದೇವೆ. ಟೆಸ್ಟಿಂಗ್ ಮೂಲಕ ಸಾಬೀತಾಗಿರುವ ಪ್ರಕರಣಗಳ ವಿವರವನ್ನು ಕೂಡ ವಿವಿಗೆ ನೀಡಿದ್ದೇವೆ. ಮಣಿಪಾಲ ವಿವಿ ಈ ವಿಚಾರಗಳಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದೆ. ಇದೀಗ ಮಣಿಪಾಲ ವಿವಿ 42 ಮಂದಿಯನ್ನು ಅಮಾನತು ಮಾಡಿದೆ ಎಂದರು.
ಈ ವಿಚಾರದಲ್ಲಿ ಪೊಲೀಸ್ ಇಲಾಖೆಯಾಗಲಿ ಅಥವಾ ವಿವಿಯಾಗಲಿ ನಿರ್ಲಕ್ಷ ವಹಿಸುವುದಿಲ್ಲ ಅನ್ನುವ ಸಂದೇಶ ರವಾನೆಯಾಗಿದೆ. ಮಾದಕ ದ್ರವ್ಯ ಸೇವನೆ ಮಾಡಿದವರನ್ನು ಮಾಹೆ ವಿವಿ ತಾತ್ಕಾಲಿಕ ಅಮಾನತು ಮಾಡಿದೆ. ಒಂದು ತಿಂಗಳ ಕಾಲ ತರಗತಿಗೆ ಹಾಜರಾಗಲು ಅವಕಾಶವಿಲ್ಲ. ವಿಶ್ವವಿದ್ಯಾಲಯದ ಯಾವುದೇ ಸೌಲಭ್ಯಗಳನ್ನು ಅವರು ಬಳಸುವಂತಿಲ್ಲ. ಪೆಡ್ಲರ್‌ಗಳ ಮೇಲೆ ಮತ್ತಷ್ಟು ಗಂಭೀರ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ
ಪೆಡ್ಲರ್‌ಗಳ ವಿರುದ್ಧ ಪೊಲೀಸ್ ಇಲಾಖೆ ಕ್ರಿಮಿನಲ್ ಕೇಸ್ ಹಾಕುತ್ತದೆ. ಮಾಹೆ ವಿವಿ ಮೂಲಕ ಶಿಸ್ತು ಕ್ರಮಕ್ಕೂ ಸೂಚನೆ ನೀಡಿದ್ದೇವೆ. ಎಡಿಜಿಪಿ ಅಲೋಕ್ ಕುಮಾರ್ ಅವರ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಮಂಗಳೂರಿನಲ್ಲಿ ವೈದ್ಯರ ಮಾದಕ ಸೇವನೆ ಪ್ರಕರಣ ಬೆಳಕಿಗೆ ಬಂದ ನಂತರ ಗಂಭೀರ ಕ್ರಮ ಕೈಗೊಳ್ಳಲಾಗಿದೆ. ಮಾಹೆ ವಿವಿ ಕೂಡ ಬಳಿಕ ಮತ್ತಷ್ಟು ಅಲರ್ಟ್ ಆಗಿದೆ. ಇಲ್ಲಿನ ವಿದ್ಯಾರ್ಥಿಗಳು ಫೆಲೋಶಿಪ್ ಮಾಡುತ್ತಿರುವವರಾಗಿದ್ದಾರೆ ಎಂದರು.

ವಿವಿಗೆ ಪಟ್ಟಿ ನೀಡಿದ್ದ ಪೊಲೀಸ್ ಇಲಾಖೆ
ಶೈಕ್ಷಣಿಕವಾಗಿ ಮಾಹೆ ಜೊತೆ ಸಂಪರ್ಕ ಇರುವ ವಿದ್ಯಾರ್ಥಿಗಳ ಪಟ್ಟಿಯನ್ನು ಮಾಡಿಕೊಟ್ಟಿದ್ದೇವೆ. ಈ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶ ಹೋಗುತ್ತದೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವುದು ಮತ್ತು ಮಾನಸಿಕವಾಗಿ ಧೈರ್ಯ ಹೇಳಲಾಗುತ್ತಿದೆ. ಮಾದಕ ಸೇವನೆ ಮಾಡಿದವರನ್ನು ಕ್ರಿಮಿನಲ್‌ಗಳು ಎಂದು ಪರಿಗಣಿಸಲಾಗುವುದಿಲ್ಲ. ಪೆಡ್ಲರ್‌ಗಳನ್ನು ಕ್ರಿಮಿನಲ್‌ಗಳೆಂದೇ ಪರಿಗಣಿಸುತ್ತೇವೆ ಎಂದು ತಿಳಿಸಿದೆ.
ಕಳೆದ ಮೂರು ತಿಂಗಳಿನಲ್ಲಿ ಪತ್ತೆಯಾಗಿರುವ ಪ್ರಕರಣಗಳ ಆಧಾರದಲ್ಲಿ ಪಟ್ಟಿಯನ್ನು ನೀಡಿದ್ದೆವು. ಮೊಟ್ಟ ಮೊದಲ ಬಾರಿಗೆ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ವಿವಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಉಡುಪಿ ಎಸ್.ಪಿ. ಅಕ್ಷಯ ಮಚ್ಚೇಂದ್ರ ಮಾಹಿತಿ ನೀಡಿದ್ದಾರೆ.












Click it and Unblock the Notifications